Operation Hasta: ಜೆಡಿಎಸ್ ನಾಯಕ ಇಂದು ಕಾಂಗ್ರೆಸ್ ಸೇರ್ಪಡೆ! ಯಾರು ತಿಳಿಯಿರಿ
ಬೆಂಗಳೂರು, ಆಗಸ್ಟ್ 24: ಮುಂಬರುವ ಲೋಕಸಭಾ ಚುನಾವಣೆಗೆ ಭರ್ಜರಿ ತಯಾರಿ ನಡೆಸಿರುವ ಕಾಂಗ್ರೆಸ್ ಪಡೆ, ಬಿಜೆಪಿ ಹಾಗೂ ಜೆಡಿಎಸ್ ಹಾಲಿ, ಮಾಜಿ ಶಾಕಸರಿಗೆ ಗಾಳ ಹಾಕಿದ್ದು, ಇಂದು(ಗುರುವಾರ) ಜೆಡಿಎಸ್ ನಾಯಕ ಆಯನೂರು ಮಂಜುನಾಥ್ ಕಾಂಗ್ರೆಸ್ ಪಕ್ಷವನ್ನ ಸೇರ್ಪಡೆಯಾಗಲಿದ್ದಾರೆ.
ಈ ಕುರಿತು ಮಾಜಿ ವಿಧಾನ ಪರಿಷತ್ ಸದಸ್ಯ ಆಯನೂರು ಮಂಜುನಾಥ್ ಮಾಹಿತಿ ನೀಡಿದ್ದು, ನನ್ನ ಕೇಂದ್ರೀಕೃತವಾಗಿ ರಾಜಕೀಯ ಸುದ್ದಿಗಳು ನಡೆಯುತ್ತಿದೆ. ಇದಕ್ಕೆ ಪೂರ್ಣ ವಿರಾಮ ನೀಡಲು ಬಂದಿದ್ದು, ಗುರುವಾರ ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ ಆಗುತ್ತಿದ್ದೇನೆ ಎಂದು ಹೇಳಿದ್ದಾರೆ.

ಇನ್ನೂ ಕಾಂಗ್ರೆಸ್ ಸೇರ್ಪಡೆ ಕುರಿತು ಈಗಾಗಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದೇನೆ. ಇಂದು(ಗುರುವಾರ) ಬೆಂಗಳೂರಿನ ಕಾಂಗ್ರೆಸ್ ಕಚೇರಿಯಲ್ಲಿ ಅಧಿಕೃತವಾಗಿ ಸೇರ್ಪಡೆ ಆಗುತ್ತಿದ್ದೇನೆ ಎಂದು ತಿಳಿಸಿದ್ದಾರೆ. ಅಲ್ಲದೇ ಪಕ್ಷದ ಎಲ್ಲ ಮುಖಂಡರ ಸಹಮತಿ ನೀಡಿ ಸಹಕಾರ ನೀಡುವ ಭರವಸೆ ನೀಡಿದ್ದಾರೆ ಎಂದರು.
ಜೆಡಿಎಸ್ ತೊರೆಯೋದಕ್ಕೆ ಬೇಸರದ ಕುರಿತು ಮಾತನಾಡಿದ ಅವರು, ನನಗೆ ಜೆಡಿಎಸ್ ತೊರೆಯುತ್ತಿರುವ ಕುರಿತು ಯಾವುದೇ ಬೇಸರ ಇಲ್ಲ.2023 ರ ವಿಧಾನಸಭೆ ಚುನಾವಣೆಯಲ್ಲಿ ಶಿವಮೊಗ್ಗ ಕ್ಷೇತ್ರದಿಂದ ಸ್ಪರ್ಧಿಸಲು ಜೆಡಿಎಸ್ ಅವಕಾಶ ನೀಡಿತ್ತು. ಚುನಾವಣೆಯಲ್ಲಿ ಜೆಡಿಎಸ್ ಮುಖಂಡರು ಹಾಗೂ ಕಾರ್ಯಕರ್ತರು ನನ್ನ ಗೆಲುವಿಗೆ ಸಾಕಷ್ಟು ಶ್ರಮವಹಿಸಿದ್ದರು. ಆದರೂ ಸೋಲು ಅನುಭವಿಸಬೇಕಾಯಿತು. ಜೆಡಿಎಸ್‌ನಲ್ಲಿ ಯಾವುದೇ ಗೊಂದಲ ಇರಲಿಲ್ಲ. ಆದರೆ, ರಾಷ್ಟ್ರೀಯ ಪಕ್ಷವಾದ ಕಾಂಗ್ರೆಸ್ ಸೇರುತ್ತಿದ್ದೇನೆ ಎಂದು ಹೇಳಿದರು.
ಇನ್ನೂ ವಿಧಾನಸಭಾ ಚುನಾವಣೆ ವೇಳೆಗೆ ಕಾಂಗ್ರೆಸ್ ಸೇರುವ ಅವಕಾಶ ಒದಗಿ ಬಂದಿತ್ತು. ಆದರೆ ಸೇರ್ಪಡೆ ಆಗಿರಲಿಲ್ಲ. ಈಗ ಅವಕಾಶ ಸಿಕ್ಕಿದೆ, ಮುಂಬರುವ ಚುನಾವಣೆಗಳಲ್ಲಿ ಪಕ್ಷದ ಗೆಲುವಿಗೆ ಎಲ್ಲರೂ ಸೇರಿ ಶಕ್ತಿ ಹಾಗೂ ಸಮಯ ನೀಡುತ್ತೇವೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ತೊರೆದು ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯಲು ನಿರ್ಧರಿಸಿದ್ದೆ. ಆದರೆ, ಪ್ರಾದೇಶಿಕ ಪಕ್ಷವಾದ ಜೆಡಿಎಸ್‌ನಿಂದ ಅವಕಾಶ ಸಿಕ್ಕಿದ್ದರಿಂದ ಸ್ಪರ್ಧೆ ಮಾಡಿದ್ದೆ ಎಂದು ಹೇಳಿದರು.
ಬಿಜೆಪಿಯಿಂದ ಮತ್ತೆ ಆಹ್ವಾನ ಕುರಿತು ಮಾತನಾಡಿ, ನನಗೆ ಬಿಜೆಪಿಯಿಂದ ಯಾವುದೇ ಆಹ್ವಾನ ಬಂದಿಲ್ಲ. ದೊಡ್ಡ ಪಕ್ಷದಲ್ಲಿ ವಿರೋಧ ಇರುವುದು ಸಹಜ. ಕಾಂಗ್ರೆಸ್‌ನ ಬಹುತೇಕ ಮುಖಂಡರು ಸ್ವಾಗತಿಸಿದ್ದಾರೆ. ಕಾಂಗ್ರೆಸ್ ಪಕ್ಷದ ಗೆಲುವಿಗೆ ನಮ್ಮಶಕ್ತಿಯನ್ನು ಧಾರೆ ಎರೆಯುತ್ತೇವೆ. ಕಾಂಗ್ರೆಸ್ ಕೊನೆಯ ಬಸ್ ಸ್ಟಾಪ್ ಅಂತ ಕಾಣುತ್ತದೆ ಎಂದು ಹೇಳಿದರು.












Click it and Unblock the Notifications