Karnataka Rain: ದಕ್ಷಿಣ ಒಳನಾಡಿನ 10 ಜಿಲ್ಲೆಗಳಿಗೆ 3 ದಿನ 'ಹಳದಿ ಎಚ್ಚರಿಕೆ': 2 ವಾರ ಮಳೆ ಮುಂದುವರಿಕೆ, ವಿವರ
ಬೆಂಗಳೂರು, ಅಕ್ಟೋಬರ್ 09: ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಚುರುಕಾಗಿರುವ ಹಿಂಗಾರು ಮಳೆ ಮುಂದಿನ ಎರಡು ವಾರ ಹೀಗೆ ಮುಂದುವರಿಯಲಿದೆ. ಈ ಪೈಕಿ ರಾಜ್ಯದ ದಕ್ಷಿಣ ಒಳನಾಡಿಗೆ ಮುಂದಿನ ಮೂರು ದಿನ ಗುಡುಗು ಮಿಂಚು ಸಹಿತ ಅತ್ಯಧಿಕ ಮಳೆ ಬರಲಿದೆ. ಒಟ್ಟು 10 ಜಿಲ್ಲೆಗಳಿಗೆ 'ಹಳದಿ ಎಚ್ಚರಿಕೆ' ನೀಡಲಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ರಾಜ್ಯದ ದಕ್ಷಿಣ ಒಳನಾಡಿನ ವಿವಿಧ ಜಿಲ್ಲೆಗಳಲ್ಲಿ ಮಳೆ ವಾತಾವರಣ ಕಂಡು ಬಂದಿದೆ. ಅಕ್ಟೋಬರ್ 10ರಿಂದ ಮೂರು ದಿನ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಾಮರಾಜನಗರ, ಚಿಕ್ಕಮಗಳೂರು, ಹಾಸನ, ಕೊಡಗು, ಕೋಲಾರ, ಮಂಡ್ಯ, ಮೈಸೂರು ಮತ್ತು ರಾಮಗನರ ಜಿಲ್ಲೆಗಳಲ್ಲಿ ಭಾರಿ ಮಳೆ ಆಗಲಿದ್ದು, ಹಳದಿ ಎಚ್ಚರಿಕೆ ನೀಡಲಾಗಿದೆ.

ಇದೇ ಭಾಗದ ಉಳಿದ ಜಿಲ್ಲೆಗಳಾದ ಚಿಕ್ಕಬಳ್ಳಾಪುರ, ತುಮಕೂರು, ಶಿವಮೊಗ್ಗ, ದಾವಣಗೆರೆ, ಚಿತ್ರದುರ್ಗ, ಬಳ್ಳಾರಿ ಜಿಲ್ಲೆಗಳಲ್ಲಿ ಅಲ್ಲಲ್ಲಿ ಚದುರಿದಂತೆ ಮಳೆ ಆಗುವ ಸಾಧ್ಯತೆಗಳು ಇವೆ ಎನ್ನಲಾಗಿದೆ.
ಕರಾವಳಿ ಜಿಲ್ಲೆಗಳಾದ ಉಡುಪಿ, ಉತ್ತರ ಕನ್ನಡ ಮತ್ತು ದಕ್ಷಿಣ ಕನ್ನಡದಲ್ಲಿ ಗುರುವಾರದವರೆಗೆ ಹಗುರದಿಂದ ಸಾಧಾರಣವಾಗಿ ಮಳೆ ಸುರಿಯುವ ಲಕ್ಷಣಗಳು ಇವೆ. ಇನ್ನೂ ಉತ್ತರ ಒಳನಾಡಿನಲ್ಲಿ ಶುಷ್ಕ ಮತ್ತು ಸೆಕೆಯ ವಾತಾವರಣವೇ ಮುಂದುವರಿಯು ಮುನ್ಸೂಚನೆ ಇದೆ.
ಉತ್ತರ ಒಳನಾಡಿನಲ್ಲಿ ಶುಷ್ಕ ವಾತಾವರಣ
ಗುರುವಾರ ಬೆಳಗಾವಿ, ಗದಗ, ಧಾರವಾಡ, ಹಾವೇರಿ, ಕೊಪ್ಪಳ ಜಿಲ್ಲೆಗಳಲ್ಲಿ ತುಂತುರು ಮಳೆ ಬರಬಹದು. ಉಳಿದೆಲ್ಲ ಒಣ ಹವೆ, ಅಧಿಕ ಬಿಸಿಲಿನ ವಾತಾವರಣ ಕಂಡು ಬರಲಿದೆ ಎಂದು ಹವಾಮಾನ ಇಲಾಖೆ ಸೋಮವಾರ ಮಾಹಿತಿ ನೀಡಿದೆ.

ಮುಂಗಾರು ಮಳೆ ಸುರಿಸುವ ಮಾರುಗಳು ಬಹುತೇಕ ಅಂತ್ಯಗೊಂಡಿದ್ದು, ಹಿಂಗಾರು ಮಳೆ ಆರಂಭವಾಗಿದೆ. ಇದರ ಬೆನ್ನಲ್ಲೆ ರಾಜ್ಯದ ವಿವಿಧೆಡೆ ಮಳೆ ಆಗುತ್ತಿದೆ. ಕೈಕೊಟ್ಟ ಹಿಂಗಾರು ಮಳೆಯಿಂದ ಸಂಕಷ್ಟ ಅನುಭವಿಸಿದ ರಾಜ್ಯದ ರೈತರು ಹಿಂಗಾರು ಬಿತ್ತನೆಗೆ ಮಳೆಗಾಗಿ ಕಾಯುತ್ತಿದ್ದಾರೆ.
ಕೆಲವೆಡೆ ಉತ್ತಮ ಮಳೆ ನಿರೀಕ್ಷೆ
ಹವಾಮಾನ ಇಲಾಖೆ ತಿಳಿಸಿರುವ ಮುಂದಿನ ಮೂರು ತಿಂಗಳಲ್ಲಿ ಹಿಂಗಾರು ಮಳೆ ವಾಡಿಕೆ ಯಷ್ಟು ಸುರಿಯಲಿದೆ. ಕರಾವಳಿ, ದಕ್ಷಿಣ ಒಳನಾಡಿನಲ್ಲಿ ವಾಡಿಕೆಗಿಂತ ತುಸು ಹೆಚ್ಚು ಮಳೆ ಆಗಲಿದೆ. ಉತ್ತರ ಒಳನಾಡಿಗೆ ವಾಡಿಕೆಯಷ್ಟು ಮಳೆ ಆದರೆ, ಕಲ್ಯಾಣ ಕರ್ನಾಟಕ ಜಿಲ್ಲೆಗಲ್ಲಿ ವಾಡಿಕೆಗಿಂತ ಕಡಿಮೆ ಮಳೆ ಆಗಬಹುದು ಎಂದು ಹೇಳಲಾಗಿದೆ.
ಬೆಂಗಳೂರಿನಲ್ಲಿ ಕಳೆದ 24 ಗಂಟೆಗಳಲ್ಲಿ ಮಹಾದೇವಪುರ ವಲಯ ವ್ಯಾಪ್ತಿಯಲ್ಲಿ ಅತ್ಯಧಿಕ ಮಳೆ ದಾಖಲಾಗಿದೆ. ಭಾನುವಾರ ಸಂಜೆಯಿಂದ ಆರಂಭವಾದ ಜಿಟಿ ಜಿಟಿ ಮಳೆ ತಡರಾತ್ರಿ ಜೋರಾಗಿ ಸುರಿಯಿತು. ಸೋಮವಾರ ಬೆಳಗ್ಗೆವರೆಗೂ ಸುರಿದು ಮರೆಆಯಿತು. ಪಶ್ಚಿಮ ವಲಯ, ಯಲಹಂಕ, ದಕ್ಷಿಣ ವಲಯಗಳ ಬಡಾವಣೆಗಳಲ್ಲಿಯೂ ಉತ್ತಮ ಮಳೆ ದಾಖಲಾಗಿದೆ.












Click it and Unblock the Notifications