ಡಿ ಕೆ ಶಿವಕುಮಾರ್ ಮಾತ್ರ ಅಲ್ಲ, ನಾನು ಕೂಡ ಸಿಎಂ ಸ್ಥಾನದ ಆಕಾಂಕ್ಷಿ ಎಂದ ಮತ್ತೊಬ್ಬ ಸಚಿವ
ಬೆಂಗಳೂರು, ಅಕ್ಟೋಬರ್ 12: ರಾಜ್ಯದಲ್ಲಿ 135 ಸ್ಥಾನಗಳನ್ನ ಗೆಲ್ಲುವ ಮೂಲಕ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಿದ್ದು, ಮುಖ್ಯಮಂತ್ರಿ ಸ್ಥಾನವನ್ನ ಸಿದ್ದರಾಮಯ್ಯ ಅವರು ಅಲಂಕರಿಸಿದ್ದಾರೆ. ಸಿದ್ದರಾಮಯ್ಯ ಸಿಎಂ ಆಗಿದ್ರು ಸಹ ಕಾಂಗ್ರೆಸ್ ಪಾಳಯದಲ್ಲಿ ಸಿಎಂ ಸ್ಥಾನದ ವಿಚಾರ ಪದೇ ಪದೇ ಮುನ್ನಲೇ ಬರುತ್ತಿದೆ.
ಹೌದು, ಸಿದ್ದರಾಮಯ್ಯ ಹಾಗೂ ಡಿ ಕೆ ಶಿವಕುಮಾರ್ ಬಣದಲ್ಲಿ ಸಿಎಂ ವಿಚಾರ ಹಾಗೂ ಐದು ವರ್ಷವೂ ಸಿದ್ದರಾಮಯ್ಯ ಅವರು ಸಿಎಂ ಆಗಿ ಮುಂದುವರೆಯುತ್ತಾರಾ? ಅಥವಾ ಡಿ ಕೆ ಶಿವಕುಮಾರ್ ಸಿಎಂ ಆಗ್ತಾರಾ ಅನೋ ಚರ್ಚೆ ಕೈ ಪಾಳಯದಲ್ಲಿ ಚರ್ಚೆಯಾಗುತ್ತಿದ್ದು, ಇದೀಗ ಮತ್ತೊಬ್ಬ ಹಿರಿಯ ಸಚಿವರಾದ ಶರಣಬಸಪ್ಪ ದರ್ಶನಾಪುರ ಅವರು ಡಿ ಕೆ ಶಿವಕುಮಾರ್ ಮಾತ್ರ ಸಿಎಂ ಸ್ಥಾನದ ಆಕಾಂಕ್ಷಿಯಲ್ಲ, ನಾನು ಕೂಡ ಮುಖ್ಯಮಂತ್ರಿ ಸ್ಥಾನದ ಆಕಾಂಕ್ಷಿ ಎಂದು ಹೇಳಿದ್ದಾರೆ.

ಈ ಕುರಿತು ಶಹಾಪುರ ಕ್ಷೇತ್ರದ ಶಾಸಕ ಹಾಗೂ ರಾಜ್ಯದ ಸಣ್ಣ ಕೈಗಾರಿಕಾ ಸಚಿವ ಶರಣಬಸಪ್ಪ ದರ್ಶನಾಪುರ ಮಾತನಾಡಿ, ಡಿ.ಕೆ ಶಿವಕುಮಾರ್ ಅವರೊಬ್ಬರೇ ಯಾಕೆ ನಾನು ಕೂಡಾ ಮುಖ್ಯಮಂತ್ರಿ ಸ್ಥಾನದ ಅಕಾಂಕ್ಷಿ ಎಂದು ಹೇಳಿದ ಅವರು, ನಾನು ಏಳು ಬಾರಿ ಎಲೆಕ್ಷನ್‌ಗೆ ನಿಂತಿದ್ದೇನೆ. ಸೋತಿದ್ದೇನೆ, ಗೆದ್ದಿದ್ದೇನೆ. ನಾನು ಕೂಡಾ ಸಿಎಂ ಸ್ಥಾನದ ಆಕಾಂಕ್ಷಿಯೇ ಎಂದು ತಮ್ಮ ಆಸೆಯನ್ನ ವ್ಯಕ್ತಪಡಿಸಿದ್ದಾರೆ.
ಇನ್ನೂ ಡಿ ಕೆ ಶಿವಕುಮಾರ್ ಸಿಎಂ ಆಕಾಂಕ್ಷಿ ಎಂಬ ವಿಚಾರವಾಗಿ ಮಾತನಾಡಿ, ಉಪಮುಖ್ಯಮಂತ್ರಿಯಾಗಿರುವ ಡಿ.ಕೆ ಶಿವಕುಮಾರ್ ಸಿಎಂ ಆಗಲಿಕ್ಕೆ ಯೋಗ್ಯರಿದ್ದಾರೆ. ಪಕ್ಷ ಅಧಿಕಾರಕ್ಕೆ ಬರಲು ಅವರು ಪ್ರಧಾನ ಕಾರಣವಾಗಿದ್ದಾರೆ. ಇನ್ನೂ ಕಾಂಗ್ರೆಸ್ ನಲ್ಲಿ ಗೆಲುವು ಸಾಧಿಸಿದ 135 ಜನ ಶಾಸಕರು ಕೂಡ ಮುಖ್ಯಮಂತ್ರಿಯಾಗಬಹುದು. ಅವರಿಗೆ ನಿಭಾಯಿಸಲು ಸಾಧ್ಯವೇ ಎನ್ನುವುದು ಕೊಟ್ಟ ಮೇಲೆ ಗೊತ್ತಾಗುತ್ತದೆ ಎಂದು ಹೇಳಿದರು.

ಇನ್ನೂ ಡಿಸೆಂಬರ್ ಅಥವಾ ಜನವರಿಯಲ್ಲಿ ಸರ್ಕಾರ ಬಿಳುತ್ತೇ ಎಂದು ಬಿಜೆಪಿ ಹಾಗೂ ಜೆಡಿಎಸ್ ನಾಯಕರ ಹೇಳಿಕೆ ಕುರಿತು ಮಾಧ್ಯಮಗಳ ಪ್ರಶ್ನೆ ಉತ್ತರಿಸಿದ ಅವರು, ಈಗಾಗಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಎಂದು ಕಾಂಗ್ರೆಸ್ ಹೈಕಮಾಂಡ್ ಹೇಳಿದೆ. ನಾಳೆ ಏನಾಗುತ್ತದೆ ಅನ್ನೋದು ನನಗೂ ಗೊತ್ತಿಲ್ಲ. ಇವತ್ತಿನ ದಿನದ ಪ್ರಕಾರ ಸಿದ್ದರಾಮಯ್ಯ ಅವರು ಐದು ವರ್ಷ ಸಿಎಂ ಆಗಿರ್ತಾರೆ ಅನ್ನೋದು ಸತ್ಯ. ಆದರೆ ಬಹಳಷ್ಟು ಜನರು ಕನಸು ಕಾಣ್ತಿದ್ದಾರೆ. ನಾವು ಡಿಸೆಂಬರ್‌ನಲ್ಲಿ ಸರ್ಕಾರ ಮಾಡ್ತೀವಿ, ಜನವರಿಯಲ್ಲಿ ಸರ್ಕಾರ ಮಾಡ್ತೀವಿ ಅಂತ ಹೇಳುತ್ತಿದ್ದಾರೆ. ಮುಖ್ಯಮಂತ್ರಿ ಯಾರು ಬೇಕಾದರೂ ಆಗಬಹುದು. ಸಿಎಂ ಆಗೋದಕ್ಕೆ ಶಾಸಕ ಆದ್ರೆ ಸಾಕಲ್ಲವೇ? ಹೀಗಾಗಿ 136 ಮಂದಿಯೂ ಸಿಎಂ ಆಗಲಿಕ್ಕೆ ಯೋಗ್ಯರಿದ್ದಾರೆ ಎಂದರು.
ಇನ್ನೂ ಹಲವು ಬಿಜೆಪಿ ನಾಯಕರು ಕಾಂಗ್ರೆಸ್ ಸೇರ್ಪಡೆಯಾಗುತ್ತಿರುವ ವಿಚಾರವಾಗಿ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಅವರು, ನಾವು ಯಾರಿಗೂ ಹಣದ ಆಮಿಷ ತೋರಿಸಿ ಕರೆದಿಲ್ಲ. ಪಕ್ಷದ ತತ್ವ ಸಿದ್ದಾಂತ ಒಪ್ಪಿ ಬಂದ್ರೆ ಸ್ವಾಗತ ಅಂತ ನಮ್ಮ ನಾಯಕರೇ ಹೇಳಿದ್ದಾರೆ. ಈ ಹಿಂದೆ ಬಿಜೆಪಿಗೆ ಹೋದವರು ಹಣದ ಹಿಂದೆ ಹೋದವರು, ಅವರ ಪರಿಸ್ಥಿತಿ ಹೇಗಿದೆ ಅಂತ ನಿಮಗೇ ಗೊತ್ತಲ್ವಾ ಎಂದು ಹೇಳಿದರು.
ಲೋಕಸಭಾ ಚುನಾವಣೆಯ ಹಿನ್ನೆಲೆ ಜೆಡಿಎಸ್ ಹಾಗೂ ಬಿಜೆಪಿ ಮೈತ್ರಿ ಮಾಡಿಕೊಂಡಿದ್ದು, ಈ ಮೈತ್ರಿ ಎಷ್ಟು ದಿನ ನಡೆಯುತ್ತಿತ್ತೋ ಗೊತ್ತಿಲ್ಲ. ಕಾಂಗ್ರೆಸ್ ಬಿಟ್ಟು ಬರುವ ಎಲ್ಲರಿಗೂ 50 ಕೋಟಿ ಆಫರ್ ಮಾಡಿದ್ದಾರಂತೆ. ಹಿಂದೆಯೂ 17 ರಾಜೀನಾಮೆ ಕೊಡಿಸಿದ್ರು, ಮರು ಲೆಕ್ಷನ್ ಮಾಡಿಸಿದ್ರು. ಆಗ ಮುಖ್ಯಮಂತ್ರಿ ಸ್ಥಾನ ಕಳೆದುಕೊಂಡ ಎಚ್.ಡಿ ಕುಮಾರಸ್ವಾಮಿ ಅವರು ಈಗ ಬಿಜೆಪಿ ಜತೆ ಸೇರಿಕೊಂಡಿದ್ದಾರೆ ಎಂದು ಹೇಳಿದರು.












Click it and Unblock the Notifications