ನಾನು ಬೇಕಾದ್ರೆ ಸಚಿವ ಸ್ಥಾನ ಬಿಟ್ಟು ಕೊಡ್ತೀನಿ; ನನಗೇನು ಅಭ್ಯಂತರ ಇಲ್ಲ: ಕೆ.ಹೆಚ್ ಮುನಿಯಪ್ಪ ಹೀಗೆ ಹೇಳಿದ್ಯಾಕೆ?
ಬೆಂಗಳೂರು, ಆಗಸ್ಟ್ 16: ಸರ್ಕಾರ ರಚನೆಯಾಗಿ ಮೂರು ತಿಂಗಳು ಮಾತ್ರ ಕಳೆದಿದ್ದು, ಇದೀಗ ಎರಡುವರೆ ವರ್ಷದ ಬಳಿಕ ಹಿರಿಯರು ಮಂತ್ರಿ ಸ್ಥಾನವನ್ನ ಬಿಡಬೇಕು ಎಂದು ಸಚಿವ ಕೆ ಹೆಚ್ ಮುನಿಯಪ್ಪ ಪುನರುಚ್ಚರಿಸಿದ್ದಾರೆ.
ಈ ಕುರಿತು ವಿಧಾನಸೌಧದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜಕೀಯವಾಗಿ ಪಕ್ಷ ಬಲಪಡಿಸಬೇಕಾದ್ರೆ ಎಲ್ಲರಿಗೂ ಅವಕಾಶ ಕೊಡಬೇಕು. ನಾನು ಬೇಕಾದ್ರೆ ಸಚಿವ ಸ್ಥಾನ ಬಿಟ್ಟು ಕೊಡ್ತೀನಿ. ನನಗೇನು ಅಭ್ಯಂತರ ಇಲ್ಲ, ಇದು ನಮ್ಮ ಮನೆಯಲ್ಲಿ ವಿಚಾರ ನಾವು ಮಾತಾಡಿದ್ದೇವೆ. ಇದು ನನ್ನ ವೈಯಕ್ತಿಕ ವಿಚಾರ ಎಂದು ಹೇಳಿದ್ದಾರೆ.

4-5 ಬಾರಿ ಶಾಸಕರಾಗಿರುವವರಿಗೂ ಇನ್ನು ಸಚಿವ ಸ್ಥಾನ ಸಿಕ್ಕಿಲ್ಲ. ಅಂತಹವರಿಗೂ ಅವಕಾಶ ಕೊಡಬೇಕು, ನಾನು ಕೇಂದ್ರದಲ್ಲಿ ಎರಡು ಬಾರಿ ಮಂತ್ರಿ ಆಗಿದ್ದೆ. ಹೀಗಾಗಿ ಮೊನ್ನೆ ಸಭೆಯಲ್ಲಿ ನನ್ನ ಅಭಿಪ್ರಾಯ ಹೇಳಿದ್ದೇನೆ. ಇದು ನನ್ನ ವೈಯಕ್ತಿಕ ಅಭಿಪ್ರಾಯ. ಮುಂದಿನ ತೀರ್ಮಾನ ಹೈಕಮಾಂಡ್ ಮಾಡುತ್ತದೆ. ಮುಖ್ಯಮಂತ್ರಿ ಹಾಗೂ ಡಿಸಿಎಂ ವಿಚಾರವನ್ನ ಹೈಕಮಾಂಡ್ ತೀರ್ಮಾನ ಮಾಡುತ್ತೆ. ಅದರ ಬಗ್ಗೆ ನಾನು ಮಾತನಾಡುವುದಿಲ್ಲ. ಸಚಿವರು ಸ್ಥಾನ ಬಿಡಬೇಕು ಅನ್ನೋದು ನನ್ನ ಅಭಿಪ್ರಾಯ ಎಂದು ಹೇಳಿದರು.
ಲೋಕಸಭಾ ಚುನಾವಣೆ ಕುರಿತು ಮಾತನಾಡಿ, ಯುವಕರಿಗೆ ಆದ್ಯತೆ ಕೊಡಬೇಕು. ಯುವಕರು ರಾಜಕೀಯದಲ್ಲಿ ಬೆಳೆಯಬೇಕು ಎಂಬುದು ನನ್ನ ವೈಯಕ್ತಿಕ ಅಭಿಪ್ರಾಯ. ಆದರೆ, ಹೈಕಮಾಂಡ್ ಯಾವ ನಿರ್ಧಾರ ತೆಗೆದುಕೊಳ್ಳಲಿದೆ ನೋಡಬೇಕು ಎಂದು ಹೇಳಿದರು.
ಉಪೇಂದ್ರ ಹಾಗೂ ಎಸ್.ಎಸ್ ಮಲ್ಲಿಕಾರ್ಜುನ್ ದಲಿತ ನಿಂದನೆ ಪದ ಪ್ರಯೋಗ ವಿಚಾರವಾಗಿ ಮಾತನಾಡಿ, ವ್ಯಕ್ತಿಗತವಾಗಿ ಏನು ಮಾತಾಡಿದ್ರೋ ಗೊತ್ತಿಲ್ಲ. ದಲಿತರ ಜೊತೆಯಲ್ಲೇ ಇದ್ದು, ಅವರನ್ನ ರಾಜಕೀಯವಾಗಿ ಬೆಳೆಸಿದ್ದಾರೆ. ಶಾಮನೂರು ಶಿವಶಂಕರಪ್ಪ ಅವರು ಜೊತೆಯಲ್ಲೇ ಇಟ್ಟುಕೊಂಡು ಬೆಳೆಸಿದ್ದಾರೆ. ಆದರೆ, ಮಲ್ಲಿಕಾರ್ಜುನ್ ಯಾವ ವಿಚಾರದಲ್ಲಿ ಹೇಗೆ ಪದ ಬಳಕೆ ಮಾಡಿದ್ದಾರೆ ನನಗೆ ಗೊತ್ತಿಲ್ಲ.ಆದರೆ, ಅವರು ದಲಿತರ ಜೊತೆ ಊಟ ಮಾಡಿ, ಜೊತೆಯಲ್ಲೇ ಇದ್ದುಕೊಂಡೇ ಬೆಳೆಸಿದ್ದಾರೆ ಎಂದು ಹೇಳಿದರು.
ಅನ್ನ ಭಾಗ್ಯ ವಿಚಾರವಾಗಿ ಆಂಧ್ರಕ್ಕೆ ಹೋಗಿ ಬಂದಿದ್ದೇನೆ. ಒಂದು ವಾರದಲ್ಲಿ ವಿಚಾರ ಮಾಡಿ ಹೇಳುವುದಾಗಿ ಹೇಳಿದ್ದಾರೆ, ತೆಲಂಗಾಣದಲ್ಲೂ ಭೇಟಿಯಾಗಿ ಬಂದಿದ್ದೇನೆ. ಪ್ರತಿ ತಿಂಗಳು ಎರಡುವರೆ ಟನ್ ಬೇಕಿದೆ. ಆಂಧ್ರದಲ್ಲಿ ಮತ್ತು ತೆಲಂಗಾಣದಲ್ಲಿ ಲಭ್ಯತೆ ಇದೆ. FCI ರೇಟ್ 34ರೂ ಸಬ್ಸಿಡಿ ಅಡಿ ಕೊಡ್ತಿದೆ. ಇದೆಲ್ಲಾ ಸೇರಿ 40 ರೂ ವರೆಗೂ ಬರಲಿದೆ, ಉಳಿದಿದ್ದು ಸಬ್ಸಿಡಿ ಅಡಿ ಬರಲಿದೆ.
ನಮಗೆ ಅವರು ಕೊಡುತ್ತಿರುವುದು 40 ರೂ.ನಮಗೆ ಕೇಂದ್ರ ಸರ್ಕಾರ ಕೊಡುತ್ತಿರುವುದು 34ರೂ, ಅವರು ಸಬ್ಸಿಡಿ ಕೊಟ್ಟಂಗೆ ಆಗ್ತಿತ್ತು. ಅಂತಿಮವಾಗಿ ಎಷ್ಟು ಹಣಕ್ಕೆ ಗೋಡೌನ್ ಡೆಲಿವರಿ ಕೊಡ್ತೀರಿ ಅಂತ ಕೇಳಿದ್ದೇವೆ. ಅವರು ಇನ್ನೂ ಅಂತಿಮ ದರ ಹೇಳಿಲ್ಲ. ಆದರೆ, ಆಂಧ್ರ, ತೆಲಂಗಾಣ ಸಬ್ಸಿಡಿ ಇಲ್ಲದೆ 39/40 ರೂ ಹಣಕ್ಕೆ ಕೊಡುವ ಸಾಧ್ಯತೆ ಇದೆ ಎಂದು ಹೇಳಿದರು.
ನಮ್ಮ ರಾಜ್ಯದಲ್ಲಿ 5 ಲಕ್ಷ ಜನ ರೇಷನ್ ಕಾರ್ಡ್ ಇದೆ. ಹೊಸ ಬಿಪಿಎಲ್ ಕಾರ್ಡ್ ಗಳಿಗೆ ಅರ್ಜಿ ಹಾಕಿದ್ರೆ ಪ್ರಿಯಾರಿಟಿ ಮೇಲೆ ಕೊಡಲಾಗುವುದು. ಆರೋಗ್ಯ, ವೈದ್ಯಕೀಯ ವೆಚ್ಚ ಬರಿಸುವ ವಿಚಾರವಾಗಿ ಹೆಚ್ಚು ಅರ್ಜಿ ಬರ್ತಿದೆ ಎಂದು ಹೇಳಿದ ಅವರು, ಪಡಿತರ ತಿದ್ದುಪಡಿ ವಿಚಾರವಾಗಿ ಮಾತನಾಡಿ, ಹೊಸದಾಗಿ ಪಡಿತರಕ್ಕಾಗಿ 3ಲಕ್ಷ ಕಾರ್ಡ್ ಅರ್ಜಿ ಬಂದಿದೆ. ಅದನ್ನ ಪರಿಶೀಲನೆ ಮಾಡಲಾಗ್ತಿದೆ, ಮನೆ ಯಜಮಾನಿ ಬದಲಾವಣೆ ಮಾಡಲು ಅಥವಾ ತಿದ್ದುಪಡಿ ಮಾಡಲು ಇಂದಿನಿಂದ ಅವಕಾಶ ನೀಡಲಾಗಿದೆ ಎಂದು ಹೇಳಿದರು.












Click it and Unblock the Notifications