ಉತ್ತರ ಕರ್ನಾಟಕದಲ್ಲಿ ಬಿಸಿಗಾಳಿ, ರಾಜ್ಯದಲ್ಲಿ 2 ದಿನ ಮಳೆ
ಬೆಂಗಳೂರು, ಏಪ್ರಿಲ್ 23: ಉತ್ತರ ಕರ್ನಾಟಕದಲ್ಲಿ ಬಿಸಿಲ ತಾಪ ಹೆಚ್ಚಾಗಿದ್ದು ಸೋಮವಾರ ಹಾಗೂ ಮಂಗಳವಾರ ಗರಿಷ್ಠ ತಾಪಮಾನ 43 ರಿಂದ 45 ಡಿಗ್ರಿ ಸೆಲ್ಸಿಯಸ್ ದಾಟುವ ಸಾಧ್ಯತೆ ಇದೆ.
ಈ ಎರಡೂ ದಿನ ಕಲಬುರಗಿ, ರಾಯಚೂರು, ವಿಜಯಪುರ ಮತ್ತು ದಕ್ಷಿಣ ಒಳನಾಡಿನ ಬಳ್ಳಾರಿ ಸೇರಿ ಕೆಲ ಪ್ರದೇಶಗಳಲ್ಲಿ ಬಿಸಿಗಾಳಿ ಬೀಸಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಬಿಸಿಲ ಝಳದ ಹೊರತಾಗಿಯೂ ಬೀದರ್, ಕೊಪ್ಪಳ, ರಾಯಚೂರು ಹಾಗೂ ಯಾದಗಿರಿ ಕೆಲ ಭಾಗಗಳಲ್ಲಿ ತುಂತುರು ಮಳೆ ಮುನ್ಸೂಚನೆ ಇದೆ ಎಂದು ವರದಿ ಹೇಳಿದೆ.ಹೀಗಾಗಿ ಬಿಸಿಲ ಬೇಗೆ ಮತ್ತಷ್ಟು ಏರುವ ಸಾಧ್ಯತೆ ಇದೆ.
ಏ.26ರವರೆಗೂ ಮಳೆ ಮುಂದುವರಿಕೆ: ಬೆಂಗಳೂರು ನಗರ ಸೇರಿ ದಕ್ಷಿಣ ಒಳನಾಡು ಹಾಗೂ ಮಲೆನಾಡಿನ ಜಿಲ್ಲೆಗಳಲ್ಲಿ ವರ್ಷಧಾರೆ ಮುಂದುವರೆದಿದ್ದು, ತಂಪಾದ ವಾತಾವರಣವಿರಲಿದೆ. ಬೆಂಗಳೂರು ನಗರ ಹಾಗೂ ಗ್ರಾಮಾಂತರ, ಚಾಮರಾಜನಗರ, ಚಿಕ್ಕಮಗಳೂರು, ಹಾಸನ, ಕೊಡಗು, ಮೈಸೂರು ಜಿಲ್ಲೆಗಳಲ್ಲಿ ಏ.26ರವರೆಗೆ ಮಳೆ ಮುಂದುವರೆಯುವ ನಿರೀಕ್ಷೆ ಇದೆ.

ಉತ್ತರ ಕರ್ನಾಟಕದಲ್ಲಿ ಒಣಹವೆ ಮುಂದುವರೆಯಲಿದೆ. ಭಾನುವಾರ ಭಾಗಮಂಡಲ, ಪೆರಿಯಪಟ್ಟಣ, ಕೆ.ಆರ್. ಪೇಟೆಯಲ್ಲಿ ಎರಡು ಸೆಂ.ಮೀ ಅಷ್ಟು ಮಳೆಯಾಗಿದೆ.ಇನ್ನೆರೆಡು ದಿನ ಮೀನುಗಾರರು ಸಮುದ್ರಕ್ಕೆ ಇಳಿಯದಿರಲು ಸೂಚನೆ ನೀಡಲಾಗಿದೆ.
ಬೆಂಗಳೂರು ನಗರದಲ್ಲಿ ಗರಿಷ್ಠ ಉಷ್ಣಾಂಶ 35 ಡಿಗ್ರಿ ಸೆಲ್ಸಿಯಸ್ ಇದ್ದು ಕನಿಷ್ಠ 23 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗುವ ನಿರೀಕ್ಷೆ ಇದೆ. ಇನ್ನು 48 ಗಂಟೆಗಳ ಕಾಲ ಮೋಡಕವಿದ ವಾತಾವರಣ ಮುಂದುವರೆಯಲಿದೆ.
ಬೆಂಗಳೂರು ನಗರದಲ್ಲಿ ಸೋಮವಾರ ಗರಿಷ್ಠ 33.8 ಡಿಗ್ರಿ ಸೆಲ್ಸಿಯಸ್, ಕನಿಷ್ಠ 22 ಡಿಗ್ರಿ ಸೆಲ್ಸಿಯಸ್, ಕೆಐಎಎಲ್ ನಲ್ಲಿ ಗರಿಷ್ಠ 34.9ಡಿಗ್ರಿ ಸೆಲ್ಸಿಯಸ್, ಕನಿಷ್ಠ 20.5 ಡಿಗ್ರಿ ಸೆಲ್ಸಿಯಸ್, ಎಚ್‌ಎಎಲ್ ನಲ್ಲಿ ಗರಿಷ್ಠ 34 ಡಿಗ್ರಿ ಸೆಲ್ಸಿಯಸ್, ಕನಿಷ್ಠ 22ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿದೆ.












Click it and Unblock the Notifications