ನಾನು ಚಿತ್ರದುರ್ಗ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ: ಚಿತ್ರನಟಿ ಭಾವನಾ
ಮಂಗಳೂರು, ಫೆಬ್ರವರಿ 4: ನಾನು ಚಿತ್ರದುರ್ಗ ವಿಧಾನ ಸಭಾ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿದ್ದು, ಪಕ್ಷ ಅವಕಾಶ ನೀಡಿದಲ್ಲಿ ಆ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸುವುದಾಗಿ ಕೆಪಿಸಿಸಿ ಕಾರ್ಯದರ್ಶಿ ಹಾಗು ಚಿತ್ರ ನಟಿ ಭಾವನಾ ತಿಳಿಸಿದ್ದಾರೆ.
ಮಂಗಳೂರಿನಲ್ಲಿ ಶನಿವಾರ ಮಾಧ್ಯಮ ಗೋಷ್ಟಿ ಉದ್ದೇಶಿಸಿ ಮಾತನಾಡಿದ ಅವರು ಪಕ್ಷದಲ್ಲಿ ನನಗೆ ಆಶ್ವಾಸನೆಗಿಂತ ಹೆಚ್ಚಾಗಿ ನೈತಿಕ ಬೆಂಬಲ ದೊರಕುತ್ತಿದೆ ಎಂದು ಹೇಳಿದರು.
ಚಿತ್ರದುರ್ಗ ಮೂಲತಃ ನನ್ನ ತಂದೆ ಊರಾಗಿದ್ದರಿಂದ ಅಲ್ಲಿ ಸ್ಪರ್ಧಿಸುವ ಆಕಾಂಕ್ಷೆಯಿದೆ. ಜನರೊಂದಿಗೆ ಹೆಚ್ಚು ಸಂಪರ್ಕ ಬೆಳೆಸುವ ನಿಟ್ಟಿನಲ್ಲಿ ಬೆಂಗಳೂರು ನಗರ ಬಿಟ್ಟು ಚಿತ್ರದುರ್ಗ ಆಯ್ಕೆ ಮಾಡಿಕೊಂಡಿದ್ದೇನೆ ಎಂದು ಅವರು ಹೇಳಿದರು.

ರಾಜ್ಯ ಸರಕಾರ ಅಭಿವೃದ್ಧಿ ಪರವಾಗಿದೆ. ಸರಕಾರದ 'ಹಸಿವು ಮುಕ್ತ ಕರ್ನಾಟಕ' ಯೋಜನೆ ವಿಶೇಷವಾದುದು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ದ. ಕ. ಜಿಲ್ಲೆಯಲ್ಲಿ ವಿದ್ಯಾವಂತರು ಹೆಚ್ಚು. ಆದರೆ, ಯಾವುದು ಸರಿ ಯಾವುದು ತಪ್ಪು ಎಂಬ ತಿಳುವಳಿಕೆ ಇಲ್ಲಿ ಕಡಿಮೆಯಾಗುತ್ತಿದೆ ಎಂದು ಅವರು ಇದೇ ಸಂದರ್ಭದಲ್ಲಿ ವಿಷಾದ ವ್ಯಕ್ತಪಡಿಸಿದರು. ನಗದು ಅಪಮೌಲ್ಯೀಕರಣದಿಂದಾಗಿ ದೇಶವನ್ನೇ ಮುಳುಗಿಸುವ ಕೆಲಸ ಕೇಂದ್ರದಿಂದ ನಡೆದಿದೆ ಎಂದು ಅವರು ಆರೋಪಿಸಿದರು.












Click it and Unblock the Notifications