Sivasri: ಇಷ್ಟು ಬೇಗ ಸ್ಪಷ್ಟ ಕನ್ನಡ ಕಲಿಯಲು ಹೀಗೆ ಮಾಡಿದೆ: ತೇಜಸ್ವಿ ಪತ್ನಿ ಶಿವಶ್ರೀ ಹೇಳಿದ್ದೇನು?
ವಲಸಿಗರಿಂದ ತುಂಬಿ ತುಳುಕಾಡುತ್ತಿರುವ ಬೆಂಗಳೂರಿನಲ್ಲಿ ಕನ್ನಡ ಮಾತನಾಡುವವರ ಸಂಖ್ಯೆ ಕಡಿಮೆಯಾಗುತ್ತಿದೆ ಎಂಬ ಕೂಗು ಮೊದಲಿನಿಂದಲೂ ಇದೆ. ಪರಭಾಷಿಕರು ಕರ್ನಾಟಕದ ನಿವಾಸಿಗಳಾಗಿ ದಶಕಗಳಿಂದ ಇಲ್ಲೇ ನೆಲೆಯೂರಿದರೂ ಕನ್ನಡ ಕಲಿಯುವ ಗೋಜಿಗೂ ಹೋಗಲ್ಲ. ಹೀಗಾಗಿ ಕನ್ನಡ ಗೊತ್ತಿಲ್ಲ ಎಂದೇ ತಮ್ಮ ಭಾಷೆ ಮೇಲಿನ ಅಭಿಮಾನ ಉಳಿಸಿಕೊಳ್ಳುತ್ತಾರೆ. ಆದರೆ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಅವರ ಪತ್ನಿ ಶಿವಶ್ರೀ ಸ್ಕಂದಪ್ರಸಾದ್ ಅವರು ಕನ್ನಡ ಕಲಿಯುವ ವಿಚಾರದಲ್ಲಿ ಇವರಿಗೆಲ್ಲ ನಿಜಕ್ಕೂ ಮಾದರಿಯಾಗಿದ್ದಾರೆ.
ಗಾಯಕಿ, ಭರತನಾಟ್ಯ ಕಲಾವಿದೆಯೂ ಆಗಿರುವ ಶಿವಶ್ರೀ ಸ್ಕಂದಪ್ರಸಾದ್ ಅವರು ಕೆಲ ತಿಂಗಳ ಹಿಂದಷ್ಟೇ ತೇಜಸ್ವಿ ಸೂರ್ಯ ಅವರನ್ನು ವಿವಾಹವಾಗುವ ಮೂಲಕ ಬೆಂಗಳೂರಿನ ಸೊಸೆಯಾದವರು. ಅವರು ಮೂಲತಃ ತಮಿಳುನಾಡಿನ ಚೆನ್ನೈನವರು. ಅಲ್ಲೇ ಹುಟ್ಟಿ ಬೆಳೆದ ಶಿವಶ್ರೀ ಅವರು ಮದುವೆ ಕೆಲ ತಿಂಗಳಲ್ಲೇ ಸುಲಲಿತವಾಗಿ ಕನ್ನಡ ಭಾಷೆ ಮಾತನಾಡುವುದನ್ನು ಕಲಿತಿದ್ದಾರೆ. ಇತ್ತೀಚಿನ ಸಂದರ್ಶನದಲ್ಲಿ ಅವರು ಅಚ್ಚ ಕನ್ನಡದಲ್ಲೇ ಮಾತನಾಡುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.

ಇಷ್ಟು ಚೆನ್ನಾಗಿ ಕನ್ನಡ ಮಾತನಾಡಲು ಕಲಿತಿದ್ದು ಹೇಗೆ? ಎಂಬುದನ್ನೂ ಶಿವಶ್ರೀ ವಿವರಿಸಿದ್ದಾರೆ. 'ನಾನು ವಿಡಿಯೋಗಳನ್ನು ನೋಡುತ್ತಾ ಕನ್ನಡ ಕಲಿತೆ. ಸತೀಶ್ ಎಂಬುವವರು ಕನ್ನಡ ಕಲಿಸುವ ತರಗತಿಗಳನ್ನು ಆನ್‌ಲೈನ್‌ನಲ್ಲಿ ಮಾಡುತ್ತಾರೆ. ವಿಡಿಯೋ ನೋಡುತ್ತಿದ್ದಾಗ ಅವರ ನಂಬರ್ ಕೂಡ ಹಾಕಿದ್ದರು. ಬಳಿಕ ಅವರಿಗೆ ನಾನು ಕನ್ನಡ ಕಲಿಯಬೇಕು, ಹೆಲ್ಪ್ ಮಾಡಿ ಅಂತ ಕೇಳಿಕೊಂಡೆ' ಎಂದಿದ್ದಾರೆ.
'ಆಗ ಅವರು ಆನ್‌ಲೈನ್ ಕ್ಲಾಸ್ ಇದೆ, ಸೇರಿಕೊಳ್ಳಿ ಅಂತ ಹೇಳಿದ್ರು. ಬಳಿಕ ಲಿಂಕ್ ಮೂಲಕ ತರಗತಿಗಳನ್ನು ಕೇಳಲು ಶುರು ಮಾಡಿದೆ. ಅಲ್ಲಿ ಅವರು ದಿನನಿತ್ಯ ಬಳಸುವ ಸರಳ ಕನ್ನಡ ಪದಗಳನ್ನು ಹೇಳಿಕೊಡುತ್ತಿದ್ರು. ಇದು ನನಗೆ ತುಂಬಾ ಹೆಲ್ಪ್ ಆಯ್ತು. ಇಲ್ಲದಿದ್ರೆ ಇಷ್ಟು ಬೇಗ ಕನ್ನಡ ಕಲಿಯಲು ಸಾಧ್ಯ ಆಗುತ್ತಿರಲಿಲ್ಲ' ಎಂದು ಹೇಳಿದ್ದಾರೆ.
'ಸ್ವಇಚ್ಛೆಯಿಂದ ಕನ್ನಡ ಕಲಿತೆ'
'ನಮ್ಮ ಮನೆಯಲ್ಲಿ ನಾನು ಕನ್ನಡ ಕಲಿಯಲೇಬೇಕು ಅನ್ನೋ ಒತ್ತಡ ಇರಲಿಲ್ಲ. ನಾನೇ ಸ್ವಇಚ್ಛೆಯಿಂದ ಕಲಿತಿದ್ದು. ಇದರಿಂದ ಮನೆಯಲ್ಲಿ ಮಾತನಾಡೋಕು ಸುಲಭವಾಗುತ್ತೆ. ಅತ್ತೆ-ಮಾವ ಜೊತೆ ಇಂಗ್ಲಿಷ್‌ನಲ್ಲಿ ಮಾತಾಡೋಕೆ ಆಗಲ್ಲ. ಸಂಗೀತಕ್ಕೆ ತುಂಬಾ ಹತ್ತಿರವಾದ ಭಾಷೆ ಕನ್ನಡ. ಈಗ ಕನ್ನಡ ತಿಳಿದ ಮೇಲೆ ನನಗೆ ಎಲ್ಲ ಹಾಡುಗಳು ಅರ್ಥ ಆಗ್ತಿದೆ. ರಾಜ್‌ಕುಮಾರ್ ಅವರ ಹಾಡುಗಳು ಕೂಡ' ಎಂದು ಶಿವಶ್ರೀ ಸಂದರ್ಶನದಲ್ಲಿ ಹೇಳಿದ್ದಾರೆ.
ಶಿವಶ್ರೀ ಸ್ಕಂದ ಪ್ರಸಾದ್ ಅವರು ಚೆನ್ನೈ ಮೂಲದ ಗಾಯಕಿ ಹಾಗೂ ಭರತನಾಟ್ಯ ಕಲಾವಿದೆ. ಬಿ.ಟೆಕ್ ಪದವೀಧರೆಯಾಗಿರುವ ಅವರು, ಅಯೋಧ್ಯೆ ರಾಮಮಂದಿರ ಲೋಕಾರ್ಪಣೆ ಸಂದರ್ಭದಲ್ಲಿ ತಮ್ಮ ಗಾಯನದ ಮೂಲಕ ಪ್ರಧಾನಿ ಮೋದಿ ಅವರಿಂದ ಮೆಚ್ಚುಗೆ ಪಡೆದಿದ್ದರು. ಕಳೆದ ಮಾರ್ಚ್‌ನಲ್ಲಿ ಬೆಂಗಳೂರಿನ ಖಾಸಗಿ ರೆಸಾರ್ಟ್‌ನಲ್ಲಿ ಇವರ ಮದುವೆ ಶಾಸ್ತ್ರೋಕ್ತವಾಗಿ ನೆರವೇರಿತ್ತು.












Click it and Unblock the Notifications