'ಬಿಜೆಪಿ ನಾಯಕರ ಹೋರಾಟಕ್ಕೆ ಶುಭವಾಗಲಿ'
ಬೆಂಗಳೂರು, ಅ.14 : 'ನನ್ನ ವಿರುದ್ಧ ಬಿಜೆಪಿ ನಾಯಕರು ಮಾಡುವ ಹೋರಾಟಕ್ಕೆ ಶುಭವಾಗಲಿ. ರಾಜೀನಾಮೆ ಕೇಳುವುದು ಅವರ ಕೆಲಸ ಅದನ್ನು ಅವರು ಮಾಡಲಿ. ಸರಿಯಾದ ಸಮಯದಲ್ಲಿ ನಾನು ಉತ್ತರ ಕೊಡುವೆ' ಎಂದು ಇಂಧನ ಸಚಿವ ಡಿ.ಕೆ.ಶಿವಕುಮಾರ್ ಹೇಳಿದರು.
ಸೋಮವಾರ ಪತ್ರಿಕಾಗೋಷ್ಠಿ ನಡೆಸಿದ ಕರ್ನಾಟಕ ಬಿಜೆಪಿ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ, 'ಆದಾಯ ತೆರಿಗೆ ಇಲಾಖೆ ದಾಳಿಯ ವೇಳೆ ಅಪಾರ ಪ್ರಮಾಣದ ಅಘೋಷಿತ ಆಸ್ತಿ ಪತ್ತೆಯಾಗಿರುವ ಸಚಿವ ಡಿ.ಕೆ.ಶಿವಕುಮಾರ್, ರಮೇಶ ಜಾರಕಿಹೊಳಿ ಅವರು ಕೂಡಲೇ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕು' ಎಂದು ಹೇಳಿದ್ದರು.

'ಸಚಿವರು ರಾಜೀನಾಮೆ ನೀಡದಿದ್ದರೆ ಅವರಿಬ್ಬರನ್ನು ಸಂಪುಟದಿಂದ ಕೈಬಿಡಬೇಕು ಎಂದು ಆಗ್ರಹಿಸಿ ಶುಕ್ರವಾರದಿಂದ ಒಂದು ವಾರ ಹೋರಾಟ ನಡೆಸಲಾಗುವುದು' ಎಂದು ತಿಳಿಸಿದ್ದರು.
ಈ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ಡಿ.ಕೆ.ಶಿವಕುಮಾರ್, 'ಬಿಜೆಪಿ ನಾಯಕರ ಹೋರಾಟಕ್ಕೆ ಶುಭವಾಗಲಿ. ಡಾ.ರಾಜ್ ಕುಮಾರ್ ಅವರ ಡೈಲಾಗ್ ನಂತೆ ಹೇಳುವುದಕ್ಕೂ ಕೇಳುವುದಕ್ಕೂ ಇದು ಸಮಯವಲ್ಲ. ಸರಿಯಾದ ಸಮಯಕ್ಕೆ ಎಲ್ಲಾ ಹೇಳುತ್ತೇನೆ' ಎಂದು ಹೇಳಿದರು.
'ರಾಜೀನಾಮೆ ಕೇಳುವುದು ಅವರ ಹೋರಾಟದ ಒಂದು ಸ್ವರೂಪ. ಕೇಂದ್ರ ನಾಯಕರು ಬಂದು ಪ್ರತಿಭಟನೆ ಮಾಡಿ ಎಂದಾಗ ಮಾಡಲೇಬೇಕಾಗುತ್ತದೆ. ಅವರ ಹೋರಾಟಕ್ಕೆ ಶುಭವಾಗಲಿ' ಎಂದರು.












Click it and Unblock the Notifications