ದೇವೇಗೌಡರ ವಿರುದ್ಧ ಸ್ಪರ್ಧಿಸಲು ಸಿದ್ಧ: ತೇಜಸ್ವಿನಿ
ಹಾಸನ, ಮಾ.17: ಕಾಂಗ್ರೆಸ್ ಪಕ್ಷಕ್ಕೆ ಗುಡ್ ಬೈ ಹೇಳಿ ಇತ್ತೀಚೆಗಷ್ಟೇ ಬಿಜೆಪಿ ಸೇರ್ಪಡೆಗೊಂಡಿರುವ ಮಾಜಿ ಸಂಸದೆ ತೇಜಸ್ವಿನಿ ರಮೇಶ್ ಅವರು ಮತ್ತೊಮ್ಮೆ ಮಾಜಿ ಪ್ರಧಾನಿ ಎಚ್. ಡಿ ದೇವೇಗೌಡರ ವಿರುದ್ಧ ಸ್ಪರ್ಧಿಸಲು ಸಿದ್ಧ ಎಂದು ಘೋಷಿಸಿದ್ದಾರೆ. ಬಿಜೆಪಿ ಹೈಕಮಾಂಡ್ ಬಯಸಿದರೆ ನಾನು ಮತ್ತೆ ಗೌಡರ ವಿರುದ್ಧ ಕಣಕ್ಕಿಳಿಯುತ್ತೇನೆ ಎಂದಿದ್ದಾರೆ.
ಹಾಸನದ ಬಿಜೆಪಿ ಮುಖಂಡರೊಬ್ಬರ ಮನೆಗೆ ಖಾಸಗಿ ಕಾರ್ಯಕ್ರಮದ ನಿಮಿತ್ತ ನಗರಕ್ಕೆ ಆಗಮಿಸಿದ ತೇಜಸ್ವಿನಿ ಅವರು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿ, ಎಚ್ ಡಿ ದೇವೇಗೌಡರ ವಿರುದ್ಧ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಲು ಸಿದ್ಧ. ಜನರ ಬೆಂಬಲವಿದ್ದರೆ ದೇವೇಗೌಡರಿಗೆ ಎರಡನೇ ಬಾರಿ ಸೋಲುಣಿಸುವ ವಿಶ್ವಾಸ ನನಗಿದೆ ಎಂದಿದ್ದಾರೆ.
ಹಾಸನ ಜಿಲ್ಲೆ ರಾಜಕೀಯವಾಗಿ ವಿಶೇಷತೆ ಹೊಂದಿದೆ. ಸ್ಪರ್ಧೆ ಬೇಡವೆನಿಸಿದರೆ ಪಕ್ಷದ ಹಿರಿಯ ನಾಯಕರ ಅಣತಿಯಂತೆ ಸಾಮಾನ್ಯ ಕಾರ್ಯಕರ್ತೆಯಾಗಿ ಈ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳ ಗೆಲುವಿಗಾಗಿ ಶ್ರಮಿಸುತ್ತೇನೆ ಎಂದಿದ್ದಾರೆ. ನಾನು ಚುನಾವಣಾ ಕಣಕ್ಕೆ ಇಳಿಯಬೇಕು ಎಂಬುದು ಯುವ ಕಾರ್ಯಕರ್ತರ ಒತ್ತಾಯವಾಗಿದೆ. ಆದರೆ, ಸ್ಪರ್ಧಿಸುವುದು, ಬಿಡುವುದು ಹೈಕಮಾಂಡ್ ಕೈಗೊಳ್ಳುವ ತೀರ್ಮಾನದ ಮೇಲೆ ನಿರ್ಧಾರವಾಗುತ್ತದೆ ಎಂದರು. ಹಾಸನ ಬಿಜೆಪಿ ಅಭ್ಯರ್ಥಿ ಯಾರು? ಮುಂದೆ ಓದಿ...

ಹಾಸನ ಕ್ಷೇತ್ರ ಬಿಜೆಪಿ ಅಭ್ಯರ್ಥಿ ಯಾರು?
ಮೈಸೂರಿನ ಸಿ.ಎಚ್ ವಿಜಯ್ ಶಂಕರ್ ಅವರ ವಿಧಾನ ಪರಿಷತ್ ಅವಧಿ ಇನ್ನೂ ನಾಲ್ಕು ವರ್ಷ ಬಾಕಿ ಇದೆ. ಮೇಲ್ಮನೆ ಸದಸ್ಯತ್ವ ಕಳೆದುಕೊಂಡು ಸ್ವಕ್ಷೇತ್ರ ಬಿಟ್ಟು ಹಾಸನಕ್ಕೆ ಬಂದು ಸ್ಪರ್ಧಿಸುವುದು ನನಗೆ ಬೇಡ ಎಂದು ವಿಜಯ್ ಶಂಕರ್ ಹಠ ಹಿಡಿದಿದ್ದಾರೆ. ಹೀಗಾಗಿ ತೇಜಸ್ವಿನಿ ಏಕೆ ಸ್ಪರ್ಧಿಸಬಾರದು ಎಂಬ ಮಾತುಗಳು ಕೇಳಿ ಬಂದಿವೆ.

ತೇಜಸ್ವಿನಿ ಎದುರು ಸೋಲುಕಂಡಿದ್ದ ಗೌಡರು
ಈ ಹಿಂದೆ 2004ರಲ್ಲಿ ಕನಕಪುರ(ಬೆಂಗಳೂರು ಗ್ರಾಮಾಂತರ) ಲೋಕಸಭೆ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದ ತೇಜಸ್ವಿನಿ ರಮೇಶ್ ಗೌಡ ಅವರು ಎಚ್ ಡಿ ದೇವೇಗೌಡ ಅವರನ್ನು 1.22 ಲಕ್ಷಕ್ಕೂ ಅಧಿಕ ಮತಗಳ ಅಂತರದಿಂದ ಸೋಲಿಸಿ ಸಂಸತ್ತು ಪ್ರವೇಶಿದ್ದರು. ಈ ಮೂಲಕ 'ದೈತ್ಯ ಸಂಹಾರಿ' ಎನಿಸಿದ್ದರು. ನಂತರ ಕಾಂಗ್ರೆಸ್ ತೊರೆದು ಬಿಜೆಪಿ ಸೇರ್ಪಡೆಗೊಂಡಿದ್ದಾರೆ.

ಬಿಜೆಪಿ ಬಿ-ಫಾರಂ ಯಾರಿಗೆ ನೀಡಲಿದೆ
ಒಟ್ಟಾರೆ, ಹಾಸನದಲ್ಲಿ ಇತ್ತೀಚಿನ ಬೆಳವಣಿಗೆಗಳು ಅಂತಿಮವಾಗಿ ಬಿಜೆಪಿ ಬಿ-ಫಾರಂ ಈ ಕ್ಷೇತ್ರದಲ್ಲಿ ಯಾರಿಗೆ ನೀಡಲಿದೆ ಎನ್ನುವದು ಕುತೂಹಲಕ್ಕೆ ಎಡೆ ಮಾಡಿ ಕೊಟ್ಟಿದೆ. ನವಿಲೆ ಅಣ್ಣಪ್ಪ ಅವರ ಹೆಸರೂ ಬಿಜೆಪಿಯಲ್ಲಿ ಕೇಳಿ ಬರುತ್ತಿದೆ. ಕಾಂಗ್ರೆಸ್ ಈಗಾಗಲೇ ಗೌಡರ ವಿರುದ್ದ ಎ ಮಂಜು ಅವರನ್ನು ಕಣಕ್ಕಿಳಿಸಿದೆ.

ಜ್ಯೋತಿಷಿಗಳ ಮಾತನ್ನು ಯಾರು ನಂಬಿದ್ದಾರೆ?
ಜ್ಯೋತಿಷಿಗಳ ಮಾತನ್ನು ವಸ್ತುನಿಷ್ಠವಾಗಿ ಆಲಿಸಿ, ಪಾಲಿಸಿಕೊಂಡು ಬರುವ ದೇವೇಗೌಡರಿಗೆ ಚುನಾವಣೆಯಲ್ಲಿ ಮಹಿಳೆ ಎದುರಾಳಿಯಾದರೆ ಸೋಲು ಎನ್ನುವ ಭವಿಷ್ಯವನ್ನು ಹಿಂದೊಮ್ಮೆ ಜ್ಯೋತಿಷಿಗಳು ನುಡಿದಿದ್ದರಂತೆ. ಅದು ನಿಜವೇ? ಮುಂದೆ ಓದಿ

ಹಾಸನದಲ್ಲಿ ಬಿಜೆಪಿ ಬಾವುಟ ಹಾರುವುದೇ?
ಕಳೆದ ಬಾರಿಯ (2009) ಲೋಕಸಭಾ ಚುನಾವಣೆಯಲ್ಲಿ ದೇವೇಗೌಡ ತನ್ನ ಸಮೀಪದ ಪ್ರತಿಸ್ಪರ್ಧಿ ಬಿಜೆಪಿಯ ಕೆ ಎಚ್ ಹನುಮೇ ಗೌಡ ಅವರನ್ನು ಸುಮಾರು 2.9 ಲಕ್ಷ ಮತಗಳ ಅಂತರದಿಂದ ಸೋಲಿಸಿದ್ದರು. ಆ ಚುನಾವಣೆಯಲ್ಲಿ ಕಾಂಗ್ರೆಸ್ಸಿನ ಬಿ ಶಿವರಾಮು ಮೂರನೇ ಸ್ಥಾನಕ್ಕೆ ತಳ್ಳಲ್ಪಟ್ಟಿದ್ದರು. ಆದರೆ, ಈ ಬಾರಿ ದೇವೇಗೌಡರ ವಿರುದ್ಧ ತೇಜಸ್ವಿನಿ ಸ್ಪರ್ಧಿಸಿದರೆ ರಾಜಕೀಯ ಚಿತ್ರಣ ಬದಲಾಗುವ ಸಾಧ್ಯತೆ ಇದೆ ಎನ್ನಲಾಗಿದೆ.












Click it and Unblock the Notifications