India-EU Trade Pact: ಭಾರತ-ಯೂರೋಪ್ ಒಕ್ಕೂಟದಿಂದ ಕರ್ನಾಟಕಕ್ಕೆ ಹೆಚ್ಚು ಪ್ರಯೋಜನ: ಪ್ರಹ್ಲಾದ್ ಜೋಶಿ
ನವದೆಹಲಿ: ಭಾರತ ಮತ್ತು ಯುರೋಪ್ ಒಕ್ಕೂಟ (EU) ಮಧ್ಯೆ ಮಹತ್ವದ ಒಪ್ಪಂದ ಏರ್ಪಟ್ಟಿದೆ. ಈ ಮೂಲಕ ಕರ್ನಾಟಕ ಸೇರಿದಂತೆ ದೇಶ ಅನೇಕ ರಾಜ್ಯಗಳಿಗೆ ಸಿಹಿ ಸುದ್ದಿ ಸಿಕ್ಕಿದೆ. ಏಕೆಂದರೆ ಇದೊಂದು ಮುಕ್ತ ವ್ಯಾಪಾರ ಒಪ್ಪಂದವಾಗಿದ್ದು, ಯುರೋಪ್ ರಾಷ್ಟ್ರಗಳಿಂದ ಆಮದಾಗುವ ವಸ್ತುಗಳ ಮೇಲಿನ ಸುಂಕ ಇಳಿಕೆ ಆಗಲಿದೆ. ಈ ಬಗ್ಗೆ ಒಕ್ಕೂಟವು ಅಧಿಕೃತ ಮಾಹಿತಿ ಬಿಡುಗಡೆ ಮಾಡಿದೆ. ಇದೇ ವಿಚಾರವಾಗಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿಯವರು ಎಕ್ಸ್ ಪೋಸ್ಟ್ ಮಾಡಿದ್ದು 'ಭಾರತ-ಯುರೋಪ್ ಒಪ್ಪಂದದಿಂದ ರಾಜ್ಯದ ಬೆಳವಣಿಗೆಗೆ ಮಹತ್ತರ ಅವಕಾಶ' ಸಿಗಲಿದೆ ಎಂದು ಹರ್ಷ ವ್ಯಕ್ತಪಡಿಸಿದ್ದಾರೆ.
ಭಾರತ-ಯುರೋಪ್ ಒಕ್ಕೂಟದ (India-EU FTA) ಮುಕ್ತ ವ್ಯಾಪಾರ ಒಪ್ಪಂದದಡಿ ಕರ್ನಾಟಕದ ಬೆಳವಣಿಗೆಗೆ ವಿಫುಲ ಅವಕಾಶಗಳು ಇದೆ. ಕರ್ನಾಟಕಕ್ಕೆ ತನ್ನ ರಫ್ತು ವಿಸ್ತಾರವನ್ನು ಹೆಚ್ಚಿಸಿ ಕೈಗಾರಿಕಾ ಬೆಳವಣಿಗೆಯನ್ನು ವೇಗಗೊಳಿಸುವ ಮಹತ್ವದ ಅವಕಾಶವನ್ನು ಒದಗಿಸುತ್ತದೆ. ಯುರೋಪಿಯನ್ ಮಾರುಕಟ್ಟೆಗಳಿಗೆ ಆದ್ಯತಾ ಪ್ರವೇಶ ಕಲ್ಪಿಸಲಿದೆ ಎಂದಿದ್ದಾರೆ.

ಬೆಂಗಳೂರು-ತುಮಕೂರು ಪ್ರದೇಶದಿಂದ ರಫ್ತು ಹೆಚ್ಚಿಸುತ್ತದೆ ಎಂದು ನಿರೀಕ್ಷಿಸಲಾಗಿದೆ. ವಿಶೇಷವಾಗಿ ಎಂಜಿನಿಯರಿಂಗ್ ಸರಕುಗಳು, ಎಲೆಕ್ಟ್ರಾನಿಕ್ಸ್ ಮತ್ತು ಔಷಧಗಳಲ್ಲಿ, ರಾಜ್ಯದ ಬಲವಾದ ಸೂಕ್ಷ್ಮ, ಸಣ್ಣ ಹಾಗೂ ಮಧ್ಯಮ ಕೈಗಾರಿಕೆಗಳ (MSME) ವಲಯಕ್ಕೆ ಇದು ಬೆಂಬಲಿತವಾಗಿದೆ ಎಂದು ಅವರು ವಿವರಿಸಿದ್ದಾರೆ.
ಕರ್ನಾಟಕದ ವಿವಿಧ ವಲಯಗಳಿಗೆ ಪ್ರಯೋಜನ
ವೈದ್ಯಕೀಯ ಸಾಧನ, ರಾಸಾಯನಿಕಗಳು, ಜವಳಿ ಮತ್ತು ಉಡುಪುಗಳಂತಹ ಪ್ರಮುಖ ವಲಯಗಳು ಸಹ ಪ್ರಯೋಜನ ಪಡೆಯುವ ಸಾಧ್ಯತೆಯಿದೆ. ಇದು ಜಾಗತಿಕ ಸ್ಪರ್ಧಾತ್ಮಕತೆ ಹಾಗೂ ಮೌಲ್ಯಗಳನ್ನು ಮತ್ತಷ್ಟು ಬಲಪಡಿಸುತ್ತದೆ. ಸುಂಕ ಕಡಿತ ಮತ್ತು ಸುಧಾರಿತ ಮಾರುಕಟ್ಟೆ ಪ್ರವೇಶವು ಬೆಂಗಳೂರಿನಿಂದ ಉಡುಪು ರಫ್ತನ್ನು ಹೆಚ್ಚಿಸುತ್ತದೆ ಎಂದು ತಿಳಿಸಿದ್ದಾರೆ.
ಕೌಶಲ್ಯ ಆಧಾರಿತ ಕೈಗಾರಿಕೆಗಳ ಜೊತೆಗೆ, ಹೆಚ್ಚಿನ ಕಾರ್ಮಿಕರ ಅಗತ್ಯವಿರುವ ಉತ್ಪಾದನಾ ವಲಯದಲ್ಲಿ ಉದ್ಯೋಗ ಸೃಷ್ಟಿಗೆ ಈ ಒಪ್ಪಂದ ಪೂರಕವಾಗಲಿದೆ. ಒಟ್ಟಾರೆಯಾಗಿ, ಈ ಒಪ್ಪಂದ ಜಾಗತಿಕ ವ್ಯಾಪಾರ ಸಂಪರ್ಕ, ಸುಸ್ಥಿರ ರಫ್ತು, ಹೆಚ್ಚಿನ ಹೂಡಿಕೆ ಮತ್ತು ಉದ್ಯೋಗ ಸೃಷ್ಟಿಯಲ್ಲಿ ಕರ್ನಾಟಕಕ್ಕೆ ಉತ್ತಮ ವೇದಿಕೆ ಕಲ್ಪಿಸಿಕೊಡುತ್ತದೆ ಎಂದು ಸಚಿವ ಪ್ರಹ್ಲಾದ್ ಜೋಶಿಯವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಒಪ್ಪಂದಿಂದ ಯಾವೆಲ್ಲ ವಸ್ತುಗಳ ಸುಂಕ ಇಳಿಕೆ ಆಗುತ್ತೆ?
ಐರೋಪ್ಯ ದೇಶಗಳಿಂದ ಆಮದಾಗುವ ವೈನ್, ಚಾಕೋಲೆಟ್, ಕಾರು, ಆಲಿವ್ ಎಣ್ಣೆ ಸೇರಿ ಹಲವು ವಸ್ತುಗಳ ತೆರಿಗೆ ಸುಂಕ ಕಡಿತಗೊಳಿಸಲಾಗಿದೆ. 110ರಷ್ಟಿದ್ದ ಸುಂಕವನ್ನು ಈ ಒಪ್ಪಂದದಿಂದ 10ಕ್ಕೆ ಇಳಿಸಲು ನಿರ್ಧರಿಸಲಾಗಿದೆ. ಆದರೆ ಭಾರತದ ರೈತರ ಹಿತದೃಷ್ಟಿ ಇಟ್ಟುಕೊಂಡು ಈ ಒಪ್ಪಂದದ ಸುಂಕ ಕಡಿತದಿಂದ ಸೂಕ್ಷ್ಮ ಕೃಷಿ ವಲಯಗಳನ್ನು ಹೊರಗಿಡಲಾಗಿದೆ ಎಂಬುದು ಸದ್ಯದ ಮಾಹಿತಿ.












Click it and Unblock the Notifications