ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆಯಲ್ಲಿ ಉತ್ತೀರ್ಣಗೊಂಡವರಿಗೆ ಪ್ರೋತ್ಸಾಹ ಧನ
ಬೆಂಗಳೂರು, ಏಪ್ರಿಲ್ 22; ಕರ್ನಾಟಕದ ಸರ್ಕಾರಿ ನೌಕರರಿಗೆ ಕಂಪ್ಯೂಟರ್ ಬಳಕೆಯ ಸಾಮಾನ್ಯ ಜ್ಞಾನವನ್ನು ಕಡ್ಡಾಯಗೊಳಿಸುವ ನಿಟ್ಟಿನಲ್ಲಿ ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆಯನ್ನು ಕಡ್ಡಾಯಗೊಳಿಸಲಾಗಿದೆ. ಸದರಿ ಪರೀಕ್ಷೆಯಲ್ಲಿ ಉತ್ತೀರ್ಣಗೊಂಡು ಪ್ರಸ್ತುತ ನಿವೃತ್ತಿ ಹೊಂದಿರುವ ಅಧಿಕಾರಿ/ ನೌಕರರಿಗೆ ಪ್ರೋತ್ಸಾಹಧನ ಮಂಜೂರು ಮಾಡುವ ಬಗ್ಗೆ ಸ್ಪಷ್ಟೀಕರಣ ಕೋರಾಲಾಗಿತ್ತು.
ವೀರಭದ್ರ ಸರ್ಕಾರದ ಅಧೀನ ಕಾರ್ಯದರ್ಶಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ (ಸೇವಾ ನಿಮಯಮಗಳು-1) ಈ ಕುರಿತು ಸ್ಪಷ್ಟೀಕರಣ ನೀಡಿ ಆದೇಶ ಹೊರಡಿಸಿದ್ದಾರೆ. ಉಪ ನಿಬಂಧಕರು, ಕರ್ನಾಟಕ ಉಚ್ಛ ನ್ಯಾಯಾಲಯ ಬೆಂಗಳೂರು 560001 ಇವರಿಗೆ ಈ ಕುರಿತು ಪತ್ರವನ್ನು ಬರೆದಿದ್ದಾರೆ.

ಆದೇಶ ಪತ್ರದಲ್ಲಿ ದಿನಾಂಕ 22/3/2012ರ ಸರ್ಕಾರದ ಅಧಿಸೂಚನೆ ಜಾರಿಗೆ ಬಂದಾಗ ಸೇವೆಯಲ್ಲಿದ್ದು ದಿನಾಂಕ 17/4/2021ರೊಳಗೆ ಸದರಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದು, ಪ್ರಸ್ತುತ ನಿವೃತ್ತಿ ಹೊಂದಿರುವ ಅಧಿಕಾರಿ/ ನೌಕರರಿಗೆ ಪ್ರೋತ್ಸಾಹಧನ ಮಂಜೂರು ಮಾಡುವ ಬಗ್ಗೆ ಸ್ಪಷ್ಟೀಕರಣ ಕೋರಲಾಗಿದೆ ಎಂದು ತಿಳಿಸಿದೆ.
ರಾಜ್ಯ ಸರ್ಕಾರಿ ನೌಕರರಿಗೆ ಕಂಪ್ಯೂಟರ್ ಬಳಕೆಯ ಸಾಮಾನ್ಯ ಜ್ಞಾನವನ್ನು ಕಡ್ಡಾಯಗೊಳಿಸುವ ನಿಟ್ಟಿನಲ್ಲಿ ಕರ್ನಾಟಕ ಸಿವಿಲ್ ಸೇವಾ (ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆ) ನಿಯಮಗಳು 2012ನ್ನು ಅಧಿಸೂಚನೆ ಸಂಖ್ಯೆ: ಸಿಆಸುಇ 43 ಸೇವನೆ 2008 ದಿನಾಂಕ 7/3/2012ರಲ್ಲಿ ರೂಪಿಸಲಾಗಿದೆ. ಸದರಿ ನಿಯಮಗಳು ದಿನಾಂಕ 22/3/2012ರಿಂದ ಜಾರಿಗೆ ಬಂದಿರುತ್ತದೆ.
ಸದರಿ ನಿಯಮಗಳ ನಿಯಮ 3(3)ರಲ್ಲಿ ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆಯಲ್ಲಿ ಉತ್ತೀರ್ಣರಾಗುವ ಸೇವಾನಿರತ ನೌಕರರು ಸರ್ಕಾರವು ಅಥವಾ ಸರ್ಕಾರದಿಂದ ಅನುಮೋದಿತ ಏಜೆನ್ಸಿಯು ನೀಡುವ ಪಮಾಣ ಪತ್ರವನ್ನು ಹಾಜರುಪಡಿಸುವುದಕ್ಕೆ ಒಳಪಟ್ಟು ರೂ. 5,000 ಪ್ರೋತ್ಸಾಹ ಧನವನ್ನು ಸಂದಾಯ ಮಾಡಲು ಆಸ್ಪದ ಕಲ್ಪಿಸಲಾಗಿತ್ತು.

ಇಲ್ಲಿ ಸೇವಾನಿರತ ನೌಕರರು ಎಂದರೆ ಈ ನಿಯಮಗಳು ಜಾರಿಗೆ ಬಂದ ದಿನಾಂಕದಂದು ಸೇವೆಯಲ್ಲಿದ್ದ ಸರ್ಕಾರಿ ನೌಕರರಾಗಿರುತ್ತಾರೆ. ಅಧಿಸೂಚನೆ ದಿನಾಂಕ 17/4/2021ರಲ್ಲಿ ಕರ್ನಾಟಕ ಸಿವಿಲ್ ಸೇವಾ (ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆ) ನಿಯಮಗಳು 2012ಕ್ಕೆ ತಿದ್ದುಪಡಿ ತಂದು ಮೇಲ್ಕಂಡ ನಿಯಮ 33)ನ್ನು ರದ್ದುಗೊಳಿಸಿ, ಪ್ರೋತ್ಸಾಹ ಧನವನ್ನು ಮಂಜೂರು ಮಾಡುವ ಸೌಲಭ್ಯವನ್ನು ಕೈಬಿಡಲಾಗಿದೆ.
ಹೀಗಾಗಿ, ಕರ್ನಾಟಕ ಸಿವಿಲ್ ಸೇವಾ (ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆ) ನಿಯಮಗಳು 2012 ಜಾರಿಗೆ ಬಂದ ದಿನಾಂಕ 22/3/2012ರಂದು ಸರ್ಕಾರಿ ಸೇವೆಯಲ್ಲಿದ್ದು, ನಿಯಮ 3(3)ನ್ನು ಕೈಬಿಡಲಾದ ದಿನಾಂಕ 17/4/2021ರವರೆಗೆ ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆಯಲ್ಲಿ ಉತ್ತೀರ್ಣರಾದ ನಿವೃತ್ತ ಅಧಿಕಾರಿ/ ನೌಕರರು ಸೇರಿದಂತೆ ಎಲ್ಲಾ ಸೇವಾನಿರತ ನೌಕರರು ಸರ್ಕಾರಿ ಆದೇಶ ಸಂಖ್ಯೆ: ಸಿಆಸುಇ 99 ಸೇವನೆ 2022 ದಿನಾಂಕ 24/1/2023ರನ್ವಯ ಪ್ರೋತ್ಸಾಹ ಧನ ಪಡೆಯಲು ಅರ್ಹರಾಗಿರುತ್ತಾರೆಂದು ತಿಳಿಸಲು ನಿರ್ದೇಶಿಸಲ್ಪಟ್ಟಿದ್ದೇನೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಪರೀಕ್ಷೆ ಕಡ್ಡಾಯ; ರಾಜ್ಯ ಸರ್ಕಾರಿ ನೌಕರರಿಗೆ ಕಂಪ್ಯೂಟರ್ ಬಳಕೆಯ ಸಾಮಾನ್ಯ ಜ್ಞಾನವನ್ನು ಕಡ್ಡಾಯಗೊಳಿಸುವ ನಿಟ್ಟಿನಲ್ಲಿ ಕರ್ನಾಟಕ ಸಿವಿಲ್ ಸೇವಾ (ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆ) ನಿಯಮಗಳು 2012 ರೂಪಿಸಲಾಗಿದೆ. ಸದರಿ ನಿಯಮಾವಳಿಗಳ ನಿಯಮ 1(3)ರಲ್ಲಿ ನಿರ್ದಿಷ್ಟಪಡಿಸಿರುವ ಹುದ್ದೆಗಳನ್ನು ಹೊರತುಪಡಿಸಿ ಉಳಿದಂತೆ ಎಲ್ಲಾ ಸರ್ಕಾರಿ ನೌಕರರು ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆಯಲ್ಲಿ ತೇರ್ಗಡೆ ಹೊಂದುವುದನ್ನು ಕಡ್ಡಾಯಗೊಳಿಸಲಾಗಿದೆ. ಈಗಾಗಲೇ ಈ ಕುರಿತು ಸರ್ಕಾರ ಆದೇಶದಲ್ಲಿ ಸ್ಪಷ್ಟಪಡಿಸಿದೆ. ಈ ವರ್ಷದ ಏಪ್ರಿಲ್ 6ರಂದು ಹೊರಡಿಸಿದ ಆದೇಶದ ಅನ್ವಯ ಸರ್ಕಾರಿ ನೌಕರರು 31/12/2023ರೊಳಗೆ ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆಯಲ್ಲಿ ಕಡ್ಡಾಯವಾಗಿ ಉತ್ತೀರ್ಣರಾಗಬೇಕು.
ನೌಕರರು ಉತ್ತೀರ್ಣರಾಗುವ ಅವಧಿಯನ್ನು ಕಾಲ ಕಾಲಕ್ಕೆ ಪರಿಷ್ಕರಿಸಲಾಗಿದೆ. ಈಗ ನೀಡಿರುವ ಅವಧಿಯೊಳಗಾಗಿ ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆಯಲ್ಲಿ ಉತ್ತೀರ್ಣರಾಗದ ನೌಕರರು ಪರಿವೀಕ್ಷಣಾ ಅವಧಿ, ಮುಂಬಡ್ತಿ ಹಾಗೂ ವಾರ್ಷಿಕ ವೇತನ ಬಡ್ತಿ ಇತ್ಯಾದಿಗಳನ್ನು ಪಡೆಯಲು ಅನರ್ಹರಾಗುತ್ತಾರೆ. ಆದುದರಿಂದ ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆಯಲ್ಲಿ ಉತ್ತೀರ್ಣರಾಗದೇ ಇರುವ ಸರ್ಕಾರಿ ನೌಕರರು ಕೂಡಲೇ ಪರೀಕ್ಷೆ ತೆಗೆದುಕೊಂಡು ಉತ್ತೀರ್ಣರಾಗಲು ಕಟ್ಟುನಿಟ್ಟಾಗಿ ಸೂಚನೆ ನೀಡಲಾಗಿದೆ.












Click it and Unblock the Notifications