ಕರ್ನಾಟಕದಲ್ಲಿ ಮಾನಸಿಕ ರೋಗಿಗಳ ಸಂಖ್ಯೆ ಏರಿಕೆ: ಸುಧಾಕರ್ ಆತಂಕ
ಬೆಂಗಳೂರು, ಡಿಸೆಂಬರ್ 09: ಕರ್ನಾಟಕದಲ್ಲಿ ಕಳೆದ 10 ವರ್ಷಗಳಲ್ಲಿ ನರ ಹಾಗೂ ಮಾನಸಿಕ ರೋಗಿಗಳ ಸಂಖ್ಯೆ ಹೆಚ್ಚಾಗುತ್ತಿರುವುದು ಆತಂಕದ ವಿಷಯ. ಮಾನಸಿಕ ಆರೋಗ್ಯ ಉತ್ತಮವಾಗಿದ್ದರೆ ಮಾತ್ರ ಮನುಷ್ಯ ಆರೋಗ್ಯವಾಗಿರುತ್ತಾನೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್ ಹೇಳಿದರು.
ಬೆಂಗಳೂರಿನಲ್ಲಿ ರಾಷ್ಟ್ರೀಯ ಮಾನಸಿಕ ಹಾಗೂ ನರವಿಜ್ಞಾನ ಸಂಸ್ಥೆ (ನಿಮ್ಹಾನ್ಸ್) ನೇತೃತ್ವದಲ್ಲಿ ನಡೆಯುತ್ತಿರುವ ಬ್ರೈನ್ ಹೆಲ್ತ್ ಇನಿಷೆಯೇಟಿವ್ ಕಾರ್ಯಕ್ರಮದಲ್ಲಿ ಉದ್ಘಾಟಿಸಿ ಅವರು ಮಾತನಾಡಿದರು. ನಾವು ಎಷ್ಟು ವರ್ಷ ಬದುಕುತ್ತೇವೆ ಅನ್ನುವುದರ ಜೊತೆಗೆ ಹೇಗೆ ಬದುಕುತ್ತೇವೆ ಎನ್ನವುದು ಸಹ ಮುಖ್ಯವಾಗಿದೆ. ಮಾನಸಿಕ ಆರೋಗ್ಯದಲ್ಲಿನ ಏರುಪೇರು ಮನುಷ್ಯನ ಆರೋಗ್ಯದಲ್ಲಿ ಸಮಸ್ಯೆ ಸೃಷ್ಟಿಸುವ ಜೊತೆಗೆ ಸಮಾಜಕ್ಕೂ ಆತಂಕ ತರುತ್ತಿದೆ. ಮಾನಸಿಕ ಆರೋಗ್ಯ ಉತ್ತಮವಾಗಿದ್ದರೆ ಮಾತ್ರ ಸ್ವಸ್ಥ ಸಮಾಜ ನಿರ್ಮಾಣ ಸಾಧ್ಯ ಎಂದು ಅವರು ತಿಳಿಸಿದರು.
ಬೆಂಗಳೂರಿನಲ್ಲಿ ನಿಮ್ಹಾನ್ಸ್‌ನಂತಹ ಸಂಸ್ಥೆ ಇರುವುದು ರಾಜ್ಯಕ್ಕೆ ವರದಾನವಾಗಿದೆ. ಸಾಂಕ್ರಾಮಿಕವಲ್ಲದ ರೋಗಗಳಿಂದಲೂ ಬ್ರೈನ್‌ಗೆ ಸಂಬಂಧಿಸಿದ ಕಾಯಿಲೆಗಳು ಹೆಚ್ಚಾಗುತ್ತಿದೆ. ಕಳೆದ 10 ವರ್ಷಗಳಿಂದ ಮಾನಸಿಕ, ನರರೋಗಗಳು, ಸ್ಟ್ರೋಕ್, ತಲೆನೋವಿನಿಂದ ನರಳುತ್ತಿರುವ ರೋಗಿಗಳ ಸಂಖ್ಯೆ ಹೆಚ್ಚಾಗುತ್ತಿದೆ. ಅಂಕಿ ಅಂಶಗಳ ಪ್ರಕಾರ ಮಾನಸಿಕ ಅರೋಗ್ಯದಿಂದಲೇ ಸುಮಾರು 7ರಿಂದ 8ರಷ್ಟು ಜನರು ಸಾವಿಗೀಡಾಗುತ್ತಿದ್ದಾರೆ. ಮಾನಸಿಕ ಅಸ್ವಸ್ಥತೆಯು ಸಾವಿಗೆ ಕಾರಣವಾಗಿರುವ ಅಂಶಗಳ ಪೈಕಿ 2ನೇ ಸ್ಥಾನದಲ್ಲಿದೆ ಎಂದು ಸಚಿವರು ವಿವರಿಸಿದರು.

'ಟಿ ಮನಸ್' ಮೂಲಕ ರಾಷ್ಟ್ರೀಯ ಅಭಿಯಾನ
ಭಾರತ ಸರ್ಕಾರ 'ಟಿ ಮನಸ್' ಯೋಜನೆ ಮೂಲಕ ಮಾನಸಿಕ ರೋಗಗಳಿಗೆ ಸಂಬಂಧಿಸಿದಂತೆ ರಾಷ್ಟ್ರೀಯ ಅಭಿಯಾನ ಮಾಡುತ್ತಿದೆ. ರಾಜ್ಯ ಸರ್ಕಾರ ಹಬ್ ಮತ್ತು ಸ್ಪೋಕ್ ಮಾಡೆಲ್ ಮೂಲಕ ಈಗಾಗಲೇ ಚಿಕ್ಕಬಳ್ಳಾಪುರ, ಕೋಲಾರ, ಬೆಂಗಳೂರು ಗ್ರಾಮಾಂತರದಲ್ಲಿ ನಿಮ್ಹಾನ್ಸ್ ನೆರವಿನೊಂದಿಗೆ ಪೈಲಟ್ ಪ್ರಾಜೆಕ್ಟ್ ಮಾಡುತ್ತಿದೆ. ಇದನ್ನು ಮುಂದಿನ ದಿನಗಳಲ್ಲಿ ಈ ಸೇವೆ ರಾಜ್ಯದ ಎಲ್ಲಾ ಕಡೆ ಸಿಗುವಂತೆ ಮಾಡಲು ಯೋಜನೆ ರೂಪಿಸಲಾಗಿದೆ ಎಂದರು.

ಪ್ರಾಥಮಿಕ ಆರೋಗ್ಯ ಕೇಂದ್ರ (ಪಿಎಚ್‌ಸಿ) ವೈದ್ಯರಿಗೆ ಮಾನಸಿಕ ರೋಗಿಗಳಿಗೆ ಕೌನ್ಸಿಲಿಂಗ್ ಹಾಗೂ ಚಿಕಿತ್ಸೆ ನೀಡುವ ಬಗ್ಗೆ ಈಗಾಗಲೇ 3 ತಿಂಗಳ ತರಬೇತಿ ನೀಡಲಾಗಿದೆ. ಮುಂದಿನ ದಿನಗಳಲ್ಲಿ ಎಎನ್‌ಎಂ, ಸಿಎಚ್‌ಒಗಳಿಗೆ ಹಾಗೂ ಆಶಾ ಕಾರ್ಯಕರ್ತೆಯರಿಗೂ ಈ ಸಂಬಂಧ ತರಬೇತಿ ನೀಡಿ ಮಾನಸಿಕ ರೋಗಿಗಳಿಗೆ ಹೇಗೆ ಚಿಕಿತ್ಸೆ ನೀಡಬೇಕು ಅನ್ನುವ ಬಗ್ಗೆ ತಿಳಿಸಲು ಯೋಜನೆ ಜಾರಿಗೊಳಿಸಲಿದ್ದೇವೆ ಎಂದು ಹೇಳಿದರು.












Click it and Unblock the Notifications