ಧರ್ಮಸ್ಥಳ ಪ್ರಕರಣ: "ಸರ್ಕಾರ ಆ ಒಂದು ಕೆಲಸ ಮಾಡಿದ್ದರೆ ಇಷ್ಟು ಗೊಂದಲ ಆಗುತ್ತಿರಲಿಲ್ಲ"
ಧರ್ಮಸ್ಥಳದಲ್ಲಿ ನಡೆದಿದೆ ಎನ್ನಲಾದ ಹತ್ಯೆ ಪ್ರಕರಣಗಳಿಗೆ ಸಂಬಂಧಿಸಿದ ವಿಚಾರವು ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ಯಾವುದು ಸತ್ಯ ಹಾಗೂ ಯಾವುದು ಸುಳ್ಳು ಎಂದು ತಿಳಿದುಕೊಳ್ಳಲು ಆಗದಷ್ಟು ಜನ ಗೊಂದಲಕ್ಕೆ ಒಳಗಾಗಿದ್ದಾರೆ. ಎಲ್ಲಾ ಸತ್ಯವೂ ಹೊರಗೆ ಬರುತ್ತಿದೆ ಎನ್ನುವ ಮಾತು ಈಗ ಕೇಳಿ ಬರುತ್ತಿದೆ. ಇದೇ ಸಂದರ್ಭದಲ್ಲಿ ಆ ಒಂದು ಕೆಲಸ ಮಾಡಿದ್ದಾರೆ. ಧರ್ಮಸ್ಥಳದ ವಿಷಯದಲ್ಲಿ ಇಷ್ಟೊಂದು ಗೊಂದಲ ಸೃಷ್ಟಿಯಾಗುತ್ತಿರಲಿಲ್ಲ ಎನ್ನುವ ಮಾತು ಕೇಳಿ ಬಂದಿದೆ.
ಈ ವಿಚಾರವಾಗಿ ಸೋಷಿಯಲ್ ಮೀಡಿಯಾ ಎಕ್ಸ್‌ನಲ್ಲಿ ಟ್ವೀಟ್ ಮಾಡಿರುವ ಬಿಜೆಪಿ, ಧರ್ಮಸ್ಥಳ ಕ್ಷೇತ್ರದ ಬುರುಡೆ ಪ್ರಸಂಗದ ಅಸಲಿಯತ್ತು ಬಯಲಾಗಿದೆ. ಧರ್ಮಸ್ಥಳದಲ್ಲಿ ಅಕ್ರಮವಾಗಿ ಶವಗಳನ್ನು ಹೂತಿಡಲಾಗಿದೆ ಎಂದು ಅನಾಮಿಕ ಅಪಾದಿಸಿದಾಗ ದೂರು ಕೊಟ್ಟಿದ್ದ ದೂರುದಾರನ ಹಿನ್ನೆಲೆ ತಿಳಿದುಕೊಂಡಿದ್ದರೆ ಶ್ರೀ ಕ್ಷೇತ್ರ ಧರ್ಮಸ್ಥಳದ ಮೇಲೆ ಕಪ್ಪು ಚುಕ್ಕೆ ಬರುತ್ತಿರಲಿಲ್ಲ.

ಧರ್ಮಸ್ಥಳ ಪ್ರಕರಣ ಆದಾಗಿನಿಂದ ಷಡ್ಯಂತ್ರ ಅಂತ ಬಿಜೆಪಿ ಹೇಳಿತ್ತು. ದ.ಕ. ಪೊಲೀಸ್ ಅಧಿಕಾರಿಗಳು ಮಾಸ್ಕ್ ಮ್ಯಾನ್‌ನ ವಿಚಾರಣೆಗೆ ಆರಂಭದಲ್ಲೇ ಮುಂದಾಗಿತ್ತು. ಆದರೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸರ್ಕಾರ ಎಡಪಂಥೀಯರ ಒತ್ತಡಕ್ಕೆ ಮಣಿದು ದೂರುದಾರನ ಹಿನ್ನೆಲೆ ಮತ್ತು ದೂರಿನ ಸತ್ಯಾಸತ್ಯತೆಯನ್ನು ಪರಿಶೀಲಿಸದೆ ಎಸ್‌ಐಟಿಗೆ ಒಪ್ಪಿಸಿತ್ತು.
ಸರ್ಕಾರದ ನಡೆಯಿಂದಾಗಿ ಅಂತರರಾಷ್ಟ್ರೀಯ ಮಾಧ್ಯಮದಲ್ಲಿ ಶ್ರೀ ಕ್ಷೇತ್ರದ ಕುರಿತು ಕಪೋಲಕಲ್ಪಿತ ವರದಿ ಪ್ರಕಟವಾದವು. ಸಾಮಾಜಿಕ ಜಾಲತಾಣದಲ್ಲಿ ನಿರಂತರ ಅಪಪ್ರಚಾರ ನಡೆದರೂ ಯಾವುದೇ ಕ್ರಮವನ್ನು ಸರ್ಕಾರ ತೆಗೆದುಕೊಳ್ಳಲಿಲ್ಲ. ಧರ್ಮಸ್ಥಳದ ಭಕ್ತರ ಭಾವನೆಗೆ ಇದರಿಂದ ಧಕ್ಕೆ ಬಂದಿದೆ. ರಾಜ್ಯ ಸರ್ಕಾರ ತನ್ನ ಆತುರದ ನಿರ್ಧಾರಕ್ಕೆ ನಾಡಿನ ಜನತೆಯಲ್ಲಿ ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿದೆ.
ಜಿ ಪರಮೇಶ್ವರ್ ಹೇಳಿದ್ದೇನು ?
ಇನ್ನು ಈ ವಿಚಾರವಾಗಿ ಮಾತನಾಡಿರುವ ಗೃಹ ಸಚಿವ ಜಿ. ಪರಮೇಶ್ವರ್ ಅವರು, ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್‌ಐಟಿ ತನಿಖೆ ನಡೆಯುತ್ತಿರುವುದರಿಂದ ಹೆಚ್ಚಿನ ಮಾಹಿತಿಯನ್ನು ಬಹಿರಂಗಪಡಿಸಲು ಸಾಧ್ಯವಿಲ್ಲ. ನೂರಾರು ಶವ ಹೂತು ಹಾಕಲಾಗಿದೆ ಎಂದು ಹೇಳಿಕೆ ನೀಡಿದ್ದ ಮುಸುಕುದಾರಿ ವ್ಯಕ್ತಿಯ ಹಿಂದಿರುವ ಸತ್ಯಾಂಶವನ್ನು ವಿಶೇಷ ತನಿಖಾ ತಂಡ ಬಯಲು ಮಾಡಲಿದೆ ಎಂದು ಹೇಳಿದ್ದಾರೆ.
ಇನ್ನು ಸುಜಾತಾ ಭಟ್ ಅವರ ಹೇಳಿಕೆ ವಿಚಾರವೂ ತನಿಖೆಯ ಹಂತದಲ್ಲಿದೆ. ಬಿಜೆಪಿ ಅವರ ಹೇಳಿಕೆಯ ಆಧಾರದ ಮೇಲೆ ತನಿಖೆ ಮಾಡಲು ಸಾಧ್ಯವಿಲ್ಲ ಎಂದೂ ಜಿ ಪರಮೇಶ್ವರ್ ಅವರು ಇದೇ ಸಂದರ್ಭದಲ್ಲಿ ಹೇಳಿದ್ದಾರೆ.
ಇನ್ನು ಧರ್ಮಸ್ಥಳದಲ್ಲಿ ಹಲವು ಶವಗಳನ್ನು ದಫನ್ ಮಾಡಿರುವುದಾಗಿ ನೀಡಿದ ಅನಾಮಿಕ ವ್ಯಕ್ತಿಯನ್ನು ಬಂಧಿಸಲಾಗಿದ್ದು. ಪೊಲೀಸ್ ಕಸ್ಟಡಿಯಲ್ಲಿದ್ದಾನೆ. ಪ್ರಕರಣದ ಹಿಂದೆ ಯಾವ ಜಾಲ ಇದೆ ಎನ್ನುವುದನ್ನು ಸಹ ಪತ್ತೆ ಮಾಡಲಾಗುವುದು. ಇನ್ನು ಎಸ್‌ಐಟಿಯ ತನಿಖೆ ಮುಕ್ತಾಯವಾಗಲಿದೆಯೇ ಎನ್ನುವುದನ್ನು ಈಗ ಬಹಿರಂಗಪಡಿಸುವುದಕ್ಕೆ ಸಾಧ್ಯವಿಲ್ಲ ಎಂದು ಅವರು ಇದೇ ಸಂದರ್ಭದಲ್ಲಿ ಹೇಳಿದ್ದಾರೆ.












Click it and Unblock the Notifications