ಯುವನಿಧಿ ಕಾರ್ಯಕ್ರಮ ಉದ್ಘಾಟನೆ ಮಹೂರ್ತ ಫಿಕ್ಸ್ : ರಾಜಾಹುಲಿ ಭದ್ರಕೋಟೆಯಲ್ಲಿಯೇ ವೇದಿಕೆ ಸಿದ್ಧ
ಬೆಂಗಳೂರು,ಡಿಸೆಂಬರ್ 27: 2024 ರ ಲೋಕಸಭಾ ಚುನಾವಣೆಯನ್ನ ಪ್ರತಿಷ್ಠೆಯಾಗಿ ತೆಗೆದುಕೊಂಡಿರುವ ರಾಜ್ಯ ಕಾಂಗ್ರೆಸ್ ಲೋಕಸಮರಕ್ಕೆ ಭರ್ಜರಿ ತಯಾರಿ ನಡೆಸಿದೆ. ವಿಧಾನಸಭಾ ಚುನಾವಣೆಗೂ ಮುನ್ನ ರಾಜ್ಯದ ಜನತೆಗೆ ಕೊಟ್ಟ ಮಾತಿನಿಂತೆ ಕಾಂಗ್ರೆಸ್ ನಾಯಕರು ಐದು ಗ್ಯಾರಂಟಿಗಳನ್ನ ಜಾರಿಗೊಳಿಸಲು ಮುಂದಾಗಿದ್ದು, ಯುವ ನಿಧಿ ಉದ್ಘಾಟನೆಗೆ ರಾಜಹುಲಿ ಬಿ ಎಎಸ್ ಯಡಿಯೂರಪ್ಪ ಭದ್ರಕೋಟೆಯಲ್ಲಿ ರಾಜ್ಯ ಸರ್ಕಾರ ವೇದಿಕೆ ಸಿದ್ಧ ಪಡಿಸಿದೆ.
ಹೌದು, ಸಿದ್ದರಾಮಯ್ಯ ಸರ್ಕಾರ ಈಗಾಗಲೇ ನಾಲ್ಕು ಗ್ಯಾರಂಟಿಗಳನ್ನ ಜಾರಿಗೊಳಿಸಿದ್ದು, ಲೋಕಸಭಾ ಚುನಾವಣೆಯಲ್ಲಿ ಯುವ ಸಮುದಾಯವನ್ನ ಸೆಳೆಯುವ ನಿಟ್ಟಿನಲ್ಲಿ ಲೋಕಸಮರಕ್ಕೆ ಸಜ್ಜಾಗಿದೆ. ಹೀಗಾಗಿ ಜನವರಿ 12 ರಂದು ವಿವೇಕಾನಂದ ಜಯಂತಿಯಂದು ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರ ಭದ್ರಕೋಟೆ ಶಿವಮೊಗ್ಗದಲ್ಲಿ ಯುವನಿಧಿ ಯೋಜನೆ ಉದ್ಘಾಟನಾ ಕಾರ್ಯಕ್ರಮಕ್ಕೆ ಮುಂದಾಗಿದೆ.

ಲೋಕಸಭಾ ಚುನಾವಣೆಯಲ್ಲಿ 20 ಕ್ಕೂ ಹೆಚ್ಚು ಕ್ಷೇತ್ರಗಳನ್ನ ಗೆಲ್ಲುವ ನಿಟ್ಟಿನಲ್ಲಿ ಕಾಂಗ್ರೆಸ್ ಹೈಕಮಾಂಡ್ ಟಾರ್ಗೆಟ್ ನೀಡಿದ್ದು, ಲೋಕಸಭಾ ದೃಷ್ಟಿಯಿಂದ ಕೊಟ್ಟ ಮಾತಿನಂತೆ ಗ್ಯಾರಂಟಿಗಳ ಜಾರಿಗೆ ಕಾಂಗ್ರೆಸ್ ಸರ್ಕಾರ ಮುಂದಾಗಿದೆ. ಅದರಂತೆ ಇದೇ ಡಿಸೆಂಬರ್ 26 ರಂದು ಯುವನಿಧಿ ಯೋಜನೆಗೆ ನೋಂದಣಿ ಪ್ರಕ್ರಿಯೆ ಆರಂಭವಾಗಲಿದ್ದು, ಇದೀಗ ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಅವರಿಗೆ ಠಕ್ಕರ್ ಕೊಡಲು ಕಾಂಗ್ರೆಸ್ ನಾಯಕರು ಶಿವಮೊಗ್ಗದಲ್ಲಿ ಉದ್ಘಾಟನೆಗೆ ಪ್ಲಾನ್ ಹಾಕಿಕೊಂಡಿದೆ.
ಯುವ ನಿಧಿ ಯೋಜನೆ ಜಾರಿ ಕುರಿತು ಮಾಹಿತಿ ನೀಡಿರುವ ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್, ಜನವರಿ 12 ರಂದು ವಿವೇಕಾನಂದ ಜಯಂತಿಯಂದು ಶಿವಮೊಗ್ಗದಲ್ಲಿ ಯುವನಿಧಿ ಯೋಜನೆ ಉದ್ಘಾಟನೆ ಕಾರ್ಯಕ್ರಮ ನಡೆಯಲಿದೆ ಎಂದು ತಿಳಿಸಿದರು. ಈ ಕಾರ್ಯಕ್ರಮದ ವಿಚಾರವಾಗಿ ನಮ್ಮ ರಾಷ್ಟ್ರೀಯ ನಾಯಕರ ಜತೆ ಚರ್ಚೆ ಮಾಡುತ್ತಿದ್ದೇವೆ. ನಾವು ನುಡಿದಂತೆ ನಡೆದಿದ್ದೇವೆ. ನಮಗೆ ಅಧಿಕಾರ ಕೊಟ್ಟ ಜನರ ಋಣ ತೀರಿಸುವ ಕೆಲಸ ಮಾಡಿದ್ದೇವೆ ಎಂದು ತಿಳಿಸಿದರು.

ಕೋವಿಡ್ ಸೋಂಕು ಹೆಚ್ಚಳ ವಿಚಾರವಾಗಿ ಕೇಳಿದಾಗ, "ಕೋವಿಡ್ ವಿಚಾರವಾಗಿ ಯಾರೂ ಆತಂಕಪಡುವ ಅಗತ್ಯವಿಲ್ಲ. ಎಲ್ಲರೂ ಜಾಗೃತರಾಗಿರೋಣ. ಹೆಚ್ಚಿನ ಪರೀಕ್ಷೆ ನಡೆಸುತ್ತಿದ್ದೇವೆ. ಹಿರಿಯ ನಾಗರಿಕರು, ಯುವಕರು ಜಾಗೃತರಾಗಿರಬೇಕು. ನಾವು ವ್ಯಾಪಾರ, ವ್ಯವಹಾರಕ್ಕೆ ಯಾವುದೇ ನಿರ್ಬಂಧ ಹಾಕುವುದಿಲ್ಲ ಎಂದು ತಿಳಿಸಿದರು.
ಶಿವಾನಂದ ಪಾಟೀಲ್ ಅವರ ಕ್ಷಮೆಗೆ ವಿರೋಧ ಪಕ್ಷಗಳು ಆಗ್ರಹಿಸುತ್ತಿರುವ ಕುರಿತು ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಅವರು, ಯಾವ ಅರ್ಥದಲ್ಲಿ ಹೇಳಿದ್ದಾರೆಂದು ಗೊತ್ತಿಲ್ಲ. ಅವರ ಜತೆ ನಾನು ಮಾತನಾಡುತ್ತೇನೆ. ನಮ್ಮ ಅಧಿಕಾರದ ಅವಧಿಯಲ್ಲಿ ಯಾರ ಮನಸ್ಸಿಗೂ ನೋಯಿಸುವ ಉದ್ದೇಶವಿಲ್ಲ. ರೈತರು ನಮಗೆ ಅಧಿಕಾರ ನೀಡಿದ್ದು, ಅವರಿಗೆ ಶಕ್ತಿ ತುಂಬುವ ಕೆಲಸ ಮಾಡುತ್ತೇವೆ ಎಂದು ತಿಳಿಸಿದರು.












Click it and Unblock the Notifications