ಕರಾವಳಿ ಜಿಲ್ಲೆಗೆ 'ರೆಡ್ ಅಲರ್ಟ್': ಭಾರಿ ಮಳೆ ಮುನ್ಸೂಚನೆ
ಬೆಂಗಳೂರು ಜು.6: ರಾಜ್ಯದಲ್ಲಿ ಕರಾವಳಿ ಭಾಗದಲ್ಲಿ ಚುರುಕುಗೊಂಡಿರುವ ಮುಂಗಾರು ಆ ಭಾಗದಲ್ಲಿ ಗುಡುಗು, ಗಾಳಿ ಸಹಿತ ಅತ್ಯಧಿಕ ಭಾರಿ ಮಳೆ ಸುರಿಸಲಿದೆ. ಹೀಗಾಗಿ ಗುರುವಾರ ಕರಾವಳಿ ಮೂರು ಜಿಲ್ಲೆಗಳಿಗೆ 'ರೆಡ್ ಅಲರ್ಟ್' ಎಚ್ಚರಿಕೆ ನೀಡಲಾಗಿದೆ.
ಕಳೆದ ಒಂದು ವಾರದಿಂದಲೂ ರಾಜ್ಯದಲ್ಲಿ ಕರಾವಳಿ ಜಿಲ್ಲೆಗಳಲ್ಲಿ ಎಡೆಬಿಡದೆ ಮಳೆ ಸುರಿಯುತ್ತಿದೆ. ಸೋಮವಾರ ರಾತ್ರಿ ಅರಬ್ಬಿ ಸಮುದ್ರದಲ್ಲಿ ಉಂಟಾಗಿರುವ ಮೇಲ್ಮೈ ಸುಳಿಗಾಳಿ ತೀವ್ರಗೊಂಡ ಪರಿಣಾಮ ಕರಾವಳಿಯ ಉಡುಪಿ, ಉತ್ತರ ಕನ್ನಡ, ದಕ್ಷಿಣ ಜಿಲ್ಲೆಗಳಲ್ಲಿ ಭಾರಿ ಮಳೆ ದಾಖಲಾಗಿದೆ. ಇಂದು ಸಹ ಇಡೀ ದಿನ ಮಳೆ ಮುಂದುವರಿದಿದೆ. ಗುರುವಾರ ಮಳೆ ಪ್ರಮಾಣ ಇನ್ನಷ್ಟು ಹೆಚ್ಚಾಗುವ ಕಾರಣಕ್ಕೆ ಭಾರತೀಯ ಹವಾಮಾನ ಇಲಾಖೆ ಕರಾವಳಿಯ ಮೂರು ಜಿಲ್ಲೆಗಳಿಗೆ 'ರೆಡ್ ಅಲರ್ಟ್' ಘೋಷಿಸಿದೆ.
ಕರಾವಳಿ ಜಿಲ್ಲೆಗಳಲ್ಲಿ ಸುಮಾರು 20 ಸೆಂ.ಮೀ.ಗಿಂತಲೂ ಅಧಿಕ ಮಳೆ ಬೀಳುವ ನಿರೀಕ್ಷೆ ಇದೆ. ಇನ್ನು ಜುಲೈ 8 ಮತ್ತು 9 ರಂದು ಸಹ ಭಾರಿ ಮಳೆ ನಿರೀಕ್ಷೆ ಕಾರಣಕ್ಕೆ 'ಆರೆಂಜ್ ಅಲರ್ಟ್' ಹಾಗೂ ಜು.10 ಮತ್ತು 11 ರಂದು ಈ ಭಾಗದಲ್ಲಿ ಮಳೆ ತುಸು ಬಿಡುವು ನೀಡುವ ಸಾಧ್ಯತೆ. ಹೀಗಾಗಿ ಆ ಎರಡು ದಿನ ಮೂರು ಜಿಲ್ಲೆಗಳಿಗೆ 'ಯೆಲ್ಲೋ ಅಲರ್ಟ್' ಎಚ್ಚರಿಕೆ ನೀಡಲಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆ ಬೆಂಗಳೂರು ಹವಾಮಾನ ತಜ್ಞರು ತಿಳಿಸಿದ್ದಾರೆ.

ಉತ್ತರ ಒಳನಾಡಿಗೆ ಭಾರಿ ಮಳೆ
ಮುಂಗಾರು ಆರಂಭವಾದಾಗಿನಿಂದ ಉತ್ತರ ಒಳನಾಡಿನ ಭಾಗದಲ್ಲಿ ಮಾರುತಗಳು ಅಷ್ಟಾಗಿ ಚುರುಕಾಗಿರಲಿಲ್ಲ. ಆದರೆ ಗುರುವಾರದಿಂದ ಮುಂಗಾರು ಅಬ್ಬರಿಸುವ ಮುನ್ಸೂಚನೆ ನೀಡಿದೆ. ಹೀಗಾಗಿ ಮುಂದಿನ ಐದು ದಿನ (ಜು.11) ಉತ್ತರ ಒಳನಾಡಿನ ಬೆಳಗಾವಿ, ಧಾರವಾಡ, ಗದಗ, ಹಾವೇರಿ, ಕಲಬುರಗಿ ಜಿಲ್ಲೆಗಳಿಗೆ 'ಯೆಲ್ಲೋ ಅಲರ್ಟ್' ನೀಡಲಾಗಿದೆ. ಉಳಿದ ಜಿಲ್ಲೆಗಳ ಹಲವೆಡೆ ಹಗುರದಿಂದ ಸಾಧಾರಣ ಮಳೆ ಬೀಳಬಹುದು ಎನ್ನಲಾಗಿದೆ.

ಮಲೆನಾಡಿನಲ್ಲೂ ಭಾರಿ ಮಳೆ
ಮಲೆನಾಡಿನ ಚಿಕ್ಕಮಗಳೂರು, ಕೊಡಗು, ಶಿವಮೊಗ್ಗ ಜಿಲ್ಲೆಗಳಿಗೆ ಜು.7ಹಾಗೂ 8 ರಂದು ಅಧಿಕ ಮಳೆ ಸುರಿಯುವ ಹಿನ್ನೆಲೆಯಲ್ಲಿ 'ಆರೆಂಜ್ ಅಲರ್ಟ್' ಕೊಡಲಾಗಿದೆ. ಉಳಿದ ದಿನ ಈ ಮೂರು ಜಿಲ್ಲೆ ಸೇರಿದಂತೆ ಹಾಸನ ಜಿಲ್ಲೆಗೂ 'ಯೆಲ್ಲೋ ಅಲರ್ಟ್' ಘೋಷಿಸಲಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಮಂಗಳೂರಲ್ಲಿ 108ಮಿ.ಮೀ. ಮಳೆ ದಾಖಲು
ಬುಧವಾರ ಬೆಳಗ್ಗೆ 8.30ಕ್ಕೆ ಕೊನೆಗೊಂಡಂತೆ ಹಿಂದಿನ 24ಗಂಟೆಯಲ್ಲಿ ರಾಜ್ಯದಲ್ಲೆ ಅತ್ಯಧಿಕ ಮಳೆ 108.5ಮಿ.ಮೀ. ಮಳೆ ಮಂಗಳೂರು ನಗರದಲ್ಲಿ ದಾಖಲಾಗಿದೆ. ನಂತರದ ಸ್ಥಾನದಲ್ಲಿ ಕುಮಟಾದಲ್ಲಿ 100.2ಮಿ.ಮೀ, ಕಾರವಾರದಲ್ಲಿ 99.4ಮಿ.ಮೀ., ಹೊನ್ನಾವರದಲ್ಲಿ 59.5ಮಿ.ಮೀ, ಮಡಿಕೇರಿಯಲ್ಲಿ 38.5ಮಿ.ಮೀ. ಮಳೆ ದಾಖಲಾಗಿದೆ. ಇದೇ ವೇಳೆ ಕರಾವಳಿ ಮತ್ತು ಮಲೆನಾಡಿನ ಇನ್ನಿತರ ಜಿಲ್ಲೆಗಳಲ್ಲೂ ಉತ್ತಮ ಮಳೆ ದಾಖಲಾಗಿದೆ ಎಂದು ಹವಾಮಾನ ಇಲಾಖೆ ವರದಿ ಮಾಡಿದೆ.

ಬೆಂಗಳೂರಿಗೆ ಏನಿದೆ ಮುನ್ಸೂಚನೆ
ಬೆಂಗಳೂರಿನಲ್ಲಿ ಒಂದು ವಾರದಿಂದ ಮಳೆ ಅಷ್ಟಾಗಿ ಬಿದ್ದಿಲ್ಲ. ಆದರೆ ಹವಾಮಾನದಲ್ಲಿನ ಬದಲಾವಣೆಗಳಿಂದಾಗಿ ತೀವ್ರ ಚಳಿ ವಾತಾವರಣ ಕಂಡು ಬಂದಿದೆ. ಈ ವಾತಾವರಣ ಜು.11ರವರೆಗೂ ಮುಂದುವರಿಯುವ ನಿರೀಕ್ಷೆ ಇದೆ. ಅಲ್ಲಿಯವರೆಗೆ ನಗರದ ವಿವಿಧೆಡೆ ನಿತ್ಯ ಸೋನೆ ಇಲ್ಲವೆ ತುಂತುರು ಮಳೆ ಆಗಲಿದೆ. ಕೆಲವು ಪ್ರದೇಶಗಳಲ್ಲಿ ಆಗಾಗ ಹಗುರದಿಂದ ಸಾಧಾರಣ ಮಳೆ ಬೀಳಬಹುದು. ಈ ಅವಧಿಯಲ್ಲಿ ಗರಿಷ್ಠ ತಾಪಮಾನ 27 ಡಿಗ್ರಿ ಸೆಲ್ಸಿಯಸ್ ಹಾಗೂ ಕನಿಷ್ಠ ತಾಪಮಾನ 20 ಡಿ.ಸೆ. ಇರಲಿದೆ ಎಂದು ಹವಾಮಾನ ಇಲಾಖೆ ವರದಿ ತಿಳಿಸಿದೆ.












Click it and Unblock the Notifications