ಕಾಂಗ್ರೆಸ್ ಕೈ ಕೊಟ್ಟು ಮತ್ತೆ ಬಿಜೆಪಿಗೆ ವಾಪಸ್?: ಮಹತ್ವದ ಹೇಳಿಕೆ ನೀಡಿದ ಮಾಜಿ ಸಿಎಂ ಜಗದೀಶ್ ಶೆಟ್ಟರ್
ವಿಜಯಪುರ, ಡಿಸೆಂಬರ್ 02: ಲೋಕಸಭಾ ಚುನಾವಣೆಗೆ ರಾಜ್ಯದಲ್ಲಿ ಕಾಂಗ್ರೆಸ್ ಗೆ ಠಕ್ಕರ್ ಕೊಡುವ ನಿಟ್ಟಿನಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿಯಾಗಿದ್ದು, ಲೋಕಸಮರದಲ್ಲಿ ಹೆಚ್ಚು ಸ್ಥಾನಗಳನ್ನ ಗೆಲ್ಲುವ ನಿಟ್ಟಿನಲ್ಲಿ ಬಿಜೆಪಿ ನಾಯಕರು, ಈ ಹಿಂದೆ ಕಾಂಗ್ರೆಸ್ ಸೇರ್ಪಡೆಯಾದ ನಾಯಕರನ್ನ ಮತ್ತೆ ಪಕ್ಷಕ್ಕೆ ಕರೆತರುವ ಪ್ರಯತ್ನಗಳಾಗುತ್ತಿದೆ ಎಂಬ ಮಾತುಗಳು ಕೇಳಿ ಬಂದಿದ್ದು, ಕೆ ಎಸ್ ಈಶ್ವರಪ್ಪ ಅವರ ಹೇಳಿಕೆ ರಾಜಕೀಯದಲ್ಲಿ ಸಂಚಲನ ಸೃಷ್ಟಿಸಿದೆ.
ಹೌದು, ಮಾಜಿ ಸಚಿವ ಹಾಗೂ ಬಿಜೆಪಿಯ ಹಿರಿಯ ಮುಖಂಡ ಕೆ ಎಸ್ ಈಶ್ವರಪ್ಪ ಅವರು ಮತ್ತೆ ಬಿಜೆಪಿ ಜಗದೀಶ್ ಶೆಟ್ಟರ್ ಬರುತ್ತಾರೆ ಎಂದು ಹೇಳಿದ್ದಾರೆ. ಈ ಕುರಿತು ಮಾಜಿ ಮುಖ್ಯಮಂತ್ರಿ ಹಾಗೂ ವಿಧಾನ ಪರಿಷತ್ ಸದಸ್ಯರಾದ ಜಗದೀಶ್ ಶೆಟ್ಟರ್ ಮಾತನಾಡಿ, ನಾನು ಭಾರತೀಯ ಜನತಾ ಪಕ್ಷಕ್ಕೆ ವಾಪಸ್ ಹೋಗುವೆ ಎನ್ನುವ ಕೆ.ಎಸ್.ಈಶ್ವರಪ್ಪ ಹೇಳಿಕೆ ಹಸಿಯಾದ ಸುಳ್ಳು ಎಂದು ಹೇಳಿದರು.

ನಾನು ಬಿಜೆಪಿಗೆ ಹೋಗಲ್ಲ. ಬೇರೆಯವರು ಕಾಂಗ್ರೆಸ್‌ಗೆ ಬರಬಾರದು ಎಂದು ನಾನು ಬಿಜೆಪಿಗೆ ವಾಪಸ್ ಬರುತ್ತಿದ್ದೇನೆ ಎಂದು ಬಿಂಬಿಸಲಾಗುತ್ತಿದೆ. ನಾನು ಮರಳಿ ಬಿಜೆಪಿಗೆ ಹೋಗುವ ಮಾತೇ ಇಲ್ಲ. ನನಗೆ ಮತ್ತು ಲಕ್ಷ್ಮಣ ಸವದಿಯವರಿಗೆ ಟಿಕೆಟ್ ತಪ್ಪಿಸಿದ ಪರಿಣಾಮವನ್ನು ಬಿಜೆಪಿಗೆ ಜನ ತೋರಿಸಿದ್ದಾರೆ. ಲೋಕಸಭೆ ಚುನಾವಣೆಯಲ್ಲೂ ಇದು ಮುಂದುವರಿಯಲಿದೆ. ಬಿಜೆಪಿಯವರು ಕಾಂಗ್ರೆಸ್‌ಗೆ ಹೋಗದಂತೆ ತಡೆಯಲು ನನ್ನ ಹೆಸರು ಬಳಕೆ ಮಾಡ್ತಿದ್ದಾರೆ. ಜಗದೀಶ್ ಶೆಟ್ಟರ್ ಅವರೇ ಬಿಜೆಪಿಗೆ ಬಂದು ಬಿಡ್ತಾರೆ ನೀವು ಕಾಂಗ್ರೆಸ್‌ಗೆ ಹೋಗಬೇಡಿ ಎಂದು ಬಿಜೆಪಿ ನಾಯಕರಿಗೆ ಹೇಳುತ್ತಿದ್ದಾರೆ ಎಂದು ಜಗದೀಶ್ ಶೆಟ್ಟರ್ ಹೇಳಿದರು.
ಜನಸಂಘ ಸಮಯದಿಂದ ನಮ್ಮ ತಂದೆ, ಚಿಕ್ಕಪ್ಪನವರು ಸಂಘಟನೆ ಮಾಡಿಕೊಂಡು ಬಂದಿದ್ದರು. ಅವರ ಕಡೆಯ ವ್ಯಕ್ತಿಗೆ ಸಣ್ಣ ಎಂಎಲ್ಎ ಟಿಕೆಟ್ ಕೊಡೋಕೆ ಆಗಲಿಲ್ಲ. ಜನಸಂಘದಿಂದ ಬಂದವರಿಗೆ ಬಿಜೆಪಿ ಟಿಕೆಟ್ ಕೊಟ್ಟಿಲ್ಲ, ಬಿಜೆಪಿ ಯಾರನ್ನು ಕಡೆಗಣಿಸುತ್ತಿದೆ ಅನ್ನೋದಕ್ಕೆ ಇದು ತಾಜಾ ಉದಾಹರಣೆ. ಹಿಂದುತ್ವವನ್ನು ರಾಜಕಾರಣಕ್ಕೆ ಬಳಸಬಾರದು. ಎಲ್ಲರ ಸೌಹಾರ್ದತೆ ಕಾಪಾಡುವುದು ಮುಖ್ಯ ಎಂದು ಮಾಜಿ ಸಿಎಂ ಜಗದೀಶ್ ಶೆಟ್ಟರ್ ಹೇಳಿದರು.
ಮಾಜಿ ಸಚಿವ ಕೆ ಎಸ್ ಈಶರಪ್ಪ ಹೇಳಿದ್ದೇನು?
ಹಿಂದೂ ಸಮಾಜ ರಕ್ತಗತ ಮಾಡಿಕೊಂಡ ಕುಟುಂಬ. ಜಗದೀಶ್ ಶೆಟ್ಟರ್ ತಂದೆ ಹುಬ್ಬಳ್ಳಿ ಮೇಯರ್, ಶಾಸಕರಾಗಿದ್ದರು. ಜಗದೀಶ್ ಶೆಟ್ಟರ್ ಮೈಯಲ್ಲಿ ಹಿಂದು ರಕ್ತ ಹರಿಯುತ್ತಿದೆ. ಕಾಂಗ್ರೆಸ್ ಸಂಸ್ಕೃತಿ, ಜಮೀರ್ ಅವರ ಧೋರಣೆ ಅವರಿಗೆ ಹೊಂದಿಕೊಳ್ಳಲ್ಲ. ಹೀಗಾಗಿಯೇ ಮಾಜಿ ಮುಖ್ಯಮಂತ್ರಿಗಳಾದ ಜಗದೀಶ್ ಶೆಟ್ಟರ್ ಹೊರಗೆ ಬರುತ್ತಾರೆ. ಖಂಡಿತ ಜಗದೀಶ್ ಶೆಟ್ಟರ್ ಅವರು ಬಿಜೆಪಿ ಗೆ ವಾಪಸ್ ಬರುತ್ತಾರೆ ಎಂದು ಮಾಜಿ ಸಚಿವ ಹಾಗೂ ಬಿಜೆಪಿಯ ಹಿರಿಯ ನಾಯಕ ಕೆ ಎಸ್ ಈಶ್ವರಪ್ಪ ಹೇಳಿದ್ದಾರೆ.












Click it and Unblock the Notifications