ಬಿಜೆಪಿ ಅಧಿಕಾರಕ್ಕೆ ಬಂದರೆ ಮಹದಾಯಿ ವಿವಾದ ಪರಿಹಾರ: ಅಮಿತ್ ಶಾ
ಕಲಬುರಗಿ, ಫೆಬ್ರವರಿ 26: ಬಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರು ಕೊನೆಗೂ ಮಹದಾಯಿ ಬಗ್ಗೆ ಬಾಯಿ ಬಿಟ್ಟಿದ್ದಾರೆ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದರೆ ಮಹದಾಯಿ ವಿವಾದ ಪರಿಹರಿಸುತ್ತೇವೆ' ಎಂದು ಅವರು ಹೇಳಿದ್ದಾರೆ.
ಕಲಬುರಗಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು 'ಕರ್ನಾಟಕದ ಮುಖ್ಯಮಂತ್ರಿ ಸಕಾರಾತ್ಮಕವಾಗಿ ಸ್ಪಂದಿಸಿದ್ದರೆ ಮಹದಾಯಿ ವಿವಾದಕ್ಕೆ ಪರಿಹಾರ ದೊರೆಯುತ್ತಿತ್ತು. ಈಗಲೂ ವಿವಾದ ಕುರಿತು ಕೆಲವರ ವರ್ತನೆಯಲ್ಲಿ ಸಮಸ್ಯೆ ಇದೆ. ಹೀಗಾಗಿ ಅದು ಸಾಧ್ಯವಾಗಲಿಲ್ಲ' ಎಂದರು.
'ರಾಜ್ಯದ ಜನ ಬಿಜೆಪಿ ಮೇಲೆ ವಿಶ್ವಾಸವಿಟ್ಟು ಅಧಿಕಾರಕ್ಕೆ ತರಲಿ' ಎಂದು ಅವರು ಮನವಿ ಮಾಡಿದರು.

ಕೇಂದ್ರ ಸಚಿವ ಅನಂತ್‌ಕುಮಾರ್ ಹೆಗಡೆ ಅವರ ವಿವಾದಾತ್ಮಕ ಹೇಳಿಕೆಗಳು ಹಾಗೂ ಅದರಿಂದ ಪಕ್ಷಕ್ಕಾಗುತ್ತಿರುವ ಹಾನಿಯ ಬಗ್ಗೆ ಮಾತನಾಡಿದ ಅವರು ಸಕಾರಾತ್ಮಕ ಉತ್ತರವನ್ನು ನೀಡದೆ ಪ್ರಶ್ನೆ ಕೇಳಿದ ಮಾಧ್ಯಮದವರ ಮೇಲೆಯೇ ಜೋರು ಧನಿಯಲ್ಲಿ ತಿರುಗಿ ಪ್ರಶ್ನಿಸಿದರು.
ಮೊದಲಿಗೆ 'ಕೇಂದ್ರ ಸಚಿವ ಅನಂತಕುಮಾರ್ ಹೆಗಡೆ ಅವರ ಹೇಳಿಕೆಗೆ ನಮ್ಮ ಸಹಮತ ಇಲ್ಲ' ಎಂದ ಅವರು ಹೇಳಿಕೆಯಿಂದ ಪಕ್ಷಕ್ಕೆ ಹಾನಿಯಾಗುತ್ತಿದೆ ಎಂಬ ಚಿಂತೆ ನಿಮಗೇಕೆ' ಎಂದು ಅಮಿತ್ ಶಾ ಅವರು ಮಾಧ್ಯಮದವರನ್ನೇ ಪ್ರಶ್ನಿಸಿದರು. 'ಹಾನಿ-ಲಾಭದ ಲೆಕ್ಕಾಚಾರವನ್ನು ಪಕ್ಷ ನೋಡಿಕೊಳ್ಳುತ್ತದೆ. ನೀವು ಚಿಂತೆ ಮಾಡಬೇಡಿ' ಎಂದರು.
ದಲಿತ ಮುಖ್ಯಮಂತ್ರಿ ಕುರಿತ ಪ್ರಶ್ನೆಗೆ ಉತ್ತರಿಸಿ 'ಬಿಜೆಪಿಯಲ್ಲಿ ಕಾರ್ಯಕರ್ತರೂ ಮುಖ್ಯಮಂತ್ರಿ ಆಗಬಹುದು. ಅದಕ್ಕೆ ದಲಿತರೂ ಹೊರತಾಗಿಲ್ಲ' ಎಂದು ಉತ್ತರಿಸಿದರು.
ಪಕ್ಷದಲ್ಲಿನ ಆಂತರಿಕ ಕಲಹ ಮತ್ತು ಈಶ್ವರಪ್ಪ ಅವರ ಟಿಕೆಟ್ ಬಗ್ಗೆ ಪ್ರಶ್ನೆ ಕೇಳಿದಾಗ ಮತ್ತೆ ಕೆರಳಿದಂತೆ ಕಂಡ ಅಮಿತ್ ಶಾ ಅವರು 'ಬಿಜೆಪಿ ಕೇಂದ್ರ ಸಂಸದೀಯ ಮಂಡಳಿಯೇ ಅಭ್ಯರ್ಥಿಗಳನ್ನು ಘೋಷಿಸುತ್ತದೆ. ಈಶ್ವರಪ್ಪ ಅವರಿಗೆ ಮುಂದಿನ ಚುನಾವಣೆಯಲ್ಲಿ ಟಿಕೆಟ್ ನೀಡುವುದು ಬಿಡುವುದು ನನ್ನ ಮೇಲೆ ಬಿಡಿ, ನಮ್ಮ ಪಕ್ಷದವರ ಹಿತ ಕಾಯುವುದು ನಮ್ಮ ಕೆಲಸ. ಅದಕ್ಕೆ ನೀವ್ಯಾಕೆ ಚಿಂತೆ ಮಾಡ್ತೀರಿ' ಎಂದು ಮರು ಪ್ರಶ್ನಿಸಿದರು.
ಅಮಿತ್ ಶಾ ಅವರು ಮಾಧ್ಯಮದವರೊಂದಿಗೆ ವರ್ತಿಸಿದ ರೀತಿ ಅಲ್ಲಿನ ಬಿಜೆಪಿ ನಾಯಕರುಗಳಿಗೆ ಆಶ್ಚರ್ಯ ಉಂಟುಮಾಡಿತು.











Click it and Unblock the Notifications