ಡಿಕೆಶಿ ವಿರುದ್ಧ ಸಿಬಿಐ ತನಿಖೆ: ತೀರ್ಪು ಕಾಯ್ದಿರಿಸಿದ ಹೈಕೋರ್ಟ್
ಬೆಂಗಳೂರು, ಜೂನ್ 01: ಡಿ. ಕೆ. ಶಿವಕುಮಾರ್ ವಿರುದ್ಧದ ಆದಾಯಕ್ಕೂ ಮೀರಿದ ಅಕ್ರಮ ಆಸ್ತಿಗಳಿಕೆ ಪ್ರಕರಣದ ತನಿಖೆ ನಡೆಸಲು ಸಿಬಿಐಗೆ ನೀಡಿದ್ದ ಅನುಮತಿ ಹಿಂಪಡೆದ ರಾಜ್ಯ ಸರ್ಕಾರದ ಆದೇಶ ಪ್ರಶ್ನಿಸಿ ಸಲ್ಲಿರುವ ಅರ್ಜಿಗಳ ವಿಚಾರಣೆಯನ್ನು ಕರ್ನಾಟಕ ಹೈಕೋರ್ಟ್ ಶುಕ್ರವಾರ ಪೂರ್ಣಗೊಳಿಸಿದೆ. ಅಲ್ಲದೆ, ತೀರ್ಪು ಕಾಯ್ದಿರಿಸಿದ್ದು, ಇನ್ನು ಕೆಲವೇ ದಿನಗಳಲ್ಲಿ ಪ್ರಕಟವಾಗುವ ಸಾಧ್ಯತೆ ಇದೆ.
ಒಂದು ವೇಳೆ ಸರ್ಕಾರದ ಕ್ರಮ ರದ್ದಾದರೆ ಡಿ. ಕೆ. ಶಿವಕುಮಾರ್ ಮತ್ತೆ ಸಂಕಷ್ಟಕ್ಕೆ ಒಳಗಾಗಲಿದ್ದಾರೆ. ಆದರೆ ಅನುಮತಿ ವಾಪಸ್ ಪಡೆದ ಕ್ರಮ ಎತ್ತಿಹಿಡಿದರೆ ಉಪ ಮುಖ್ಯಮಂತ್ರಿ, ಕೆಪಿಸಿಸಿ ಅಧ್ಯಕ್ಷರು ದೊಡ್ಡ ವಿಪತ್ತಿನಿಂದ ಪಾರಾಗಲಿದ್ದಾರೆ.

ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಮತ್ತು ಸಿಬಿಐ ಸಲ್ಲಿಸಿದ್ದ ತಕರಾರು ಅರ್ಜಿಗಳ ವಿಚಾರಣೆಯನ್ನು ನ್ಯಾಯಮೂರ್ತಿಗಳಾದ ಕೆ. ಸೋಮಶೇಖರ್ ಮತ್ತು ಉಮೇಶ್ ಎಂ. ಅಡಿಗ ಅವರಿದ್ದ ವಿಭಾಗೀಯಪೀಠ ಶುಕ್ರವಾರ ನಡೆಸಿತು.
ಬಹುತೇಕ ತನಿಖೆ ಪೂರ್ಣ: ಸಿಬಿಐ ಪರವಾಗಿ ವಾದಿಸಿದ ವಿಶೇಷ ಸರಕಾರಿ ಅಭಿಯೋಜಕರು, ಸಿಬಿಐ ತನಿಖೆಗೆ ಒಮ್ಮೆ ನೀಡಿದ ಸಮ್ಮತಿ ಹಿಂಪಡೆಯುವ ಅಧಿಕಾರ ಸರ್ಕಾರಕ್ಕಿಲ್ಲ. ಈಗಾಗಲೇ ಪ್ರಕರಣದ ತನಿಖೆ ಬಹುತೇಕ ಪೂರ್ಣಗೊಳಿಸಿದೆ.
ಸಮ್ಮತಿ ಹಿಂಪಡೆದ ಸರ್ಕಾರದ ಕ್ರಮ ಕಾನೂನುಬಾಹಿರ, ಸಮ್ಮತಿ ಹಿಂಪಡೆದ ಕ್ರಮಕ್ಕೆ ಯಾವುದೇ ಮಾನ್ಯತೆ ಇಲ್ಲ. ಹಾಗಾಗಿ ಅನುಮತಿ ವಾಪಸ್ ಪಡೆದಿರುವ ಸರ್ಕಾರದ ಕ್ರಮ ರದ್ದುಪಡಿಸಬೇಕು ಎಂದು ನ್ಯಾಯಪೀಠಕ್ಕೆ ಮನವಿ ಮಾಡಿದರು.
ಕಳೆದ ವಾರ ಸರ್ಕಾರದ ಕ್ರಮವನ್ನು ಸಮರ್ಥಿಸಿಕೊಂಡಿದ್ದ ಸುಪ್ರೀಂಕೋರ್ಟ್‌ನ ಹಿರಿಯ ನ್ಯಾಯವಾದಿ ಕಪಿಲ್ ಸಿಬಲ್, ಹಿಂದಿನ ಸರ್ಕಾರ ನೀಡಿರುವ ಸಮ್ಮತಿ ರಾಜಕೀಯ ಪ್ರೇರಿತವಾಗಿದೆ. ಅಂದಿನ ಮುಖ್ಯಮಂತ್ರಿಗಳ ಮೌಖಿಕ ಹೇಳಿಕೆ ಆಧರಿಸಿ ಅಧಿಕಾರಿಗಳು ಅನುಮತಿ ನೀಡಿದ್ದಾರೆ. ಆರೋಪ ಸಂಬಂಧ ತನಿಖಾಧಿಕಾರಿಗಳು ನಿರ್ಧರಿಸಬೇಕು, ಮುಖ್ಯಮಂತ್ರಿ, ಪ್ರಧಾನಮಂತ್ರಿ ತಿಳಿಸಿದ್ದಾರೆಂಬ ಕಾರಣದಿಂದ ಎಫ್‌ಐಆರ್ ದಾಖಲಿಸಲು ಸಾಧ್ಯವಿಲ್ಲ ಎಂದು ವಾದಿಸಿದ್ದರು.
ಸಿಬಿಐ ತನಿಖೆಗೆ ಸಮ್ಮತಿ ನೀಡುವಾಗ ಅನುಸರಿಸಬೇಕಾದ ನಿಯಮಗಳನ್ನು ಪಾಲಿಸಿಲ್ಲ. ಸಮ್ಮತಿ ನೀಡಿದ ನಂತರ ದೆಹಲಿ ಪೊಲೀಸ್ ಎಸ್ಟಾಬ್ಲಿಷ್‌ಮೆಂಟ್ ಕಾಯಿದೆ ಸೆಕ್ಷೆನ್ ಅಡಿ ಅಧಿಸೂಚನೆ ಹೊರಡಿಸಲಾಗಿದೆ. ಸರಕಾರ ಅಧಿಸೂಚನೆ ಹೊರಡಿಸುವ ಮುನ್ನ ವಿವೇಚನೆ ಬಳಸಿಲ್ಲಎಂದು ಹೇಳಿದ್ದರು.
ಡಿ. ಕೆ. ಶಿವಕುಮಾರ್ ಪರ ವಾದಿಸಿದ್ದ ಹಿರಿಯ ವಕೀಲ ಅಭಿಷೇಕ್ ಮನು ಸಿಂಘ್ವಿ, ಸಿಬಿಐ ತನಿಖೆಗೆ ಸರ್ಕಾರ ಸಮ್ಮತಿ ನೀಡುವುದು ಅತ್ಯಗತ್ಯ. ಅಪರೂಪದ ಸಂದರ್ಭಗಳಲ್ಲಿ ಮಾತ್ರ ಹೈಕೋರ್ಟ್ ನಿರ್ದೇಶನ ನೀಡಬಹುದಾಗಿದೆ. ಕರ್ನಾಟಕದಲ್ಲಿ ತನಿಖೆ ನಡೆಸಲು ಸಿಬಿಐಗೆ ಅಧಿಕಾರವಿಲ್ಲ. ಒಕ್ಕೂಟ ವ್ಯವಸ್ಥೆ ಸಂವಿಧಾನದ ಅತ್ಯಗತ್ಯ ಭಾಗವಾಗಿದೆ.
ಮೊದಲು ಕೇಂದ್ರ ನಂತರ ರಾಜ್ಯ ಸರಕಾರ ಸಿಬಿಐ ತನಿಖೆಗೆ ಅನುಮತಿ ನೀಡಬೇಕು. ಕೇಂದ್ರ ಅನುಮತಿ ನೀಡಿದರೂ ರಾಜ್ಯ ಸರಕಾರದ ಸಮ್ಮತಿ ಇಲ್ಲದೇ ತನಿಖೆ ನಡೆಸುವುದಕ್ಕೆ ಅವಕಾಶವೇ ಇಲ್ಲ ಎಂದು ವಾದಿಸಿದ್ದರು.
ಅಲ್ಲದೆ, ಸಿಬಿಐ ಕೇಂದ್ರ ಸರ್ಕಾರದ ಏಜೆಂಟ್‌ನಂತೆ ಕಾರ್ಯನಿರ್ವಹಿಸುತ್ತಿದೆ. ಸಿಬಿಐ ಯಾವ ರಸ್ತೆಗೆ ಹೋಗಬೇಕು?, ಯಾರ ಮನೆಗೆ ಹೋಗಬೇಕೆಂದು? ಕೇಂದ್ರ ಸರ್ಕಾರವೇ ನಿರ್ಧರಿಸುತ್ತಿದೆ. ಉಳಿದಂತೆ ತನಿಖೆಯನ್ನು ಮಾತ್ರ ಸಿಬಿಐ ನಡೆಸುತ್ತಿದೆ. ಹಾಗಾಗಿ ಸಿಬಿಐ ತನಿಖೆ ಒಕ್ಕೂಟ ವ್ಯವಸ್ಥೆಗೆ ಪೂರಕವಾಗಿಲ್ಲಎಂದು ನ್ಯಾಯಪೀಠಕ್ಕೆ ವಿವರಿಸಿದ್ದರು.












Click it and Unblock the Notifications