ಅಕ್ಕಿ ಸಿಗಲಿಲ್ಲವೆಂದರೆ ರಾಗಿ, ಜೋಳ ನೀಡಿ: ಕೃಷಿ ಅರ್ಥಶಾಸ್ತ್ರಜ್ಞ
ಬೆಂಗಳೂರು, ಜೂನ್ 21: ಕರ್ನಾಟಕ ಮಹತ್ವಾಕಾಂಕ್ಷಿ ಯೋಜನೆಯಾದ ಅನ್ನಭಾಗ್ಯ ಯೋಜನೆಯಡಿ ಬಿಪಿಎಲ್ ಕಾರ್ಡುದಾರರಿಗೆ ತಲಾ 10 ಕೆಜಿ ಅಕ್ಕಿ ನೀಡಲು ಕೇಂದ್ರ ಸರ್ಕಾರ ಅಕ್ಕಿ ನೀಡುತ್ತಿಲ್ಲ ಎಂಬ ಆರೋಪಗಳ ಮಧ್ಯೆ ರಾಜ್ಯ ಸರ್ಕಾರ 10 ಕೆಜಿ ಅಕ್ಕಿ ಬದಲು 5 ಕೆಜಿ ಅಕ್ಕಿ ನೀಡಿ ಉಳಿದ 5 ಕೆಜಿಯನ್ನು ರಾಗಿ ಹಾಗೂ ಜೋಳವನ್ನು ನೀಡುವಂತೆ ಕೃಷಿ ಅರ್ಥಶಾಸ್ತ್ರಜ್ಞ ಸಲಹೆ ನೀಡಿದ್ದಾರೆ.
ಅಕ್ಕಿಯನ್ನು ನೀಡಲು ನಿರಾಕರಿಸುವ ಕೇಂದ್ರ ಸರ್ಕಾರದ ನಿರ್ಧಾರದಿಂದ ತಿಂಗಳಿಗೆ 2.28 ಲಕ್ಷ ಟನ್‌ಗಳ ಬೇಡಿಕೆಯ ಅಕ್ಕಿಯನ್ನು ಸರಿದೂಗಿಸಲು ರಾಜ್ಯ ಸರ್ಕಾರವು ಇತರ ರಾಜ್ಯಗಳಿಂದ ಅಕ್ಕಿಯನ್ನು ಆಮದು ಮಾಡಿಕೊಳ್ಳುವ ಬದಲು ಸ್ಥಳೀಯ ರೈತರಿಗೆ ಕನಿಷ್ಠ ಬೆಂಬಲ ಬೆಲೆ ನೀಡುವ ಮೂಲಕ ರಾಗಿ ಮತ್ತು ಜೋಳದ ಖರೀದಿ ಮಾಡಬೇಕು ಎಂದು ಕರ್ನಾಟಕ ಕೃಷಿ ಬೆಲೆ ಆಯೋಗದ ಮಾಜಿ ಅಧ್ಯಕ್ಷರು ಹೇಳಿದ್ದಾರೆ.

ಈ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿರುವ ಕೃಷಿ ಅರ್ಥಶಾಸ್ತ್ರಜ್ಞ ಪ್ರಕಾಶ್ ಕಮ್ಮರಡಿ ಅವರು, ಸರ್ಕಾರಕ್ಕೆ ಅಗತ್ಯವಿರುವಷ್ಟು ರಾಗಿ ಮತ್ತು ಜೋಳವನ್ನು ತಕ್ಷಣವೇ ಪಡೆಯಲು ಸಾಧ್ಯವಾಗದಿರಬಹುದು. ಆದರೆ ಅಕ್ಕಿ ಬದಲು ರಾಗಿ ಜೋಳ ನೀಡಬಹುದು ಎಂದು ಹೇಳಿದ್ದಾರೆ.
ರೈತರು ಈಗ ಬಿತ್ತನೆ ಆರಂಭಿಸಿದ್ದು, ಎರಡು ಬೆಳೆಗಳನ್ನು ಇನ್‌ಪುಟ್ ವೆಚ್ಚಕ್ಕಿಂತ ಶೇ.50ಕ್ಕಿಂತ ಹೆಚ್ಚಿನ ದರದಲ್ಲಿ ಖರೀದಿಸುವುದಾಗಿ ಸರ್ಕಾರ ಭರವಸೆ ನೀಡಿದರೆ, ಉತ್ಪನ್ನ ಹೆಚ್ಚಲಿದೆ. ಆಯೋಗವು 2014 ರಲ್ಲಿ ನಡೆಸಿದ ವಿಸ್ತೃತ ಅಧ್ಯಯನವನ್ನು ಉಲ್ಲೇಖಿಸಿ, ಸರ್ಕಾರವು ರಾಗಿಗೆ ರೂ 50/ಕೆಜಿ ಮತ್ತು ಜೋಳಕ್ಕೆ ರೂ 43/ಕೆಜಿ ನೀಡಬೇಕಾಗಬಹುದು ಎಂದು ಹೇಳಿದ್ದಾರೆ.
ಆದಾಗ್ಯೂ, ಕೇಂದ್ರದಿಂದ ಖರೀದಿಸಿದ ಅಕ್ಕಿಯ ನೈಜ ಆರ್ಥಿಕ ವೆಚ್ಚವು ಕೆಜಿಗೆ 43 ರೂ.ಗಳನ್ನು ಪರಿಗಣಿಸಿ ಇದು ದುಬಾರಿ ವ್ಯವಹಾರವಲ್ಲ. ಜತೆಗೆ ಸಾರಿಗೆ ವೆಚ್ಚವನ್ನು ಕರ್ನಾಟಕ ಭರಿಸಬೇಕಿದೆ. ಸಾರ್ವಜನಿಕ ವಿತರಣಾ ಯೋಜನೆಯಡಿ (ಪಿಡಿಎಸ್) ವಿತರಿಸುವ ಅಕ್ಕಿಯನ್ನು ಕಾಳಸಂತೆಯಲ್ಲಿ ಮಾರಾಟ ಮಾಡಲಾಗುತ್ತಿದೆ ಎಂದು ಕಮ್ಮರಡಿ ಅವರು ತಿಳಿದಸಿದ್ದಾರೆ.
ರಾಜ್ಯದಲ್ಲಿ ಹಸಿವಿಗಿಂತ ಅಪೌಷ್ಟಿಕತೆಯೇ ದೊಡ್ಡ ಸಮಸ್ಯೆಯಾಗಿದ್ದು, ಈ ಬಗ್ಗೆ 2011ರಲ್ಲಿ ಹೈಕೋರ್ಟ್ ಸೂಚನೆ ನೀಡಿತ್ತು. ಈ ಸಮಸ್ಯೆಗಳನ್ನು ಗಮನದಲ್ಲಿಟ್ಟುಕೊಂಡು ಸರ್ಕಾರ ದಕ್ಷಿಣ ಕರ್ನಾಟಕಕ್ಕೆ 5 ಕೆಜಿ ರಾಗಿ ಮತ್ತು ಉತ್ತರ ಕರ್ನಾಟಕಕ್ಕೆ 5 ಕೆಜಿ ಜೋಳವನ್ನು ವಿತರಿಸುವುದು ಉತ್ತಮ ಎಂದು ಅವರು ಸಲಹೆ ನೀಡಿದ್ದಾರೆ.
ಬಿಜೆಪಿಯ ಹೀನ ರಾಜಕೀಯವು ಬಡವರ ತಟ್ಟೆಯ ಅನ್ನಕ್ಕೂ ವ್ಯಾಪಿಸಿರುವುದು ದುರಂತ. FCI ಗೋದಾಮುಗಳು ಕರ್ನಾಟಕದಲ್ಲೇ ಇವೆ, FCI ನಿಂದ ಅಕ್ಕಿ ಖರೀದಿಸುವುದಾದರೆ ಸಾಗಣೆ ವೆಚ್ಚ ಹಾಗೂ ಸಮಯ ಉಳಿಯಲಿದೆ. ಇತರ ರಾಜ್ಯಗಳಿಂದ ತರಿಸುವುದಾದರೆ ಸಾಗಣೆಯ ದರ ಹಾಗೂ ಸಮಯ ಹೆಚ್ಚಲಿದೆ. ನಮ್ಮ ಗ್ಯಾರಂಟಿಗಳ ಯಶಸ್ಸನ್ನು ತಡೆಯುವ ಬಿಜೆಪಿಯ ಕುತಂತ್ರವು ರಾಜ್ಯಕ್ಕೆ ಹೊರೆಯಾಗಿ ಪರಿಣಮಿಸಿದೆ ಎಂದು ಕಾಂಗ್ರೆಸ್ ಟ್ವೀಟ್ ಮಾಡಿದೆ.












Click it and Unblock the Notifications