ನಾನು ಚಿತ್ರರಂಗದಿಂದ ದೂರ ಹೋಗಲ್ಲ: ಸ್ಪಷ್ಟನೆ ನೀಡಿದ ನಿಖಿಲ್ ಕುಮಾರಸ್ವಾಮಿ
ಬೆಂಗಳೂರು, ಜೂನ್ 09: ನನಗೆ ರಾಜ್ಯದಲ್ಲಿ ಪಕ್ಷ ಕಟ್ಟುವ ಜವಾಬ್ದಾರಿಯನ್ನು ವರಿಷ್ಠರು ನೀಡಿದ್ದಾರೆ. ಹೀಗಾಗಿ ಇನ್ನು ಮುಂದೆ ಸಿನಿಮಾಗಳಲ್ಲಿ ನಟಿಸುವುದಿಲ್ಲ. ಸಿನಿಮಾ ಮಾಡುವ ಬಗ್ಗೆ ಸದ್ಯಕ್ಕೆ ಯಾವುದೇ ಆಲೋಚನೆ ಇಲ್ಲ ಎಂದು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಹೇಳಿದ್ದರು.
ಈ ಹೇಳಿಕೆಯಿಂದ ನಟರಾಗಿದ್ದ ನಿಖಿಲ್ ಕುಮಾರಸ್ವಾಮಿ ಸಿನಿಮಾ ರಂಗಕ್ಕೆ ಗುಡ್ ಬೈ ಹೇಳಿದ್ದಾರೆ ಎನ್ನುವ ಸುದ್ದಿ ಎಲ್ಲಡೆ ಹರಿದಾಡಿತ್ತು. ಹೀಗಾಗಿ ಈ ಬಗ್ಗೆ ಸ್ಪಷ್ಟನೆ ನೀಡಿದ ನಿಖಿಲ್ ನಾನು ಚಿತ್ರರಂಗದಿಂದ ದೂರ ಹೋಗಲ್ಲ ಇದು ಸಣ್ಣ ವಿರಾಮವಷ್ಟೇ ಎಂದಿದ್ದಾರೆ.

ಒಂದು ವಿಚಾರವಾಗಿ ನಾನು ಸ್ಪಷ್ಟನೆ ನೀಡಬೇಕಾಗುತ್ತದೆ. ನಾನು ಹೇಳಿದ ರೀತಿ ತಪ್ಪಾಗಿ ಅರ್ಥವಾಗಿದೆ ಅನಿಸುತ್ತದೆ. ನಾನೇ ನಿನ್ನೆ ಮಾತನಾಡಿದ ಮೇಲೆ ಕುಳಿತುಕೊಂಡು ಯೋಚನೆ ಮಾಡಿದೆ. ಸಾರ್ವಜನಿಕ ಜೀವನದಲ್ಲಿ ಮೊದಲು ನಿಖಿಲ್ ಕುಮಾರಸ್ವಾಮಿ ಯಾರು ಎನ್ನುವುದನ್ನು ಗುರುತಿಸಿದ್ದು, ನಟನಾಗಿ.
ರಾಜಕೀಯ ಹಿನ್ನೆಲೆಯಲ್ಲಿ ಬಂದ ನನಗೆ ಇವತ್ತು ಇಷ್ಟೊಂದು ಪ್ರೀತಿ, ವಿಶ್ವಾಸ, ಗೌರವ ನೀಡಿದ್ದು ಕನ್ನಡ ಚಿತ್ರರಂಗದ ಅಭಿಮಾನಿಗಳು. ಇದನ್ನು ನಾನು ಮರೆಯಲು ಸಾಧ್ಯವಿಲ್ಲ. ನಾನು ಮಾಡಿರುವುದು ಕೆಲವೇ ಕೆಲವು ಚಿತ್ರಗಳಾದರೂ ಸಹ ನನ್ನನ್ನು ಪ್ರೋತ್ಸಾಹ ಮಾಡಿದ್ದಾರೆ. ಯಶಸ್ಸು ಕೊಟ್ಟಿದ್ದಾರೆ ಎಂದರು.

ಸದ್ಯ ರಾಜಕೀಯ ವಿಷಯವಾಗಿ ಸಂಘಟನೆಯ ಕಾರಣದಿಂದ ನನಗೆ ಜವಾಬ್ದಾರಿಗಳಿವೆ. ಹೀಗಾಗಿ ಚಿತ್ರರಂಗದಿಂದ ಸ್ವಲ್ಪ ವಿರಾಮ ತೆಗೆದುಕೊಂಡಿದ್ದೇನೆ. ಆದರೆ ಸಿನಿಮಾ ರಂಗ ನನಗೆ ಇವತ್ತು ಏನನ್ನು ಕೊಟ್ಟಿದೆ. ಅದನ್ನು ನಾನು ಮರೆಯಲು ಸಾಧ್ಯವಿಲ್ಲ. ಇವತ್ತು ನಾನು ಯಾವ ಹಳ್ಳಿಗೆ ಹೋದರು ಅಷ್ಟೇ, ಎಲ್ಲಿ ಹೋದರೂ ಅಷ್ಟೇ.
ದೆಹಲಿಗೆ ಹೋದರೂ ಅಷ್ಟೇ ಒಬ್ಬ ನಟನಾಗಿ ನನ್ನನ್ನು ಗುರುತಿಸುತ್ತಾರೆ. ಅದು ನನಗೆ ಬಹಳ ಹೆಮ್ಮೆ ಇದೆ. ಅದು ಸಿಕ್ಕಿದ್ದು ಕನ್ನಡಿಗರಿಂದ. ರಾಜಕರಣದಲ್ಲಿ ಹೆಚ್ಚಿನ ಜವಾಬ್ದಾರಿ ಇದೆ, ನಿರೀಕ್ಷೆ ಇದೆ. ಪಕ್ಷವನ್ನು ಕಟ್ಟುವ ಜವಾಬ್ದಾರಿ ಇದೆ ಹೀಗಾಗಿ ಸದ್ಯ ಇದನ್ನು ಮುಂದುವರಿಸುತ್ತೇನೆ ಎಂದರು.












Click it and Unblock the Notifications