ರೇಸ್‌ಕೋರ್ಸ್‌ನಲ್ಲಿ ಅಕ್ರಮ ಬೆಟ್ಟಿಂಗ್: ಪ್ರಕರಣ ರದ್ದಿಗೆ ಕೋರ್ಟ್ ನಕಾರ
ಬೆಂಗಳೂರು, ಮೇ 04: ಬೆಂಗಳೂರು ಟರ್ಫ್ ಕ್ಲಬ್ (ರೇಸ್‌ಕೋರ್ಸ್)ನಲ್ಲಿ ಸೂಕ್ತ ದಾಖಲೆ ಮತ್ತು ರಿಜಿಸ್ಟರ್ ನಿರ್ವಹಿಸದೆ ಅನಧಿಕೃತವಾಗಿ ಕುದುರೆ ಪಂದ್ಯಗಳಿಗೆ ಬೆಟ್ಟಿಂಗ್ ಆಯೋಜಿಸಿ ಹಣ ಸಂಗ್ರಹಣೆ ಮಾಡಿದ ಆರೋಪದ ಮೇಲೆ 26 ಮಂದಿ ಹಾಗೂ (ಬುಕ್ಕಿಗಳ) ಕಂಪನಿ ವಿರುದ್ಧ ದಾಖಲಾಗಿದ್ದ ಎಫ್ಐಆರ್ ಮತ್ತು ವಿಚಾರಣಾ ನ್ಯಾಯಾಲಯದ ಪ್ರಕ್ರಿಯೆ ರದ್ದುಗೊಳಿಸಲು ಹೈಕೋರ್ಟ್ ನಿರಾಕರಿಸಿದೆ.
ಹಾಗಾಗಿ ಆ 26 ಮಂದಿ ಇದೀಗ ತನಿಖೆ ಎದುರಿಸಲೇಬೇಕಿದೆ. ಜತೆಗೆ ವಿಚಾರಣಾ ನ್ಯಾಯಾಲಯ ಮುಂದೆ ಹಾಜರಾಗಿ ಜಾಮೀನು ಪಡೆದುಕೊಳ್ಳಬೇಕಿದೆ. ಸೂರ್ಯ ಅಂಡ್ ಕೋ ಸೇರಿದಂತೆ ಬೆಂಗಳೂರು ಟರ್ಫ್ ಕ್ಲಬ್ ಆವರಣದಲ್ಲಿ ಹಲವು ಅಕ್ರಮ ಬೆಟ್ಟಿಂಗ್ ನಡೆಸುತ್ತಿದ್ದ 26 ಎಂಟರ್ ಪ್ರೈಸಸ್ ಕಂಪೆನಿಗಳು ಸಿಸಿಬಿ ಪೊಲೀಸರು ದಾಖಲಿಸಿದ ಎಫ್ಐಆರ್ ಹಾಗೂ ಅದರ ಕುರಿತ ತನಿಖೆ ರದ್ದುಪಡಿಸಲು ಕೋರಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ವಿಶ್ವಜಿತ್ ಶೆಟ್ಟಿ ಅವರಿದ್ದ ಏಕ ಸದಸ್ಯ ಪೀಠ ಈ ಆದೇಶ ಮಾಡಿದೆ.

ಮಧ್ಯಪ್ರವೇಶವಿಲ್ಲ: ಅಲ್ಲದೆ, ಅರ್ಜಿದಾರರು ಕೋಟ್ಯಾಂತರ ರೂ.ಗಳ ಅವ್ಯವಹಾರವನ್ನು ಮಾಡಿದ್ದಾರೆ ಎಂಬ ಅಂಶ ತನಿಖೆ ಸಂದರ್ಭದಲ್ಲಿ ಬಹಿರಂಗವಾಗಿದೆ. ಇದು ಅತ್ಯಂತ ಗಂಭೀರ ಸ್ವರೂಪದ ಆರೋಪವಾಗಿದೆ. ಅಲ್ಲದೆ, ಜಿಎಸ್ಟಿ ಮತ್ತು ಟಿಡಿಎಸ್ ಮೊತ್ತ ಪಾವತಿಗೆ ಸಂಗ್ರಹಿಸಿರುವ ಕೋಟ್ಯಾಂತರ ರೂ.ಗಳನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ನ್ಯಾಯಾಲಯ ಹೇಳಿದೆ.
ಪ್ರಕರಣದ ಆರೋಪ ಸಂಬಂಧ ದಾಖಲಾಗಿರುವ ಎಫ್ಐಆರ್ ಸಾಬೀತುಪಡಿಸುವ ಉದ್ದೇಶದಿಂದ ಪ್ರಕರಣದ ತನಿಖೆ ನಡೆಯುತ್ತಿದೆ. ಅಲ್ಲದೆ, ಆರೋಪವನ್ನು ಸಾಬೀತುಪಡಿಸಲು ಅಗತ್ಯ ಸಾಕ್ಷ್ಯಾಧಾರಗಳು ಸಂಗ್ರಹ ಮಾಡಬೇಕಾಗಿದ್ದು, ಅದಕ್ಕೆ ಮುಕ್ತ ಅವಕಾಶ ನೀಡಿ ಸರಿಯಾದ ರೀತಿಯಲ್ಲಿ ವಿಚಾರಣೆ ನಡೆಸುವುದಕ್ಕೆ ಅವಕಾಶ ನೀಡದಿದ್ದಲ್ಲಿ ಆರೋಪಿಗಳು ಕಾನೂನಿನ ಹಿಡಿತದಿಂದ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾಗಲಿದೆ. ಆದ್ದರಿಂದ ನ್ಯಾಯಾಲಯ ಮಧ್ಯಪ್ರವೇಶ ಮಾಡಬಾರದು ಎಂದು ತಿಳಿಸಿರುವ ಪೀಠ, ಅರ್ಜಿ ವಜಾಗೊಳಿಸುತ್ತಿರುವುದಾಗಿ ತಿಳಿಸಿದೆ.
ಪ್ರಕರಣ ಹಿನ್ನೆಲೆ: ರೇಸ್ ಕೋರ್ಸ್‌ನಲ್ಲಿ ಸರ್ಕಾರದಿಂದ ಅನುಮತಿ ಪಡೆದಿದ್ದ ಬುಕ್ಕಿಗಳು ಯಾವುದೇ ರೀತಿಯ ರಿಜಿಸ್ಟ್ರಾರ್ ನಿರ್ವಹಣೆ ಮಾಡದೆ ಅಕ್ರಮವಾಗಿ ಕುದುರೆ ಪಂದ್ಯಗಳ ಸಂಬಂಧ ಬೆಟ್ಟಿಂಗ್ ಪಡೆದುಕೊಳ್ಳುವ ಸಂಬಂಧ ಆರೋಪಗಳು ಕೇಳಿ ಬಂದಿದ್ದವು.
ಈ ಸಂಬಂಧ ದಾಳಿ ನಡೆಸಿ ಪರಿಶೀಲನೆ ನಡೆಸಿದ ಸಂದರ್ಭದಲ್ಲಿ ಮಾಹಿತಿ ಸತ್ಯವಿರುವುದಾಗಿ ಗೊತ್ತಾಗಿತ್ತು. ಈ ಹಿನ್ನೆಲೆಯಲ್ಲಿ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು.
ನಂತರ 2024ರ ಜನವರಿ 12ರಂದು ಸಿಸಿಬಿ ಪೊಲೀಸರು ದಾಳಿ ನಡೆಸಿದ್ದರು. ಅಲ್ಲದೆ, ಅಕ್ರಮವಾಗಿ ಬೆಟ್ಟಿಂಗ್ ನಡೆಸಿ ಸಂಗ್ರಹಿಸಿದ್ದ ಸುಮಾರು 3.45 ಕೋಟಿ ರೂ. ಗಳನ್ನು ವಶಪಡಿಸಿಕೊಂಡು ತನಿಖೆ ಮುಂದುವರೆಸಿದ್ದರು.












Click it and Unblock the Notifications