ಮತ್ತೆ ಮುನ್ನೆಲೆಗೆ ಬಂದ ದಲಿತ ಸಿಎಂ ಕೂಗು : 'ಹೈಕಮಾಂಡ್ ಸೂಚಿಸಿದರೆ ನಾನೇ ಸಿಎಂ ಆಗ್ತೇನೆ'
ಹುಬ್ಬಳ್ಳಿ , ಜನವರಿ 14: ರಾಜ್ಯ ಕಾಂಗ್ರೆಸ್ ಪಾಳಯದಲ್ಲಿ ಮುಖ್ಯಮಂತ್ರಿ ಬದಲಾವಣೆ ಕುರಿತು ಗುಸು ಗುಡು ಚರ್ಚೆ ನಡೆಯುತ್ತಿದೆ. ಸಿದ್ದರಾಮಯ್ಯ ಹಾಗೂ ಡಿ ಕೆ ಶಿವಕುಮಾರ್ ನಡುವೆ ಅಧಿಕಾರ ಹಂಚಿಕೆ ಸಂಬಂಧ ಕೈ ಪಾಳಯದಲ್ಲಿ ಚರ್ಚೆ ಹುಟ್ಟುವಂತೆ ಮಾಡಿದ್ದು, ಈ ನಡುವೆ ದಲಿತ ಸಿಎಂ ಕೂಗು ಮತ್ತೆ ಮುನ್ನೆಲೆಗೆ ಬಂದಿದೆ.
ಡಿ ಕೆ ಶಿವಕುಮಾರ್ ವಿದೇಶಿ ಪ್ರವಾಸದಲ್ಲಿದ್ದ ಸಂದರ್ಭದಲ್ಲಿ ರಾಜ್ಯ ರಾಜಕಾರಣದಲ್ಲಿ ಒಂದು ಕಡೆ ಡಿನ್ನರ್ ಪಾಲಿಟಿಕ್ಸ್ ಜೋರಾಗಿದ್ದು, ಇದರ ಮಧ್ಯ ಅಧಿಕಾರ ಹಂಚಿಕೆ ಹಾಗೂ ಕೆಪಿಸಿಸಿ ಅಧ್ಯಕ್ಷ ಸ್ಥಾನ ಬದಲಾವಣೆ ಕುರಿತು ಕೂಗು ಜೋರಾಗಿ ಕೇಳಿ ಬರುತ್ತಿದೆ.ಇದರ ಮಧ್ಯ, ಅಬಕಾರಿ ಇಲಾಖೆಯ ಸಚಿವ ಆರ್.ಬಿ ತಿಮ್ಮಾಪೂರ್ ಅವರು, ಇದೀಗ ಮುಖ್ಯಮಂತ್ರಿ ಸ್ಥಾನದ ಮೇಲೆ ಕಣ್ಣಿಟ್ಟಿದ್ದು, ಒಂದು ವೇಳೆ ಹೈಕಮಾಂಡ್ ಹೇಳಿದರೆ ನಾನೇ ಮುಖ್ಯಮಂತ್ರಿ ಆಗುತ್ತೇನೆ ಎಂದು ಸ್ಪೋಟಕವಾದ ಹೇಳಿಕೆ ನೀಡಿದ್ದಾರೆ.

ಮಂಗಳವಾರ ಹುಬ್ಬಳ್ಳಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವ ಆರ್.ಬಿ ತಿಮ್ಮಾಪೂರ್ ಅವರು, ಹೈಕಮಾಂಡ್ ಹೇಳಿದರೆ ನಾನೇ ಮುಖ್ಯಮಂತ್ರಿ ಆಗುತ್ತೇನೆ. ದಲಿತರು ಯಾಕೆ ಸಿಎಂ ಆಗಬಾರದು? ಮುಖ್ಯಮಂತ್ರಿ ಮಾಡಿದರೆ ಯಾರು ಬೇಡ ಅಂತ ಹೇಳುತ್ತಾರೆ ಎಂದು ಸಚಿವ ಆರ್.ಬಿ ತಿಮ್ಮಾಪೂರ್ ಹೇಳಿಕೆ ನೀಡಿದರು.
ಸಿಎಂ ಆಗಲು ನನಗೆ ಅಷ್ಟು ಶಕ್ತಿ ಇದೆಯೋ ಇಲ್ಲವೋ, ಶಾಸಕಾಂಗ ಪಕ್ಷದ ಸಭೆಯಲ್ಲಿ ನನ್ನ ಒಪ್ಪುತ್ತಾರೋ ಇಲ್ಲವೋ ಅದೆಲ್ಲ ನಂತರದ ಮಾತು. ಆದರೆ ಹೈಕಮಾಂಡ್ ಹೇಳಿದರೆ ನಾನೇ ಮುಖ್ಯಮಂತ್ರಿ ಆಗುತ್ತೇನೆ. ದಲಿತರು ಮುಖ್ಯಮಂತ್ರಿ ಆಗಬೇಕೆಂದರೆ ಅವರೇ ಮುಖ್ಯಮಂತ್ರಿ ಆಗುತ್ತಾರೆ. ಆದರೆ ನಮ್ಮಲ್ಲಿ ಸದ್ಯಕ್ಕೆ ಅಂತಹದ್ದೇನು ಇಲ್ಲ. ದಲಿತರು ಸಿಎಂ ಆಗಬೇಕು,ಮತ್ತೊಬ್ಬರು ಮುಖ್ಯಮಂತ್ರಿ ಆಗಬೇಕು. ಶಾಸಕಾಂಗ ಸಭೆಯಲ್ಲಿ ಎಲ್ಲವೂ ತೀರ್ಮಾನ ಆಗಬೇಕು ಐದು ವರ್ಷ ಕಾಂಗ್ರೆಸ್ ಅಧಿಕಾರದಲ್ಲಿರುತ್ತದೆ ಎಂದು ಹುಬ್ಬಳ್ಳಿಯಲ್ಲಿ ಅಬಕಾರಿ ಸಚಿವ ಆರ್ ಬಿ ತಿಮ್ಮಾಪೂರ್ ಹೇಳಿಕೆ ನೀಡಿದರು.
ಇನ್ನೂ ಹುಬ್ಬಳ್ಳಿಯಲ್ಲಿ ಕಾಂಗ್ರೆಸ್ ಹಿರಿಯ ಮುಖಂಡ ಎಸ್ ಆರ್ ಪಾಟೀಲ್ ಮಾತನಾಡಿ, ಉತ್ತರ ಕರ್ನಾಟಕದವರು ಸಿಎಂ ಆದರೆ ಹೃತ್ಪೂರ್ವಕವಾಗಿ ಸ್ವಾಗತ ಮಾಡುತ್ತೇನೆ. ಪ್ರತಿಯೊಬ್ಬ ಶಾಸಕರಿಗೂ ಮಂತ್ರಿ ಸ್ಥಾನದ ಬಗ್ಗೆ ಆಸೆ ಇದ್ದೆ ಇರುತ್ತೆ, ಯಾರು ಕೂಡ ಸನ್ಯಾಸಿಗಳಲ್ಲ. ಅವಕಾಶ ಮಾಡಿಕೊಡಿ ಅಂತ ಸಹಜವಾಗಿ ಕೇಳ್ತಾರೆ ಎಂದು ಹೇಳಿದರು.
ಸಿಎಂ ಬದಲಾವಣೆ ವಿಚಾರವಾಗಿ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಅವರು, ಇದು ವರಿಷ್ಠರಿಗೆ ಬಿಟ್ಟಂತ ವಿಚಾರ, ಏನು ಚರ್ಚೆ ಆಗಿದೆ ಅನ್ನೋದು ಗೊತ್ತಿಲ್ಲ. ವರಿಷ್ಠರ ನಿರ್ಣಯದಂತೆ ನಡೆದು ಬಂದಿದೆ, ನಿರ್ಣಯ ಅವರಿಗೆ ಬಿಟ್ಟದ್ದು, ಅಧಿಕಾರ ಹಂಚಿಕೆ ಮಾತುಕತೆ ಬಗ್ಗೆ ನನಗೆ ಗೊತ್ತಿಲ್ಲ ಎಂದು ಎಸ್ ಆರ್ ಪಾಟೀಲ್ ಅವರು ತಿಳಿಸಿದರು.
ಸುರ್ಜೆವಾಲ್ ಬಹಿರಂಗವಾಗಿ ಹೇಳಿಕೆ ನೀಡಬೇಡಿ ಎಂದ ವಿಚಾರವಾಗಿ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಅವರು, ಪಕ್ಷದ ಶಿಸ್ತು ಉಲ್ಲಂಘನೆ ಆದ್ರೆ ಪಕ್ಷ ಶಿಥಿಲ ಆದಂತಾಗುತ್ತದೆ. ಹೀಗಾಗಿ ಮಾಧ್ಯಮದ ಎದುರು ಹೋಗಬೇಡಿ ಅಂದಿದ್ದಾರೆ, ಕಾಂಗ್ರೆಸ್ ಶಾಸಕಾಂಗ ಸಭೆಯಲ್ಲಿ ತಮ್ಮ ವಿಚಾರಗಳನ್ನು ಹೇಳಬಹುದಲ್ಲ. ಅದರ ಬದಲು ಮಾಧ್ಯಮಕ್ಕೆ ಹೋಗಿ ಹೇಳಿದ್ರೆ ಸಮಸ್ಯೆ ಬಗೆ ಹರಿಯೋದಿಲ್ಲ, ಆ ದೃಷ್ಟಿಯಿಂದ ಸುರ್ಜೆವಾಲಾ ಅವರು ಕಟ್ಟುನಿಟ್ಟಿನ ಆದೇಶ ನೀಡಿದ್ದಾರೆ ಎಂದು ತಿಳಿಸಿದರು.












Click it and Unblock the Notifications