ಉಕ್ರೇನ್‌ನಲ್ಲಿ ಭಾರತೀಯ ವಿದ್ಯಾರ್ಥಿಗಳದ್ದು ದಯನೀಯ ಸ್ಥಿತಿ: ಮೆಡಿಕಲ್ ವಿದ್ಯಾರ್ಥಿ ಅನೀಶ್ ಹೇಳಿಕೆ
ಬೆಂಗಳೂರು, ಮಾ. 03: ಭಾರತ ಸರ್ಕಾರ ಹೇಳುತ್ತಿರುವಂತೆ ಉಕ್ರೇನ್ ನಲ್ಲಿ ಸಿಲುಕಿರುವ ಭಾರತೀಯ ಮೂಲದ ವಿದ್ಯಾರ್ಥಿಗಳಿಗೆ ಯಾವ ನೆರವೂ ಸಿಗುತ್ತಿಲ್ಲ. ದುಬಾರಿ ಹಣ ತೆತ್ತು ಗಂಟೆ ಗಟ್ಟಲೇ ಕ್ಯೂ ನಿಂತು ಬರುವಂತಾಗಿದೆ. ಗಡಿಗೆ ಬಂದರೆ ಮಾತ್ರ ಅಧಿಕಾರಿಗಳು ಮಾತನಾಡಿಸುತ್ತಾರೆ. ಉಕ್ರೇನ್‌ನಲ್ಲಿ ಸಿಲುಕಿರುವ ಭಾರತೀಯ ವಿದ್ಯಾರ್ಥಿಗಳದ್ದು ದಯನೀಯ ಸ್ಥಿತಿ!
ವೈದ್ಯಕೀಯ ಪದವಿ ಓದಲು ಉಕ್ರೇನ್ ಗೆ ಹೋಗಿದ್ದ ಕರ್ನಾಟಕ ಮೂಲದ ವಿದ್ಯಾರ್ಥಿ ಅನೀಶ್ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬೇಸರದಿಂದ ಹೇಳಿದ ಮಾತುಗಳಿವು.
ಉಕ್ರೇನ್ ಮತ್ತು ರಷ್ಯಾ ನಡುವಿನ ಭೀಕರ ಯುದ್ಧ ಎಂಟನೇ ದಿನಕ್ಕೆ ಕಾಲಿಟ್ಟಿದೆ. ಕಡಿಮೆ ವೆಚ್ಚಕ್ಕೆ ಮಡಿಕಲ್ ಪದವಿ ಪಡೆಯುವ ಆಸೆಯಿಂದ ಸಾವಿರಾರು ವಿದ್ಯಾರ್ಥಿಗಳು ಉಕ್ರೇನ್ ಗೆ ತೆರಳಿದ್ದರು. ಯುದ್ಧದ ಭೀತಿ ಹಿನ್ನೆಲೆಯಲ್ಲಿ ಕೆಲವರು ವಾಪಸು ಬಂದಿದ್ದರು. ಇದರ ಹೊರತಾಗಿಯೂ ಸುಮಾರು 16 ಸಾವಿರ ವಿದ್ಯಾರ್ಥಿಗಳು ಉಕ್ರೇನ್ ನಲ್ಲಿ ಸಿಲುಕಿದ್ದರು.

ಯುದ್ಧದ ಮೊದಲ ದಿನವೇ ಭಾರತೀಯ ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ಭಾರತ ಸರ್ಕಾರವೇ ಕರೆ ತರುತ್ತಿದೆ. ಯಾರೂ ಅಂತಕ ಪಡುವ ಅಗತ್ಯವಿಲ್ಲ. ಭಾರತೀಯರಿಗೆ ಯಾವುದೇ ಸಮಸ್ಯೆಯಾಗಿಲ್ಲ ಎಂದೇ ಹೇಳಲಾಗಿತ್ತು. ಇನ್ನು ಮೋದಿ ಸರ್ಕಾರ ಒಂದು ವಿದ್ಯಾರ್ಥಿಗೂ ಸಮಸ್ಯೆ ಇಲ್ಲದಂತೆ ಕರೆತರಲಿದೆ ಎಂದೇ ಹೇಳಲಾಗಿತ್ತು. ಇತ್ತೀಚೆಗೆ ರಷ್ಯಾ ದಾಳಿಗೆ ಕರ್ನಾಟಕ ಮೂಲದ ವೈದ್ಯಕೀಯ ವಿದ್ಯಾರ್ಥಿ ಸಾವನ್ನಪ್ಪಿದ್ದರು. ಯುದ್ಧ ಆರಂಭವಾಗಿ ಎಂಟು ದಿನ ಕಳೆದಿವೆ. ಇಷ್ಟಾಗಿಯೂ ಭಾರತೀಯ ವಿದ್ಯಾರ್ಥಿಗಳನ್ನು ಪೂರ್ಣ ಪ್ರಮಾಣದಲ್ಲಿ ಕರೆತರಲು ಸಾಧ್ಯವಾಗಿಲ್ಲ. ಊಟ- ವಸತಿಗಾಗಿ ವಿದ್ಯಾರ್ಥಿಗಳು ಪರದಾಡುವಂತಾಗಿದೆ. ಮಾತ್ರವಲ್ಲ ಉಕ್ರೇನ್ ಗಡಿ ದಾಟಲು ಹರ ಸಾಹಸ ಪಡುತ್ತಿದ್ದಾರೆ.
ಅನೀಶ್ ತೆರೆದಿದ್ದ ವಾಸ್ತವ:
ಮಾಧ್ಯಮಗಳಲ್ಲಿ ಸುದ್ದಿಯಾಗುತ್ತಿದ್ದಂತೆ, ಭಾರತ ಸರ್ಕಾರ ಯಾವ ವಿದ್ಯಾರ್ಥಿಗಳ ನೆರವಿಗೂ ಧಾವಿಸುತ್ತಿಲ್ಲ. ಉಕ್ರೇನ್‌ನಲ್ಲಿ ಭಾರತೀಯ ಮೂಲದ ವಿದ್ಯಾರ್ಥಿಗಳು ಸಂಕಷ್ಟಕ್ಕೆ ಸಿಲುಕಿದ್ದಾರೆ. ಯಾವ ರಾಯಭಾರಿ ಕಚೇರಿಯನ್ನೂ ಸಂಪರ್ಕಿಸಲು ಸಾಧ್ಯವಾಗುತ್ತಿಲ್ಲ. ರಾಯಭಾರಿ ಕಚೇರಿಯಿಂದ ಯಾವ ನೆರವೂ ಸಿಗುತ್ತಿಲ್ಲ. ಭಾರತ ಸರ್ಕಾರ ಹೇಳ್ತಿರುವಂತೆ ನಮಗೆ ಯಾವುದೇ ಸಹಾಯ ಸರ್ಕಾರದಿಂದ ಆಗ್ತಿಲ್ಲ. ನಮ್ಮ ಸ್ವಂತ ಹಣದಲ್ಲಿ 24 ಗಂಟೆಗಳ ಕಾಲ ಕ್ಯೂ ನಿಂತು, ಕಿ.ಮೀ ಗಟ್ಟಲೇ ನಡೆದು, ಎರಡು ಪಟ್ಟು ಹಣ ನೀಡಿ ಬಂದಿದ್ದೇವೆ. ಗಡಿಗೆ ಬಂದ ನಂತರ ಭಾರತದ ಎಂಬೆಸಿ ಅಧಿಕಾರಿಗಳು ಸಂಪರ್ಕ ಮಾಡ್ತಿದ್ದಾರೆ ಎಂದು ಅಲ್ಲಿನ ವಾಸ್ತವ ಚಿತ್ರಣ ಬಿಚ್ಚಿಟ್ಟಿದ್ದಾರೆ.

ವಿದ್ಯಾರ್ಥಿಗಳಿಗೆ ತುರ್ತು ನೆರವು ಬೇಕಿರುವುದು ಉಕ್ರೇನ್ ಪೂರ್ವ ಭಾಗದಲ್ಲಿ. ಸ್ಥಳೀಯ ಸರ್ಕಾರದೊಂದಿಗೆ ಚರ್ಚಿಸಿ ತುರ್ತಾಗಿ ಗಡಿಭಾಗಕ್ಕೆ ಕರೆತರಬೇಕಿದೆ. ಈ ನಿಟ್ಟಿನಲ್ಲಿ ಭಾರತ ರಾಯಭಾರ ಕಚೇರಿ ಮುಂದಾಗಬೇಕು. ಮಾಧ್ಯಮಗಳ ಮುಂದೆ ಹೇಳಿಕೆ ನೀಡದಂತೆ ಅಧಿಕಾರಿಗಳು ಅಲ್ಲಿ ಸಹಾಯ ಮಾಡ್ತಿಲ್ಲ. ದಿನದಿಂದ ದಿನಕ್ಕೆ ಪರಿಸ್ಥಿತಿ ಉಲ್ಬಣವಾಗಿದೆ, ಸರ್ಕಾರ ಕೂಡಲೇ ಕ್ರಮಕೈಗೊಳ್ಳಬೇಕಿದೆ ಎಂದು ಅನೀಶ್ ಮನವಿ ಮಾಡಿದ್ದಾರೆ.












Click it and Unblock the Notifications