ಆ.20ರ ತನಕ ಕರಾವಳಿ ಜಿಲ್ಲೆಗಳಲ್ಲಿ ಯೆಲ್ಲೊ ಅಲರ್ಟ್
ಬೆಂಗಳೂರು, ಆಗಸ್ಟ್ 16 : ಹವಾಮಾನ ಇಲಾಖೆ ಆಗಸ್ಟ್ 20ರ ತನಕ ಕರ್ನಾಟಕದ ಕರಾವಳಿ ಜಿಲ್ಲೆಗಳಲ್ಲಿ ಭಾರಿ ಮಳೆಯಾಗುವ ಮುನ್ಸೂಚನೆ ನೀಡಿದೆ. ದಕ್ಷಿಣ ಕನ್ನಡ, ಉತ್ತರ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಯೆಲ್ಲೊ ಅಲರ್ಟ್ ಘೋಷಣೆ ಮಾಡಲಾಗಿದೆ.
ಭಾನುವಾರ ಯಾದಗಿರಿ, ವಿಜಯಪುರ, ಕಲಬುರಗಿ, ಬೀದರ್, ಬೆಳಗಾವಿ, ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಕರಾವಳಿ ಜಿಲ್ಲೆಗಳಲ್ಲಿ ಆಗಸ್ಟ್ 20ರ ತನಕ ಮಳೆ ಮುಂದುವರೆಯಲಿದೆ.
ಉತ್ತರ ಕರ್ನಾಟಕದ ಕೆಲವು ಜಿಲ್ಲೆಗಳಲ್ಲಿ ಕಳೆದ ಎರಡು ದಿನಗಳಿಂದ ಮಳೆ ಬಿಡುವು ನೀಡಿತ್ತು. ಶನಿವಾರ ಕೆಲವು ಜಿಲ್ಲೆಗಳಲ್ಲಿ ಮಳೆಯಾಗಿದೆ. ನವಿಲು ತೀರ್ಥ ಜಲಾಶಯ ಶೇ 82ರಷ್ಟು ಭರ್ತಿಯಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಚಿಕ್ಕಮಗಳೂರಿನ ಮೂಡಿಗೆರೆಯಲ್ಲಿ 8 ಸೆಂ. ಮೀ. ಗರಿಷ್ಠ ಮಳೆ ಶನಿವಾರ ಸುರಿದಿದೆ. ಕೊಟ್ಟಿಗೆಹಾರದಲ್ಲಿ 7, ಭಾಗಮಂಡಲ, ಕೊಡಗಿನಲ್ಲಿ 4, ಬೆಳ್ತಂಗಡಿ, ಹೊಸನಗರ, ಆಗುಂಬೆಯಲ್ಲಿ 3 ಸೆಂ. ಮೀ. ಮಳೆಯಾಗಿದೆ.
ಮಹಾರಾಷ್ಟ್ರದಿಂದ ಕೃಷ್ಣಾ ನದಿಗೆ ಸೇರುವ ನೀರಿನ ಪ್ರಮಾಣ ಕೊಂಚ ಹೆಚ್ಚಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಶನಿವಾರ ಬೆಳಗಾವಿ, ಧಾರವಾಡ ಮತ್ತು ಹುಬ್ಬಳ್ಳಿಯಲ್ಲಿ ಉತ್ತಮ ಮಳೆಯಾಗಿದೆ.
ಮೃತ ದೇಹ ಪತ್ತೆ : ತಲಕಾವೇರಿಯಲ್ಲಿ ಬೆಟ್ಟ ಕುಸಿದು ಮನೆಗಳ ಮೇಲೆ ಬಿದ್ದಿತ್ತು. ಶನಿವಾರ ಸಹಾಯಕ ಅರ್ಚಕ ರವಿಕಿರಣ್ ಭಟ್ (28) ಮೃತದೇಹ ಪತ್ತೆಯಾಗಿದೆ. ರವಿಕಿರಣ್ ಭಟ್ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನವರು. ಎರಡು ವರ್ಷಗಳಿಂದ ತಲಕಾವೇರಿಯಲ್ಲಿ ಕೆಲಸ ಮಾಡುತ್ತಿದ್ದರು.











Click it and Unblock the Notifications