ಇವರಿಬ್ಬರ ಆಶೀರ್ವಾದ ಪಡೆದುಕೊಂಡರೆ ಅನುದಾನ : ಬಾಲಕೃಷ್ಣ ಹೇಳಿದ್ದೇನು?
ರಾಮನಗರ, ಜೂನ್ 25: ರಾಜ್ಯ ಕಾಂಗ್ರೆಸ್‌ನಲ್ಲಿ ದಿನದಿಂದ ದಿನಕ್ಕೆ ಹಿರಿಯ ಶಾಸಕರಿಂದ ಅಸಮಾಧಾನ ಸ್ಪೋಟಗೊಳುತ್ತಿದೆ. ಪಂಚ ಗ್ಯಾರಂಟಿ ಯೋಜನೆಗಳನ್ನ ರಾಜ್ಯದಲ್ಲಿ ಜಾರಿಗೊಳಿಸಿದ ನಂತರ ನಮ್ಮ ಕ್ಷೇತ್ರಗಳಿಗೆ ಸರಿಯಾಗಿ ಅನುದಾನ ಸಿಗುತ್ತಿಲ್ಲ ಎಂದು ಬಹಿರಂಗವಾಗಿಯೇ ಕಾಂಗ್ರೆಸ್ ಶಾಸಕರೇ ಅಸಮಾಧಾನವನ್ನ ಹೊರ ಹಾಕುತ್ತಿದ್ದರೇ. ಆದರೆ ಮಾಗಡಿ ಶಾಸಕ ಎಚ್.ಸಿ. ಬಾಲಕೃಷ್ಣ ಅವರು ನನಗೆ ಅವರ ಆಶೀರ್ವಾದದಿಂದ ಅನುದಾನ ಸಿಗುತ್ತಿದೆ ಎಂದು ಹೇಳಿದ್ದಾರೆ.
ಮಾಗಡಿ ತಾಲ್ಲೂಕಿನ ಬಿಡದಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಮಾಗಡಿ ಶಾಸಕ ಎಚ್.ಸಿ. ಬಾಲಕೃಷ್ಣ ಅವರು, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮತ್ತು ಡಿ.ಕೆ.ಸುರೇಶ್ ಆಶೀರ್ವಾದ ಇರೋದಕ್ಕೆ ನನಗೆ ಅನುದಾನ ಸಿಗುತ್ತಿದೆ. ನಮಗೆ ತೃಪ್ತಿ ಇದೆ. ಅವರ ಆಶೀರ್ವಾದ ಪಡೆದುಕೊಂಡರೆ ಅನುದಾನ ಸಿಗಬಹುದು ಎಂದು ತಿಳಿಸಿದರು. ಕಾಂಗ್ರೆಸ್ ಪಕ್ಷದ ಹಿರಿಯ ಶಾಸಕರಲ್ಲಿ ಮನವಿ ಮಾಡುತ್ತೇನೆ. ನಿಮ್ಮ ಜಿಲ್ಲೆಯ ಉಸ್ತುವಾರಿ ಸಚಿವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಭೇಟಿ ಮಾಡಿ. ನಿಮ್ಮ ಸಮಸ್ಯೆಗಳ ಬಗ್ಗೆ ಮಾತನಾಡಿ. ಬಜೆಟ್‌ನಲ್ಲಿ ಪ್ರತಿ ಶಾಸಕರಿಗೂ 50 ಕೋಟಿ ಹಣ ಕೊಡಿ ಅಂತ ಸಿಎಂ ಹೇಳಿದ್ದಾರೆ. ಕೆಲವೇ ದಿನಗಳಲ್ಲಿ ಎಲ್ಲಾ ಕ್ಷೇತ್ರಕ್ಕೂ ಅನುದಾನ ಬರುತ್ತೆ. ರಾಜಿನಾಮೆ ಕೊಡ್ತೀನಿ ಅನ್ನೋದು ಕೆಲವರ ವೈಯಕ್ತಿಕ ಅಭಿಪ್ರಾಯ. ಅದನ್ನ ಸೂಕ್ತ ವೇದಿಕೆಯಲ್ಲಿ ವ್ಯಕ್ತಪಡಿಸಬೇಕು ಎಂದು ಹೇಳಿದರು.

ಇನ್ನೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಳಿ ಈಗ ಹಣ ಇಲ್ಲ, ಕೇಂದ್ರದ ಬಳಿ ಕೇಳಬೇಕು ಎಂಬ ಪರಮೇಶ್ವರ್ ಹೇಳಿಕೆ ವಿಚಾರ ಕುರಿತು ಮಾತನಾಡಿ, ಕೇಂದ್ರದಿಂದ ನಮಗೆ ಬರಬೇಕಾದ ಹಣ ಬಂದಿಲ್ಲ. ಕೇಂದ್ರದವರು ನಮಗೆ ಹಣ ಕೊಡಬೇಕು. ನಮ್ಮ ಹತ್ತಿರವೂ ಹಣ ಇದೆ, ಅದರ ಜೊತೆ ಅವರೂ ಕೊಟ್ಟರೆ ಹೆಚ್ಚು ಅಭಿವೃದ್ಧಿ ಮಾಡಬಹುದು. ಇದು ಪರಮೇಶ್ವರ್ ಅವರ ಮಾತಿನ ಅರ್ಥ ಎಂದು ತಿಳಿಸಿದರು.
ಕೇಂದ್ರದ ಹಣಕ್ಕೆ ಹಿಂದೆಯಿಂದಲೂ ಒತ್ತಾಯ ಮಾಡಿದ್ದೇವೆ. ದೆಹಲಿಗೂ ಹೋಗಿ ಹಣ ಕೇಳಿದ್ದೇವೆ, ಅವರು ಹಣ ಕೊಟ್ಟರೆ ಇನ್ನೂ ಹೆಚ್ಚಿನ ಅಭಿವೃದ್ಧಿ ಮಾಡಬಹುದು ಎಂದು ಪರಮೇಶ್ವರ್ ಹೇಳಿಕೆಯನ್ನು ಸಮರ್ಥಿಸಿಕೊಂಡರು. ಕೆಲವೊಂದು ಸಂದರ್ಭಗಳಲ್ಲಿ ಏರುಪೇರು ಆದಾಗ ಮನಸ್ಸಿಗೆ ಬೇಸರ ಆಗುತ್ತೆ. ಬೇಸರ ಆಗುವುದರಿಂದ ಸಮಸ್ಯೆ ಬಗೆಹರಿಯಲ್ಲ. ಸಿಎಂ, ಡಿಸಿಎಂ ಜೊತೆ ಕೂತು ಮಾತುಕತೆ ಮಾಡಬೇಕು. ರಾಜಿನಾಮೆ ಕೊಟ್ರೆ, ಇನ್ನೊಬ್ಬ ಎಂಎಲ್‌ಎ ಆಗುತ್ತಾನೆ. ರಾಜಿನಾಮೆ ಕೊಟ್ರೆ ಸಮಸ್ಯೆ ಬಗೆಹರಿಯುತ್ತಾ? ಎಂದು ಪ್ರಶ್ನಿಸಿದರು. ಜನ ಆಶೀರ್ವಾದ ಮಾಡಿದ್ದಾರೆ, ನಾವು ಕೆಲಸ ಮಾಡಬೇಕು. ಸಿಎಂ, ಡಿಸಿಎಂ ಭೇಟಿ ಮಾಡಿ ಸಮಸ್ಯೆ ಹೇಳಿಕೊಂಡು ಅನುದಾನ ತರಬೇಕು. ಅಧಿಕಾರಿಗಳು ಸ್ಪಂದಿಸುತ್ತಿಲ್ಲ ಎಂಬುದು ಅವರ ಸಮಸ್ಯೆ, ಹಣ ಕೊಟ್ಟಿಲ್ಲ ಎಂದು ಅವರು ಹೇಳುತ್ತಿಲ್ಲ ಎಂದು ತಿಳಿಸಿದರು.












Click it and Unblock the Notifications