CM Change: ಸಿಎಂ ಅಧಿಕಾರ ಹಂಚಿಕೆ ವಿಚಾರ ಚರ್ಚೆ: ಮಲ್ಲಿಕಾರ್ಜುನ ಖರ್ಗೆ ಕುರಿತು ಡಿ ಕೆ ಶಿವಕುಮಾರ್ ಏನಂದ್ರು?
ಬೆಂಗಳೂರು, ಮಾರ್ಚ್ 03: ಅಧಿಕಾರ ಹಂಚಿಕೆ ವಿಚಾರವಾಗಿ ಚರ್ಚೆ ಮಾಡದಂತೆ ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರು ಸೂಚನೆ ನೀಡಿದ್ದು, ನಾನು ಅವರ ಮಾತಿಗೆ ಬದ್ಧನಾಗಿದ್ದೇನೆ ಎಂದು ವಿಧಾನಸೌಧದ ಆವರಣದಲ್ಲಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದರು.
ಡಿ.ಕೆ. ಶಿವಕುಮಾರ್ ಸಿಎಂ ಆಗುವುದನ್ನು ಯಾರಿಂದಲೂ ತಪ್ಪಿಸಲು ಆಗುವುದಿಲ್ಲ ಎಂಬ ಮಾಜಿ ಸಿಎಂ ವೀರಪ್ಪ ಮೊಯ್ಲಿ ಅವರ ಹೇಳಿಕೆ ಕುರಿತು ಮಾಧ್ಯಮಗಳ ಜೊತೆಗೆ ಮಾತನಾಡಿ, ವೀರಪ್ಪ ಮೊಯ್ಲಿ ಅವರು ತಮ್ಮ ಅಭಿಪ್ರಾಯ ಹೇಳಿದ್ದಾರೆ. ನಾನು ಅದರ ಬಗ್ಗೆ ಚರ್ಚೆ ಮಾಡುವುದಿಲ್ಲ. ಅದರ ಅಗತ್ಯವಿಲ್ಲ ಎಂದು ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರು ತಿಳಿಸಿದರು. ಪ್ರತಿಕ್ರಿಯಿಸಿದರು.

ಕಾಂಗ್ರೆಸ್ ಪಕ್ಷದಲ್ಲಿ ನಾಯಕ ಪಟ್ಟವಿಲ್ಲ. ಪಕ್ಷಕ್ಕೆ ದುಡಿಯುವವರೆಲ್ಲರೂ ಕಾರ್ಯಕರ್ತರೇ. 2028 ರಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದೇ ಬರುತ್ತದೆ. ಎಲ್ಲಾ ಮುಖಂಡರು, ಕಾರ್ಯಕರ್ತರು ಒಗ್ಗಟ್ಟಾಗಿ ದುಡಿಯಬೇಕು. ಬೂತ್ ಮಟ್ಟದಲ್ಲಿ ಯಾರು ಪಕ್ಷಕ್ಕೆ ಹೆಚ್ಚು ಮತಗಳನ್ನು ತಂದುಕೊಡುತ್ತಾರೆಯೋ ಅವರೇ ನಾಯಕರು. ಈ ವಾರ, ಈ ತಿಂಗಳು, ಈ ವರ್ಷ ಪಕ್ಷ ಸಂಘಟನೆಯ ವರ್ಷ. ಬೆಳಗಾವಿಯಲ್ಲಿ ನಡೆದ ಕಾರ್ಯಾಕಾರಿ ಸಮಿತಿಯಲ್ಲಿ ಈ ವರ್ಷವನ್ನು ಪಕ್ಷ ಸಂಘಟನೆಯ ವರ್ಷ ಎಂದು ತೀರ್ಮಾನ ಮಾಡಲಾಗಿದೆ ಎಂದರು.
ಪಕ್ಷದ ಎಲ್ಲಾ ಹಂತಗಳ ಹಾಗೂ ಎಲ್ಲಾ ವಿಭಾಗಗಳನ್ನು ನೇಮಕಾತಿಯನ್ನು ಆದಷ್ಟು ಬೇಗ ಭರ್ತಿ ಮಾಡಬೇಕು. ಆದಷ್ಟು ಬೇಗ ಎಲ್ಲರಿಗೂ ಜವಾಬ್ದಾರಿ ನೀಡಬೇಕು. ಕಾಂಗ್ರೆಸ್ ಪಕ್ಷ ಇಲ್ಲದೇ ಹೋದರೆ ಈ ದೇಶ ಒಗ್ಗಟ್ಟಾಗಿ ಇರಲು ಸಾಧ್ಯವಿಲ್ಲ. ನಮ್ಮ ಪಕ್ಷ ಮಾತ್ರ ದೇಶವನ್ನು ಒಗ್ಗಟ್ಟಾಗಿ ತೆಗೆದುಕೊಂಡು ಹೋಗಲು ಸಾಧ್ಯ. ಸಂವಿಧಾನವೇ ನಮ್ಮ ಗ್ರಂಥ. ಮುಂದಿನ ಚುನಾವಣೆಯಲ್ಲಿ ಪರಶುರಾಮನ ಬೆಟ್ಟವನ್ನು ನೋಡಿ ಜನರು ಕಾಂಗ್ರೆಸ್ ಪಕ್ಷವನ್ನು ಆಯ್ಕೆ ಮಾಡುತ್ತಾರೆ. ಎನ್ನುವ ವಿಶ್ವಾಸ ನನಗಿದೆ. ಮತದಾರರಿಗೆ ಪರಶುರಾಮನ ಹೆಸರಿನಲ್ಲಿ ಬಿಜೆಪಿಯವರು ಭವ್ಯ ಕೆಲಸ ಮಾಡಿದ್ದಾರೆ ಎಂದು ತೋರಿಸಬೇಕು" ಎಂದು ಹೇಳಿದರು.
ಇನ್ನು ಜಿಲ್ಲಾ ಪಂಚಾಯಿತಿ ಹಾಗೂ ತಾಲೂಕು ಪಂಚಾಯಿತಿ ಚುನಾವಣೆ ನಡೆಸಲು ಸಿದ್ಧತೆ ನಡೆಸಲಾಗುತ್ತಿದೆ. ಈ ಅಧಿವೇಶನ ಸಂದರ್ಭದಲ್ಲಿ ಪರಾಜಿತ ಅಭ್ಯರ್ಥಿಗಳನ್ನು ಕರೆದು ಸಭೆ ಮಾಡಲಾಗುವುದು. ಯುವ ಕಾಂಗ್ರೆಸ್ ಚುನಾವಣೆಯಲ್ಲಿ ನೀವು ಗೆದ್ದಿರುವುದು ನಮ್ಮ ಪಕ್ಷದವರ ವಿರುದ್ಧವೇ ಹೊರತು ಬಿಜೆಪಿಯವರ ಮೇಲಲ್ಲ. ಯುವ ಕಾಂಗ್ರೆಸ್ ಸದಸ್ಯರಾಗಿರುವವರನ್ನು ಗೆದ್ದವರು ಹಾಗೂ ಸೋತವರು ಒಟ್ಟಾಗಿ ತೆಗೆದುಕೊಂಡು ಹೋಗಬೇಕು. ಇಲ್ಲಿ ಯಾವ ಗುಂಪು ಇರಬಾರದು. ಕಾಂಗ್ರೆಸ್ ಪಕ್ಷದಲ್ಲಿ ಗುಂಪುಗಾರಿಕೆ ಮಾಡಿದವರೆಲ್ಲಾ ಹೀರೋಗಳಿಂದ ಜೀರೋಗಳಾಗಿದ್ದಾರೆ ಎಂದು ಎಚ್ಚರಿಕೆ ನೀಡಿದರು.
ಮುಂದಿನ ಚುನಾವಣೆಯಲ್ಲಿ ಉಡುಪಿ ಹಾಗೂ ಮಂಗಳೂರು ಜಿಲ್ಲೆಗಳಿಂದ ಕನಿಷ್ಠ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಗೆಲ್ಲಬೇಕು. ನಾವು ಮುಂದಿನ ಮೂರರಿಂದ ಆರು ತಿಂಗಳು ನೋಡುತ್ತೇವೆ. ಇಲ್ಲವಾದರೆ ನಾವು ಹೊಸ ಅಭ್ಯರ್ಥಿಗಳನ್ನು ಹುಡುಕಿಕೊಳ್ಳುತ್ತೇವೆ. ನಮಗೆ ನಮ್ಮ ಅಭ್ಯರ್ಥಿ ಗೆಲ್ಲುವುದು ಮುಖ್ಯವೇ ಹೊರತು ವ್ಯಕ್ತಿಗಳಲ್ಲ ಎಂದು ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರು ತಿಳಿಸಿದರು.












Click it and Unblock the Notifications