Karnataka Rain: ಕರಾವಳಿ-ಒಳನಾಡು ಜಿಲ್ಲೆಗಳಲ್ಲಿ ಮುಂದಿನ 5 ದಿನ ವ್ಯಾಪಕ ಮಳೆ, ಹವಾಮಾನ ವರದಿ
ಬೆಂಗಳೂರು, ಆಗಸ್ಟ್ 29: ಕರ್ನಾಟಕದಲ್ಲಿ ಬಿಸಿಲ ಧಗೆಗೆ ತತ್ತರಿಸುತ್ತಿರುವ ಕರ್ನಾಟಕದ ಜನರಿಗೆ ಸಿಹಿ ಸುದ್ದಿಯೊಂದು ಲಭಿಸಿದೆ. ಮುಂದಿನ ಐದು ದಿನಗಳ ಕಾಲ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಮುಂಗಾರು ಸಕ್ರಿಯವಾಗಲಿದೆ. ಈ ಹಿನ್ನೆಲೆ ಹಲವೆಡೆ ವ್ಯಾಪಕ ಮಳೆ ಆಗಲಿದೆ. ಒಳನಾಡು ಜಿಲ್ಲೆಗಳಿಗೂ ಉತ್ತಮ ಮಳೆ ಆಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಒಂದು ತಿಂಗಳು ತಡವಾಗಿ ಆರಂಭವಾದ ಮುಂಗಾರು ರಾಜ್ಯ ಅನೇಕ ಜಿಲ್ಲೆಗಳಲ್ಲಿ ಜುಲೈ ತಿಂಗಳಲ್ಲಿ ಅಬ್ಬರಿಸಿತ್ತು. ಅದಾದ ಬಳಿಕ ಪೂರ್ತಿ ಆಗಸ್ಟ್ ತಿಂಗಳ ಕಳೆದರೂ ಇದವರೆಗೆ ಎಲ್ಲಿಯೂ ಹೇಳಿಕೊಳ್ಳುವಂತಹ ಮಳೆ ದಾಖಲಾಗಿದೆ. ತುಂತುರು ಮಳೆ ಅಲ್ಲಲ್ಲಿ ಕಂಡು ಬಂದಿದೆ ಹೊರತು ಉತ್ತಮ ಮಳೆ ಆಗಿಲ್ಲ. ಇದರಿಂದ ಬೆಳೆ ಬೆಳೆದ ರೈತರು ಅಕ್ಷರಶಃ ಕಂಗಾಲಾಗಿದ್ದಾರೆ. ಮಳೆಗಾಗಿ ಮುಗಿಲು ನೋಡುವ ಸ್ಥಿತಿ ಅವರದ್ದಾಗಿದೆ.

ಸದ್ಯ ಐಎಂಡಿ ಮುನ್ಸೂಚನೆ ಪ್ರಕಾರ, ಸೆಪ್ಟಂಬರ್ 03ರವರೆಗೆ ರಾಜ್ಯದ ಎಲ್ಲ ಭಾಗದ ಜಿಲ್ಲೆಗಳಲ್ಲಿಯೂ ಸಾಧಾರಣ ಮಳೆ ಬೀಳುವ ಸಾಧ್ಯತೆ ಇದೆ. ಕರಾವಳಿಯ ಉಡುಪಿ, ಉತ್ತರ ಕನ್ನಡ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳ ವ್ಯಾಪ್ತಿಯಲ್ಲಿ ಜೋರು ಮಳೆ ಆಗಲಿದೆ. ಇಲ್ಲಿ ಗಾಳಿಯ ತೀವ್ರತೆ ಹೆಚ್ಚಿರಲಿದೆ ಎಂದು ತಿಳಿದು ಬಂದಿದೆ.
ಉತ್ತರ ಒಳನಾಡಿನ ಜಿಲ್ಲೆಗಳಿಗೆ ಮಳೆ
ಇತ್ತ ಅತ್ಯಧಿಕ ಬಿಸಿಲು ದಾಖಲಾಗುತ್ತಿರುವ ಉತ್ತರ ಒಳನಾಡಿಗೂ ಗುರುವಾರದಿಂದ ನಾಲ್ಕು ದಿನ ಮಳೆ ಆಗಲಿದೆ. ಬೆಳಗಾವಿ, ಬಾಗಲಕೋಟೆ, ವಿಜಯಪುರ, ಧಾರವಾಡ, ಹಾವೇರಿ, ಕೊಪ್ಪಳ, ಗದಗ, ಬೀದರ್, ಯಾದಗಿರಿ, ಕಲುಬುರಗಿ ಮತ್ತು ರಾಯಚೂರು ಜಿಲ್ಲೆಗಳ ವ್ಯಾಪ್ತಿಯಲ್ಲಿ ಧಾರಾಕಾರ ಮಳೆ ಸಂಭವವಿದೆ. ನಿರೀಕ್ಷೆಯಂತೆ ಈ ಜಿಲ್ಲೆಗಳಲ್ಲಿ ಮಳೆಯಾದರೂ ಇನ್ನೇನು ಒಣಗಿ ಹಾಳಾಗುವ ಹಂತದಲ್ಲಿರುವ ಬೆಳೆಗಳಿಗೆ ಮರುಜೀವ ಬರಲಿದೆ. ರೈತರಿಗೆ ತುಸು ನೆಮ್ಮದಿ ಸಿಗಲಿದೆ.

ಪ್ರತಿ ಭಾರಿ ಆಗಸ್ಟ್ ತಿಂಗಳಲ್ಲಿ ಬೆಂಗಳೂರು ಸೇರಿದಂತೆ ರಾಜ್ಯದ ನಾನಾ ಕಡೆಗಳಲ್ಲಿ ವಾಡಿಕೆಗಿಂತ ಅತ್ಯಧಿಕ ಪ್ರಯಾಣದಲ್ಲಿ ಮಳೆ ಆಗುತ್ತಿತ್ತು. ಆದರೆ ಈ ಬಾರಿ ಎಲ್ಲವು ತದ್ವಿರುದ್ಧವಾಗಿದೆ. ಮಳೆಗಾಲ ಎಂಬ ವಾತಾವರಣವೇ ಮರೆಯಾಗಿ ಬಿಸಿಲ ಝಳ, ಶಾಖದ ಅಲೆ ಪ್ರಮಾಣದಲ್ಲಿ ಏರಿಕೆ ಆಗಿದೆ. ಎಲ್ಲೆಲ್ಲೂ ಗರಿಷ್ಠ ತಾಪಮಾನವು ಹೆಚ್ಚಳವಾಗಿದೆ.
ದಕ್ಷಿಣ ಒಳನಾಡಿಗೂ ಉತ್ತಮ ಮಳೆ ಸಂಭವ
ಬೆಂಗಳೂರಿನಲ್ಲಿ ಆಗಸ್ಟ್ 30ರಿಂದ ಐದು ದಿನಗಳ ಕಾಲ ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಮೈಸೂರು, ಮಂಡ್ಯ, ರಾಮನಗರ, ಮೈಸೂರು, ಹಾಸನ, ಚಿಕ್ಕಮಗಳೂರು, ದಾವಣಗೆರೆ, ವಿಜಯನಗರ, ಬಳ್ಳಾರಿ, ತುಮಕೂರು, ಶಿವಮೊಗ್ಗ ಸೇರಿದಂತೆ ದಕ್ಷಿಣ ಒಳನಾಡಿನ ಜಿಲ್ಲೆಯಾದ್ಯಂತ ಹೆಚ್ಚು ಮಳೆಯಾಗುವ ಸಂಭವವಿದೆ ಎಂದು ಐಎಂಡಿ ಹೇಳಿದೆ.
ಈ ಮಳೆ ಮುನ್ಸೂಚನೆ ವರದಿಯಿಂದಾಗಿ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಏರಿಕೆಯಾಗಿರುವ ತಾಪಮಾನ ಮುಂದಿನ ದಿನಗಳಲ್ಲಿ ಇಳಿಕೆ ಆಗುವ ಮತ್ತು ಸಹಜ ಮಳೆಗಾಲದ ವಾತಾವರಣಕ್ಕೆ ಮರಳುವ ಸಾಧ್ಯತೆಗಳು ಇವೆ. ಇನ್ನು ಸೆಪ್ಟಂಬರ್ ತಿಂಗಳಲ್ಲಿ ರಾಜ್ಯಾದ್ಯಂತ ಮುಂಗಾರು ಚುರುಕಾಗುವ, ಭಾರಿ ಮಳೆ ಸುರಿಯುವ ಸಂಭವ ಇದೆ ಎಂದು ಐಎಂಡಿ ಮಾಹಿತಿ ನೀಡಿದೆ.












Click it and Unblock the Notifications