Get Updates
Get notified of breaking news, exclusive insights, and must-see stories!

ಸುದ್ದಿವಾಹಿನಿಗಳ ಎಗ್ಗಿಲ್ಲದ ಪ್ರಸಾರ: ದೂರು ನೀಡಲು ಇಲ್ಲಿದೆ ಅವಕಾಶ

ಬೆಂಗಳೂರು, ಏ. 04: ಹಿಜಾಬ್‌ನಿಂದ ಆರಂಭಗೊಂದು ಕೋಮು ಸೌಹಾರ್ದ ಕೆಡಿಸುವ ಹಾಗೂ ದೇಶದ ಐಕ್ಯತೆಗೆ ಧಕ್ಕೆ ಉಂಟುಮಾಡುವಂತಹ ವಿವಾದಗಳಿಗೆ ಕರ್ನಾಟಕ ಇತ್ತೀಚಿನ ದಿನಗಳಲ್ಲಿ ಸಾಕ್ಷಿಯಾಗುತ್ತಿದೆ. ಸ್ವಾತಂತ್ರ್ಯ ಭಾರತದಲ್ಲಿ ಅತಿ ಸೂಕ್ಷ್ಮ ವಿಚಾರ ಎಂದು ದಶಕಗಳ ಕಾಲ ಕಾಪಿಟ್ಟುಕೊಂಡು ಬಂದ ಕೋಮು ಸಾಮರಸ್ಯದ ವಿಚಾರದಲ್ಲಿ ಸಂಯಮವನ್ನು ಕದಡುವ ಪ್ರಯತ್ನಕ್ಕೆ ಚಾಲನೆ ದೊರೆತಿದೆ. ಕೆಲವು ಸಂಘಟನೆಗಳು, ನಾಲ್ಕಾರು ಪ್ರಚಾರ ಪ್ರಿಯರ ಹೆಗಲ ಮೇಲೆ ಬಂದೂಕು ಇಟ್ಟು, ಸಾಮಾಜಿಕ ಸ್ವಾಸ್ಥ್ಯವನ್ನು ಹಾಳುಗೆಡವಲು ಹೊರಟಂತೆ ಕಾಣಿಸುತ್ತಿದೆ. ಇಂತಹದೊಂದು ಸಾಮಾಜಿಕ ಬೆಳವಣಿಗೆ ಹಿಂದಿರುವುದು, ರಾಜ್ಯದ 24/7 ಸುದ್ದಿವಾಹಿನಿಗಳು ಎಂಬುದು ಸದ್ಯ ಕೇಳಿ ಬರುತ್ತಿರುವ ಗುರುತರ ಆರೋಪ.

ಹಾಗೆ ನೋಡಿದರೆ, ಯಾವುದೇ ಸುದ್ದಿವಾಹಿನಿಯಾದರೂ, ಅದಕ್ಕೆ ಅದರದ್ದೇ ಆದ ಚೌಕಟ್ಟುಗಳಿವೆ. ತಾನು ನೀಡುವ ಸುದ್ದಿ, ಕಾರ್ಯಕ್ರಮಗಳ ನೈತಿಕ ಚೌಕಟ್ಟಿನ ಒಳಗೆ ಇರಬೇಕು ಎಂಬ ಕಟ್ಟುಪಾಡುಗಳಿವೆ. 'ಕೇಬಲ್ ಮತ್ತು ಟೆಲಿವಿಜನ್ ನೆಟ್‌ವರ್ಕ್ ರೂಲ್ಸ್ 1994' ಅಡಿಯಲ್ಲಿ ಷರತ್ತುಗಳ ದೊಡ್ಡ ಪಟ್ಟಿಯನ್ನೇ ಮುಂದಿಡಲಾಗಿದೆ. ಇವೆಲ್ಲವನ್ನೂ ನಮ್ಮ ಪ್ರಾದೇಶಿಕ ಸುದ್ದಿ ವಾಹಿನಿಗಳು ಕಳೆದ ಹಲವು ದಿನಗಳಿಂದ ಗಾಳಿಗೆ ತೂರಿವೆ ಎಂಬುದಕ್ಕೆ ಹೇರಳವಾದ ಸಾಕ್ಷಿಗಳು ಅವುಗಳ ಪರದೆಯ ಮೇಲೆಯೇ ಸಿಗುತ್ತವೆ.

ಇಷ್ಟಕ್ಕೂ ಈ ಕೇಬಲ್ ಮತ್ತು ಟೆಲಿವಿಜನ್ ನೆಟ್‌ವರ್ಕ್ ರೂಲ್ಸ್ 1994 ಏನು ಹೇಳುತ್ತದೆ? ಯಾವ ವಿಚಾರದಲ್ಲಿ ಕರ್ನಾಟಕದ ಪ್ರಾದೇಶಿಕ ವಾಹಿನಿಗಳು ಕಾನೂನನ್ನು ಕೈಗೆತ್ತಿಕೊಳ್ಳುತ್ತಿವೆ? ಕಾಯ್ದೆಗೆ ಬಂದಿರುವ ಹೊಸ ತಿದ್ದುಪಡಿ ಏನನ್ನು ಹೇಳುತ್ತದೆ? ಇವೆಲ್ಲ ಅಂಶಗಳನ್ನು ಈ ವರದಿ ಸವಿವರವಾಗಿ ಬಿಚ್ಚಿಡಲಿದೆ.

ಪ್ರೋಗ್ರಾಂ ಕೋಡ್‌ ಉಲ್ಲಂಘನೆ:

ಪ್ರೋಗ್ರಾಂ ಕೋಡ್‌ ಉಲ್ಲಂಘನೆ:

ಈ ದೇಶದ ಯಾವುದೇ ಸುದ್ದಿವಾಹಿನಿ ಇರಲಿ, ಮನರಂಜನಾ ವಾಹಿನಿಗಳಿರಲಿ, ಅವು ಕೆಲವೊಂದು ಅಂಶಗಳಲ್ಲಿ ಸ್ವಯಂ ನಿಯಂತ್ರಣ ಹೇರಿಕೊಳ್ಳಬೇಕಾಗುತ್ತದೆ. ವಾಹಿನಿಗಳಿಗೆ ಅನುಮತಿ ನೀಡುವ ಮೊದಲು ಇಂತಹದೊಂದು ಹೊಣೆಗಾರಿಕೆಗೆ ಅವು ಒಡ್ಡಿಕೊಳ್ಳಬೇಕಾಗುತ್ತದೆ. ಪ್ರೋಗ್ರಾಂ ಕೋಡ್‌ ಹೆಸರಿನಲ್ಲಿ ಕಾಯ್ದೆಯು ಕೆಳಗಿನ ಅಂಶಗಳನ್ನು ಪಟ್ಟಿಮಾಡುತ್ತದೆ.

1. ಉತ್ತಮ ಅಭಿರುಚಿ ಹಾಗೂ ಅಭ್ಯತೆಗೆ ಭಂಗ ತರುವಂತಹ ಕಾರ್ಯಕ್ರಮಗಳನ್ನು ಪ್ರಸಾರ ಮಾಡುವಂತಿಲ್ಲ.

2. ಭಾರತದ ಜತೆ ಉತ್ತಮ ವ್ಯವಹಾರ ಹೊಂದಿರುವ ಮಿತ್ರ ರಾಷ್ಟ್ರಗಳ ಬಗ್ಗೆ ಟೀಕೆ ಮಾಡುವಂತಿಲ್ಲ. (ಸದ್ಯ ಭಾರತದ ಮಿತ್ರರಾಷ್ಟ್ರಗಳ ಪಟ್ಟಿಯಲ್ಲಿ ರಷ್ಯಾ ಒಕ್ಕೂಟ, ಬಾಂಗ್ಲಾ, ಆಪ್ಘಾನಿಸ್ತಾನ, ಇಸ್ರೇಲ್, ಫ್ರಾನ್ಸ್ , ಭೂತಾನ್, ಯುನೈಟೆಡ್ ಸ್ಟೇಟ್ಸ್ ದೇಶಗಳಿವೆ.)

3. ಒಂದು ಧರ್ಮ, ಸಮುದಾಯ, ವರ್ಗದ ಸಾಮರಸ್ಯ ಕೆಡಿಸುವ, ಪ್ರಚೋದನೆ ನೀಡುವಂತಹ ದೃಶ್ಯಗಳು ಅಥವಾ ಪದಗಳನ್ನು ಒಳಗೊಂಡ ಸುದ್ದಿಗಳ್ನು ಪ್ರಸಾರ ಮಾಡಬಾರದು. ಅದರಲ್ಲೂ ಕೋಮು ಸಂಘರ್ಷಕ್ಕೆ ಪ್ರೇರಣೆ ನೀಡುವಂತಹ ಪದ, ದೃಶ್ಯಗಳು, ಸುದ್ದಿ ಪ್ರಸಾರ ಮಾಡಬಾರದು.

4. ಒಬ್ಬ ವ್ಯಕ್ತಿಯ ಅಶ್ಲೀಲ, ಮಾನಹಾನಿಕರ, ಅವಹೇಳನ, ಸುಳ್ಳು ಸುದ್ದಿ, ಅರ್ಧ ಸತ್ಯಗಳನ್ನು ಒಳಗೊಂಡ ಸುದ್ದಿ ಪ್ರಸಾರ ಮಾಡಬಾರದು.

5. ಕಾನೂನು ಮತ್ತು ಸುವ್ಯವಸ್ಥೆಗೆ ಧಕ್ಕೆ ತರುವಂತಹ, ಹಿಂಸಾಚಾರಕ್ಕೆ ಪ್ರಚೋದನೆ ನೀಡುವ, ದೇಶ ದ್ರೋಹಿ ಮನಸ್ಥಿತಿ ಹುಟ್ಟುಹಾಕುವಂತಹ ಸುದ್ದಿಗಳನ್ನು ಪ್ರಸಾರ ಮಾಡಬಾರದು.

6. ನ್ಯಾಯಾಲಯದ ಆದೇಶವನ್ನು ಉಲ್ಲಂಘನೆ ಮಾಡುವ ಸುದ್ದಿ ಮಾಡುವಂತಿಲ್ಲ. (ನ್ಯಾಯಾಂಗ ನಿಂದನೆ ಮಾಡುವ ಸುದ್ದಿ ಪ್ರಸಾರಕ್ಕೆ ಅವಕಾಶ ಇಲ್ಲ)

7. ರಾಷ್ಟ್ರಪತಿ ಹಾಗೂ ಹಾಗೂ ನ್ಯಾಯ ವ್ಯವಸ್ಥೆ ಘನತೆಗೆ ಚ್ಯುತಿ ಬರುವಂತಹ ಸುದ್ದಿಗಳನ್ನು ಬಿತ್ತರಿಸುವಂತಿಲ್ಲ.

8. ದೇಶದ ಐಕ್ಯತೆಗೆ ಧಕ್ಕೆ ತರುವಂತಹ ಸುದ್ದಿಗಳನ್ನು ಮಾಡುವಂತಿಲ್ಲ.

9. ಭಾರತದ ಪ್ರಜೆಗಳ, ಒಂದು ಗುಂಪಿನ ಅಥವಾ ವ್ಯಕ್ತಿಯ ಅಥವಾ ಸಾಮಾಜಿಕ ಜೀವನಕ್ಕೆ ಘಾಸಿ ಗೊಳಿಸುವ ಅವಹೇಳನಕಾರಿ ಪದಗಳನ್ನು ಬಳಸುವಂತಿಲ್ಲ. ಕೆಟ್ಟ ಪದಗಳನ್ನು ಬಳಸಿ ಸುದ್ದಿ ಮಾಡುವಂತಿಲ್ಲ.

10. ಕುರುಡು ನಂಬಿಕೆಗಳನ್ನು ಪ್ರೋತ್ಸಾಹ ಮಾಡುವಂತಿಲ್ಲ.

11. ಮಹಿಳೆಯ ಚಿತ್ರವನ್ನು ಅಸಭ್ಯವಾಗಿ ಬಳಕೆ ಮಾಡುವುದು, ದೇಹದ ಭಾಗ ತೋರಿಸುವುದು, ಮಹಿಳೆ ಮೇಲೆ ಮಾನಹಾನಿಕರ ಭಾಷೆ ಬಳಕೆ ಮಾಡುವಂತಿಲ್ಲ. ಮಹಿಳೆಯ ಸಾರ್ವಜನಿಕ ಜೀವನಕ್ಕೆ ತೊಂದರೆ ಉಂಟಾಗುವ ರೀತಿ ಅವರನ್ನು ತೋರಿಸುವಂತಿಲ್ಲ.

12. ಮಕ್ಕಳ ಹಕ್ಕುಗಳನ್ನು ಉಲ್ಲಂಘನೆ ಮಾಡುವಂತಿಲ್ಲ.

13. ಒಂದು ಸಮುದಾಯ, ಗುಂಪು, ಒಂದು ಭಾಷೆ, ಒಬ್ಬರ ಆಚಾರ ವಿಚಾರಗಳ ಬಗ್ಗೆ ದೃಶ್ಯಗಳ ಬಳಕೆ, ಅವಹೇಳನಕಾರಿ ಪದ ಬಳಕೆ, ಕೆಟ್ಟ ಭಾವನೆ ಬರುವಂತಹ ಸುದ್ದಿ ಪ್ರಸಾರ ಮಾಡುವಂತಿಲ್ಲ.

14. ಸಿನಿಮಾ ಫೋಟೋಗ್ರಾಫಿಕ್ ಕಾಯ್ದೆ 1952 ಪಾಲನೆ ಮಾಡಬೇಕು.

ಒಟ್ಟು 14 ಪ್ರಮುಖ ಅಂಶಗಳನ್ನು ಕಾಯ್ದೆ ಪಟ್ಟಿ ಮಾಡುತ್ತದೆ. "ಸದ್ಯ ರಾಜ್ಯದಲ್ಲಿ ಪ್ರತಿನಿತ್ಯ ಬೆಳಗ್ಗೆಯಿಂದ ರಾತ್ರಿವರೆಗೆ ದಿನಕ್ಕೊಂದು ಆಯಾಮ ಹುಟ್ಟಿಸಿಕೊಂಡು ಪ್ರಸಾರವಾಗುತ್ತಿರುವ ಸುದ್ದಿಗಳಲ್ಲಿ ಬಹುತೇಕ ಸುದ್ದಿಗಳು ಈ ಚೌಕಟ್ಟನ್ನು ಮೀರಿವೆ. ಈ ಬಗ್ಗೆ ದೂರು ನೀಡುವುದು ಒಂದು ಕಡೆಯಾದರೆ, ಇಂತಹ ಸುದ್ದಿಗಳ ಪರಿಣಾಮದ ಬಗ್ಗೆ ಕಳವಳ ಮೂಡತ್ತದೆ,'' ಎನ್ನುತ್ತಾರೆ ವಕೀಲ.

ಹದ್ದು ಮೀರುವವರಿಗೆ ಶಿಕ್ಷೆ ಹೇಗೆ?

ಹದ್ದು ಮೀರುವವರಿಗೆ ಶಿಕ್ಷೆ ಹೇಗೆ?

ಈ ಮೇಲಿನ ನಿಯಮಗಳನ್ನು ಉಲ್ಲಂಘನೆ ಮಾಡಿ ಸುದ್ದಿ ಪ್ರಸಾರ ಮಾಡಿದರೆ ಅಥವಾ ದೃಶ್ಯಗಳನ್ನು ತೋರಿಸಿದರೆ ಅಂತಹ ಸುದ್ದಿ ವಾಹಿನಿ, ಕೇಬಲ್ ಆಪರೇಟರ್ ವಿರುದ್ಧ ಸಾರ್ವಜನಿಕರು ದೂರು ಸಲ್ಲಿಸಬಹುದು. ದೂರನ್ನು ಸಲ್ಲಿಸುವರು ಮೇಲಿನ ನಿಯಮಗಳ ಉಲ್ಲಂಘನೆ ಬಗ್ಗೆ ಸ್ಪಷ್ಟ ಸಾಕ್ಷಿಗಳನ್ನು ಸಂಗ್ರಹಿಸಿರಬೇಕು. ನಿಯಮ ಉಲ್ಲಂಘನೆ ಮಾಡಿ ಪ್ರಸಾರ ಮಾಡಿದ ಸುದ್ದಿಯನ್ನು ರಾಷ್ಟ್ರ ಭಾಷೆ ಅಥವಾ ಆಂಗ್ಲ ಭಾಷೆಗೆ ತರ್ಜುಮೆ ಮಾಡಿರಬೇಕು. ಸುದ್ದಿ ಪ್ರಸಾರದ ವಿವರಗಳನ್ನು ದೂರಿನಲ್ಲಿ ನಮೂದಿಸಿರಬೇಕು. ದೂರನ್ನು ಮಿನಿಸ್ಟ್ರಿ ಆಫ್ ಇನ್‌ಫರ್ಮೇಷನ್ ಅಂಡ್ ಬ್ರಾಂಡ್ ಕಾಸ್ಟಿಂಗ್ ಕಾರ್ಯದರ್ಶಿಗೆ ಸಲ್ಲಿಸಬೇಕು. ದೂರನ್ನು ಪರಿಶೀಲನೆ ಮಾಡಿ ಅದರ ಸತ್ಯಾಸತ್ಯತೆ ಪರಿಶೀಲಿಸಿ ಮಿನಿಸ್ಟ್ರಿ ಆಫ್ ಇನ್‌ಫರ್ಮೇಷನ್ ಅಂಡ್ ಬ್ರಾಡ್ ಕಾಸ್ಟಿಂಗ್ ಶಿಸ್ತು ಕ್ರಮ ಜರುಗಿಸುತ್ತದೆ. ದೂರು ಸಲ್ಲಿಸುವ ಅರ್ಜಿ ಎಲ್ಲಾ ವಿವರಗಳು https://mib.gov.in/about-broadcasting ವೆಬ್ ತಾಣದಲ್ಲಿ ಲಭ್ಯವಿದೆ.

ದೂರು ಸಲ್ಲಿಸಲು ಹೊಸ ತಿದ್ದುಪಡಿ

ದೂರು ಸಲ್ಲಿಸಲು ಹೊಸ ತಿದ್ದುಪಡಿ

ದಿ ಕೇಬಲ್ ಟೆಲಿವಿಜನ್ ನೆಟ್‌ವರ್ಕ್ ರೂಲ್ಸ್ 1994ಕ್ಕೆ ಕಳೆದ ವರ್ಷ ತಿದ್ದುಪಡಿ ತರಲಾಗಿದೆ. ಸುದ್ದಿ ಪ್ರಸಾರ ನೀತಿ ಹಾಗೂ ಜಾಹೀರಾತು ಪ್ರಸಾರ ನೀತಿಯ ಮೇಲೆ ಇದ್ದ ನಿರ್ಬಂಧಗಳನ್ನು ಮತ್ತಷ್ಟು ಕಠಿಣಗೊಳಿಸಲಾಗಿದೆ.

ಟೆಲಿವಿಜನ್ ನೆಟ್‌ ವರ್ಕ್ ರೂಲ್ಸ್ 1994 ರ ನಿಯಮ 6 ರ ಉಪ ನಿಯಮಕ್ಕೆ ಹೊಸ ಸೇರ್ಪಡೆಯಾಗಿದ್ದು, ಇದರ ಪ್ರಕಾರ ಪೋಗ್ರಾಂ ಕೋಡ್ ಅನುಸಾರ ಸುದ್ದಿ ಪ್ರಸಾರವಾಗಿಲ್ಲ ಎಂಬುದರ ಬಗ್ಗೆ ಸಾರ್ವಜನಿಕರಾಗಲೀ, ಕೇಬಲ್ ಆಪರೇಟರ್ ಆಗಲೀ ಲಿಖಿತವಾಗಿ ದೂರು ನೀಡಬೇಕಿದೆ. ಸದರಿ ವಾಹಿನಿಯ ಕಾರ್ಯಕ್ರಮ, ಕಾಯ್ದೆಯ ಪೋಗ್ರಾಂ ಕೋಡ್‌ಗೆ ಅನುಗುಣವಾಗಿಲ್ಲ ಎಂದು ಕೇಂದ್ರ ಸರ್ಕಾರಕ್ಕೆ ಅನ್ನಿಸಿದರೆ, ಅಂತಹ ಪೋಗ್ರಾಂ ಪ್ರಸಾರವನ್ನು ನಿಯಮ 20 ರ ಅಡಿ ಬಂದ್ ಮಾಡಲು ಅವಕಾಶವಿದೆ.

ಮೂರು ಹಂತದ ದೂರು ಪ್ರಾಧಿಕಾರ

ಮೂರು ಹಂತದ ದೂರು ಪ್ರಾಧಿಕಾರ

ಕಾಯ್ದೆಯ ನಿಯಮ 14 ಕ್ಕೆ ಉಪ ನಿಯಮ 15 ಸೇರ್ಪಡೆ ಮಾಡಿದ್ದು, ಅದರ ಪ್ರಕಾರ, ಪೋಗ್ರಾಂ ಕೋಡ್ ಮತ್ತು ಜಾಹೀರಾತು ಕೋಡ್ ಉಲ್ಲಂಘನೆ ಕುರಿತು ಬರುವ ದೂರುಗಳನ್ನು ಸ್ವೀಕರಿಸಿ ಇತ್ಯರ್ಥ ಮಾಡಲು ಮೂರು ಹಂತದ ದೂರು ಪ್ರಾಧಿಕಾರಗಳನ್ನು ಹೊಂದಿರಬೇಕು.

ಯಾವುದೇ ಸುದ್ದಿ ಪ್ರಸಾರ ಸಂಸ್ಥೆ ಪೋಗ್ರಾಂ ಕೋಡ್, ಜಾಹೀರಾತು ಕೋಡ್ ಉಲ್ಲಂಘನೆ ಸಂಬಂಧ ಬರುವ ದೂರುಗಳನ್ನು ಸ್ವೀಕರಿಸಿ ಇತ್ಯರ್ಥ ಪಡಿಸಲು ಮೊದಲ ಹಂತದಲ್ಲಿ ತಾನೇ ಒಬ್ಬ ಅಧಿಕಾರಿಯನ್ನು ನೇಮಿಸಿ ಅವರ ವಿವರ, ಸಂಪರ್ಕ ಸಂಖ್ಯೆಗಳನ್ನು ವೆಬ್ ತಾಣದಲ್ಲಿ ಪ್ರಕಟಿಸಿರಬೇಕು.

ದೂರು ಸ್ವೀಕರಿಸಿದ ಹದಿನೈದು ದಿನದಲ್ಲಿ ದೂರುದಾರರಿಗೆ ದೂರಿನ ಸ್ಥಿತಿ ಕುರಿತು ಮಾಹಿತಿ ನೀಡಬೇಕು.

ಎರಡನೇ ಹಂತದಲ್ಲಿ ಸುದ್ದಿ ಪ್ರಸಾರ ಸಂಸ್ಥೆಗಳು ಒಗ್ಗೂಡಿ ರಚಿಸಿರುವ ಸಂಸ್ಥೆಯಲ್ಲಿ ಸಹ ಇದೇ ರೀತಿ ದೂರು ಸ್ವೀಕಾರ, ಅವುಗಳ ಇತ್ಯರ್ಥಕ್ಕೆ ಅವಕಾಶ ಮಾಡಿಕೊಡಬೇಕು. ಈ ದೂರು ಸ್ವೀಕಾರ ಇದು ಮೇಲ್ಮನವಿ ಪ್ರಾಧಿಕಾರ ಮಾದರಿ ಕೆಲಸ ನಿರ್ವಹಿಸುತ್ತದೆ. ಇದರ ಮುಖ್ಯಸ್ಥರನ್ನಾಗಿ ಸುಪ್ರೀಂಕೋರ್ಟ್ ನಿವೃತ್ತ ನ್ಯಾಯಮೂರ್ತಿ ಅಥವಾ ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿಯನ್ನು ಮುಖ್ಯಸ್ಥರನ್ನಾಗಿ ನೇಮಿಸಬೇಕು. ಸದಸ್ಯರನ್ನಾಗಿ ಮಾನವ ಹಕ್ಕು ಹೋರಾಟಗಾರು, ಸುದ್ದಿ ಕ್ಷೇತ್ರದ ಹಿರಿಯರು ಒಳಗೊಂಡಂತೆ ಆರು ಸದಸ್ಯರನ್ನು ಒಳಗೊಂಡಿರಬೇಕು. ನಿಯಮ 2 ರ ಅಡಿ ಈ ಎರಡನೇ ಹಂತದಲ್ಲಿ ಕಾರ್ಯ ನಿರ್ವಹಿಸಲಿದೆ.

ಮೂರನೇ ಹಂತದಲ್ಲಿ ಕೇಂದ್ರ ಸರ್ಕಾರದ ಒವರ್ ಸೈಟ್ ಮೆಕಾನಿಸಮ್ ಕಾರ್ಯ ನಿರ್ವಹಣೆ ಮಾಡಲಿದೆ. ನಿಯಮ ಉಲ್ಲಂಘನೆ ಮಾಡಿ ಸುದ್ದಿ ಪ್ರಸಾರ ಮಾಡಿದ ಸುದ್ದಿ ಮಾಧ್ಯಮಗಳಿಂದ ಕ್ಷಮೆ ಕೇಳಿಸಬಹುದು. ಅಥವಾ ದಂಡ ವಿಧಿಸಬಹುದು. ಅಥವಾ ಎರಡನ್ನೂ ವಿಧಿಸಬಹುದು. ಇಲ್ಲವೇ ಸುದ್ದಿ ಸಂಸ್ಥೆಯ ಕಾರ್ಯಕ್ರಮಗಳನ್ನು ತಾತ್ಕಾಲಿಕವಾಗಿ ರದ್ದು ಮಾಡಬಹುದು ಅಥವಾ ವಾಹಿನಿಯ ಪ್ರಸಾರವನ್ನು ತಡೆ ಹಿಡಿಯಬಹುದು. ಹೀಗೆ ನಾನಾ ಶಿಸ್ತು ಕ್ರಮಕ್ಕೆ ಈ ನಿಯಮದಡಿ ಕ್ರಮ ಜರುಗಿಸಲು ಅವಕಾಶವಿದೆ.

ನಿಯಮ ಮೀರಿದ ಪ್ರಕರಣಗಳು

ನಿಯಮ ಮೀರಿದ ಪ್ರಕರಣಗಳು

ದಿ ಕೇಬಲ್ ಟೆಲಿವಿಜನ್ ನೆಟ್‌ವರ್ಕ್ ರೂಲ್ಸ್ 1994 ನಿಯಮ ಉಲ್ಲಂಘನೆ ಮಾಡಿ ಸುದ್ದಿ ಪ್ರಸಾರ ಮಾಡಿದ ಸುದ್ದಿ ಮಾಧ್ಯಮಗಳು ಶಿಸ್ತು ಕ್ರಮಕ್ಕೆ ಒಳಗಾಗಿರುವ ಪ್ರಕರಣಗಳು ಇವೆ. 2021 ರಲ್ಲಿ ಪೋಗ್ರಾಂ ಕೋಡ್ ಉಲ್ಲಂಘನೆ ಮಾಡಿದ ನಿಯಮದಡಿ ದೇಶದ್ರೋಹಿ ವಿಷಯವನ್ನು ಪ್ರಸಾರ ಮಾಡಿದ ಅರೋಪಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ 160 ಸುದ್ದಿ ವಾಹಿನಿಗಳ ವಿರುದ್ಧ ಕ್ರಮ ಜರುಗಿಸಿದೆ. ಮಾತ್ರವಲ್ಲ 60 ಯು ಟೂಬ್ ಚಾನೆಲ್ ಗಳನ್ನು ಶಾಶ್ವತವಾಗಿ ಬಂದ್ ಮಾಡಿದೆ. ಈ ವಿಚಾರವನ್ನು ರಾಜ್ಯ ಸಭೆ ಪ್ರಶ್ನೋತ್ತರ ವೇಳೆಯಲ್ಲಿ ಮಿನಿಸ್ಟ್ರಿ ಅಫ್ ಇನ್‌ಫರ್ಮೇಷನ್ ಅಂಡ್ ಬ್ರಾಡ್ ಕಾಸ್ಟಿಂಗ್ ರಾಜ್ಯ ಸಚಿವ ಎಲ್. ಮುರುಗನ್ ಮಾಹಿತಿ ನೀಡಿದ್ದರು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+