ಕಾಂಗ್ರೆಸ್ ಸೇರುವ ಬಗ್ಗೆ ಕಂಪ್ಲಿ ಸುರೇಶ್ ಬಾಬು ಹೇಳಿದ್ದೇನು?
Recommended Video

ಬಳ್ಳಾರಿ, ಫೆಬ್ರವರಿ 6 : 'ನಾನು ಬಿಜೆಪಿಯ ನಿಷ್ಠಾವಂತ ಕಾರ್ಯಕರ್ತ. ಯಾವುದೇ ಕಾರಣಕ್ಕೂ ಪಕ್ಷ ಬಿಡುವುದಿಲ್ಲ. ನನ್ನ ಮನೆಯ ಬಾಗಿಲು ಗಟ್ಟಿಯಾಗಿದೆ, ನಾನೇಕೆ ಬೇರೆ ಪಕ್ಷದ ಬಾಗಿಲನ್ನು ತಟ್ಟಲಿ?' ಎಂದು ಕಂಪ್ಲಿ ಶಾಸಕ ಸುರೇಶ್ ಬಾಬು ಪ್ರಶ್ನಿಸಿದರು.
ಬಳ್ಳಾರಿಯ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಮಂಗಳವಾರ ಅವರು ಪತ್ರಿಕಾಗೋಷ್ಠಿ ನಡೆಸಿದರು. 'ಮುಂದಿನ ಚುನಾವಣೆಯಲ್ಲಿ ಯಡಿಯೂರಪ್ಪ ಅವರು ಮುಖ್ಯಮಂತ್ರಿ ಆಗುವುದು ಖಚಿತ. ಬಳ್ಳಾರಿ ಜಿಲ್ಲೆಯಲ್ಲಿ ಕಾಂಗ್ರೆಸ್‍ಗೆ ಮುಖಂಡರ ಕೊರತೆ ಇದೆ. ಅದಕ್ಕೆ ಬೇರೆ ಪಕ್ಷದವರನ್ನು ಸೆಳೆಯುತ್ತಿದ್ದಾರೆ' ಎಂದು ದೂರಿದರು.

'ನಾನು ಮದಕರಿ ನಾಯಕನ ವಂಶಸ್ಥ. ವಾಲ್ಮೀಕಿ ಜನಾಂಗದ ಮುಖಂಡ. ನಾನು ಸ್ವಾಮಿ ನಿಷ್ಠೆಯನ್ನು ಪಾಲನೆ ಮಾಡುವವನು. ಬಿ. ಶ್ರೀರಾಮುಲು ಅವರ ವರ್ಚಸ್ಸು, ಪ್ರಭಾವ ಹೆಚ್ಚಾಗಬೇಕಿದೆ. ನಾನು ಬಿಜೆಪಿಯಲ್ಲೇ ಇರುವೆ. ಬಿಜೆಪಿ ಬಿಡುವ ಮಾತೇ ಇಲ್ಲ' ಎಂದು ಸ್ಪಷ್ಟಪಡಿಸಿದರು.
'ಕಂಪ್ಲಿ ಕ್ಷೇತ್ರದ ಮತದಾರರು, ಅಭಿಮಾನಿಗಳು ಮತ್ತು ಬಿಜೆಪಿಗೆ ನಿಷ್ಠವಾಗಿರುವ ನಾನು, ಯಾವುದೇ ಕಾರಣಕ್ಕೂ ಬಿಜೆಪಿಯನ್ನು ಬಿಡುವುದಿಲ್ಲ. ಹೈಕಮಾಂಡ್ ನಿರ್ದೇಶದಂತೆ ಪಕ್ಷದಲ್ಲಿ ಕಾರ್ಯ ನಿರ್ವಹಿಸುವೆ' ಎಂದರು.
'ನಾನು, ಬಿಜೆಪಿಯಿಂದಲೇ ರಾಜಕೀಯ ಜೀವನ ಆರಂಭಿಸಿದ್ದೇನೆ. ಬಿಜೆಪಿಯಲ್ಲೇ ಇರುತ್ತೇನೆ. ಬಿಜೆಪಿಗೆ ಯಾವುದೇ ಕಾರಣಕ್ಕೂ ದ್ರೋಹ ಮಾಡುವುದಿಲ್ಲ. ನನ್ನ ಕೊನೆಯ ಉಸಿರು ಇರುವ ವರೆಗೂ ನಾನು ಬಿಜೆಪಿಯಲ್ಲೇ ಇರುತ್ತೇನೆ' ಎಂದು ಹೇಳಿದರು.
'ಕಾಂಗ್ರೆಸ್ ಪಕ್ಷಕ್ಕೆ ಮಂಕುಕವಿದಿದೆ. ಪ್ರಧಾನಿ ನರೇಂದ್ರ ಮೋದಿ, ಬಿ.ಎಸ್. ಯಡಿಯೂರಪ್ಪ ಅವರ ನೇತೃತ್ವದಲ್ಲಿ ಜಿಲ್ಲೆಯಲ್ಲಿ, ರಾಜ್ಯದಲ್ಲಿ ಪಕ್ಷ ಪುನಃ ಅಧಿಕಾರಕ್ಕೆ ಬರಲಿದೆ. ಜಿಲ್ಲೆಯಲ್ಲಿ ಎಚ್.ಆರ್. ಗವಿಯಪ್ಪ ಮತ್ತು ಕಾರ್ತಿಕೇಯ ಘೋರ್ಪಡೆ ಅವರು ಬಿಜೆಪಿ ಸೇರಿರುವುದು ದೊಡ್ಡ ಶಕ್ತಿಯನ್ನು ತಂದುಕೊಟ್ಟಿದೆ' ಎಂದು ತಿಳಿಸಿದರು.
'ನಾನು ಕುಟುಂಬದ ಸಮೇತ ತಿರುಪತಿಗೆ ಹೋಗಿರುವಾಗ ಡಿ.ಕೆ. ಶಿವಕುಮಾರ್, ಸಂತೋಷ್ ಲಾಡ್ ಅವರು ಪತ್ರಕರ್ತರ ಜೊತೆ ಮಾತನಾಡಿ, 'ಟಿ.ಎಚ್. ಸುರೇಶಬಾಬು ಕಾಂಗ್ರೆಸ್ ಸೇರಲಿದ್ದಾರೆ' ಎಂದು ಹೇಳಿರುವುದು ಸತ್ಯಕ್ಕೆ ದೂರವಾದದ್ದು. ನಾನು ಡಿ.ಕೆ. ಶಿವಕುಮಾರ್ ಜೊತೆ ಕ್ಷೇತ್ರದ ವಿದ್ಯುತ್ ಸಮಸ್ಯೆಗಳ ಪರಿಹಾರಕ್ಕಾಗಿ ಮಾತನಾಡಿದ್ದೆ' ಎಂದು ವಿವರಣೆ ನೀಡಿದರು.











Click it and Unblock the Notifications