Republic Day 2025: ಸಚಿವ ಜಮೀರ್ ಕಾರ್ಯಕ್ರಮದಲ್ಲಿ ಕಳಚಿ ಬಿದ್ದ ರಾಷ್ಟ್ರಧ್ವಜ
ಇಂದು ಎಲ್ಲೆಡೆ ಗಣರಾಜ್ಯೋತ್ಸವ ನೆರವೇರಿದೆ. ಇಂದು ಮುಂಜಾನೆಯೇ ಸರ್ಕಾರದ ವತಿಯಿಂದ ಪ್ರತಿ ಜಿಲ್ಲೆಯಲ್ಲಿ ಧ್ವಜಾರೋಹಣ ಕೂಡ ನಡೆದಿದೆ. ಆದರೆ ಹೊಸಪೇಟೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ರಾಷ್ಟ್ರಧ್ವಜವು ಕಳಚಿ ಬಿದ್ದಿರುವ ಘಟನೆ ವರದಿಯಾಗಿದೆ. ಈ ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿಗಳೂ ಆದ ಸಚಿವ ಜಮೀರ್ ಅಹ್ಮದ್ ಖಾನ್ ಕೂಡ ಇದ್ದರು ಎನ್ನಲಾಗಿದೆ.
ವಿಜಯನಗರ ಜಿಲ್ಲೆಯ ಹೊಸಪೇಟೆ ನಗರದ ಪುನೀತ್ ರಾಜ್ ಕುಮಾರ್ ಕ್ರೀಡಾಂಗಣದಲ್ಲಿರುವ ದೇಶದ ಎರಡನೇ ಬೃಹತ್ ಧ್ವಜಸ್ತಂಭದಿಂದ ಧ್ವಜ ಕಳಚಿ ಬಿದ್ದ ಘಟನೆ ನಡೆದಿದೆ. ಕ್ರೀಡಾಂಗಣದಲ್ಲಿ ಗಣರಾಜ್ಯೋತ್ಸವ ಆಚರಣೆ ವೇಳೆಯೇ ಈ ಘಟನೆ ನಡೆದಿದೆ.

ಜಿಲ್ಲಾ ಉಸ್ತುವಾರಿ ಸಚಿವರಾದ ಜಮೀರ್ ಅಹ್ಮದ್ ಖಾನ್ ಅವರು ಸಾಂಕೇತಿಕವಾಗಿ ಧ್ವಜಾರೋಹಣ ನೆರವೇರಿಸಿದ್ದರು. ನಂತರ ಅವರು ಅವರು ಪರೇಡ್‌ನಲ್ಲಿ ಪಥಸಂಚಲನದಲ್ಲಿ ಭಾಗಿಯಾಗಿ ಗೌರವ ವಂದನೆ ಸ್ವೀಕರಿಸುತ್ತಿದ್ದ ವೇಳೆ ಧ್ವಜ ಏಕಾಏಕಿ ಕುಸಿದು ಬಿದ್ದಿದೆ. ಧ್ವಜ ದೊಡ್ಡದಾದ ಕಾರಣ ಅದು ನೇರವಾಗಿ ಸ್ತಂಭದ ಕೆಳಗೆ ಬಿತ್ತು.
ಆದರೆ ಈ ವೇಳೆ ಅಲ್ಲಿ ಯಾರೂ ಇಲ್ಲದ ಕಾರಣ ಯಾವುದೇ ಅನಾಹುತಗಳು ನಡೆಯಲಿಲ್ಲ ಎನ್ನಲಾಗಿದೆ. ಬಳಿಕ ಭಾಷಣ ಮುಗಿಸಿದ ಜಮೀರ್ ಅಹ್ಮದ್ ಖಾನ್ ಧ್ವಜ ಬೀಳಲು ಕಾರಣರಾದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ವಾರ್ನಿಂಗ್ ಕೂಡ ಕೊಟ್ಟಿದ್ದಾರೆ.
ಬೆಂಗಳೂರಿನಲ್ಲಿ ಕಾಂಗ್ರೆಸ್ ಧ್ವಜಾರೋಹಣ: ಗಣರಾಜ್ಯೋತ್ಸವದ ಹಿನ್ನೆಲೆಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಅವರು ಇಂದು ಕೆಪಿಸಿಸಿ ಕಚೇರಿಯಲ್ಲಿ ಧ್ವಜಾರೋಹಣ ನೆರವೇರಿಸಿದರು. ಇನ್ನು ಗಣರಾಜ್ಯೋತ್ಸವಕ್ಕೆ ಶುಭಕೋರಿರುವ ಸಿಎಂ ಸಿದ್ದರಾಮಯ್ಯ ಅವರು ನಾವೆಲ್ಲರೂ ಒಂದಾಗಿ ಸಂಭ್ರಮಿಸುವ ಜೊತೆಯಲ್ಲಿ, ಪ್ರಜಾಸತ್ತಾತ್ಮಕ ಗಣರಾಜ್ಯವಾಗಿ ಘೋಷಿಸಿಕೊಂಡ 75 ವರ್ಷಗಳ ನಂತರವೂ ದೇಶದಲ್ಲಿ ಅಸಮಾನತೆ, ಅಸ್ಪೃಶ್ಯತೆ, ತಾರತಮ್ಯ, ಬಡತನ ಯಾಕೆ ಜೀವಂತವಾಗಿದೆ ಎನ್ನುವ ಬಗ್ಗೆಯೂ ಆತ್ಮಾವಲೋಕನ ಮಾಡೋಣ ಎಂದರು.

ತಾರತಮ್ಯ ಹಾಗೂ ಅಸಮಾನತೆ ಹೆಚ್ಚಾದಂತೆಲ್ಲ ದೇಶದ ಸಂವಿಧಾನ ಹಾಗೂ ಪ್ರಜಾಪ್ರಭುತ್ವ ದುರ್ಬಲಗೊಂಡು, ಅಧಿಕಾರ ಹಾಗೂ ಅವಕಾಶಗಳು ಉಳ್ಳವರ ಪಾಲಾಗುತ್ತದೆ ಎನ್ನುವ ವಾಸ್ತವವನ್ನು ಅರ್ಥಮಾಡಿಕೊಳ್ಳೋಣ. ಗಣರಾಜ್ಯೋತ್ಸವ ಎಂದರೆ ಸಂಭ್ರಮದಲ್ಲಿ ಮೈಮರೆಯುವ ದಿನವಲ್ಲ, ಸಂವಿಧಾನದ ಆಶಯಗಳು ಎಷ್ಟರ ಮಟ್ಟಿಗೆ ಈಡೇರಿವೆ ಎನ್ನುವುದನ್ನು ಮೌಲ್ಯಮಾಪನ ಮಾಡಬೇಕಾದ, ಜನರು ತಮ್ಮ ಹಕ್ಕು ಮತ್ತು ಕರ್ತವ್ಯಗಳ ಕಡೆಗೆ ಜಾಗೃತರಾಗಬೇಕಾದ ದಿನ ಎಂದು ಹೇಳಿದರು.
ದೇಶದ ಪ್ರತಿಯೊಬ್ಬ ಪ್ರಜೆಯೂ ಸ್ವಾತಂತ್ರ್ಯ, ಸಮಾನತೆ ಹಾಗೂ ಘನತೆಯ ಬದುಕನ್ನು ಸಂಭ್ರಮಿಸುವಂತಹ ಕಲ್ಯಾಣ ರಾಜ್ಯವನ್ನು ಕಟ್ಟಲು ನಾವೆಲ್ಲ ಕೂಡಿ ಪ್ರಯತ್ನಿಸೋಣ. ನಾಡಬಾಂಧವರಿಗೆ 76ನೇ ಗಣರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು ಎಂದು ಸಿಎಂ ಸಿದ್ದರಾಮಯ್ಯ ಕೋರಿದರು.
ಕೆಪಿಸಿಸಿ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್ ಮಾತನಾಡಿದರು. ಇಂದು ಸಂವಿಧಾನ ಜಾರಿಯಾದಂತಹ ದಿನ, ಒಕ್ಕೂಟ ವ್ಯವಸ್ಥೆ ಜಾರಿಯಾದ ಪವಿತ್ರ ದಿನ. ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಸಮ ಸಮಾಜ ನಿರ್ಮಾಣದ ಆಶಯದೊಂದಿಗೆ ಸಂವಿಧಾನವನ್ನು ರಚಿಸಿದರು. ಸಂವಿಧಾನವನ್ನು ಇದೇ ದಿನದಂದು ಅಂಗೀಕರಿಸಲಾಯಿತು ಎಂದರು.

ಮಹಾತ್ಮ ಗಾಂಧೀಜಿ ಅವರ ನೇತೃತ್ವದಲ್ಲಿ ನಡೆದ ಬೆಳಗಾವಿ ಕಾಂಗ್ರೆಸ್ ಅಧಿವೇಶನ 100 ವರ್ಷಗಳನ್ನು ಪೂರೈಸಿದರೆ, ಸಂವಿಧಾನ ಜಾರಿಯಾಗಿ 75 ವರ್ಷಗಳು ತುಂಬಿದೆ. ಈ ಮಹತ್ವದ ಸಂದರ್ಭವನ್ನು ಸ್ಮರಣೀಯವಾಗಿಸುವ ನಿಟ್ಟಿನಲ್ಲಿ ಬೆಳಗಾವಿಯಲ್ಲಿ ಜೈ ಬಾಪು, ಜೈ ಭೀಮ್, ಜೈ ಸಂವಿಧಾನ ಸಮಾವೇಶ ನಡೆಸಲಾಯಿತು. ಈ ಕಾರ್ಯಕ್ರಮವನ್ನು ರಾಜ್ಯದೆಲ್ಲೆಡೆ ವರ್ಷಾದ್ಯಂತ ನಡೆಸಲು ನಿರ್ಧರಿಸಲಾಗಿದೆ ಎಂದು ತಿಳಿಸಿದರು.












Click it and Unblock the Notifications