ಕರ್ನಾಟಕ ಹವಾಮಾನ; ಜೂನ್ 14ರ ತನಕ ಮಳೆ
ಬೆಂಗಳೂರು, ಜೂನ್ 12; ಕರ್ನಾಟಕದ ಕರಾವಳಿ ಮತ್ತು ದಕ್ಷಿಣ ಒಳನಾಡಿನಲ್ಲಿ ಮೂರು ದಿನ ಮಳೆ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ನೈಋತ್ಯ ಮುಂಗಾರು ಪ್ರಭಾವದಿಂದ ಇನ್ನೂ ತುಂತುರು ಮಳೆಯಾಗುತ್ತಿದೆ.
ಜೂನ್ ಮೊದಲ ವಾರದಲ್ಲಿಯೇ ನೈಋತ್ಯ ಮುಂಗಾರು ಕರ್ನಾಟಕಕ್ಕೆ ಆಗಮಿಸಿದೆ. ಆದರೆ 10 ದಿನಗಳಿಂದ ಮುಂಗಾರು ದುರ್ಗಲವಾಗಿದ್ದು, ಮಳೆಯಾಗುತ್ತಿಲ್ಲ. ಮುಂಗಾರು ಪೂರ್ವ ಮಳೆಯ ಪರಿಣಾಮ ಕೃಷಿ ಚಟುವಟಿಕೆಗಳು ಆರಂಭವಾಗಿವೆ.
ಕರ್ನಾಟಕದ ಕರಾವಳಿ ಹಾಗೂ ಮಲೆನಾಡಿನಲ್ಲಿ ಜೂನ್ 14ರ ತನಕ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಚಿಕ್ಕಮಗಳೂರು, ಹಾಸನ, ಶಿವಮೊಗ್ಗ, ಕೊಡಗು, ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಗುಡುಗು, ಮಿಂಚು ಸೇರಿದಂತೆ ಮಳೆಯಾಗಲಿದೆ ಎಂದು ಹೇಳಿದೆ.

ಕಾರವಾರ, ತೀರ್ಥಹಳ್ಳಿ, ಸಾಗರ, ಕೊಪ್ಪ, ಭಟ್ಕಳ, ಅಂಕೋಲಾ, ಹೊನ್ನಾವರ, ಕುಮಟಾ, ಶಿರಸಿ ಮುಂತಾದ ಕಡೆ ಶನಿವಾರದಿಂದ ಮಳೆ ಚುರುಕಾಗಿದೆ. ಜೂನ್ 14ರ ತನಕವೂ ಮಳೆ ಮುಂದುವರೆಯಲಿದೆ ಎಂದು ಮುನ್ಸೂಚನೆ ನೀಡಲಾಗಿದೆ.
ಬಿಡುವಿನ ಬಳಿಕ ಮಳೆ ಆರಂಭ; ನೈಋತ್ಯ ಮುಂಗಾರು ಆಗಮನದ ಒಂದು ವಾರದ ಬಿಡುವಿನ ಬಳಿಕ ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಮಳೆ ಆರಂಭವಾಗಿದೆ. ಗೋವಾ, ಕೊಂಕಣ, ಕರ್ನಾಟಕ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಸಾಧಾರಣ ಮಳೆ ಆರಂಭವಾಗಿದೆ.

ಮುಂದಿನ ಎರಡು ದಿನಗಳಲ್ಲಿ ಮುಂಗಾರು ಪ್ರಭಾವದಿಂದಲೇ ಬೆಂಗಳೂರು ಸೇರಿದಂತೆ ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಮಳೆಯಾಗುತ್ತಿದೆ. ದಕ್ಷಿಣ ಮಹಾರಾಷ್ಟ್ರ, ಕರ್ನಾಟಕದ ಉತ್ತರ ಒಳನಾಡು, ಆಂಧ್ರ ಪ್ರದೇಶ, ತಮಿಳುನಾಡಿನಲ್ಲಿ ಮಳೆ ಮುಂದುವರೆಯಲಿದೆ.
ಭಾನುವಾರ ತೆಲಂಗಾಣ, ಕರ್ನಾಟಕ, ತಮಿಳುನಾಡು, ಆಂಧ್ರ ಪ್ರದೇಶ ಮತ್ತು ಅಂಡಮಾನ್ & ನಿಕೋಬಾರ್ ದ್ವೀಪಗಳಲ್ಲಿ ಚದುರಿದಂತೆ ಮಳೆಯಾಗಲಿದೆ. ಲಡಾಖ್, ಜಮ್ಮು ಮತ್ತು ಕಾಶ್ಮೀರ, ಹಿಮಾಚಲ ಪ್ರದೇಶ, ಉತ್ತರಾಖಂಡ, ಪಶ್ಚಿಮ ಬಂಗಾಳ, ಬಿಹಾರ, ಒಡಿಶಾ, ಛತ್ತೀಸ್‌ಗಢ, ಮಧ್ಯಪ್ರದೇಶ, ಗುಜರಾತ್ ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಮಳೆಯಾಗಲಿದೆ.
ತಮಿಳುನಾಡು, ಪುದುಚೇರಿ, ಕಾರೈಕಲ್ ಮತ್ತು ತೆಲಂಗಾಣ ಅಲ್ಲಲ್ಲಿ ಮಳೆಯಾಗಲಿದೆ. ಕೇರಳ, ಮಾಹೆ, ಲಕ್ಷದ್ವೀಪ, ಈಶಾನ್ಯ ಭಾರತದ ರಾಜ್ಯಗಳು, ಪಶ್ಚಿಮ ಬಂಗಾಳ ಮತ್ತು ಸಿಕ್ಕಿಂನಲ್ಲಿ ಭಾರೀ ಮಳೆಯಾಗಲಿದೆ ಎಂದು ಮುನ್ಸೂಚನೆ ನೀಡಲಾಗಿದೆ.
ವಾಡಿಕೆಗಿಂತ ಮೊದಲೇ ನೈಋತ್ಯ ಮುಂಗಾರು ಕೇರಳ ರಾಜ್ಯವನ್ನು ಪ್ರವೇಶಿಸಿತ್ತು. ಆದರೆ ಮುಂಗಾರು ಪ್ರಭಾವದಿಂದ ನಿರೀಕ್ಷಿತ ಮಳೆಯಾಗಿಲ್ಲ. ಮುಂಗಾರು ಅವಧಿಯಲ್ಲಿ ವಾಡಿಕೆಯಂತೆ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ವರದಿ ಹೇಳಿದೆ.
ಜೂನ್ 12ರ ತನಕ ನಿರೀಕ್ಷಿತ ಮಳೆಯಾಗದ ಹಿನ್ನಲೆಯಲ್ಲಿ ಶಿವಮೊಗ್ಗ ಜಿಲ್ಲೆ ಸಾಗರದ ಶರಾವತಿ ಅಣೆಕಟ್ಟಿನ ಹಿನ್ನೀರಿನ ಮಟ್ಟ ಕುಸಿದಿದೆ. ಇದರಿಂದಾಗಿ ಮುಪ್ಪಾನೆ ಮಾರ್ಗದ ಲಾಂಚ್ ಸೇವೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.
ಮುಪ್ಪಾನೆ ಮಾರ್ಗದಲ್ಲಿ ಸಣ್ಣ ಲಾಂಚ್ ಇದ್ದು, ಕರೂರು ಹೋಬಳಿಯ ಹಲವು ಗ್ರಾಮಗಳಿಗೆ ಇದು ಸಂಪರ್ಕ ಕಲ್ಪಿಸುತ್ತದೆ. ಈಗ ಲಾಂಚ್ ಸೇವೆ ತಾತ್ಕಾಲಿಕವಾಗಿ ಸ್ಥಗಿತಗೊಳಿಸಿರುವುದರಿಂದ ಹೋಬಳಿಯ ಹಲವು ಗ್ರಾಮಗಳ ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಗ್ರಾಮಕ್ಕೆ ತಲುಪಲು 35 ಕಿ. ಮೀ. ಬದಲು 72 ಕಿ. ಮೀ. ಸಂಚಾರ ನಡೆಸಬೇಕಾದ ಅನಿವಾರ್ಯತೆ ಎದುರಾಗಿದೆ.
ನೈಋತ್ಯ ಮುಂಗಾರು ಪೂರ್ವದಲ್ಲಿ ಅಂದರೆ ಮೇ 15ರ ಬಳಿಕ ಕರ್ನಾಟಕ ವಿವಿಧ ಜಿಲ್ಲೆಗಳಲ್ಲಿ ಭಾರೀ ಮಳೆಯಾಗಿತ್ತು. ತೋಟಗಾರಿಕೆ, ಕೃಷಿ ಬೆಳೆಗಳು ಹಾನಿಯಾಗಿದ್ದವು, ಮನೆಗಳಿಗೆ ನೀರು ನುಗ್ಗಿ ಜನರು ಸಂಕಷ್ಟ ಅನುಭವಿಸಿದ್ದರು.
ಆಗ ಮುಂಗಾರು ಆಗಮನದ ಬಳಿಕ ಮಳೆ ಇನ್ನೂ ಆರ್ಭಟಿಸಲಿದೆ ಎಂದು ಅಂದಾಜಿಸಲಾಗಿತ್ತು. ಆದರೆ ಈಗ ಕೆಲವು ಜಿಲ್ಲೆಗಳಲ್ಲಿ ತುಂತುರು ಮಳೆಯಾಗುತ್ತಿದೆ. ಮುಂಗಾರು ಈ ಬಾರಿಯೂ ರೈತರಿಗೆ ಕೈ ಕೊಟ್ಟಿತೇ? ಎಂಬ ಅನುಮಾನ ಉಂಟಾಗಿದೆ.












Click it and Unblock the Notifications