ರಾಜ್ಯೋತ್ಸವಕ್ಕೆ 'ಯಶಸ್ವಿನಿ' ಯೋಜನೆ ವ್ಯಾಪ್ತಿಗೆ 1,650 ಕಾಯಿಲೆಗಳು, ವೆಚ್ಚದ ಬಗ್ಗೆ ತಿಳಿಯಿರಿ
ಬೆಂಗಳೂರು ಅಕ್ಟೋಬರ್ 13: ಕಡು ಬಡವರಿಗೆ ಆರೋಗ್ಯ ಸಂಕಷ್ಟದಲ್ಲಿ ಆಸರೆಯಾಗಬಲ್ಲ 'ಯಶಸ್ವಿನಿ ಯೋಜನೆ'ಯನ್ನು ಮರು ಜಾರಿಗೆ ರಾಜ್ಯ ಸರ್ಕಾರ ಅನುಮೋದನೆ ನೀಡಿದೆ. ಈ ಮೂಲಕ ಕರ್ನಾಟಕ ರಾಜ್ಯೋತ್ಸವಕ್ಕೆ ನಾಡಿನ ಜನತೆಗೆ ಸಿಹಿ ಸುದ್ದಿಯೊಂದನ್ನು ನೀಡಿರುವ ಸರ್ಕಾರ ನವೆಂಬರ್ 1ರಿಂದಲೇ ನೋಂದಣಿ ಆರಂಭಿಸುವಂತೆ ಸೂಚಿಸಿದೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು 2022 ರಿಂದ 23ನೇ ಸಾಲಿನ ಆಯವ್ಯಯದಲ್ಲಿ ಘೋಷಿಸಿದಂತೆ ಯಶಸ್ವಿನಿ ಯೋಜನೆ ಯನ್ನು ಪರಿಷ್ಕರಿಸಿ ಮರು ಜಾರಿ ಮಾಡಿ ಆದೇಶ ಹೊರಡಿಸಿದ್ದಾರೆ. ಈ ಯೋಜನೆಗಾಗಿ ರಾಜ್ಯ ಸರ್ಕಾರ ಪ್ರಸಕ್ತ ಆಯವ್ಯಯದಲ್ಲಿ 300 ಕೋಟಿ ರೂ. ಅನುದಾನ ನಿಗದಿ ಪಡಿಸಿದೆ.
ಬಿಜೆಪಿ ಸರ್ಕಾರ ಈ 'ಯಶಸ್ವಿನಿ' ಯೋಜನೆಯನ್ನು ಕಳೆದ ಅಕ್ಟೋಬರ್ 2ರಂದು ಗಾಂಧಿಜಯಂತಿಯಂದು ಚಾಲನೆ ಕೊಡಲು ನಿರ್ಧರಿಸಿತ್ತು. ಆದರೆ ತಾಂತ್ರಿಕ ಕಾರಣಗಳಿಂದ ಸಾಧ್ಯವಾಗಿರಲಿಲ್ಲ. ಇದೀಗ ನವೆಂಬರ್ 1ರಿಂದ ನೋಂದಣಿ ಪ್ರಕ್ರಿಯೆ ಆರಂಭಿಸುವುದಾಗಿ ಸರ್ಕಾರ ತಿಳಿಸಿದೆ.

4ಜನರ ಕುಟುಂಬಕ್ಕೆ 500ರೂ. ನಿಗದಿ
ನವೆಂಬರ್ 1ರಿಂದ ಯೋಜನೆಗೆ ಸದಸ್ಯರ ನೋಂದಣಿ ಪ್ರಕ್ರಿಯೆ ಆರಂಭವಾಗಲಿದೆ. ಈ ಸಂಬಂಧ ಸರ್ಕಾರ ಮಾರ್ಗಸೂಚಿ ಹೊರಡಿಸಿದೆ.
ಮಾರ್ಗಸೂಚಿ ಪ್ರಕಾರ ಗ್ರಾಮೀಣ ಪ್ರದೇಶದ ಸಹಕಾರಿ ಸಂಘಗಳ ಸದಸದ್ಯ ನಾಲ್ಕು ಜನರ ಕುಟುಂಬವಿದ್ದರೆ ಅವರಿಂದ 500ರೂ. ಪಡೆದು ನೋಂದಣಿ ಮಾಡಿಕೊಳ್ಳಬೇಕು. ನಾಲ್ಕಕ್ಕಿಂತ ಹೆಚ್ಚು ಮಂದಿ ಆ ಕುಟುಂಬದಲ್ಲಿದ್ದರೆ ಪ್ರತಿ ಹೆಚ್ಚುವರಿ ವ್ಯಕ್ತಿಗೆ ತಲಾ 100ರೂ. ಪಡೆದು ನೊಂದಣಿ ಮಾಡಿಕೊಳ್ಳಬೇಕು. ಅದೇ ರೀತಿ ನಗರ ಪ್ರದೇಶದ ಸಹಕಾರಿ ಸಂಘಗಳಿಗೆ ನಾಲ್ಕು ಮಂದಿ ಕುಟುಂಬ ಒಂದಕ್ಕೆ 1000 ರೂ. ವಂತಿಗೆ ನಿಗದಿ ಪಡಿಸಲಾಗಿದೆ. ನಾಲ್ಕು ಮಂದಿಗಿಂತ ಹೆಚ್ಚಿನ ಸದಸ್ಯರು ಇರುವ ಕುಟುಂಬಗಳಲ್ಲಿನ ಹೆಚ್ಚುವರಿ ವ್ಯಕ್ತಿಯಿಂದ ತಲಾ 200 ರೂ. ವಂತಿಗೆ ಸಂಗ್ರಹಿಸಿ ನೋಂದಣಿ ಮಾಡಿಕೊಳ್ಳಬೇಕು ಎಂದು ಅಧಿಕಾರಿಗಳಿಗೆ ತಿಳಿಸಲಾಗಿದೆ.

ರೂ.5 ಲಕ್ಷ ವರೆಗಿನ ಚಿಕಿತ್ಸೆ ಉಚಿತ
ಪರಿಷ್ಕೃತಗೊಂಡ ಈ ಯೋಜನೆಯಡಿ ಯಶಸ್ವಿನಿ ಕಾರ್ಡ್‌ಗಳ ಚಾಲ್ತಿಯಲ್ಲಿರುವ (ನೆಟ್‌ವರ್ಕ್) ಆಸ್ಪತ್ರೆಗಳಲ್ಲಿ ಒಂದು ಕುಟುಂಬಕ್ಕೆ 5ಲಕ್ಷ ರೂ.ವರೆಗೆ ನಗದು ರಹಿತ ಚಿಕಿತ್ಸೆ ಪಡೆಯಲು ಅವಕಾಶ ಇದೆ. ಇದಕ್ಕಾಗಿ ರಾಜ್ಯ ಸರ್ಕಾರ 300 ಕೋಟಿ ರೂ. ಅನುದಾನ ನೀಡುತ್ತಿದೆ. ಅಲ್ಲದೇ ಕೆಲವೇ ರೋಗಗಳಿಗೆ ಮಾತ್ರ ಸೀಮಿತವಾಗಿದ್ದ ಈ ಯಶಸ್ವಿನಿ ಯೋಜನೆಯನ್ನು ಇದೀಗ ಸರ್ಕಾರ ಒಟ್ಟು 1650ಕಾಯಿಲೆಗಳಿಗೆ ವಿಸ್ತರಿಸಿದೆ. ಅಂದರೆ ಬಡವರು ತಮಗೆ ಈ 1650ಕಾಯಿಲೆಗಳಲ್ಲಿ ಯಾವುದೇ ಕಾಯಿಲೆ ಬಂದರೂ ಸಹ ಉಚಿತವಾಗಿ 5ಲಕ್ಷದವರಗೆ ಉಚಿತವಾಗಿ ನಿಗದಿತ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯಬಹುದು ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ.

ನೋಂದಣಿ ನಂತರ 15ದಿನದಲ್ಲಿ ಯೋಜನೆಗೆ ಅರ್ಹರು
ನೋಂದಣಿ ಬಳಿಕ 15ದಿನಗಳಲ್ಲಿ ಫಲಾನುಭವಿಗಳು ಈ ಯೋಜನೆಗೆ ಅರ್ಹರಾಗುತ್ತಾರೆ. ಎರಡು ವಾರದ ನಂತರ ಯೋಜನೆ ವ್ಯಾಪ್ತಿಗೆ ಒಳಪಡುವ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯಬಹುದಾಗಿದೆ. ಸರ್ಕಾರಿ ನೌಕರರಾಗಿದ್ದರೆ ಖಾಸಗಿ ಕಂಪನಿಯಲ್ಲಿ ವೇತನ ಪಡೆಯುತ್ತಿದ್ದರೆ ಯಾವುದೇ ವಿಮಾ ಯೋಜನೆಯಲ್ಲಿ ಇದ್ದರೆ ಅವರು ಯೋಜನೆಗೆ ಅರ್ಹರಲ್ಲ ಎಂದು ಹೇಳಲಾಗಿದೆ.

ಯೋಜನೆಯ ವ್ಯಾಪ್ತಿಗೆ 1650ಕಾಯಿಲೆಗಳು
ರಾಜ್ಯ ಸಹಕಾರ ಇಲಾಖೆ 2003ರಲ್ಲಿ ಆರಂಭಿಸಿದ್ದ ಈ ಯೋಜನೆಯು 2018ರವರೆಗೆ ಜಾರಿಯಲ್ಲಿತ್ತು. ನಂತರ ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗ ಸಿದ್ದರಾಮಯ್ಯ ಸರ್ಕಾರವು ಈ ಯೋಜನೆಯನ್ನು ಸ್ಥಗಿತಗೊಳಿಸಿತ್ತು. ಈ ಮಧ್ಯೆ ಯೋಜನೆಯಡಿ 2 ಲಕ್ಷ ರೂ. ಇದ್ದ ಚಿಕಿತ್ಸೆ ವೆಚ್ಚದ ಮಿತಿಯನ್ನು ಐದು ಲಕ್ಷಕ್ಕೆ ಹೆಚ್ಚಿಸಲಾಯಿತು. ಯೋಜನೆ ಸ್ಥಗಿತಗೊಳ್ಳುವ ಮೊದಲು ಕೆಲವೇ ಕಾಯಿಲೆಗಳಿಗೆ ಬಡವರು ಚಿಕಿತ್ಸೆ ಪಡೆಯಲು ಅವಕಾಶ ಇತ್ತು. ಇದೀಗ ಒಟ್ಟು 1650 ಕಾಯಿಲೆಗಳನ್ನು ಯೋಜನೆಯ ವ್ಯಾಪ್ತಿಗೆ ತರಲಾಗಿದೆ.












Click it and Unblock the Notifications