CM Siddaramaiah: ಬಾಡಿಗೆ ಮನೆ ರಹಸ್ಯ ಬಿಚ್ಚಿಟ್ಟ ಸಿಎಂ ಸಿದ್ದರಾಮಯ್ಯ
ಮೈಸೂರು, ಆಗಸ್ಟ್, 09: ಅಕ್ರಮ ಸೈಟು ಪ್ರಕರಣದ ವಿಚಾರವನ್ನು ಇಟ್ಟುಕೊಂಡು ಜೆಡಿಎಸ್-ಬಿಜೆಪಿ ನಾಯಕರು ಸಿದ್ದರಾಮಯ್ಯ ಅವರ ವಿರುದ್ಧ ಕೆಂಡಕಾರುತ್ತಿದ್ದಾರೆ. ಅಲ್ಲದೆ, ಪಾದಯಾತ್ರೆಯನ್ನು ಮಾಡಲೂ ಹೊರಟಿದ್ದಾರೆ. ಇನ್ನು ಇದಕ್ಕೆ ಠಕ್ಕರ್ ಕೊಟ್ಟಿರುವ ಸಿಎಂ ಸಿದ್ದರಾಮಯ್ಯ ಅವರು ಏನು ಹೇಳಿದ್ದಾರೆ ಎನ್ನುವ ಮಾಹಿತಿಯನ್ನು ಇಲ್ಲಿ ತಿಳಿಯಿರಿ.
ನನಗೆ ಹಣದ ಮೋಹ ಇದ್ದಿದ್ರೆ, ಕೋಟಿ.. ಕೋಟಿ.. ಹಣ ಮಾಡಬಹುದಿತ್ತು. ಇಷ್ಟು ದಿನಗಳು ಕಳೆದರೂ ನನಗೆ ಮೈಸೂರಿನಲ್ಲಿ ಮನೆ ಇಲ್ಲ. ಈಗ ಕಟ್ಟುತ್ತಿರುವ ಮನೆ ಬಿಟ್ಟು ನನ್ನ ಹೆಸರಿನಲ್ಲಿ ಒಂದೇ ಒಂದು ಸೈಟು ಇದ್ದರೆ ತೋರಿಸಿ, ಎಂದು ಬಿಜೆಪಿ ಆರೋಪಕ್ಕೆ ಸಿಎಂ ಸಿದ್ದರಾಮಯ್ಯ ಸವಾಲು ಹಾಕಿದರು.

ಮಹಾರಾಜ ಕಾಲೇಜು ಮೈದಾನದಲ್ಲಿ ನಡೆದ ಬೃಹತ್ ಜನಾಂದೋಲನ ಸಮಾವೇಶದಲ್ಲಿ ಮಾತನಾಡಿದ ಅವರು, ಮುಡಾ ಹಗರಣ ಸುಳ್ಳು ಆರೋಪವಾಗಿದೆ. ಹಿಂದಿದ್ದ ಮನೆಯನ್ನು ಸಾಲ ತೆಗೆದುಕೊಂಡು ಕಟ್ಟಿಸಿದ್ದೇನೆ. ಬಳಿಕ ಸಾಲ ತೀರಿಸಲಾಗದೆ ಆ ಮನೆಯನ್ನು ಮಾರಾಟ ಮಾಡಿ, ಬಳಿಕ ಬಾಡಿಗೆ ಮನೆಯಲ್ಲಿ ಇದ್ದುಕೊಂಡೇ ವಿಧಾನಸಭೆ, ಲೋಕಸಭೆ ಚುನಾವಣೆ ಮಾಡಿದೆ ಎಂದು ಹೇಳಿದರು.
ಮನುವಾದಿಗಳು, ಜಾತಿವಾದಿಗಳು ಯಾವತ್ತೂ ಸಹ ಶೋಷಿತರು ಅಧಿಕಾರ ನಡೆಸುವುದನ್ನು ಸಹಿಸುವುದಿಲ್ಲ. ನೀವೆಲ್ಲಾ ಪ್ರಜಾಪ್ರಭುತ್ವದ ಸೇನಾನಿಗಳು. ಸಂವಿಧಾನ, ಸಾಮಾಜಿಕ ನ್ಯಾಯ, ಪ್ರಜಾಪ್ರಭುತ್ವದ ರಕ್ಷಣೆಗೆ ನಿಂತ ನಾಡಿನ ಜನತೆಗೆ ಧನ್ಯವಾದ ಅರ್ಪಿಸುತ್ತೇನೆ. ದೇವರಾಜ ಅರಸು, ಬಂಗಾರಪ್ಪ ಅವರನ್ನೂ ಇವರು ಸಹಿಸಲಿಲ್ಲ, ಇದೀಗ ನನ್ನನ್ನೂ ಸಹಿಸುತ್ತಿಲ್ಲ ಎಂದು ಆಕ್ರೊಶ ಹೊರಹಾಕಿದರು.
ರಾಜ್ಯದ ಜನರ ಆಶೀರ್ವಾದದಿಂದ ಎರಡು ಬಾರಿ ಉಪ ಮುಖ್ಯಮಂತ್ರಿ, ಎರಡು ಬಾರಿ ಮುಖ್ಯಮಂತ್ರಿ ಆಗಿದ್ದೇನೆ. ಇಷ್ಟೆಲ್ಲಾ ಅಧಿಕಾರ ಸಿಕ್ಕರೂ ಕೂಡ ನನಗೆ ಹಣ ಮಾಡುವ ಆಸೆ ಬಂದಿಲ್ಲ. ನನ್ನ ಪತ್ನಿ ಇವತ್ತಿನವರೆಗೂ ಸಾರ್ವಜನಿಕವಾಗಿ ಕಾಣಿಸಿಲ್ಲ. ಎರಡು ಬಾರಿ ಸಿಎಂ ಆದರೂ ಪ್ರಮಾಣ ವಚನಕ್ಕೂ ಬರಲಿಲ್ಲ. ನಾವು ಭ್ರಷ್ಟಾಚಾರ ಮಾಡಲು ಸಾಧ್ಯವಿಲ್ಲ. ನಿಮ್ಮ ನಂಬಿಕೆಗೆ ದ್ರೋಹ ಬಗೆಯಲು ಆಗುತ್ತದೆಯೇ? ನಾನು ರಾಜಕೀಯದಲ್ಲಿ ಇರುವವರೆಗೂ ಯಾವಾಗಲೂ ನಿಮ್ಮ ನಂಬಿಕೆಗೆ ದ್ರೋಹ ಬಗೆಯುವುದಿಲ್ಲ ಎಂದರು.
ನಾನು ಸೊನ್ನೆಯಿಂದ ರಾಜಕೀಯ ಆರಂಭಿಸಿದೆ. 1983ರಲ್ಲಿ ಮೊದಲ ಚುನಾವಣೆಗೆ ಡೆಪಾಸಿಟ್ ಮಾಡಲು ನನ್ನ ಬಳಿ ಹಣ ಇರಲಿಲ್ಲ. ನನ್ನ ಕಚೇರಿ ಕ್ಲರ್ಕ್ ಆನಂದ್ 250 ರೂಪಾಯಿ ಡೆಪಾಸಿಟ್ ಕಟ್ಟಿದ್ದು, ಜನರೇ ಹಣ ಕೊಟ್ಟು ನನ್ನನ್ನು ಗೆಲ್ಲಿಸಿದರು. ಆ ಚುನಾವಣೆಯಲ್ಲಿ ಜನರೇ 63,000 ರೂಪಾಯಿ ಖರ್ಚು ಮಾಡಿ ನನ್ನನ್ನು ಆಯ್ಕೆ ಮಾಡಿದರು ಎಂದು ಹಳೇ ನೆನೆಪುಗಳನ್ನು ಮೆಲುಕು ಹಾಕಿದರು.
9 ಚುನಾವಣೆಗಳಲ್ಲಿ ಜನರೇ ಹಣ ಖರ್ಚು ಮಾಡಿ ನನ್ನನ್ನು ಗೆಲ್ಲಿಸಿದ್ದಾರೆ. ದಲಿತರು, ಶೋಷಿತರು, ಅಲ್ಪಸಂಖ್ಯಾತರ ಹಾಗೂ ಸಮಸ್ತ ಜನರ ಏಳಿಗೆಗಾಗಿ ಮಾತ್ರ ನನ್ನ ಅಧಿಕಾರ ಮುಡಿಪಾಗಿಟ್ಟಿದ್ದೇನೆ ಎಂದು ಹೇಳಿದರು.












Click it and Unblock the Notifications