2028 ರ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧೆ; ಕ್ಷೇತ್ರದ ಬಗ್ಗೆ ನಿಖಿಲ್ ಕುಮಾರಸ್ವಾಮಿ ಹೇಳಿದ್ದೇನು?
ಬೆಂಗಳೂರು: ಕಳೆದ ಎರಡು ಚುನಾವಣೆಯಲ್ಲಿ ಸೋಲು ಕಂಡ ನಿಖಿಲ್ ಕುಮಾರಸ್ವಾಮಿ 2028ರ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸುವ ವಿಚಾರಕ್ಕೆ ಮಾಧ್ಯಮಗಳ ಮುಂದೆ ಮಾತನಾಡಿದ್ದಾರೆ. ಬೆಂಗಳೂರಿನ ಪ್ರೆಸ್ ಕ್ಲಬ್ ನಲ್ಲಿ ನಡೆದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿ, ನಾನು ರಾಜಕಾರಣ ಮಾಡುವುದಕ್ಕೆ ಬಂದಿದ್ದೇನೆ. ಅದಕ್ಕಾಗಿ ನಾನು ಕೆಲಸ ಮಾಡುತ್ತಿದ್ದೇನೆ ಈ ಬಗ್ಗೆ ಯಾವುದೇ ಪ್ರಶ್ನೆ ಬೇಡ ಎಂದಿದ್ದಾರೆ.
ನಮ್ಮದು ರಾಜಕಾರಣದ ಹಿನ್ನೆಲೆಯ ಕುಟುಂಬ ಇರಬಹುದು. ನಾನು ರಾಜಕಾರಣ ಮಾಡಬೇಕು ಎಂದೇ ಬಂದಿದ್ದೇನೆ. ಹಾಗೆಯೇ ವಿಧಾನಸೌಧಕ್ಕೆ ಪ್ರವೇಶ ಮಾಡಬೇಕು ಎಂದೇ ಬಂದಿದ್ದೇನೆ. ಯಾವ ಕ್ಷೇತ್ರದಿಂದ ಎಂಬುದನ್ನು ನಿಧಾನವಾಗಿ ತಿಳಿಸುವೆ ಎಂದು ಮಾರ್ಮಿಕವಾಗಿ ಉತ್ತರಿಸಿದರು. ಜನರೊಂದಿಗೆ ಜನತಾದಳ ಪ್ರವಾಸ ಮಾಡಿರುವ ಎಲ್ಲಾ ಜಿಲ್ಲೆಗಳಲ್ಲಿಯೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಫೆಬ್ರವರಿ 1ರಿಂದ ಮತ್ತೆ 2ನೇ ಹಂತದಲ್ಲಿ ಜನರೊಂದಿಗೆ ಜನತಾದಳ ಪ್ರವಾಸ ಮಾಡುತ್ತೇನೆ. ಪಕ್ಷದ ಕಾರ್ಯಕರ್ತರಲ್ಲಿ ಉತ್ಸಾಹ ತುಂಬಬೇಕು ಎಂದು ಹೇಳಿದರು.

ಬಳ್ಳಾರಿ ಗಲಾಟೆ ವಿಚಾರವಾಗಿ ಮಾತನಾಡಿ, ಸಣ್ಣ ಕಾರಣಕ್ಕೆ ಶುರುವಾದ ಬಳ್ಳಾರಿ ಗಲಾಟೆ ಗುಂಡು ಹಾರಿಸಿ ಕೊಲೆಯವರೆಗೂ ಹೋಗಿದೆ. ಆದರೆ, ಅಲ್ಲಿನ ಶಾಸಕ ಜನಾರ್ದನ ರೆಡ್ಡಿ ಅವರ ಬಗ್ಗೆ ನೀಡಿರುವ ಹೇಳಿಕೆಯನ್ನು ಗಮನಿಸಿದೆ. ಈ ಸರ್ಕಾರ ದ್ವೇಷ ಭಾಷಣ ತಡೆಗೆ ಮಸೂದೆ ಒಂದನ್ನು ಅಂಗೀಕಾರ ಮಾಡಿದೆ. ಇಲ್ಲಿ ದ್ವೇಷ ಭಾಷಣ ಅನ್ವಯ ಆಗಲ್ಲವಾ? ಈ ಸರ್ಕಾರಕ್ಕೆ ಬಳ್ಳಾರಿಯ ಶಾಸಕ ಮಾತನಾಡಿದ ಮಾತುಗಳು ಕೇಳಿಸಲಿಲ್ಲವೇ? ಇದು ಆ ಮಸೂದೆ ವ್ಯಾಪ್ತಿಗೆ ಬರೋದಿಲ್ವೇ? ಅವರಿಗೆ ರಕ್ಷಣೆ ಕೊಡುತ್ತೇವೆ ಎಂದು ಉಪ ಮುಖ್ಯಮಂತ್ರಿಗಳು ಹೇಗೆ ಹೇಳುತ್ತಾರೆ ಎಂದು ನಿಕೋಲ್ ಅವರು ಆಕ್ರೋಶ ವ್ಯಕ್ತಪಡಿಸಿದರು.
ಇಲ್ಲಿ ನಮ್ಮ ಪಕ್ಷ ಜನಾರ್ದನ ರೆಡ್ಡಿ ಅವರ ನೆರವಿಗೆ ಧಾವಿಸಿದ್ದರು, ಹಿಂದೆ ಅವರು ಕುಮಾರಸ್ವಾಮಿ ಅವರು ವಿರುದ್ಧ ಇದ್ದರು ಎಂಬುದಕ್ಕೆ ಸಂಬಂಧವಿಲ್ಲ. ರೆಡ್ಡಿ ಅವರಷ್ಟೇ ಅಲ್ಲ, ಅವರ ಜಾಗದಲ್ಲಿ ಯಾರೇ ಇದ್ದರೂ ನಮ್ಮ ಪಕ್ಷ ಸ್ಪಂದಿಸುತ್ತಿತ್ತು. ಕಾಂಗ್ರೆಸ್ ಪಕ್ಷಕ್ಕೆ ಬೇರೆ ಕೆಲಸ ಇಲ್ಲವಷ್ಟೇ. ನಾಚಿಕೆ ಬಿಟ್ಟು ತಪ್ಪಿತಸ್ಥರನ್ನು ಸಮರ್ಥನೆ ಮಾಡಿಕೊಳ್ಳುತ್ತಿದೆ ಎಂದು ಅವರು ಕಿಡಿಕಾರಿದರು. ಮೃತ ಕಾರ್ಯಕರ್ತನ ಮನೆಗೆ ಸಾಂತ್ವನ ಹೇಳಲು ಹೋದವರು ₹25 ಲಕ್ಷ ಕೊಡುವ ಅವಕಾಶ ಯಾವ ಕಾನೂನಿನಲ್ಲಿ ಇದೆಯೇ? ಇವರಿಗೆ ಕಾನೂನು ಅನ್ವಯ ಆಗುವುದಿಲ್ಲವೇ? ಗೃಹ ಸಚಿವರೇ ಈ ಎಲ್ಲಾ ಅಂಶಗಳ ಬಗ್ಗೆ ಏನಂತಿರಾ? ಇದಕ್ಕೆಲ್ಲಾ ಉಪ ಮುಖ್ಯಮಂತ್ರಿಗಳು ಉತ್ತರ ಕೊಡಬೇಕಲ್ವೆ ಎಂದು ನಿಖಿಲ್ ಕುಮಾರಸ್ವಾಮಿ ಅವರು ಹರಿಹಾಯ್ದರು.
ಬೆಂಗಳೂರಲ್ಲಿ ಪ್ರತಿ ಚದರ ಅಡಿಗೆ ಹಣ ಫಿಕ್ಸ್ ಆಗಿದೆ. ನಮ್ಮ ಬೆಂಗಳೂರಲ್ಲಿ ಫುಟ್ ಪಾತ್ ಯಾವುದು ರಸ್ತೆ ಯಾವುದು ಎಂಬುದು ಗೊತ್ತಿಲ್ಲ. ಪ್ರತಿನಿತ್ಯ ರಸ್ತೆಯ ಮೂಲಕ ಕೆಲಸಕ್ಕೆ ಹೋಗಬೇಕಾದರೆ ಒಂದೂವರೆ, ಎರಡು ಗಂಟೆ ಸಮಯ ಬೇಕು. ಮೂಲಭೂತ ಸೌಕರ್ಯ ಕಳಪೆಯಾಗಿದೆ. ಕೇಳಿದರೆ ಕೇಳಿದವರ ಮೇಲೆಯೇ ವಾಗ್ದಾಳಿ ಮಾಡುತ್ತಾರೆ. ಯಾಕೆ ರಸ್ತೆ ಗುಂಡಿ ಮುಚ್ಚಿಲ್ಲ? ಇದೆಲ್ಲಾ ನೋಡಿಕೊಂಡೇ ಬೇರೆ ರಾಜ್ಯಗಳಿಗೆ ದೊಡ್ಡ ದೊಡ್ಡ ಕಂಪನಿಗಳು ಶಿಫ್ಟ್ ಆಗ್ತಿವೆ. ಇದಕ್ಕೆ ರಾಜ್ಯ ಸರ್ಕಾರದ ವೈಫಲ್ಯವೇ ಕಾರಣ ಎಂದು ಆವರು ಹೇಳಿದರು.
ಬ್ಲಾಕ್ ಬಕ್ ಸಂಸ್ಥೆ ಸಿಇಒ ಅಸಹಾಯಕತೆ ಹೇಳಿಕೊಂಡರು. ನಾವು ಬೇರೆ ರಾಜ್ಯಗಳನ್ನ ಆಯ್ಕೆ ಮಾಡ್ಕೋತೇವೆ. ಗೂಗಲ್ ಅವರು ವೈಜಾಗ್'ಗೆ ಹೋಗಿದ್ದು ಯಾಕೆ? ಅವರಿಗೆ ಬೇಸಿಕ್ ಇನ್ಫ್ರಾಸ್ಟ್ರಕ್ಚರ್ ಕೊಟ್ಟಿದ್ರೆ ಹೋಗ್ತಿದ್ರಾ?ನನಗೆ ಇನ್ನೂ ಸದನದ ಒಳಗೆ ?ಮಾತನಾಡುವ ಅವಕಾಶ ಸಿಕ್ಕಿಲ್ಲ. ಆದರೆ ಸದನದ ಹೊರಗಡೆ ಮಾತನಾಡಲಿಕ್ಕೆ ತಡೆಯಲು ಯಾರಿಂದಲೂ ಸಾಧ್ಯವಿಲ್ಲ ಎಂದು ನಿಖಿಲ್ ಗುಡುಗಿದರು.












Click it and Unblock the Notifications