Karnataka BJP: ಇವತ್ತೇ ಪಕ್ಷ ಬಿಟ್ಟು ಹೋಗಿ: ಸುಧಾಕರ್ ವಿರುದ್ಧ ಗುಡುಗಿದ ಬಿಜೆಪಿ ನಾಯಕ
ಬೆಂಗಳೂರು, ಜನವರಿ 31: ರಾಜ್ಯ ಬಿಜೆಪಿಯಲ್ಲಿ ಬಣ ಬಡಿದಾಟ ಜೋರಾಗಿದೆ. ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಅವರ ವಿರುದ್ಧ ಹಲವು ಸಮುದಾಯದ ನಾಯಕರು ಬಹಿರಂಗವಾಗಿ ಅಸಮಾಧಾನ ಹೊರಹಾಕಿದ್ದು, ರಾಜ್ಯಾಧ್ಯಕ್ಷರ ಬದಲಾವಣೆಗೆ ಹೈಕಮಾಂಡ್ ನಾಯಕರನ್ನ ಭೇಟಿ ಮಾಡುವುದಾಗಿ ಸಂಸದ ಸುಧಾಕರ್ ಅವರು ಬಹಿರಂಗವಾಗಿ ಅಸಮಾಧಾನವನ್ನ ವ್ಯಕ್ತಪಡಿಸಿದ್ದಾರೆ.
ಡಾ.ಕೆ.ಸುಧಾಕರ್ ಅವರು ಪಕ್ಷದ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಬೆನ್ನಲ್ಲೇ ಪಕ್ಷದ ಕೆಲ ಮುಖಂಡರು ವಿಜಯೇಂದ್ರ ಬೆಂಬಲಕ್ಕೆ ನಿಂತಿದ್ದು, ಸಂಸದ ಡಾ. ಕೆ ಸುಧಾಕರ್ ವಿರುದ್ಧ ಗುಡುಗಿದ್ದಾರೆ. ಹೋಗುವ ಹಾಗಿದ್ರೆ ಇವತ್ತೇ ಪಕ್ಷ ಬಿಟ್ಟು ಹೋಗಿ, ಪಕ್ಷ ಶುದ್ಧವಾಗಲಿ, ಹೋಗೋರೆಲ್ಲ ಹೋಗಲಿ ಎಂದು ಯಲಹಂಕ ಬಿಜೆಪಿ ಶಾಸಕ ಎಸ್‌ಆರ್ ವಿಶ್ವನಾಥ್ ವಾಗ್ದಾಳಿ ನಡೆಸಿದ್ದಾರೆ.

ಸಮರ್ಥ ಸಚಿವ ಅನಿಸಿಕೊಂಡ ಮೇಲೆ ಚಿಕ್ಕಬಳ್ಳಾಪುರ ಯಾಕೆ ಸೋತರು? ಚಿಕ್ಕಬಳ್ಳಾಪುರದಲ್ಲಿ ಒಳ್ಳೇ ಕೆಲಸ ನೀವು ಮಾಡಿದ್ದರೆ ಜನ ಯಾಕೆ ನಿಮ್ಮನ್ನ ಸೋಲಿಸುತ್ತಿದ್ದರು? ಸಂಸದ ಸ್ಥಾನದ ಟಿಕೆಟ್ ಸಿಗಲ್ಲ ಎಂದಾಗ ಏನೇನು ಮಾತಾಡಿದ್ದಿರಿ? ಕಾಂಗ್ರೆಸ್‌ನವರ ಜೊತೆ ಆಗ ನೀವು ಮಾತಾಡಲಿಲ್ಲವಾ? ಆಗ ನಿಮಗೆ ಪಕ್ಷ ನಿಷ್ಠೆ ಇತ್ತಾ? ನೀವು ಕಾಂಗ್ರೆಸ್ ಜೊತೆಗೆ ಮಾತಾಡಲಿಲ್ಲ ಎಂದರೆ ಪ್ರಮಾಣ ಮಾಡಿ, ನಾನು ಪ್ರಮಾಣ ಮಾಡುತ್ತನೆಂದು ವಿಶ್ವನಾಥ್ ಸವಾಲು ಹಾಕಿದ್ದಾರೆ.
ಇನ್ನು ಸುಧಾಕರ್ ರಾಜ್ಯಾಧ್ಯಕ್ಷರ ಬಗ್ಗೆ ಹಗುರ ಮಾತಾಡಿರೋದು ನನಗೆ ಹಿಡಿಸಲಿಲ್ಲ. ಈ ಹಿಂದೆಯೂ ನನ್ನ ಬಗ್ಗೆ ಅವರು ಮಾತನಾಡಿದ್ದಾರೆ. ನಾನೇನು ದಡ್ಡ ಅಲ್ಲ, ನನಗೂ ಅರ್ಥ ಆಗುತ್ತೆ. ಅವರಿಂದ ಸರ್ಕಾರ ರಚನೆ ಆಗಿರಬಹುದು, ಆದರೆ, 17 ಜನರಲ್ಲಿ ಕೊನೆಯದಾಗಿ ಬಂದವರು ಸುಧಾಕರ್. ಅವರ ಮೇಲೆ ವಿಧಾನಸೌಧದಲ್ಲಿ ಹಲ್ಲೆ ನಡೆದಾಗ ನಾನೇ ಹೋಗಿ ಬಚಾವ್ ಮಾಡಿದ್ದೆ ಎಂದು ಹೇಳಿದರು.
ಬಿಜೆಪಿ ಜಿಲ್ಲಾಧ್ಯಕ್ಷರ ಆಯ್ಕೆ ವಿಚಾರವಾಗಿ ಮಾಧ್ಯಮಗಳ ಪ್ರಶ್ನೆಗೆ ಎಸ್ ಆರ್ ವಿಶ್ವನಾಥ್ ಅವರು ಉತ್ತರಿಸಿದ್ದು, ಜಿಲ್ಲಾಧ್ಯಕ್ಷರ ಆಯ್ಕೆ ವಿಚಾರದಲ್ಲಿ ಜಿಲ್ಲೆಗೆ ತಲಾ ಮೂರು ಹೆಸರು ಕಳಿಸಲಾಗಿತ್ತು. ಈ ಪೈಕಿ ಸಂದೀಪ್ ರೆಡ್ಡಿ ಆಯ್ಕೆ ಆಗಿದ್ದಾರೆ. ಅವರು ನಿನ್ನ ಬಂಧುವೂ ಅಲ್ಲ, ನನ್ನ ಸಂಬಂಧಿಯೂ ಅಲ್ಲ. ಏನ್ ತೀರ್ಮಾನ ತಗೋತೀರಿ, ಪಕ್ಷ ಬಿಡ್ತೀರಾ? ನಿನಗೆ ತಾಕತ್ತಿದ್ದರೆ ಪಕ್ಷ ಬಿಟ್ಟು ಚುನಾವಣೆ ಎದುರಿಸಿ, ನಮ್ಮ ಬಗ್ಗೆ, ಯಲಹಂಕ ಕಾರ್ಯಕರ್ತರ ಬಗ್ಗೆ ಗೌರವ ಇಟ್ಟುಕೊಂಡು ಮಾತನಾಡೇಕು. ಅದನ್ನು ಬಿಟ್ಟು ನಮ್ಮ ಕ್ಷೇತ್ರದಲ್ಲಿ ಮುಖಂಡರನ್ನ ಎತ್ತಿ ಕಟ್ಟುವ ಕೆಲಸ ಮಾಡಬೇಡಿ ಎಂದು ಮಾಜಿ ಸಚಿವ ಹಾಗೂ ಸಂಸದ ಸುಧಾಕರ್ ಕುರಿತು ಎಸ್ ಆರ್ ವಿಶ್ವನಾಥ್ ಅವರು ವಾಗ್ದಾಳಿ ನಡೆಸಿದ್ದಾರೆ.
40 ವರ್ಷದಿಂದ ಬಿಜೆಪಿ ಪಕ್ಷದಲ್ಲಿದ್ದವರು ನಾವು. ನಾವೇ ಮೌನವಾಗಿದ್ದೇವೆ. ಬಾಗೇಪಲ್ಲಿ, ಹೊಸಕೋಟೆ, ದೇವನಹಳ್ಳಿಯಲ್ಲಿ ನೀನು ಕಾಂಗ್ರೆಸ್‌ಪರ ಕೆಲಸಮಾಡಿದ್ದೀಯ. ಬಿಜೆಪಿ ಪಕ್ಷ ತಾಯಿ ಇದ್ದ ಹಾಗೆ. ಇದ್ದರೆ ಪಕ್ಷದಲ್ಲಿ ಇರು, ಇಲ್ಲ ಹೋಗು. ಕಾಂಗ್ರೆಸ್‌ಗೆ ಹೋದ್ರೇ ಸ್ಥಾನಮಾನ ಸಿಕ್ಕಿಬಿಡುತ್ತಾ? ಎಂದು ಪ್ರಶ್ನಿಸಿದ ಅವರು, ನಿಮ್ಮ ದುರಹಂಕಾರದಿಂದ ಪಕ್ಷ ಅಧಿಕಾರಕ್ಕೆ ಬರದಂತೆ ಮಾಡಿದ್ದು ನೀವು. ಪಕ್ಷದಲ್ಲಿ ಏನೇ ಭಿನ್ನಾಭಿಪ್ರಾಯ ಇದ್ದರೂ ವರಿಷ್ಠರ ಬಳಿ ಮಾತಾಡಬೇಕು ಎಂದು ಮಾಜಿ ಸಚಿವ ಡಾ. ಸುಧಾಕರ್ ಅವರ ವಿರುದ್ಧ ಕಿಡಿಕಾರಿದರು.












Click it and Unblock the Notifications