ರಾಹುಕಾಲ, ಯಮಗಂಡ ಕಾಲದ ಬಗ್ಗೆ ಸಿಎಂ ಸಿದ್ದು ಹೇಳಿದ್ದು ಹೀಗೆ..
ಮೈಸೂರು, ಅ 24: ಕಾಲದಲ್ಲಿ ಎಲ್ಲಾ ಕಾಲವೂ ಒಂದೇ, ರಾಹುಕಾಲ ಅಥವಾ ಯಮಗಂಡಕಾಲದಲ್ಲಿ ನನಗೆ ನಂಬಿಕೆಯಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ನಗರದಲ್ಲಿ ಮಾಧ್ಯಮದರೊಂದಿಗೆ ಮಾತನಾಡುತ್ತಿದ್ದ ಮುಖ್ಯಮಂತ್ರಿಗಳು, ಮೈಸೂರು ಜಂಬೂಸವಾರಿ ಮೆರವಣಿಗೆಗೆ ಯಮಗಂಡ ಕಾಲದಲ್ಲಿ ಚಾಲನೆ ನೀಡಲಾಗಿದೆ ಎಂಬ ವಿಷಯಕ್ಕೆ ಹೆಚ್ಚಿನ ಮಹತ್ವ ನೀಡಲಾರೆ.
ಎಲ್ಲಾ ಕಾಲಗಳು ಒಳ್ಳೆಯವೇ. ಕೆಲಸ ಮಾಡುವ ಮನುಷ್ಯನಿಗೆ ಒಳ್ಳೆಯ ಮನಸ್ಥಿತಿ ಇದ್ದರೆ ಸಾಕು. ಇದರ ಜೊತೆಗೆ ಈ ಕಾಲಗಳನ್ನು ನಂಬುವವನು ನಾನಲ್ಲ, ಈ ಬಗ್ಗೆ ಹೆಚ್ಚಿನ ಚರ್ಚೆ ಅನಗತ್ಯ ಎಂದು ಸಿದ್ದರಾಮಯ್ಯ ಹೇಳಿದ್ದಾರೆ. (ಅಪಶಕುನದ ಚರ್ಚೆಗೆ ನಾಂದಿ ಹಾಡಿದ ಮೈಸೂರು ದಸರಾ)
ಒಳ್ಳೆಯ ಮನಸ್ಸು ಉಳ್ಳ ವ್ಯಕ್ತಿ ಯಾವುದೇ ಕೆಲಸ ಮಾಡಿದರೂ ಶ್ರೇಯಸ್ಸು ಆಗುತ್ತದೆ. ರಾಹುಕಾಲ, ಗುಳಿಗಕಾಲ, ಯಮಗಂಡ ಕಾಲ ಎಲ್ಲಾ ನಮ್ಮ ನಮ್ಮ ನಂಬಿಕೆಗೆ ಬಿಟ್ಟ ವಿಚಾರ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.(ರಾಹುಕಾಲ ಗುಳಿಕಕಾಲ ಯಾಕ್ರೀ ನೋಡಬೇಕು)
ಶುಕ್ರವಾರ (ಅ 24) 12.16ರ ಶುಭಧನುರ್ ಲಗ್ನದಲ್ಲಿ ನಂದಿಧ್ವಜಕ್ಕೆ ಪೂಜೆ ಮಾಡಿ, ಪುಷ್ಪಾರ್ಚನೆ 3.08ರ ಯಮಗಂಡ ಕಾಲದಲ್ಲಿ ಮಾಡಲಾಗಿದೆ. ಇದು ಶುಭಸೂಚನೆಯಲ್ಲ ಎಂದು ಚರ್ಚೆ ಆರಂಭವಾಗಿತ್ತು. ಇದಕ್ಕೆ ಪ್ರತಿಕ್ರಿಯಿಸುತ್ತಾ ಸಿಎಂ ಈ ಮೇಲಿನ ಹೇಳಿಕೆಯನ್ನು ನೀಡಿದ್ದಾರೆ. ಮುಂದೆ ಓದಿ..

ಕಾಲದಿಂದ ಯಶಸ್ಸು ಸಾಧ್ಯವೇ?
ಇತರರಿಗೆ ಒಳ್ಳೆಯದನ್ನು ಬಯಸುವುದು ಒಳ್ಳೆಯ ಪದ್ದತಿ. ದ್ವೇಷ ಸಾಧಿಸಿದರೆ ಯಾರಿಗೂ ಒಳ್ಳೆಯದಾಗುವುದಿಲ್ಲ. ಒಳ್ಳೆಯ ಕೆಲಸ ಮಾಡಲು, ಒಳ್ಳೆಯ ಮನಸ್ಸಿದ್ದರೆ ಸಾಕು. ಮನುಷ್ಯರ ಯಶಸ್ಸನ್ನು ಕಾಲದಿಂದ ಅಳೆಯಲು ಸಾಧ್ಯವಿಲ್ಲ - ಮುಖ್ಯಮಂತ್ರಿ ಸಿದ್ದರಾಮಯ್ಯ

ರಾಹುಕಾಲ ಎಲ್ಲಾ ಸುಳ್ಳು
ಮಕ್ಕಳು ಹುಟ್ಟುವುದಕ್ಕೂ ಕಾಲದ ಲೆಕ್ಕಾಚಾರ ಹಾಕುವುದು ತಪ್ಪು. ಗುಳಿಕ ಕಾಲದಲ್ಲಿ ಹುಟ್ಟಿದ ಮಕ್ಕಳು ಒಳ್ಳೆಯವರಾಗುತ್ತಾರೆ. ಯಮಗಂಡ, ರಾಹುಕಾಲದಲ್ಲಿ ಹುಟ್ಟಿದ ಮಕ್ಕಳು ಕೆಟ್ಟವರಾಗುತ್ತಾರೆ ಎನ್ನುವುದೆಲ್ಲಾ ಸುಳ್ಳು ಎಂದು ಸಿದ್ದರಾಮಯ್ಯ ತಮ್ಮ ನಿಲುವನ್ನು ಸಮರ್ಥಿಸಿಕೊಂಡಿದ್ದಾರೆ.

ದೆಹಲಿಗೆ ಹೋಗುವಾಗ ನಿಮಗೆ ತಿಳಿಸುತ್ತೇನೆ
ಸಚಿವ ಸಂಪುಟ ಪುನಾರಾರಚನೆಗೆ ದೆಹಲಿಗೆ ಹೋಗುವ ಮುನ್ನ ನಿಮಗೆ ಖಂಡಿತ ತಿಳಿಸುತ್ತೇನೆ ಎಂದು ಮಾಧ್ಯಮದವರಿಗೆ ಹಾಸ್ಯ ಚಟಾಕಿ ಹಾರಿಸಿದ ಸಿಎಂ, ದಿಗ್ವಿಜಯ್ ಸಿಂಗ್ ಮತ್ತು ಹೈಕಮಾಂಡ್ ಅವರನ್ನು ಭೇಟಿಯಾಗುವ ಕಾರ್ಯಕ್ರಮವಿದೆ ಎಂದಿದ್ದಾರೆ.

ನೀರು ಬಿಡುವುದಿಲ್ಲ
ಕಾವೇರಿ ಸಂಕಷ್ಟ ಸೂತ್ರದನ್ವಯ ತಮಿಳುನಾಡಿಗೆ ನೀರು ಬಿಡಲಾಗಿದೆ. ಇನ್ನು ಮುಂದೆ ಬಿಡಲಾಗುವುದಿಲ್ಲ ಜಲಾಶಯದ ಮಟ್ಟ ಕುಸಿಯುತ್ತಿದೆ, ಮೂರು ಜಿಲ್ಲೆಗಳಿಗೆ ಬೇಕಾದಷ್ಟು ಮಾತ್ರ ನೀರಿದೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

ಅಪಶಕುನದ ಚರ್ಚೆ
ಶುಭಧನುರ್ ಲಗ್ನದಲ್ಲಿ ನಂದಿಧ್ವಜಕ್ಕೆ ಪೂಜೆ ಮಾಡಿದ್ದರೆ ಪುಷ್ಪಾರ್ಚನೆ 3.08ರ ಯಮಗಂಡ ಕಾಲದಲ್ಲಿ ಮಾಡಲಾಗಿದೆ. ಸಿಎಂ ಎರಚಿದ ಪುಷ್ಪ ಚಾಮುಂಡೇಶ್ವರಿ ಮೇಲೆ ಬೀಳದೆ ಅದು ಆನೆ ಮೇಲೆ ಬಿದ್ದಿದೆ. ಚಾಮುಂಡೇಶ್ವರಿ ಉತ್ಸವ ಮೂರ್ತಿಯನ್ನು ಮುಟ್ಟಿ ನಮಸ್ಕರಿಸಿರುವುದು ಕೂಡ ಸರಿಯಿಲ್ಲ ಎಂಬ ಅಪಸ್ವರ ಕೇಳಿ ಬರುತ್ತಿದೆ.