ನಾನು ಮುಖ್ಯಮಂತ್ರಿ ಹುದ್ದೆಯ ಆಕಾಂಕ್ಷಿ ಹೌದು ಎಂದ ಸಿದ್ದರಾಮಯ್ಯ! ಡಿ.ಕೆ.ಶಿವಕುಮಾರ್...
ಕಾಂಗ್ರೆಸ್ ಪಾಳಯದಲ್ಲಿ ಸಾಕಷ್ಟು ನಾಯಕರು ಸಿಎಂ ಸ್ಥಾನದ ಆಕಾಂಕ್ಷಿಗಳಾಗಿದ್ದು, ಮುಖ್ಯಮಂತ್ರಿ ಸ್ಥಾನದ ಕುರಿತು ಸಿದ್ದರಾಮಯ್ಯ ಮಾತನಾಡಿದ್ದಾರೆ.
ಬೆಳಗಾವಿ,ಮಾರ್ಚ್ 3: ಕಾಂಗ್ರೆಸ್ ಪಾಳಯದಲ್ಲಿ ಕಳೆದ ಒಂದು ವರ್ಷದಿಂದ ಮುಂದಿನ ಮುಖ್ಯಮಂತ್ರಿ ಯಾರು ಎಂಬ ವಿಚಾರ ಸಾಕಷ್ಟು ಚರ್ಚೆಯಾಗುತ್ತಿತ್ತು. ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ಅವರ ಅಭಿಮಾನಿಗಳ ನಡುವೆ ಸಿಎಂ ವಿಚಾರ ಸಾಕಷ್ಟು ಸದ್ದು ಮಾಡಿತ್ತು.
ಈಗಾಗಲೇ ಈ ಇಬ್ಬರು ನಾಯಕರಿಗೆ ಹೈಕಮಾಂಡ್ ಮೊದಲು ಪಕ್ಷವನ್ನ ಅಧಿಕಾರಕ್ಕೆ ತನ್ನಿ ಎನ್ನುವ ಮಾತನ್ನ ಹೇಳುವ ಮೂಲಕ ಸಿಎಂ ವಿಚಾರಕ್ಕೆ ತೆರೆ ಎಳೆದಿತ್ತು. ಆದರೆ ಕಾಂಗ್ರೆಸ್ ಚುನಾವಣಾ ಪ್ರಚಾರದ ವೇಳೆ ಸಿದ್ದರಾಮಯ್ಯ , ಡಿ.ಕೆ.ಶಿವಕುಮಾರ್ ಪರೋಕ್ಷವಾಗಿ ಮುಖ್ಯಮಂತ್ರಿ ಸ್ಥಾನದ ಆಸೆಯನ್ನ ವ್ಯಕ್ತಡಿಸಿದರು.

ಈ ಕುರಿತು ಬೆಳಗಾವಿಯಲ್ಲಿ ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ ಸುದ್ದಿಗೋಷ್ಟಿಯಲ್ಲಿ ಮಾತನಾಡಿ, ನಾನು ಮುಖ್ಯಮಂತ್ರಿ ಹುದ್ದೆಯ ಆಕಾಂಕ್ಷಿ ಹೌದು, ಹಾಗೆಯೇ ಡಿ.ಕೆ ಶಿವಕುಮಾರ್ ಅವರಿಗೂ ಆಸೆ ಇದ್ದರೆ ಅದರಲ್ಲಿ ತಪ್ಪೇನು? ಅಂತಿಮವಾಗಿ ಗೆದ್ದ ಶಾಸಕರು ಮುಖ್ಯಮಂತ್ರಿಯನ್ನು ಆಯ್ಕೆ ಮಾಡುವುದು. ಮುಖ್ಯಮಂತ್ರಿ ಹುದ್ದೆಯ ಆಸೆಯನ್ನೇ ಪಡಬೇಡಿ ಎನ್ನಲು ಇದು ಸರ್ವಾಧಿಕಾರಿ ವ್ಯವಸ್ಥೆಯೇ? ಎಂದು ಪ್ರಶ್ನಿಸಿದ್ದಾರೆ.
ಪ್ರಹ್ಲಾದ್ ಜೋಷಿಗೆ ಪ್ರಜಾಪ್ರಭುತ್ವ ಸಿದ್ಧಾಂತದ ಬಗ್ಗೆ ಜ್ಞಾನವೇ ಇಲ್ಲ, ಕಾರಣ ಬಿಜೆಪಿಯಲ್ಲಿ ಪ್ರಜಾಪ್ರಭುತ್ವ ಇಲ್ಲ. ಯಡಿಯೂರಪ್ಪ ಅವರನ್ನು ಕಿತ್ತು ಬೊಮ್ಮಾಯಿಯನ್ನು ತಂದು ಕೂರಿಸಿದ್ರು, ಇದನ್ನು ಮಾಡುವಾಗ ಶಾಸಕರ ಅಭಿಪ್ರಾಯ ಕೇಳಿದ್ರಾ? ಇಲ್ಲ ಅಲ್ವಾ? ಬಿಜೆಪಿಯಲ್ಲಿ ಆಂತರಿಕ ಪ್ರಜಾಪ್ರಭುತ್ವ ಇಲ್ಲ, ಕಾಂಗ್ರೆಸ್ ನಲ್ಲಿ ಆಂತರಿಕೆ ಪ್ರಜಾಪ್ರಭುತ್ವ ಇದೆ, ಜಾತ್ಯತೀತತೆ ಇದೆ.
ಯಡಿಯೂರಪ್ಪ ಅವರನ್ನು ವಯಸ್ಸಿನ ಆದಾರದ ಮೇಲೆ ತೆಗೆದಿದ್ದು, ಆರೋಗ್ಯದ ಕಾರಣಕ್ಕಾಗಿ ತೆಗೆದಿದ್ದಲ್ಲ. ಮುಖ್ಯಮಂತ್ರಿ ಹುದ್ದೆಯನ್ನು ತ್ಯಾಗ ಮಾಡುತ್ತಿರುವುದಾದರೆ ಕಣ್ಣೀರು ಹಾಕುತ್ತಾ ಅಧಿಕಾರ ಬಿಟ್ಟುಕೊಟ್ಟಿದ್ದು ಯಾಕೆ? ಅವರನ್ನು ಒತ್ತಾಯಪೂರ್ವಕವಾಗಿ ಅಧಿಕಾರದಿಂದ ಇಳಿಸಿದ್ದು. ತ್ಯಾಗ ಮಾಡುವವರು ಕಣ್ಣೀರು ಹಾಕುತ್ತಾರ?

ಮಾಧುಸ್ವಾಮಿ ಅವರು ಕಾನೂನು ಸಚಿವರಾದ ಮೇಲೆ ಸರ್ಕಾರದ ಎಲ್ಲಾ ತಪ್ಪನ್ನು ಕೂಡ ಸಮರ್ಥನೆ ಮಾಡಿಕೊಳ್ಳುತ್ತಿದ್ದಾರೆ. ವಿರೂಪಾಕ್ಷಪ್ಪ ಮಾಡಾಳ್ ಅವರು ಅಧ್ಯಕ್ಷರಾಗಿರುವ ಕಾರಣಕ್ಕೆ ತಾನೆ ಮಗ ಲಂಚ ಪಡೆದು ಗುತ್ತಿಗೆ ಕೆಲಸ ಕೊಡಿಸಲು ಸಾಧ್ಯವಾಗುತ್ತಿರುವುದು. ಅಪ್ಪ ಸೋಪ್ ಅಂಡ್ ಡೆಟೆರ್ಜೆಂಟ್ ನಲ್ಲಿ ಅಧ್ಯಕ್ಷರಾಗಿದ್ದಾರೆ. ಅಲ್ಲಿಗೆ ಕಚ್ಚಾ ವಸ್ತು ಸಪ್ಲೈ ಮಾಡಲು ಲಂಚ ಪಡೆದಿದ್ದು ಅಲ್ವಾ? ಯಾರೋ ದಾರಿಯಲ್ಲಿ ಹೋಗುವವರು ಗುತ್ತಿಗೆ ಕೆಲಸ ಕೊಡಿಸುತ್ತಾರೆ ಎಂದು ಲಂಚ ಕೊಟ್ಟಿದ್ದಾರ? ಅಪ್ಪನ ಅಧಿಕಾರ ನೋಡಿಯೇ ಮಗನಿಗೆ ಲಂಚ ನೀಡಿದ್ದಾರೆ.
ರಾಜ್ಯ ಸರ್ಕಾರದ ಭ್ರಷ್ಟಾಚಾರದ ವಿರುದ್ಧ ಹೋರಾಟವನ್ನು ಮಾಡುತ್ತಲೇ ಬಂದಿದ್ದೇವೆ. ನಮ್ಮ ಪ್ರಜಾಧ್ವನಿ ಯಾತ್ರೆ ಈ ಹೋರಾಟದ ಒಂದು ಭಾಗ ಕೂಡ. ಪ್ರಶಾಂತ್ ಮಾಡಾಳ್ ಪ್ರಕರಣವನ್ನು ಜನರ ಮುಂದೆ ತೆಗೆದುಕೊಂಡು ಹೋಗುತ್ತೇವೆ.
ನಾವು ಲೋಕಾಯುಕ್ತವನ್ನು ಮುಚ್ಚಿದ್ದೆವು ಎಂಬುದೇ ಒಂದು ದೊಡ್ಡ ಸುಳ್ಳು. ವಿಶ್ವನಾಥ್ ಶೆಟ್ಟಿ ಅವರು ಎಸಿಬಿ ರಚನೆ ಆದಮೇಲೆ ಕೂಡ ಲೋಕಾಯುಕ್ತದ ಅಧ್ಯಕ್ಷರಾಗಿರಲಿಲ್ವಾ? ಲೋಕಾಯುಕ್ತ ಮುಚ್ಚಿದ್ದರೆ ಅವರನ್ನು ತೆಗೆದುಹಾಕಬೇಕಿತ್ತಲ್ವಾ? ಎಸಿಬಿ ದೇಶದ 16 ರಾಜ್ಯಗಳಲ್ಲಿದೆ. ಗುಜರಾತ್, ಉತ್ತರ ಪ್ರದೇಶ, ಮಧ್ಯಪ್ರದೇಶದಲ್ಲಿ ಕೂಡ ಎಸಿಬಿ ಇದೆ, ಅಲ್ಲಿ ಯಾಕೆ ತೆಗೆದುಹಾಕಿಲ್ಲ? ಬಿಜೆಪಿ ಅಧಿಕಾರಕ್ಕೆ ಬಂದು ಮೂರುವರೆ ವರ್ಷ ಮಜಾ ಮಾಡಿಕೊಂಡಿದ್ದರು, ಯಾರೋ ನ್ಯಾಯಾಲಯಕ್ಕೆ ಹೋಗಿದ್ದರಿಂದ ಲೋಕಾಯುಕ್ತಕ್ಕೆ ಶಕ್ತಿ ಕೊಡಿ ಎಂದು ನ್ಯಾಯಾಲಯ ಆದೇಶ ನೀಡಿತ್ತು. ಇದರಿಂದ ಎಸಿಬಿ ಯನ್ನು ಮುಚ್ಚಿದ್ದಾರೆ. ಇದರಲ್ಲಿ ಬಿಜೆಪಿ ಸಾಧನೆ ಇಲ್ಲ.
ಲೋಕಾಯುಕ್ತರಾಗಿದ್ದ ನ್ಯಾ. ಭಾಸ್ಕರ್ ರಾವ್ ಅವರ ಮಗ ಭ್ರಷ್ಟಾಚಾರದಲ್ಲಿ ತೊಡಗಿರುವ ಬಗ್ಗೆ ಆರೋಪ ಬಂದ ಹಿನ್ನೆಲೆಯಲ್ಲಿ ಎಸಿಬಿ ರಚನೆ ಮಾಡಿದ್ದು. ಎರಡೂ ತನಿಖಾ ಸಂಸ್ಥೆಗಳು ರಚನೆ ಆಗಿರುವುದು ಬೇರೆ ಬೇರೆ ಕಾಯ್ದೆಯ ಅಡಿಯಲ್ಲಿ. ಬಸವರಾಜ ಬೊಮ್ಮಾಯಿ ಸುಮ್ಮನೆ ಸುಳ್ಳು ಹೇಳಿಕೊಂಡು ತಿರುಗಾಡ್ತಾ ಇದ್ದಾರೆ.
ಶಿವಾಜಿ ಪ್ರತಿಮೆಗೆ ಹಣ ನೀಡಿದ್ದೆ ಎಂದು ನಾನು ಎಲ್ಲಿಯೂ ಹೇಳಿಲ್ಲ. ನನ್ನ ಬಳಿ ಯಾರೂ ಅನುದಾನ ಕೇಳಿಯೂ ಇರಲಿಲ್ಲ. ಸಂಜಯ್ ಪಾಟೀಲ್ ನನ್ನ ಬಳಿ ಅನುದಾನ ಕೇಳಿದ್ದೆ, ಅವರು ಕೊಟ್ಟಿರಲಿಲ್ಲ ಎಂದು ಸುಳ್ಳು ಹೇಳಿದ್ದರು, ಅದಕ್ಕೆ ಆ ಮನುಷ್ಯನನ್ನು ನಾನು ನೋಡಿಯೇ ಇಲ್ಲ, ನನ್ನ ಬಳಿ ಬಂದು ಅನುದಾನ ಕೇಳಿದ್ದರೆ ಖಂಡಿತಾ ಕೊಡುತ್ತಿದ್ದೆ ಎಂದು ಹೇಳಿದ್ದೆ. ನಾನೆಲ್ಲೂ ನಾನೇ ಅನುದಾನ ನೀಡಿದ್ದು ಎಂದು ಹೇಳಿಲ್ಲ.
ಈಗ ಅಲ್ಲಿ ಪ್ರತಿಮೆ ಮಾಡಿಸಿದ್ದು ಅಲ್ಲಿನ ಶಾಸಕಿಯಾದ ಲಕ್ಷ್ಮೀ ಹೆಬ್ಬಾಳ್‌ಕರ್ ಅವರು. ಅವರ ಅಧ್ಯಕ್ಷತೆಯಲ್ಲಿಯೇ ಅಲ್ಲಿ ಸರ್ಕಾರಿ ಕಾರ್ಯಕ್ರಮ ನಡೆಯಬೇಕಿತ್ತು. ಅವರನ್ನು ಸರ್ಕಾರ ಗೌರವದಿಂದ ನಡೆಸಿಕೊಳ್ಳಬೇಕಿತ್ತು, ಕ್ಷೇತ್ರದಲ್ಲಿ ಕಾರ್ಯಕ್ರಮ ಆಯೋಜನೆ ಮಾಡುವುದು ಸ್ಥಳೀಯ ಶಾಸಕರು, ಆದರೆ ಇಲ್ಲಿ ಸರ್ಕಾರವೇ ಕಾರ್ಯಕ್ರಮ ಆಯೋಜನೆ ಮಾಡಿ ನೀವು ಬನ್ನಿ ಎಂದು ಕರೆದರೆ ಇದು ಪ್ರೋಟೋಕಾಲ್ ನ ಪ್ರಕಾರ ಸರಿ ಆಗುತ್ತದಾ? ಎಂದು ಪ್ರಶ್ನಿಸಿದರು.












Click it and Unblock the Notifications