ಐಎಂಎ ಹಗರಣ; ಇಬ್ಬರು ಐಪಿಎಸ್ ಅಧಿಕಾರಿಗಳಿಗೆ ಸಂಕಷ್ಟ!
ಬೆಂಗಳೂರು, ಜನವರಿ 29 : ಬಹುಕೋಟಿ ರೂಪಾಯಿ ಐಎಂಎ ಹಗರಣದಲ್ಲಿ ಇಬ್ಬರು ಐಪಿಎಸ್ ಅಧಿಕಾರಿಗಳ ವಿರುದ್ಧ ತನಿಖೆ ನಡೆಸಲು, ಕಾನೂನು ಕ್ರಮ ಕೈಗೊಳ್ಳಲು ಕರ್ನಾಟಕ ಸರ್ಕಾರ ಒಪ್ಪಿಗೆ ನೀಡಿದೆ. ಸಿಬಿಐ ಹಗರಣದ ತನಿಖೆಯನ್ನು ನಡೆಸುತ್ತಿದೆ.
ಐಎಂಎ ಹಗರಣದ ತನಿಖೆ ಕೈಗೊಂಡಿದ್ದ ಸಿಬಿಐ ಇಬ್ಬರು ಐಪಿಎಸ್ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮಗಳನ್ನು ಕೈಗೊಳ್ಳಲು ಅನುಮತಿ ನೀಡುವಂತೆ ಕರ್ನಾಟಕ ಸರ್ಕಾರಕ್ಕೆ ಮನವಿ ಮಾಡಿತ್ತು. ಸರ್ಕಾರ ಇದಕ್ಕೆ ಒಪ್ಪಿಗೆ ನೀಡಿದೆ.
1998ನೇ ಬ್ಯಾಚ್ ಐಪಿಎಸ್ ಅಧಿಕಾರಿ ಹೇಮಂತ್ ಎಂ. ನಿಂಬಾಳ್ಕರ್ ಮತ್ತು 2008ನೇ ಬ್ಯಾಚ್ ಐಪಿಎಸ್ ಅಧಿಕಾರಿ ಅಜಯ್ ಹಿಲೋರಿ ವಿರುದ್ಧ ಕಾನೂನು ಕ್ರಮಗಳನ್ನು ಕೈಗೊಳ್ಳಲು ಒಪ್ಪಿಗೆ ನೀಡಲಾಗಿದೆ. ಕರ್ನಾಟಕ ಕೆಡರ್‌ನ ಇಬ್ಬರೂ ಅಧಿಕಾರಿಗಳು ಪ್ರಸ್ತುತ ಬೆಂಗಳೂರಿನಲ್ಲಿ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ.
ಐಎಂಎ ಹಗರಣದ ತನಿಖೆ ಆರಂಭಿಸಿದ್ದ ಸಿಬಿಐ ಐಎಂಎ ಸಂಸ್ಥಾಪಕ ಮನ್ಸೂರ್ ಖಾನ್ ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸಿತ್ತು. ಆಗ ಹಗರಣದಲ್ಲಿ ಐಪಿಎಸ್ ಅಧಿಕಾರಿಗಳ ಪಾತ್ರ ಇರುವ ಬಗ್ಗೆ ಮಾಹಿತಿ ಸಿಕ್ಕಿತ್ತು.

ಹೇಮಂತ್ ನಿಂಬಾಳ್ಕರ್
ಪ್ರಸ್ತುತ ಬೆಂಗಳೂರು ನಗರ ಆಡಳಿತ ವಿಭಾಗದ ಹೆಚ್ಚುವರಿ ಆಯುಕ್ತರಾಗಿ ಹೇಮಂತ್ ನಿಂಬಾಳ್ಕರ್ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಐಎಂಎ ಹಗರಣ ನಡೆದಾಗ ಅವರು ಸಿಐಡಿಯ ಆರ್ಥಿಕ ಅಪರಾಧ ವಿಭಾಗದ ಐಜಿ ಆಗಿದ್ದರು. ಐಎಂಎ ಸಮೂಹ ಸಂಸ್ಥೆಗಳ ವಿರುದ್ಧ ದೂರುಗಳು ಕೇಳಿ ಬಂದಾಗ ತನಿಖೆ ನಡೆಸಿ ಕಂಪನಿ ಪರವಾಗಿ ವರದಿ ನೀಡಿದ್ದಾರೆ ಎಂಬುದು ಆರೋಪವಾಗಿದೆ. ಸಿಬಿಐ ಈಗಾಗಲೇ ಅವರ ವಿಚಾರಣೆಯನ್ನು ನಡೆಸಿದ್ದು, ಈಗ ಮುಂದಿನ ಕ್ರಮ ಕೈಗೊಳ್ಳಲಿದೆ.

ಅಜಯ್ ಹಿಲೋರಿ
ಪ್ರಸ್ತುತ ಕೆಎಸ್ಆರ್‌ಪಿ ಫಸ್ಟ್ ಬೆಟಾಲಿಯನ್ ಕಮಾಂಡೆಂಟ್ ಆಗಿರುವ ಅಜಯ್ ಹಿಲೋರಿ ಅವರ ಹೆಸರು ಸಹ ಐಎಂಎ ಹಗರಣದಲ್ಲಿ ಕೇಳಿ ಬಂದಿದೆ. ಮನ್ಸೂರ್ ಖಾನ್ ವಿಚಾರಣೆ ನಡೆಸಿದಾಗ ಆತ ಅಜಯ್ ಹಿಲೋರಿ ಅವರಿಗೆ 20 ಕೋಟಿಗೂ ಅಧಿಕ ಹಣ ನೀಡಿರುವುದಾಗಿ ಹೇಳಿಕೆ ನೀಡಿದ್ದ. ಆದ್ದರಿಂದ, ಸಿಬಿಐ ಮುಂದಿನ ಕ್ರಮ ಕೈಗೊಳ್ಳಲು ಸರ್ಕಾರಕ್ಕೆ ಮನವಿ ಸಲ್ಲಿಸಿತ್ತು.

ಮೂರು ಎಫ್‌ಐಆರ್ ದಾಖಲು
ಬಹುಕೋಟಿ ರೂಪಾಯಿ ಐಎಂಎ ಹಗರಣದಲ್ಲಿ ಸಿಬಿಐ ಒಟ್ಟು 3 ಎಫ್ಐಆರ್ ದಾಖಲು ಮಾಡಿಕೊಂಡಿದೆ. 1000 ಪುಟ ಚಾರ್ಜ್ ಶೀಟ್ ಸಹ ಸಲ್ಲಿಕೆ ಮಾಡಿದೆ. ಒಟ್ಟು 30 ಜನರ ವಿರುದ್ಧ ಎಫ್‌ಐಆರ್ ದಾಖಲು ಮಾಡಿಕೊಂಡು ತನಿಖೆ ನಡೆಸುತ್ತಿದೆ. ಬೆಂಗಳೂರು ನಗರ ಹಿಂದಿನ ಜಿಲ್ಲಾಧಿಕಾರಿ ಬಿ. ಎಂ. ವಿಜಯಶಂಕರ್, ಬೆಂಗಳೂರು ಉತ್ತರ ಉಪವಿಭಾಗಾಧಿಕಾರಿಯಾಗಿದ್ದ ಎಲ್. ಸಿ. ನಾಗರಾಜ್, ಗ್ರಾಮ ಲೆಕ್ಕಿಗ ಮಂಜುನಾಥ್ ಸಹ ಪ್ರಕರಣದಲ್ಲಿ ಆರೋಪಿಗಳು.

ಸಿಬಿಐ ತನಿಖೆಗೆ ಆದೇಶ
ಐಎಂಎ ಹಗರಣ ಬೆಳಕಿಗೆ ಬಂದಾಗ ರಾಜ್ಯದಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರವಿತ್ತು. ಆಗ ಹಗರಣದ ತನಿಖೆಗೆ ಎಸ್‌ಐಟಿ ರಚನೆ ಮಾಡಲಾಗಿತ್ತು. ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದು ಯಡಿಯೂರಪ್ಪ ಮುಖ್ಯಮಂತ್ರಿ ಆಗುತ್ತಿದ್ದಂತೆ ಸಿಬಿಐ ತನಿಖೆಗೆ ಹಗರಣವನ್ನು ವಹಿಸಲಾಗಿತ್ತು.












Click it and Unblock the Notifications