Siddaramaiah: ಭಾರತ ಎಂದಿಗೂ ಹಿಂದೂ ರಾಷ್ಟ್ರ ಆಗಲ್ಲ: ಸಿದ್ದರಾಮಯ್ಯ ಹೀಗೆ ಹೇಳಿದ್ಯಾಕೆ?
ಮೈಸೂರು, ನವೆಂಬರ್ 12: ಭಾರತ ಎಂದಿಗೂ ಹಿಂದೂ ರಾಷ್ಟ್ರ ಆಗಲ್ಲ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ನಮ್ಮದು ಬಹುತ್ವದ ರಾಷ್ಟ್ರ. ಹಲವು ಕಲೆ, ಸಂಸ್ಕೃತಿ, ಭಾಷೆ, ಧರ್ಮಗಳಿರುವ ದೇಶ. ಆರ್‌ಎಸ್‌ಎಸ್ ಸಂಘಪರಿವಾರ ಬಹಳ ದಿನದಿಂದ ಹಿಂದೂ ರಾಷ್ಟ್ರದ ಬಗ್ಗೆ ಹೇಳುತ್ತಿದೆ. ಆದರೆ ಇದು ಎಂದಿಗೂ ಆಗುವುದಿಲ್ಲ ಎಂದು ಸಿದ್ದರಾಮಯ್ಯ ಅವರು ಹೇಳಿದರು.
ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ನವೆಂಬರ್ 15ಕ್ಕೆ ದೆಹಲಿಗೆ ಹೋಗುತ್ತೇನೆ. ಕಪಿಲ್ ಸಿಬಲ್ ಅವರ ಕಾರ್ಯಕ್ರಮ ಇದೆ. ಅದಕ್ಕಾಗಿ ದೆಹಲಿಗೆ ಹೋಗುತ್ತೇನೆ. ಅವತ್ತೇ ಹೋಗಿ ಅವತ್ತೇ ವಾಪಸ್ ಬರುವ ಯೋಜನೆ ಇದೆ. ರಾಹುಲ್ ಗಾಂಧಿ ಅವರ ಬಳಿ ಸಮಯ ಕೇಳಿದ್ದೇನೆ. ಸಮಯ ಕೊಟ್ಟರೆ ಅಲ್ಲೇ ಉಳಿದುಕೊಂಡು ಮರುದಿನ ಬರುತ್ತೇನೆ. ರಾಹುಲ್ ಗಾಂಧಿ ಸಮಯ ಕೊಟ್ಟರೆ ಸಂಪುಟ ಪುನಾರಚನೆ ಬಗ್ಗೆ ಚರ್ಚೆ ಮಾಡುತ್ತೇನೆ. ಇಲ್ಲದಿದ್ದರೆ ಇಲ್ಲ ಎಂದು ತಿಳಿಸಿದರು.

ನಾನು ಕೇವಲ ಕುರುಬ ಸಮಾಜಕ್ಕೆ ಮಾತ್ರ ಇಷ್ಟು ಮಾಡಲಿಲ್ಲ. ಹಿಂದುಳಿದವರು, ದಲಿತರು, ಅಲ್ಪಸಂಖ್ಯಾತರು ಸೇರಿ ಎಲ್ಲಾ ಶೋಷಿತ ಸಮುದಾಯಗಳ ಏಳಿಗೆಗೂ ನಾನು ಕೆಲಸ ಮಾಡಿದ್ದೇನೆ. ಮೊದಲ ಬಾರಿ ಮುಖ್ಯಮಂತ್ರಿಯಾಗಿ ಜಾರಿಗೆ ತಂದ ಭಾಗ್ಯಗಳು, ಎರಡನೇ ಬಾರಿ ಮುಖ್ಯಮಂತ್ರಿ ಆಗಿ ಜಾರಿಗೆ ತಂದ ಗ್ಯಾರಂಟಿಗಳು ಎಲ್ಲಾ ಜಾತಿಯ ಬಡವರಿಗಾಗಿ ಜಾರಿ ಆಗಿದೆ. ಸರ್ವರನ್ನೂ ಒಳಗೊಂಡ, ಸರ್ವರ ಅಭಿವೃದ್ಧಿಯ ಸಮಾಜ ನಿರ್ಮಾಣ ನನ್ನ ಗುರಿ ಎಂದರು. ಅದಕ್ಕೇ ರಾಜ್ಯದ ಎಲ್ಲಾ ಜಾತಿಯ, ಎಲ್ಲಾ ವರ್ಗದ, ಎಲ್ಲಾ ಧರ್ಮದ ಜನರೂ ನನ್ನನ್ನು ಪ್ರೀತಿಸ್ತಾರೆ. ಹೀಗಾಗಿ ನಾನು ನಮ್ಮ ಜಾತಿ ಸೇರಿ ಸಮಾಜದ ಎಲ್ಲಾ ಜಾತಿ, ಧರ್ಮದವರ ಆಶೀರ್ವಾದಕ್ಕಾಗಿ ನಾನು ಋಣಿ ಎಂದು ಕೃತಜ್ಞತೆ ಸಲ್ಲಿಸಿದರು.
ನಾನು ರಾಜಕಾರಣಕ್ಕೆ ಬರದೇ ಹೋಗಿದ್ದರೆ ಕುರುಬ ಸಂಘದ ಕಟ್ಟಡವೂ ಉಳಿಯುತ್ತಿರಲಿಲ್ಲ, ಕಾಗಿನೆಲೆ ಪೀಠವೂ ಆಗುತ್ತಿರಲಿಲ್ಲ, ರಿಯಲ್ ಎಸ್ಟೇಟ್ ರೌಡಿಗಳಿಂದ ಬೈರಪ್ಪನ ಗುಡಿ ಮತ್ತು ಸಮಾಜದ ಭೂಮಿ, ಕಟ್ಟಡಗಳನ್ನು ಉಳಿಸಲು ಸಾಧ್ಯ ಆಗುತ್ತಿರಲಿಲ್ಲ ಎಂದು ಇತಿಹಾಸದ ಘಟನೆಗಳನ್ನು ಒಂದೊಂದಾಗಿ ವಿವರಿಸಿದರು.
ಹಿಂದೆ ರೌಡಿ ಕೊತ್ವಾಲ್ ರಾಮಚಂದ್ರನ ಜೊತೆ ಇದ್ದ ಪುಟ್ಟಸ್ವಾಮಿಯಿಂದ ಜೀವ ಬೆದರಿಕೆ ಇತ್ತು. ನಾನು ಹೆದರಲಿಲ್ಲ. ಕುರುಬರ ಸಂಘದ ವಿಚಾರದಲ್ಲಿ ಭಾಗಿ ಆಗದಂತೆ ನನಗೆ ಬೆದರಿಕೆ ಇತ್ತು. ಆದರೂ ನಾನು ಹೆದರದೆ ಗ್ರಾಮೀಣ ಭಾಗದ ಸಂಘದ ನಿರ್ದೇಶಕರ ಬೆಂಬಲದಲ್ಲಿ ದಾವಣಗೆರೆಯ ಮಲ್ಲಪ್ಪ ಅವರನ್ನು ರೌಡಿ ಪುಟ್ಟಸ್ವಾಮಿ ವಿರುದ್ಧ ಸಂಘದ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆಗೆ ನಿಲ್ಲಿಸಿದೆ. ಪುಟ್ಟಸ್ವಾಮಿ ನ್ಯಾಯಾಲಯಕ್ಕೆ ಹೋದರೂ ತೀರ್ಪು ನಮ್ಮ ಪರವಾಗಿ ಬಂತು. ಹೀಗೆ ಸಂಘವನ್ನು ನಾನು ಉಳಿಸಿದೆ.
ಬಳಿಕ ನನ್ನ ಹಳೇ ಕಾರಲ್ಲಿ ಇಡೀ ರಾಜ್ಯ ಸುತ್ತಿ ಸಮಾಜವನ್ನು ಸಂಘಟಿಸಿದೆ. ತಾರಾಕಾನಂದರನ್ನು ಪೀಠಾಧ್ಯಕ್ಷರನ್ನಾಗಿ ಮಾಡಲು ತೀರ್ಮಾನಿಸಿದ್ದು ನಾನೇ. ಮುಖ್ಯಮಂತ್ರಿ ಆಗಿದ್ದ ಬಂಗಾರಪ್ಪ ಅವರನ್ನು ಮತ್ತು ಕೇಂದ್ರ ಸಚಿವರಾಗಿದ್ದ ಶರದ್ ಪವಾರ್ ಅವರನ್ನು ಕರೆಸಿ ಪೀಠಕ್ಕೆ ಚಾಲನೆ ನೀಡಲಾಯಿತು. ಹೀಗೆ ಕುರುಬರ ಸಂಘ ಮತ್ತು ಕುರುಬ ಸಮಾಜದ ಪೀಠವನ್ನು ಉಳಿಸಿದ್ದು ನಾನು. ರಾಜ್ಯ ಸುತ್ತಿ ಸಮಾಜದ ಸಂಘಟಿಸಿದ್ದು ನಾನು, ಮುಕುಡಪ್ಪ, ಮಾಸ್ತಿ ಮತ್ತು ಇತರರು. ಆಮೇಲೆ ವಿಶ್ವನಾಥ್ ಅವರನ್ನು ಪೀಠದ ಸಮಿತಿಗೆ ಅಧ್ಯಕ್ಷರನ್ನಾಗಿ ಮಾಡಿದ್ದು ನಾನು. ಈಗ ವಿಶ್ವನಾಥ್ ಬಾಯಿಗೆ ಬಂದಂತೆ ಮಾತಾಡುತ್ತಾರೆ. ಆದ್ದರಿಂದ ಇಡೀ ಸಮಾಜ ಈ ಸತ್ಯವನ್ನು ಅರ್ಥ ಮಾಡಿಕೊಳ್ಳಬೇಕು. ನಾನು ಸಮಾಜಕ್ಕೆ ಏನು ಮಾಡಿದ್ದೇನೆ ಎನ್ನುವ ಚರಿತ್ರೆಯನ್ನು ಮನದಟ್ಟು ಮಾಡಿಕೊಳ್ಳಬೇಕು. ಗುರುಪೀಠ ನಾನು ಮಾಡಿದ್ದು ಎಂದು ನಿರಂಜನಾನಂದಪುರಿ ಸ್ವಾಮೀಜಿಗೆ ಹೆದರಿಸುವವರು ಇತಿಹಾಸ ತಿರುಚುತ್ತಿದ್ದಾರೆ ಎಂದರು.












Click it and Unblock the Notifications