ಸುಮಲತಾ ಪಕ್ಷೇತರ ಸ್ಪರ್ಧೆಯಿಂದ ಕಾಂಗ್ರೆಸ್‌ಗೆ ಹೆಚ್ಚು ಲಾಭ?
2024ರ ಲೋಕಸಭೆ ಚುನಾವಣೆಗೆ ಕೌಂಟ್‌ಡೌನ್ ಶುರುವಾಗಿರುವ ಬೆನ್ನಲ್ಲೇ ಹೊಸ, ಹೊಸ ವಿಚಾರಗಳು ಕೂಡ ಹೊರಬೀಳುತ್ತಿವೆ. ಅದರಲ್ಲೂ ಕರ್ನಾಟಕದ ಲೋಕಸಭೆ ಅಖಾಡದಲ್ಲಿ ಮತ್ತೆ ಮಂಡ್ಯ ಕ್ಷೇತ್ರ ಇಡೀ ದೇಶದ ಗಮನ ಸೆಳೆಯುತ್ತಿದೆ. ಯಾಕಂದ್ರೆ ಈ ಬಾರಿ, ಬಿಜೆಪಿ ಪಕ್ಷದಿಂದ ಟಿಕೆಟ್ ಗಿಟ್ಟಿಸಿಕೊಳ್ಳುವ ನಿರೀಕ್ಷೆಯಲ್ಲಿದ್ದ ಸುಮಲತಾ ಅವರಿಗೆ ಬಿಜೆಪಿ ಟಿಕೆಟ್ ಸಿಗುವುದು ಬಹುತೇಕ ಅನುಮಾನ ಎನ್ನಲಾಗುತ್ತಿದೆ. ಹೀಗಾಗಿ ಸುಮಲತಾ ಅವರು ಪಕ್ಷೇತರ ಅಭ್ಯರ್ಥಿಯಾಗಿ ನಿಂತರೆ ಲಾಭ ಯಾರಿಗೆ? ಬಿಜೆಪಿ ಅಥವಾ ಕಾಂಗ್ರೆಸ್? ಬನ್ನಿ ತಿಳಿಯೋಣ.
ಹೌದು ಒಂದ್ಕಡೆ ರಾಜ್ಯದಲ್ಲಿ ಬಿಜೆಪಿ & ಜೆಡಿಎಸ್ ನಡುವೆ ಮೈತ್ರಿ ಬಗ್ಗೆ ಚರ್ಚೆ ನಡೆಯುವಾಗಲೇ ಮಂಡ್ಯ ಸಂಸದೆ ಸುಮಲತಾ ಅವರ ಮಾತು ಸಂಚಲನ ಸೃಷ್ಟಿಸುತ್ತಿದೆ. 2024 ರ ಲೋಕಸಭೆಗೆ ಕರ್ನಾಟಕದಲ್ಲಿ ಕಾಂಗ್ರೆಸ್ ಎದುರಿಸಲು ಬಿಜೆಪಿ-ಜೆಡಿಎಸ್ ಮೈತ್ರಿ ಮಾಡಿಕೊಂಡಿವೆ. ಮೈತ್ರಿಯ ಭಾಗವಾಗಿ ಹಳೇ ಮೈಸೂರು ಭಾಗದಲ್ಲಿನ ಕ್ಷೇತ್ರಗಳನ್ನು ಪಡೆಯಲು ಈಗ ಜೆಡಿಎಸ್ ಬಿಗಿಪಟ್ಟು ಹಿಡಿದಿದೆ. ಹೀಗಾಗಿ ಮಂಡ್ಯ, ಹಾಸನ, ಬೆಂಗಳೂರು ಗ್ರಾಮಾಂತರ, ಮೈಸೂರು ಕ್ಷೇತ್ರಗಳನ್ನು ಉಳಿಸಿಕೊಳ್ಳಲು ಲಾಭಿ ಆರಂಭಿಸಿದೆ. ಹೀಗಿದ್ದಾಗ ಸುಮಲತಾ ಅಂಬರೀಶ್ ಅವರು ಮಂಡ್ಯ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಅಖಾಡ ಪ್ರವೇಶ ಮಾಡುವುದು ಬಹುತೇಕ ಗ್ಯಾರಂಟಿ ಆಗುತ್ತಿದೆ.

ಕಾಂಗ್ರೆಸ್‌ಗೆ ಭರ್ಜರಿ ಲಾಭವಾಗುತ್ತಾ?
ಮಂಡ್ಯ ಲೋಕಸಭಾ ಕ್ಷೇತ್ರದ ಹಾಲಿ ಸಂಸದೆ ಸುಮಲತಾ ಅವರು ಯಾವ ಕಾರಣಕ್ಕೂ ಮಂಡ್ಯ ಕ್ಷೇತ್ರವನ್ನು ತಾವು ಬಿಟ್ಟುಕೊಡಲ್ಲ ಅಂತಿದ್ದಾರೆ. ಅಲ್ಲದೆ, ಕರ್ನಾಟಕ ವಿಧಾನಸಭೆ ಚುನಾವಣೆ ಸಮಯದಲ್ಲಿ ಬಿಜೆಪಿಗೆ ಸಪೋರ್ಟ್ ಮಾಡಿದ್ದೇನೆ. ಬಿಜೆಪಿ ಅಭ್ಯರ್ಥಿಗಳನ್ನು ನಾನು ಬೆಂಬಲಿಸಿ ಚುನಾವಣೆಯಲ್ಲಿ ಓಡಾಡಿದ್ದೇನೆ. ಈ ಎಲ್ಲಾ ಕಾರಣಕ್ಕೆ ಬಿಜೆಪಿ ಪರ ನಿಂತ ನನಗೆ ಮಂಡ್ಯ ಕ್ಷೇತ್ರ ಬಿಟ್ಟುಕೊಡುವ ಆಯ್ಕೆ ಇಲ್ಲ ಅಂತಿದ್ದಾರೆ. ಅಲ್ಲದೆ ಬಿಜೆಪಿ ನಾಯಕರು ತಮಗೇ ಈ ಬಾರಿ, ಮಂಡ್ಯ ಲೋಕಸಭೆ ಟಿಕೆಟ್ ನೀಡಲಿದ್ದಾರೆ ಅಂತಿದ್ದಾರೆ ಸುಮಲತಾ ಅವರು. ಹೀಗಿದ್ದಾಗಲೇ ಸುಮಲತಾ ಅವರು ಪಕ್ಷೇತರ ಅಭ್ಯರ್ಥಿಯಾದರೆ ಬಿಜೆಪಿಗೆ ಲಾಭವಾಗುತ್ತಾ? ಕಾಂಗ್ರೆಸ್ ಇದರ ಲಾಭ ಪಡೆಯುತ್ತಾ? ಎಂಬ ಚರ್ಚೆ ಶುರುವಾಗಿದೆ.
2019ರ ಹೋರಾಟ ಮತ್ತೊಮ್ಮೆ ರಿಪೀಟ್?
ಈಗಿನ ಪರಿಸ್ಥಿತಿ ನೋಡುತ್ತಿದ್ದರೆ, 2019ರ ಹೋರಾಟ ಮರುಕಳಿಸುವ ಲಕ್ಷಣ ಕಾಣುತ್ತಿದ್ದು. 2019ರ ಲೋಕಸಭೆ ಚುನಾವಣೆಯಲ್ಲಿ ಜೆಡಿಎಸ್ & ಕಾಂಗ್ರೆಸ್ ಮೈತ್ರಿ ಮಾಡಿಕೊಂಡು ಅಖಾಡಕ್ಕೆ ಇಳಿದಿದ್ದವು. 2019 ರಲ್ಲಿ ಮಂಡ್ಯ ಕ್ಷೇತ್ರದಿಂದ, ಮಾಜಿ ಸಿಎಂ ಕುಮಾರಸ್ವಾಮಿರ ಪುತ್ರ ನಿಖಿಲ್ ಜೆಡಿಎಸ್ & ಕಾಂಗ್ರೆಸ್ ಪಕ್ಷದ ಮೈತ್ರಿ ಅಭ್ಯರ್ಥಿ ಆಗಿದ್ದರು. ಬಿಜೆಪಿ ಆಗ ಅಭ್ಯರ್ಥಿ ಹಾಕಿರಲಿಲ್ಲ. ಆದರೆ ಈ ಬಾರಿ ಮಂಡ್ಯ ಕ್ಷೇತ್ರವನ್ನು ಬಿಜೆಪಿ ಇದೀಗ ಜೆಡಿಎಸ್ ಪಾಲಿಗೆ ಬಿಟ್ಟುಕೊಡತ್ತದೆ ಎನ್ನಲಾಗುತ್ತಿದೆ. ಹೀಗಾಗಿ ಸುಮಲತಾ ಅವರು ಪಕ್ಷೇತರ ಅಭ್ಯರ್ಥಿಯಾಗಿ ನಿಂತರೆ, ಇದಕ್ಕೆ ಪರ್ಯಾಯವಾಗಿ ಕಾಂಗ್ರೆಸ್ ಈ ಪರಿಸ್ಥಿತಿಯ ಲಾಭವನ್ನ ಪಡೆಯುವ ಸಾಧ್ಯತೆ ದಟ್ಟವಾಗಿದೆ.

ಜೆಡಿಎಸ್ ಎದುರು ದೊಡ್ಡ ಸವಾಲು!
ಬಿಜೆಪಿ ಈಗ ನೇರವಾಗಿ ಜೆಡಿಎಸ್ ಪಕ್ಷಕ್ಕೆ ಮಂಡ್ಯ ಲೋಕಸಭಾ ಕ್ಷೇತ್ರವನ್ನು ಬಿಟ್ಟುಕೊಟ್ಟರೂ ಗೆಲುವು ಸಾಧಿಸಲು ಜೆಡಿಎಸ್ ಪರದಾಡಬೇಕಿದೆ. ಹೀಗಾಗಿ ಕಾಂಗ್ರೆಸ್ ಕೂಡ ಮಂಡ್ಯದಲ್ಲಿನ ತನ್ನ ಅಸ್ತಿತ್ವ ಮತ್ತು ಹಿಡಿತವನ್ನ ಇನ್ನಷ್ಟು ಬಲಪಡಿಸುತ್ತಿದೆ. ಇದೆಲ್ಲವನ್ನೂ ನೋಡುತ್ತಿದ್ದರೆ ಸುಮಲತಾ ಅವರ ಪಕ್ಷೇತರ ಸ್ಪರ್ಧೆಯ ಲಾಭ ಕಾಂಗ್ರೆಸ್‌ಗೆ ಆಗಬಹುದು ಎನ್ನಲಾಗುತ್ತಿದೆ. ಮತ್ತೊಂದು ಕಡೆ ಕಾಂಗ್ರೆಸ್ ಪರವಾಗಿ ಘಟಾನುಘಟಿ ಟಿಕೆಟ್ ಆಕಾಂಕ್ಷಿಗಳು, ಚುನಾವಣೆಗೆ ಸ್ಪರ್ಧೆ ಮಾಡಲು ಟಿಕೆಟ್ ಬೇಕು ಅಂತಿದ್ದಾರೆ. ಈ ಮೂಲಕ ಬಿಜೆಪಿ ಹಾಗೂ ಜೆಡಿಎಸ್‌ನ ಅಭ್ಯರ್ಥಿಗಳನ್ನು ಎದುರಿಸಲು ಮಾನಸಿಕವಾಗಿ ಸಿದ್ಧರಾಗಿದ್ದಾರೆ.
ಈ ಮೂಲಕ ಮಂಡ್ಯ ಲೋಕಸಭೆ ಕ್ಷೇತ್ರ ಮತ್ತೊಮ್ಮೆ ರಂಗೇರಿದೆ. ಕಳೆದ ಬಾರಿ ಎಲೆಕ್ಷನ್‌ಗೆ ಜೆಡಿಎಸ್ & ಕಾಂಗ್ರೆಸ್ ಮೈತ್ರಿ ಇತ್ತು, ಆದ್ರೆ ಈ ಬಾರಿ ಕಾಂಗ್ರೆಸ್ ದೂರವಾಗಿದೆ. ಹೀಗಿದ್ದಾಗ ಬಿಜೆಪಿ ಮತ್ತು ಜೆಡಿಎಸ್ ನಡುವೆ ಮೈತ್ರಿ ಇದೆ. ಹೀಗಾಗಿ ಗೆಲುವು ಪಡೆಯಲು ಭರ್ಜರಿ ಫೈಟ್ ಗ್ಯಾರಂಟಿ ಎನ್ನಲಾಗುತ್ತಿದೆ.












Click it and Unblock the Notifications