ಕೇವಲ 135 ಸ್ಥಾನಗಳಿಂದ ನನಗೆ ಸಂತೋಷವಿಲ್ಲ ಎಂದ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್!
ಬೆಂಗಳೂರು, ಮೇ. 21: ಕರ್ನಾಟಕದ ನೂತನ ಉಪಮುಖ್ಯಮಂತ್ರಿ ಹಾಗೂ ರಾಜ್ಯ ಕಾಂಗ್ರೆಸ್ ಮುಖ್ಯಸ್ಥ ಡಿಕೆ ಶಿವಕುಮಾರ್ ಅವರು 2024 ರ ಸಾರ್ವತ್ರಿಕ ಚುನಾವಣೆಗೆ ಶಾಂತಿಯನ್ನು ಕಾಪಾಡಿಕೊಳ್ಳಲು ಮತ್ತು ಕಟ್ಟುನಿಟ್ಟಿನಿಂದ ಕೆಲಸ ಮಾಡಲು ಪಕ್ಷದ ಕಾರ್ಯಕರ್ತರಿಗೆ ಮನವಿ ಮಾಡಿದ್ದಾರೆ. ಪಕ್ಷದ ಸದಸ್ಯರು ಶಿಸ್ತುಬದ್ಧವಾಗಿರಬೇಕು ಮತ್ತು ನಿರ್ಣಾಯಕ ಸಮಯದಲ್ಲಿ ಸರಿಯಾದ ವಿಷಯಗಳತ್ತ ಗಮನ ಹರಿಸಬೇಕು ಎಂದು ಅವರು ಒತ್ತಿ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರ ಶ್ರದ್ಧಾಂಜಲಿ ಸಮಾರಂಭದಲ್ಲಿ ಮಾತನಾಡಿದ ಡಿಕೆ ಶಿವಕುಮಾರ್, ನಿಮ್ಮೆಲ್ಲರ ಮುಂದೆ ಒಂದು ವಿಷಯ ನಾನು ಒಪ್ಪಿಕೊಳ್ಳುತ್ತೇನೆ. ವಿಧಾನಸಭಾ ಚುನಾವಣೆಯಲ್ಲಿ ನಾವು ಗಳಿಸಿದ 135 ಸ್ಥಾನಗಳಿಂದ ನನಗೆ ಸಂತೋಷವಿಲ್ಲ" ಎಂದು ತುಂಬಿದ ಸಭೆಯಲ್ಲಿ ಡಿಕೆ ಶಿವಕುಮಾರ್ ಹೇಳಿದ್ದಾರೆ.

"ನಮ್ಮ ಗಮನವು ಸರಿಯಾದ ಸ್ಥಳದಲ್ಲಿರಬೇಕು. ಅದು ಮುಂಬರುವ ಸಾರ್ವತ್ರಿಕ ಚುನಾವಣೆಗಳ ಮೇಲೆ. ಇನ್ನು ಮುಂದೆ ಪ್ರತಿ ಸಮೀಕ್ಷೆಯಲ್ಲೂ ಕಾಂಗ್ರೆಸ್ ಪಕ್ಷ ಉತ್ತಮ ಸಾಧನೆ ಮಾಡಬೇಕು, ನಾವೆಲ್ಲರೂ ಶ್ರಮಿಸಬೇಕಾಗಿದೆ. ಇದು ಕೇವಲ ಒಂದು ಆರಂಭ ಮತ್ತು ಕೇವಲ ಒಂದು ಗೆಲುವಿನಿಂದ ಸೋಮಾರಿಯಾಗಬೇಡಿ' ಎಂದು ಕಾರ್ಯಕರ್ತರಲ್ಲಿ ಮನವಿ ಮಾಡಿದ್ದಾರೆ.
ರಾಜ್ಯದಲ್ಲಿ ಶಾಂತಿ ಕಾಪಾಡುವಂತೆ ಪಕ್ಷದ ಕಾರ್ಯಕರ್ತರನ್ನು ಒತ್ತಾಯಿಸಿದ ಅವರು, 'ಯಾವುದೇ ಕಾರಣಕ್ಕೂ ನನ್ನ ಮನೆ ಅಥವಾ ಸಿದ್ದರಾಮಯ್ಯನವರ ಮನೆಯಲ್ಲಿ ಜಮಾಯಿಸಬೇಡಿ. ರಾಜ್ಯದಲ್ಲಿ ಶಾಂತಿ ಕಾಪಾಡಬೇಕು, ಮುಂದಿನ ಐದು ವರ್ಷಗಳ ಕಾಲ ಸದೃಢ ಆಡಳಿತ ನೀಡಬೇಕಿದೆ. ಯಾವುದೇ ನಾಯಕನಿಗೆ ಏನಾಗಲಿ, ಪಕ್ಷವು ಪ್ರಾಥಮಿಕ ಆದ್ಯತೆಯಾಗಿರಬೇಕು. ಪಕ್ಷಕ್ಕಾಗಿ ಕೆಲಸ ಮಾಡುವುದು ಮಾತ್ರ ಫಲಿತಾಂಶವನ್ನು ತರುತ್ತದೆ' ಎಂದು ಕಿವಿ ಮಾತು ಹೇಳಿದ್ದಾರೆ.
ಕರ್ನಾಟಕದ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿಯಾಗಿ ಡಿಕೆ ಶಿವಕುಮಾರ್ ಶನಿವಾರ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಮೇ 10 ರಂದು 224 ಸದಸ್ಯ ಬಲದ ಕರ್ನಾಟಕ ವಿಧಾನಸಭೆಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ 135 ಸ್ಥಾನಗಳನ್ನು ಗಳಿಸಿದೆ. ಆಡಳಿತಾರೂಢ ಬಿಜೆಪಿ 66 ಸ್ಥಾನಗಳನ್ನು ಪಡೆದುಕೊಂಡಿತು ಮತ್ತು ಜಾತ್ಯತೀತ ಜನತಾ ದಳ 9 ಸ್ಥಾನಗಳನ್ನು ಗಳಿಸಿದೆ.












Click it and Unblock the Notifications