ಪ್ರಜ್ವಲ್ ಎಂಪಿ ಸೀಟ್ ರದ್ದಾದರೆ, ಭವಾನಿ ರೇವಣ್ಣ ಸ್ಪರ್ಧೆ... Prajwal Revanna
ರಾಜ್ಯ ರಾಜಕಾರಣದಲ್ಲಿ ದೊಡ್ಡಗೌಡರು ಎಂದು ಕರೆಸಿಕೊಂಡಿರುವ ಮಾಜಿ ಪ್ರಧಾನಿ, ಜೆಡಿಎಸ್ ನೇತಾರ ಹೆಚ್.ಡಿ.ದೇವೇಗೌಡರ ಮೊಮ್ಮಗ ಪ್ರಜ್ವಲ್ ರೇವಣ್ಣ ಮಹಿಳೆಯ ಮೇಲಿನ ಅತ್ಯಾಚಾರ ಕೇಸ್‌ನಲ್ಲಿ ಅಪರಾಧಿಯಾಗಿದ್ದಾರೆ. ಹಾಸನ ಲೋಕಸಭಾ ಕ್ಷೇತ್ರದ ಜೆಡಿಎಸ್ ಮಾಜಿ ಸಂಸದರಾಗಿದ್ದ ಪ್ರಜ್ವಲ್ ಕಳೆದ ಚುನಾವಣೆಯಲ್ಲಿ ಇದೇ ಆರೋಪಗಳಿಂದಾಗಿ ಸೋಲುಂಡರು ಎನ್ನುವ ಮಾತಿದೆ. ಚುನಾವಣೆ ಸಂದರ್ಭದಲ್ಲೇ ಪ್ರಜ್ವಲ್ ಅವರ ಅಶ್ಲೀಲ ವಿಡಿಯೋಗಳ ಪೆನ್‌ಡ್ರೈವ್ ಎಲ್ಲೆಡೆ ಹರಿದಾಡಿತ್ತು. ಜೆಡಿಎಸ್ ಭದ್ರಕೋಟೆಯಾದ ಹಾಸನದಲ್ಲೇ ಪ್ರಜ್ವಲ್ ಸೋಲು ಕಂಡರು. ಬಳಿಕ ಈ ಕೇಸ್‌ನಲ್ಲಿ ಅರೆಸ್ಟ್ ಆಗಿ ಜೈಲು ಸೇರಿದರು. ಆದರೆ ಕೋರ್ಟ್ ಈ ಕೇಸ್‌ನಲ್ಲಿ ಪ್ರಜ್ವಲ್ ದೋಷಿ ಎಂದು ತೀರ್ಪು ನೀಡಿದ್ದು, ಭಾರೀ ಪ್ರಮಾಣದ ಶಿಕ್ಷೆ ಪ್ರಕಟಿಸಲಿದೆ ಎಂದು ಹೇಳಲಾಗುತ್ತಿದೆ. ಹಾಗಾಗಿ ಮುಂದಿನ ಚುನಾವಣೆಯಲ್ಲಿ ಪ್ರಜ್ವಲ್ ಬದಲಿಗೆ ಅವರ ತಾಯಿ ಭವಾನಿ ರೇವಣ್ಣ ಅವರಿಗೆ ಎಂಪಿ ಟಿಕೆಟ್ ಸಿಗಲಿದೆ ಎಂಬ ಚರ್ಚೆಗಳು ಶುರುವಾಗಿವೆ.
ತಮ್ಮ ಮೊಮ್ಮಗನ ರಾಜಕೀಯ ಭವಿಷ್ಯಕ್ಕಾಗಿ ದೇವೇಗೌಡರು ಹಾಸನದ ಎಂಪಿ ಸೀಟನ್ನು ಬಿಟ್ಟುಕೊಟ್ಟಿದ್ದರು. ಬಳಿಕ ಪ್ರಜ್ವಲ್ ಗೆದ್ದು ಲೋಕಸಭೆಯಲ್ಲೂ ಅಬ್ಬರಿಸಿದ್ದರು. ಕಳೆದ ವರ್ಷ ನಡೆದ ಲೋಕಸಭೆ ಚುನಾವಣೆಯಲ್ಲೂ ಜೆಡಿಎಸ್-ಬಿಜೆಪಿ ಮೈತ್ರಿ ಅಭ್ಯರ್ಥಿಯಾಗಿ ಪ್ರಜ್ವಲ್ ಹಾಸನದಿಂದಲೇ ಕಣಕ್ಕಿಳಿದಿದ್ದರು. ಆದರೆ ಅದೇ ವೇಳೆ ಪ್ರಜ್ವಲ್ ರೇವಣ್ಣ ಮೇಲೆ ಗಂಭೀರ ಆರೋಪ ಕೇಳಿಬಂತು. ಹಲವು ಮಹಿಳೆಯರ ಮೇಲೆ ಪ್ರಜ್ವಲ್ ಬಲಾತ್ಕಾರ, ಲೈಂಗಿಕ ಕಿರುಕುಳ, ದೌರ್ಜನ್ಯ ಎಸಗಿದ್ದಾರೆ ಎನ್ನುವುದು ಮಾತ್ರವಲ್ಲದೆ ಇದಕ್ಕೆ ಸಂಬಂಧಿಸಿದ ಅಶ್ಲೀಲ ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡಿದ್ದವು.

ಬಳಿಕ ಪ್ರಜ್ವಲ್ ರೇವಣ್ಣ ವಿರುದ್ಧ ಹಲವು ಪ್ರಕರಣಗಳು ದಾಖಲಾಗಿದ್ದವು. ಲೋಕಸಭೆ ಚುನಾವಣೆಯ ಸಂದರ್ಭದಲ್ಲೇ ಪ್ರಜ್ವಲ್ ರಾಸಲೀಲೆ ಎನ್ನುವ ವಿಡಿಯೋಗಳುಳ್ಳ ಪೆನ್‌ಡ್ರೈವ್‌ಗಳು ಹಾಸನ ಮತದಾರರ ಕೈಸೇರಿತ್ತು. ಇದನ್ನು ಜನ ಬೆಚ್ಚಿಬಿದ್ದಿದ್ದರು. ಇದು ಆಗ ಎದುರಾಳಿ ಪಕ್ಷದವರು ಮಾಡಿದ ಕೃತ್ಯ ಎಂಬ ಆರೋಪವೂ ಕೇಳಿಬಂತು. ಹಾಸನದಲ್ಲಿ ಸೋಲಿಲ್ಲದ ಸರದಾರ ಎನಿಸಿಕೊಂಡಿದ್ದ ಜೆಡಿಎಸ್‌ಗೆ ಪ್ರಜ್ವಲ್ ವಿಚಾರದಿಂದಾಗಿ ಸೋಲು ಕಾಣುವಂತಾಯಿತು. ಕೊನೆಗೆ ಕಾಂಗ್ರೆಸ್ ಅಭ್ಯರ್ಥಿ ಶ್ರೇಯಸ್ ಪಟೇಲ್ ಹಾಸನ ಸಂಸದರಾಗುವಲ್ಲಿ ಯಶಸ್ವಿಯಾದರು.
ಪ್ರಜ್ವಲ್ ಮೇಲೆ ಈ ಗಂಭೀರ ಆರೋಪ ಕೇಳಿಬಂದ ಹಿನ್ನೆಲೆ ಜೆಡಿಎಸ್‌ನಿಂದ ಉಚ್ಛಾಟನೆ ಮಾಡಲಾಯಿತು. ಹಾಗಾಗಿ ಚುನಾವಣೆಯಲ್ಲಿ ಸೋಲು ಕಂಡಿದ್ದು, ಒಂದೆಡೆಯಾದರೆ ಜೆಡಿಎಸ್‌ನ ಅಭ್ಯರ್ಥಿಯೂ ಇಲ್ಲವಾಯ್ತು. ಒಂದು ವೇಳೆ ಪ್ರಜ್ವಲ್ ಈ ಪ್ರಕರಣದಿಂದ ಹೊರಬಂದರೆ ಮುಂದಿನ ಚುನಾವಣೆಯಲ್ಲಿ ಮತ್ತೆ ಜೆಡಿಎಸ್‌ನಿಂದ ನಿಲ್ಲಿಸಿ, ಸಂಸದರನ್ನಾಗಿ ಮಾಡಬೇಕು ಎಂದುಕೊಂಡಿತ್ತು ಜೆಡಿಎಸ್. ಆದರೆ ಪ್ರಜ್ವಲ್ ಈಗ ಅತ್ಯಾಚಾರ ಕೇಸ್‌ನಲ್ಲಿ ದೋಷಿ ಎಂದು ತೀರ್ಪು ಬಂದಿದೆ. ಹೀಗಾಗಿ ಪ್ರಜ್ವಲ್ ಇನ್ನೂ ಹಲವು ವರ್ಷಗಳ ಕಾಲ ಜೈಲಿನಿಂದ ಹೊರಬರಲ್ಲ ಎನ್ನುವ ಮಾತುಗಳು ಕೇಳಿಬರುತ್ತಿವೆ. ಹೀಗಾಗಿ ಮುಂದೆ ಹಾಸನದಿಂದ ದೇವೇಗೌಡರ ಸೊಸೆ ಹಾಗೂ ಪ್ರಜ್ವಲ್ ತಾಯಿ ಭವಾನಿ ರೇವಣ್ಣ ಅವರನ್ನೇ ಎಂಪಿ ಅಭ್ಯರ್ಥಿಯಾಗಿ ನಿಲ್ಲಿಸಲು ತಯಾರಿ ನಡೆದಿದೆ ಎಂದು ಹೇಳಲಾಗುತ್ತಿದೆ.
ಹಾಸನದ ಮೇಲೆ ಮತ್ತೆ ಹಿಡಿತ?
ಹಾಸನ ಕ್ಷೇತ್ರದಲ್ಲಿ ಹೆಚ್.ಡಿ.ರೇವಣ್ಣ ಹಾಗೂ ದೇವೇಗೌಡರ ಹಿಡಿತ ಇರುವುದರಿಂದ ಪ್ರಜ್ವಲ್ ಅವರು ಸುಲಭವಾಗಿ ಗೆದ್ದು ಸಂಸದರಾಗಿದ್ದರು ಎನ್ನುವ ಮಾತಿದೆ. ಇದೀಗ ಹಾಸನ ಎಂಪಿ ಸ್ಥಾನ ಕಾಂಗ್ರೆಸ್‌ನ ಪಾಲಾಗಿದೆ. ಮುಂದಿನ ಚುನಾವಣೆಯಲ್ಲಿ ಮತ್ತೆ ಜೆಡಿಎಸ್ ಅನ್ನು ಅಧಿಕಾರಕ್ಕೆ ತರಬೇಕು ಎನ್ನುವ ರಣತಂತ್ರ ಮಾಡಲಾಗುತ್ತಿದೆ. ಸದ್ಯ ರೇವಣ್ಣ ಶಾಸಕರಾಗಿದ್ದಾರೆ, ದೇವೇಗೌಡರು ಚುನಾವಣೆ ಸ್ಪರ್ಧೆಯಿಂದ ಹಿಂದೆ ಸರಿದಿದ್ದಾರೆ. ಇತ್ತ ಪ್ರಜ್ವಲ್ ರೇವಣ್ಣಗೆ ಜೈಲುವಾಸ ಮುಂದುವರಿಯುವುದರಿಂದ ಭವಾನಿ ರೇವಣ್ಣ ಅವರೇ ಮುಂದಿನ ಹಾಸನ ಎಂಪಿ ಅಭ್ಯರ್ಥಿ ಎಂದು ಲೆಕ್ಕಚಾರ ಮಾತುಗಳು ರಾಜ್ಯ ರಾಜಕೀಯ ವಲಯದಲ್ಲಿ ಕೇಳಿಬರುತ್ತಿವೆ.












Click it and Unblock the Notifications