ಜೂನ್ 27ರ ತನಕ ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಮಳೆ

ಬೆಂಗಳೂರು, ಜೂನ್ 25; ಜೂನ್ ತಿಂಗಳ ಅಂತ್ಯದ ವೇಳೆಗೆ ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಮಳೆಯಾಗುತ್ತಿದೆ. ಈಗಾಗಲೇ ಜೂನ್ ತಿಂಗಳಿನಲ್ಲಿ ಸುರಿಯಬೇಕಿದ್ದ ನೈಋತ್ಯ ಮುಂಗಾರು ಮಳೆಯ ಕೊರತೆಯ ಕಾರಣ ರಾಜ್ಯದ ಜಲಾಶಯಗಳ ನೀರಿನ ಮಟ್ಟ ಕುಸಿತ ಕಂಡಿದ್ದು, ಮಳೆ ಬಾರದಿದ್ದರೆ ಕುಡಿಯುವ ನೀರಿನ ಕೊರತೆಯೂ ಉಂಟಾಗುವ ಭೀತಿ ಎದುರಾಗಿದೆ.

ಭಾರತೀಯ ಹವಾಮಾನ ಇಲಾಖೆಯ ಮಾಹಿತಿ ಪ್ರಕಾರ ಕರ್ನಾಟಕದ ಕರಾವಳಿ ಜಿಲ್ಲೆಗಳಲ್ಲಿ ಜೂನ್ 27ರ ತನಕ ಭಾರೀ ಮಳೆಯಾಗಲಿದೆ. ಇದಕ್ಕಾಗಿ ಉಡುಪಿ, ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡ ಜಿಲ್ಲೆಯಲ್ಲಿ ಯೆಲ್ಲೋ ಅಲರ್ಟ್‌ ಘೋಷಣೆ ಮಾಡಲಾಗಿದೆ.

ಈಗಾಗಲೇ ಮಲೆನಾಡು ಮತ್ತು ಕರಾವಳಿ ಭಾಗದ ಜಿಲ್ಲೆಗಳಲ್ಲಿ ಕಳೆದ ಎರಡು ದಿನಗಳಿಂದ ಮಳೆಯಾಗುತ್ತಿದೆ. ಶನಿವಾರ ಚಿಕ್ಕಮಗಳೂರು, ಶಿವಮೊಗ್ಗ, ಕೊಡಗು ಜಿಲ್ಲೆಗಳ ಹಲವು ಪ್ರದೇಶಗಳಲ್ಲಿ ದಿನವಿಡೀ ಜಿಟಿಜಿಟಿ ಮಳೆಯಾಗಿದ್ದು, ಜನರು ಮುಂಗಾರು ಮಳೆ ಆರಂಭವಾಯಿತು ಎಂದು ನಿಟ್ಟುಸಿರು ಬಿಟ್ಟಿದ್ದಾರೆ.

karavali-rain

ದಕ್ಷಿಣ ಒಳನಾಡಿನಲ್ಲಿ ಸಾಧಾರಣ ಮಳೆ; ಹವಾಮಾನ ಇಲಾಖೆ ಮಾಹಿತಿ ಪ್ರಕಾರ ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಎರಡು ದಿನಗಳ ಕಾಲ ಸಾಧಾರಣ ಮಳೆಯಾಗಲಿದೆ. ಆದರೆ ದಿನವಿಡೀ ಮೋಡ ಕವಿದ ವಾತಾವರಣ ಇರಲಿದೆ. ಬೆಂಗಳೂರು ನಗರದಲ್ಲಿ ಶನಿವಾರ ಮೋಡ ಕವಿದ ವಾತಾವರಣ ಇತ್ತು, ಸಂಜೆಯ ವೇಳೆಗೆ ಕೆಲವು ಪ್ರದೇಶಗಳಲ್ಲಿ ತುಂತುರು ಮಳೆಯಾಗಿದೆ.

ಉತ್ತರ ಒಳನಾಡಿನ ಜಿಲ್ಲೆಗಳಲ್ಲಿ ಮುಂಗಾರು ಇನ್ನೂ ಬಿರುಸುಗೊಂಡಿಲ್ಲ. ಆದ್ದರಿಂದ ಮಳೆಗಾಗಿ ಜನರು ಕೆಲವು ದಿನಗಳ ಕಾಲ ಕಾಯಬೇಕಿದೆ. ಸೋಮವಾರ ಬೀದರ್, ಕಲಬುರಗಿ ಜಿಲ್ಲೆಗಳಲ್ಲಿ ಸಾಧಾರಣ ಮಳೆಯ ಮುನ್ಸೂಚನೆ ನೀಡಲಾಗಿದೆ.

ಭಾನುವಾರ ಬೆಂಗಳೂರು, ಮೈಸೂರು, ಮಂಡ್ಯ, ಚಾಮರಾಜನಗರ, ಚಿಕ್ಕಬಳ್ಳಾಪುರ, ಕೋಲಾರ ಮತ್ತು ತುಮಕೂರು ಜಿಲ್ಲೆಗಳಲ್ಲಿ ಮೋಡ ಕವಿದ ವಾತಾವರಣ ಇರಲಿದೆ. ಬೆಂಗಳೂರು ನಗರದಲ್ಲಿ ಗರಿಷ್ಠ ಉಷ್ಣಾಂಶ 28 ಡಿಗ್ರಿ ಸೆಲ್ಸಿಯಸ್ ಮತ್ತು ಕನಿಷ್ಠ ಉಷ್ಣಾಂಶ 20 ಡಿಗ್ರಿ ಸೆಲ್ಸಿಯಸ್ ಇರಲಿದೆ ಎಂದು ಅಂದಾಜಿಸಲಾಗಿದೆ.

ತಡವಾಗಿ ಆದರೂ ನೈಋತ್ಯ ಮುಂಗಾರು ಮಳೆ ಆರಂಭವಾಯಿತು ಎಂದು ಜನರು ಸಂತಸಗೊಂಡಿದ್ದಾರೆ. ಮಳೆ ಸುರಿದ ಕಾರಣ ಕೃಷಿ ಚಟುವಟಿಕೆಗಳಿಗೆ ರೈತರು ಸಿದ್ಧತೆ ಪ್ರಾರಂಭಿಸಿದ್ದಾರೆ. ಎಲ್ಲಾ ಜಿಲ್ಲೆಗಳಲ್ಲಿಯೂ ಮಳೆಯಾಗಿ ಕೃಷಿ ಚಟುವಟಿಕೆ ಬಿರುಸಾಗಲಿ, ಜಲಾಶಯಗಳು ಭರ್ತಿಯಾಗಿ ಕುಡಿಯುವ ನೀರಿನ ಸಮಸ್ಯೆ ಎದುರಾಗದಿರಲಿ ಎಂದು ಜನರು ಪ್ರಾರ್ಥಿಸುತ್ತಿದ್ದಾರೆ.

19 ಕುರಿಗಳು ಸಾವು; ಯಾದಗಿರಿ ಜಿಲ್ಲೆಯಲ್ಲಿ ಗುಡುಗು, ಸಿಡಿಲು ಸಹಿತವಾಗಿ ಗಾಳಿಯೊಂದಿಗೆ ಮಳೆ ಸುರಿದಿದೆ. ಶಹಾಪುರದ ಹಳಿಪೇಟೆಯ ಬೆಟ್ಟದಲ್ಲಿ ಸಿಡಿಲು ಬಡಿದು 19 ಕುರಿಗಳು ಮೃತಪಟ್ಟಿವೆ. ಈ ಕುರಿಗಳು ಸಂಗಪ್ಪ ಮತ್ತು ದೇವಪ್ಪ ಎಂಬುವವರಿಗೆ ಸೇರಿದವು. ಕುರಿಗಳನ್ನು ಮೇಯಿಸಿಕೊಂಡು ಮನೆಗೆ ವಾಪಸ್ ಆಗುತ್ತಿದ್ದಾಗ ಸಿಡಿಲು ಬಡಿದಿದೆ. ಸುಮಾರು 2 ಲಕ್ಷ ರೂ. ನಷ್ಟವಾಗಿದೆ ಎಂದು ಅಂದಾಜಿಸಲಾಗಿದ್ದು, ಕಂದಾಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದರು.

ಶನಿವಾರ ಕಲಬುರಗಿಯ ಜೇವರ್ಗಿ ಪಟ್ಟಣದಲ್ಲಿ ಸುಮಾರು ಒಂದು ಗಂಟೆಗಳ ಕಾಲ ಮಳೆಯಾಗಿದೆ. ಬಿರುಬಿಸಿಲಿನಿಂದ ಕಂಗೆಟ್ಟಿದ್ದ ಜನರು ಮಳೆ ಸುರಿದಿದ್ದರಿಂದ ಸಂತಸಗೊಂಡರು. ಪಟ್ಟಣದ ಪ್ರಮುಖ ರಸ್ತೆಗಳು ಭಾರೀ ಮಳೆಯ ಕಾರಣ ಜಲಾವೃತಗೊಂಡಿದ್ದವು.

ಉತ್ತರ ಕನ್ನಡ ಜಿಲ್ಲೆಯ ಬೈತ್‌ಕೋಲ್ ಗುಡ್ಡ ಕುಸಿದು ಮನೆಗಳಿಗೆ ನೀರು ನುಗ್ಗಿದೆ. ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದು, ಜೆಸಿಬಿಗಳ ಮೂಲಕ ರಸ್ತೆಗಳ ಮೇಲೆ ಕುಸಿದಿರುವ ಕಲ್ಲುಗಳನ್ನು ತೆರವು ಮಾಡುತ್ತಿದ್ದಾರೆ. ಗುಡ್ಡ ಕಡಿದು ರಸ್ತೆ ಮಾಡಿರುವುದೇ ಘಟನೆಗೆ ಕಾರಣ ಎಂದು ಅಧಿಕಾರಿಗಳ ವಿರುದ್ಧ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+