ದಲಿತ "ಸಿ.ಎಂ ಚರ್ಚೆ" ಬಗ್ಗೆ ಕಾಂಗ್ರೆಸ್ ಪ್ರಭಾವಿ ಸಚಿವ ಶಾಕಿಂಗ್ ಸ್ಟೇಟ್‌ಮೆಂಟ್!
ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ಆಗಲಿದೆಯೇ ಎನ್ನುವ ಪ್ರಶ್ನೆ ಕಳೆದ ಮೂರು ತಿಂಗಳಿನಿಂದ ರಾಜ್ಯ ರಾಜಕೀಯ ಹಾಗೂ ಸಾರ್ವಜನಿಕ ವಲಯದಲ್ಲಿ ಭಾರೀ ಚರ್ಚೆಯಾಗುತ್ತಿದೆ. ಮೈಸೂರು ಅಭಿವೃದ್ಧಿ ಪ್ರಾಧಿಕಾರ (ಮುಡಾ)ದಿಂದ ಬದಲಿ ನಿವೇಶನ ಪಡೆದ ಪ್ರಕರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇನ್ನಿಲ್ಲದಂತೆ ಸಂಕಷ್ಟಕ್ಕೆ ಸಿಲುಕಿದ್ದಾರೆ. ಇದೀಗ ರಾಜ್ಯದ ಪ್ರಭಾವಿ ಸಚಿವರೊಬ್ಬರು ದಲಿತ ಸಿ.ಎಂ ಚರ್ಚೆಯ ಬಗ್ಗೆ ಮಾತನಾಡಿದ್ದಾರೆ ಚರ್ಚೆ ಒಳ್ಳೆಯದೇ ಅಲ್ವಾ ಅಂತಲೂ ಹೇಳಿದ್ದಾರೆ.
ರಾಜ್ಯದಲ್ಲಿ ದಲಿತ ಸಿ.ಎಂ ಚರ್ಚೆ ಮತ್ತೆ ಮುನ್ನೆಲೆಗೆ ಬಂದಿದೆ. ಕಳೆದ ಹಲವು ವರ್ಷಗಳಿಂದ ರಾಜ್ಯದಲ್ಲಿ ದಲಿತ ಸಿ.ಎಂ ವಿಷಯ ಚರ್ಚೆಯಾಗುತ್ತಲ್ಲೇ ಇದೆ. ಇದೀಗ ಈ ವಿಷಯ ಭಾರೀ ಕಾವು ಪಡೆದುಕೊಂಡಿದೆ. ಈ ಬಾರಿ ದಲಿತ ಸಿ.ಎಂ ಚರ್ಚೆ ಹೆಚ್ಚು ಚರ್ಚೆಯಾಗುವುದಕ್ಕೆ ಪ್ರಮುಖ ಕಾರಣವಾಗಿರುವುದು ರಾಜ್ಯ ಕಾಂಗ್ರೆಸ್ ಸರ್ಕಾರದ ದಲಿತ ಸಚಿವರು ಹಾಗೂ ಪ್ರಮುಖ ನಾಯಕರು ರಹಸ್ಯ ಸಭೆಗಳನ್ನು ನಡೆಸುತ್ತಿರುವುದು. ಬಹಿರಂಗವಾಗಿಯೇ ದಲಿತ ನಾಯಕರು ಹೇಳಿಕೆಗಳನ್ನು ಸಹ ಕೊಡುತ್ತಿದ್ದಾರೆ.

ರಾಜ್ಯದಲ್ಲಿ ಈ ಬಾರಿ ಸಿ.ಎಂ ಬದಲಾವಣೆಯಾದರೆ, ಯಾವುದೇ ಕಾರಣಕ್ಕೂ ಮುಖ್ಯಮಂತ್ರಿ ಸ್ಥಾನವನ್ನು ಬಿಟ್ಟುಕೊಡಬಾರದು ಎನ್ನುವ ಲೆಕ್ಕಾಚಾರ ಇದೆ ಎಂದು ಹೇಳಲಾಗುತ್ತಿದೆ. ಇದೀಗ ಸಚಿವ ಸತೀಶ್ ಜಾರಕಿಹೊಳಿ ಭೇಟಿಯ ಬಗ್ಗೆ ಗೃಹ ಸಚಿವ ಜಿ. ಪರಮೇಶ್ವರ್ ಅವರು ಮಾತನಾಡಿದ್ದು, ಚರ್ಚೆಗಳಾದರೆ ಒಳ್ಳೆಯದಲ್ಲವೇ ಎಂದು ಪ್ರಶ್ನೆ ಮಾಡಿದ್ದಾರೆ. ಅಲ್ಲದೇ, ಚಾಯ್ ಪೇ ಚರ್ಚೆ ಅಂತ ಕಾರ್ಯಕ್ರಮ ಇದೆಯಲ್ಲ. ಅದೇ ರೀತಿ ಕಾಫಿ ಪೇ ಚರ್ಚೆ ಮಾಡ್ತೀವಿ ಎಂದಿದ್ದಾರೆ.
ಅಲ್ಲದೇ ನಾವಿಬ್ಬರು (ಸತೀಶ್ ಜಾರಕಿಹೊಳಿ - ಜಿ ಪರಮೇಶ್ವರ್) ಕುಳಿತುಕೊಂಡು ಎರಡು ಲೋಟ ಕಾಫಿ ಕುಡಿದರೆ ಮುಖ್ಯಮಂತ್ರಿ ಮಾಡಿಬಿಡುತ್ತಾರೆ ಎನ್ನುವುದಾದರೆ ಬಹಳ ಚರ್ಚೆಗಳಾಗುತ್ತಿದ್ದವು. ಬಹಳಷ್ಟು ಕಾಫಿ ಖರ್ಚಾಗುತ್ತಿತ್ತು ಎಂದು ವ್ಯಂಗ್ಯವಾಡಿದ್ದಾರೆ. ನಾವು ನಾವೇ ಮಾತನಾಡುವುದರಿಂದ ಏನು ಆಗುವುದಿಲ್ಲ. ಈ ನಿರ್ಧಾರ ಎಲ್ಲವನ್ನೂ ಹೈಕಮಾಂಡ್ ತೆಗೆದುಕೊಳ್ಳುತ್ತದೆ. ಆದರೆ, ಈಗ ಅಂತಹ ಸನ್ನಿವೇಶ ಎದುರಾಗಿಲ್ಲ. ಸನ್ನಿವೇಶ ಬಂದರೆ ಚರ್ಚೆ ಮಾಡೋಣ, ಅದರ ಬಗ್ಗೆ ಕೂಗು (ದಲಿತ ಸಿ.ಎಂ) ಹಾಕೋಣ, ಬೇಡಿಕೆ ಇಡೋಣ. ಬೇಕಾದದ್ದು ಮಾಡೋಣ. ಆದರೆ ಈಗ ಸನ್ನಿವೇಶ ಬಂದಿಲ್ಲ. ಮುಖ್ಯಮಂತ್ರಿ ರಾಜೀನಾಮೆ ಕೊಡುವ ಪ್ರಶ್ನೆಯೇ ಇಲ್ಲ ಎಂದೂ ಹೇಳಿದ್ದಾರೆ.
ಇನ್ನು ಬಿಟ್‌ಕಾಯಿನ್ ಪ್ರಕರಣಕ್ಕೆ ಸಂಬಂಧಿಸಿದಂತೆ ಡಿವೈಎಸ್‌ಪಿ ಶ್ರೀಧರ್ ಪೂಜಾರ್ ಅವರು ತನಿಖೆ ಪ್ರಾರಂಭವಾದಾಗಿನಿಂದ ತಪ್ಪಿಸಿಕೊಂಡು ತಿರುಗುತ್ತಿದ್ದರು. ಸುಪ್ರೀಂಕೋರ್ಟ್‌ವರೆಗೂ ಹೋಗಿದ್ದರು. ಯಾವುದರಿಂದಲೂ ರಿಲೀಫ್ ಸಿಗಲಿಲ್ಲ. ಹೀಗಾಗಿ ಪೊಲೀಸರಿಗೆ ಶರಣಾಗಿದ್ದಾರೆ ಎಂದಿದ್ದಾರೆ.

ಜನ ಯಾರ ಜೊತೆ ನಿಲ್ಲುತ್ತಾರೆ ಎನ್ನುವುದು ಗೊತ್ತಾಗಿದೆ: ರಾಜ್ಯದಲ್ಲಿ ಗ್ಯಾರಂಟಿ ಯೋಜನೆಗಳ ಬಗ್ಗೆ ಸುದೀರ್ಘ ಚರ್ಚೆ, ಆರ್ಥಿಕ ಸ್ಥಿತಿಗತಿಗಳನ್ನು ಅಧ್ಯಯನ ಮಾಡಲಾಗಿದೆ. ಬಡತನದ ರೇಖೆಗಿಂತ ಕೆಳಗಿರುವವರು ಮೇಲೆ ಬರುಬೇಕು ಎನ್ನುವ ಉದ್ದೇಶದಿಂದ ರಾಜ್ಯದಲ್ಲಿ ಗ್ಯಾರಂಟಿ ಯೋಜನೆಗಳನ್ನು ಅನುಷ್ಠಾನ ಮಾಡಲಾಗಿದೆ ಎಂದು ಜಿ. ಪರಮೇಶ್ವರ್ ಹೇಳಿದರು.
ಗ್ಯಾರಂಟಿ ಯೋಜನೆಗಳ ಬಗ್ಗೆ ಪ್ರಾರಂಭದಿಂದಲೂ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಹಲವು ನಾಯಕರು ಟೀಕೆ ಮಾಡಿದ್ದಾರೆ. ರಾಜ್ಯದಲ್ಲಿ ಜನತಾದಳದವರು, ಕೇಂದ್ರದಲ್ಲಿ ಬಿಜೆಪಿ ನಾಯಕರು ಟೀಕಿಸಿದ್ದಾರೆ. ಜನ ಯಾರನ್ನ ಬೆಂಬಲಿಸುತ್ತಾರೆ ಎಂಬುದು ಈಗ ಅರ್ಥವಾಗುತ್ತಿದೆ. ಜನರಿಗೆ ಸಹಾಯವಾಗುವಾಗ ಆ ಪಕ್ಷದ ಜೊತೆ ನಿಲ್ಲುತ್ತಾರೆ. ಬಡತನ ರೇಖೆಯಿಂದ ಮೇಲೆ ಬರಬೇಕು ಎಂಬುದು ನಮ್ಮ ಉದ್ದೇಶ ಎಂದಿದ್ದಾರೆ.
ಗ್ಯಾರಂಟಿ ಯೋಜನೆಗಳನ್ನು ರಾಜಕೀಯ ಅಂತ ಎಂದೂ ಹೇಳಲ್ಲ. ಗ್ಯಾರಂಟಿ ಯೋಜನೆಗಳನ್ನು ಮತಬ್ಯಾಂಕ್‌ಗೆ ಪರಿವರ್ತಿಸಿಕೊಳ್ಳುತ್ತೇವೆ ಎಂದು ಸಹ ನಾವು ಎಲ್ಲಿಯೂ ಹೇಳಿಲ್ಲ. ನಾವು ಗ್ಯಾರಂಟಿ ಯೋಜನೆಗಳನ್ನು ಮಾಡಿದರೆ ಒಳ್ಳೆಯದು ಎಂಬುದು ಬಿಜೆಪಿಯವರಿಗೆ ಈಗ ಅರ್ಥವಾಗಿದೆ ಎಂದು ವ್ಯಂಗ್ಯವಾಡಿದ್ದಾರೆ.












Click it and Unblock the Notifications