ಆಧಾರ್ ಕಾರ್ಡ್ ಮಾಡಿಸುವುದು ಹೇಗೆ?
ಮೊಬೈಲ್ ಸಿಮ್ ತೆಗೆದುಕೊಳ್ಳಲು ಹೋಗಿ, ಬ್ಯಾಂಕ್ ಅಕೌಂಟ್ ಮಾಡಿಸಲು ಹೋಗಿ, ಪಾಸ್ ಪೋರ್ಟ್ ಮಾಡಿಸಲು ಹೋಗಿ ನಿಮ್ಮ ಆಧಾರ್ ಸಂಖ್ಯೆ ಕೊಡಿ ಎಂದು ಹೇಳುತ್ತಾರೆ. ಭಾರತೀಯ ರಾಷ್ಟ್ರೀಯ ಗುರುತಿನ ಚೀಟಿ ಪ್ರಾಧಿಕಾರ ನೀಡುವ 12 ಅಂಕಿಗಳ ಆಧಾರ್ ಕಾರ್ಡ್‌ಗೆ ಅಷ್ಟು ಪ್ರಾಮುಖ್ಯತೆ ಇದೆ.
ನಾವು ಆಧಾರ್ ಕಾರ್ಡ್ ಮಾಡಿಸಿಲ್ಲ, ಹೇಗೆ ಮಾಡಿಸಬೇಕು ಎಂದು ಗೊತ್ತಿಲ್ಲ, ಅದನ್ನು ಮಾಡಿಸಲು ತಾಸು ಗಟ್ಟಲೇ ಕಾಯಲು ತಾಳ್ಮೆ ಇಲ್ಲ ಎನ್ನುವವರಿಗೆ ಆಧಾರ್ ಕಾರ್ಡ್ ಪಡೆಯುವ ಸರಳ ಮಾಹಿತಿ ಇಲ್ಲಿ ನೀಡಿದ್ದೇವೆ. ನೀವು ಭಾರತದ ಪ್ರಜೆಗಳಾಗಿದ್ದರೆ ಆಧಾರ್ ಕಾರ್ಡ್ ತಪ್ಪದೇ ಪಡೆಯಿರಿ.[ಆಧಾರ್ ವೆಬ್ ಸೈಟ್ ನೋಡಿ]
ಹಲವು ಸರ್ಕಾರಿ ಸೇವೆಗಳನ್ನು ಪಡೆಯಲು, ವಿಳಾಸ ದೃಡೀಕರಣಕ್ಕೆ ಆಧಾರ್ ಕಾರ್ಡ್ ಕಡ್ಡಾಯವಾಗಿದೆ. ಕೇಂದ್ರ ಸರ್ಕಾರದಿಂದ ಎಲ್ಪಿಜಿ ಸಬ್ಸಿಡಿ ಪಡೆಯಲು ಆಧಾರ್ ಕಾರ್ಡ್ ಅಗತ್ಯ. ನರೇಗಾ ಕೂಲಿ ಪಡೆಯಲು ಆಧಾರ್ ಸಂಖ್ಯೆಯನ್ನು ಬ್ಯಾಂಕ್‌ಗೆ ನೀಡಿ ಖಾತೆ ತೆರೆಯಬೇಕಾಗುತ್ತದೆ.

ಆಧಾರ್ ಕಾರ್ಡ್ ಉಪಯೋಗವೇನು : ಉದ್ಯೋಗ, ಶಿಕ್ಷಣ, ಪಿಂಚಣಿ ಯೋಜನೆಗಳು, ವಿಮೆ, ಮೊಬೈಲ್ ಸಿಮ್ ಖರೀದಿ, ಹೊಸ ಗ್ಯಾಸ್ ಖರೀದಿ, ಪಾಸ್ ಪೋರ್ಟ್ ಪಡೆಯವುದು ಸೇರಿದಂತೆ ಆಧಾರ್ ಕಾರ್ಡ್‌ನಿಂದ ಹಲವು ಉಪಯೋಗಗಳಿವೆ. ಇದೊಂದು ಬಹುಮುಖ್ಯವಾದ ವಿಳಾಸ ದೃಡೀಕರಣ ಪತ್ರವಾಗಿದೆ. [ಆನ್ ಲೈನ್ ಮಾಹಿತಿ ಇಲ್ಲಿದೆ]
ಕಾರ್ಡ್ ಪಡೆಯುವುದು ಹೇಗೆ : ನಿಮ್ಮ ಮನೆಯ ಹತ್ತಿರದಲ್ಲಿರುವ ಆಧಾರ್ ನೋಂದಣಿ ಕೇಂದ್ರಕ್ಕೆ ತೆರಳಿ, ಅಲ್ಲಿ ಅರ್ಜಿಯನ್ನು ಪಡೆದು, ಅದನ್ನು ಭರ್ತಿ ಮಾಡಿ ಅಗತ್ಯ ದಾಖಲೆಗಳೊಂದಿಗೆ ಸಲ್ಲಿಕೆ ಮಾಡಬಹುದು. ಇದು ಸಂಪೂರ್ಣ ಉಚಿತವಾಗಿರುತ್ತದೆ.
ಆನ್ ಲೈನ್ ಮೂಲಕ ಮೊದಲೇ ನೋಂದಣಿ ಮಾಡಿಕೊಂಡು, ಅಲ್ಲಿಯೇ ಅರ್ಜಿಯನ್ನು ಡೌನ್‌ಲೋಡ್ ಮಾಡಿಕೊಡು ಭರ್ತಿ ಮಾಡಿ ಅದನ್ನು ನೋಂದಣಿ ಕೇಂದ್ರದಲ್ಲಿ ಹೋಗಿ, ಅಗತ್ಯ ದಾಖಲೆಗಳೊಂದಿಗೆ ಸಲ್ಲಿಸಿ, ಅವರು ನೀಡುವ ಸ್ವೀಕೃತಿ ಪತ್ರವನ್ನು ಪಡೆಯಬಹುದಾಗಿದೆ. [ಮದುವೆ ಪ್ರಮಾಣ ಪತ್ರ ಪಡೆಯುವುದು ಹೇಗೆ?]
ಆಧಾರ್ ಕೇಂದ್ರದಲ್ಲಿ ನಿಮ್ಮ ಅರ್ಜಿಯ ವಿವರಗಳನ್ನು ಭರ್ತಿ ಮಾಡುವಾಗ ಅವುಗಳನ್ನು ಮತ್ತೊಮ್ಮೆ ಗಮನಿಸಿ, ತಪ್ಪಿದ್ದರೆ ತಕ್ಷಣ ಸರಿಪಡಿಸಲು ಹೇಳಿ. ಕಾರ್ಡ್ ಬಂದ ನಂತರವೂ ತಪ್ಪಿದ್ದರೆ ಅವುಗಳನ್ನು ಅರ್ಜಿ ಸಲ್ಲಿಸಿ ಸರಿಪರಿಸಿಕೊಳ್ಳಬಹುದಾಗಿದೆ.
ನೋಂದಣಿ ಕೇಂದ್ರದಲ್ಲಿ ಅರ್ಜಿ ಸಲ್ಲಿಸಿದ ನಂತರ ನಿಮ್ಮ ಭಾವಚಿತ್ರ, ಬೆರಳಚ್ಚು ಮಾದರಿ ಮತ್ತು ಕಣ್ಣಿನ ಪಾಪೆಯ ಚಿತ್ರವನ್ನು ತೆಗೆದುಕೊಳ್ಳುತ್ತಾರೆ. ನಂತರ ನಿಮಗೆ ಸ್ವೀಕೃತಿ ಪತ್ರ ನೀಡುತ್ತಾರೆ. ನಿಮ್ಮ ಆಧಾರ್ ಕಾರ್ಡ್ ಬರುವ ತನಕ ಈ ಸ್ವೀಕೃತಿ ಪತ್ರವನ್ನು ಜೋಪಾನವಾಗಿ ಸಂಗ್ರಹಿಸಿಟ್ಟುಕೊಳ್ಳಿ.
ನೀವು ನೀಡಿದ ವಿಳಾಸ, ಭಾವಚಿತ್ರ ಮುಂತಾದವುಗಳೊಂದಿಗೆ 12 ಅಂಕಿಗಳನ್ನು ಹೊಂದಿರುವ ಆಧಾರ್ ಕಾರ್ಡ್ ನಿಮ್ಮ ವಿಳಾಸಕ್ಕೆ ಅಂಚೆ ಮೂಲಕ ಬಂದು ತಲುಪುತ್ತದೆ. ಇದಕ್ಕೆ ಸುಮಾರು ಮೂರು ತಿಂಗಳ ಕಾಲಾವಕಾಶ ಬೇಕಾಗುತ್ತದೆ. ನಿಮಗೆ ಆಧಾರ್ ಕಾರ್ಡ್ ಎಂದು ತಲುಪುತ್ತದೆ ಎಂಬ ಮಾಹಿತಿಯೂ ನಿಮ್ಮ ಮೊಬೈಲ್ ಸಂಖ್ಯೆಗೆ ಸಂದೇಶ ರೂಪದಲ್ಲಿ ಬಂದು ಸೇರುತ್ತದೆ.
ಯಾರು ಅರ್ಜಿ ಸಲ್ಲಿಸಬಹುದು : ಎಲ್ಲಾ ದೇಶವಾಸಿಗಳು ಆಧಾರ್ ಕಾರ್ಡ್ ಪಡೆಯಲು ಅರ್ಹರಾಗಿರುತ್ತಾರೆ. ಮೂರು ವರ್ಷದ ಒಳಗಿನ ಮಕ್ಕಳಾಗಿದ್ದರೆ ಕಾರ್ಡ್‌ಗೆ ಅರ್ಜಿ ಸಲ್ಲಿಸುವಾಗ ಬಯೋಮೆಟ್ರಿಕ್ ಮಾಹಿತಿಯನ್ನು ನೀಡಬೇಕಾಗುವುದಿಲ್ಲ. 15 ವರ್ಷಗಳಾದ ಬಳಿಕ ಅವರು ಬಯೋಮೆಟ್ರಿಕ್ ಮಾಹಿತಿಯನ್ನು ಸಲ್ಲಿಸಬೇಕಾಗುತ್ತದೆ.
ಯಾವ ದಾಖಲೆ ಬೇಕು : ಆಧಾರ್ ನೋಂದಣಿ ಕೇಂದ್ರಕ್ಕೆ ಹೋಗುವ ಮುನ್ನ ರೇಷನ್ ಕಾರ್ಡ್, ಪಾಸ್‌ಪೋರ್ಟ್, ಪಾನ್ ಕಾರ್ಡ್, ಡ್ರೈವಿಂಗ್ ಲೈಸೆನ್ಸ್ ಇವುಗಳಲ್ಲಿ ಒಂದನ್ನು ನೀಡಬೇಕಾಗುತ್ತದೆ. ನೀವು ನೋಂದಣಿ ಮಾಡಿಸಿದ ಬಳಿಕ 90 ದಿನಗಳಲ್ಲಿ ಆಧಾರ್ ಕಾರ್ಡ್ ನಿಮ್ಮ ವಿಳಾಸಕ್ಕೆ ಅಂಚೆ ಮೂಲಕ ತಲುಪಲಿದೆ.












Click it and Unblock the Notifications