ಆಗ ಮನಮೋಹನ್ ಸಿಂಗ್ ಸ್ಪಂದಿಸಿದ್ದು ಹೇಗೆ? ಈಗ ಮೋದಿ ಮಾಡುತ್ತಿರುವುದೇನು?
ಬೆಂಗಳೂರು, ಅಕ್ಟೋಬರ್ 4: ಪ್ರವಾಹದಿಂದ ತತ್ತರಿಸಿರುವ ರಾಜ್ಯಕ್ಕೆ ಕೇಂದ್ರ ಸರ್ಕಾರ ಇನ್ನೂ ಪರಿಹಾರ ಹಣ ಘೋಷಣೆ ಮಾಡದೆ ಇರುವುದರ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಇಷ್ಟೆಲ್ಲಾ ಅನಾಹುತಗಳು ನಡೆದು ಜನರು ಪರದಾಡುತ್ತಿದ್ದರೂ ಪ್ರಧಾನಿ ನರೇಂದ್ರ ಮೋದಿ ಇತ್ತ ತಲೆಹಾಕಿಲ್ಲ. ರಾಜ್ಯದಲ್ಲಿ ಬಿಜೆಪಿಯದ್ದೇ ಸರ್ಕಾರವಿದ್ದರೂ ಅದರ ಮನವಿಗೆ ಸ್ಪಂದಿಸಿಲ್ಲ. ಅಲ್ಲದೆ ರಾಜ್ಯ ಸರ್ಕಾರ ನೀಡಿದ್ದ ವರದಿಯನ್ನು ತಿರಸ್ಕರಿಸಿದೆ ಎಂಬ ಆರೋಪಗಳು ಕೇಳಿಬಂದಿವೆ.
ಇದರ ಬೆನ್ನಲ್ಲೇ ಹತ್ತು ವರ್ಷಗಳ ಹಿಂದೆ ಆಗಿನ ಪ್ರಧಾನಿ ಮನಮೋಹನ್ ಸಿಂಗ್ ಉತ್ತರ ಕರ್ನಾಟಕದ ಪ್ರವಾಹ ಸಂದರ್ಭದಲ್ಲಿ ಹೇಗೆ ಪ್ರತಿಕ್ರಿಯಿಸಿದ್ದರು ಎಂಬುದು ಚರ್ಚೆಗೆ ಒಳಗಾಗಿದೆ. 2009ರಲ್ಲಿ ಇದೇ ಸಂದರ್ಭದಲ್ಲಿ ಭೀಕರ ಪ್ರವಾಹದಿಂದ ಉತ್ತರ ಕರ್ನಾಟಕ ತತ್ತರಿಸಿತ್ತು. ಆಗಲೂ ರಾಜ್ಯದಲ್ಲಿ ಬಿಎಸ್ ಯಡಿಯೂರಪ್ಪ ಅವರ ನೇತೃತ್ವದ ಬಿಜೆಪಿ ಸರ್ಕಾರವಿತ್ತು. ಕೇಂದ್ರದಲ್ಲಿ ಇದ್ದದ್ದು ಡಾ. ಮನಮೋಹನ್ ಸಿಂಗ್ ನೇತೃತ್ವದ ಯುಪಿಎ ಸರ್ಕಾರ.
2009ರಲ್ಲಿ ಕೂಡ ವಿಪರೀತ ಮಳೆ ಉತ್ತರ ಕರ್ನಾಟಕದ ಜನತೆಯ ಬದುಕು ಪ್ರವಾಹದಿಂದ ಕೊಚ್ಚಿಹೋಗಿತ್ತು. ಆದರೆ ಈ ವರ್ಷ ಪ್ರವಾಹದಿಂದ ಉಂಟಾಗಿರುವ ಹಾನಿ ಮತ್ತು ನಷ್ಟ ಅದಕ್ಕಿಂತಲೂ ಹೆಚ್ಚು. ಎರಡು ತಿಂಗಳು ಕಳೆದರೂ ಜನರ ಪರಿಸ್ಥಿತಿ ಇನ್ನೂ ಸುಧಾರಿಸಿಲ್ಲ ಎನ್ನುವ ಅಂಶಗಳು ಉತ್ತರ ಕರ್ನಾಟಕದ ಹೀನಾಯ ಸ್ಥಿತಿಯನ್ನು ಹೇಳುತ್ತವೆ.

ಸ್ಪಂದಿಸಿದ್ದ ಮನಮೋಹನ್ ಸಿಂಗ್
ಈ ಸಂದರ್ಭದಲ್ಲಿ ಆಗಿನ ಪ್ರಧಾನಿ ಮನಮೋಹನ್ ಸಿಂಗ್ ಮತ್ತು ಈಗಿನ ಪ್ರಧಾನಿ ನರೇಂದ್ರ ಮೋದಿ ಅವರು ಸ್ಪಂದಿಸಿದ ರೀತಿಗೆ ಸಾಕಷ್ಟು ವ್ಯತ್ಯಾಸವಿದೆ. ರಾಜ್ಯದಲ್ಲಿ ನೆರೆ ಉಂಟಾದ ಬಳಿಕ ಯಡಿಯೂರಪ್ಪ ಅವರು ಕೇಂದ್ರದ ಸಹಾಯಕ್ಕಾಗಿ ದೆಹಲಿಗೆ ತೆರಳಿದ್ದರು. ಯಡಿಯೂರಪ್ಪ ಅವರು ಕದ ತಟ್ಟಿದ ಕೂಡಲೇ ಕೇಂದ್ರ ಸರ್ಕಾರ ಬಾಗಿಲು ತೆರೆದು ಅವರೊಂದಿಗೆ ಮಾತುಕತೆ ನಡೆಸಿ ವಿವರಗಳನ್ನು ಪಡೆದುಕೊಂಡಿತ್ತು. ಮನಮೋಹನ್ ಸಿಂಗ್ ಖುದ್ದಾಗಿ ಯಡಿಯೂರಪ್ಪ ಅವರೊಂದಿಗೆ ಚರ್ಚಿಸಿದ್ದರು. ಆದರೆ ಎರಡೂವರೆ ತಿಂಗಳಾದರೂ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಲು ಯಡಿಯೂರಪ್ಪ ಅವರಿಗೆ ಸಾಧ್ಯವಾಗಿಲ್ಲ.

ವೈಮಾನಿಕ ಸಮೀಕ್ಷೆ ನಡೆಸಿದ್ದ ಸಿಂಗ್
ಯಡಿಯೂರಪ್ಪ ಅವರು ಭೀಕರ ಪ್ರವಾಹದ ಸ್ಥಿತಿಯನ್ನು ವಿವರಿಸುತ್ತಿದ್ದಂತೆಯೇ ಮನಮೋಹನ್ ಸಿಂಗ್ ಅವರು ಎರಡೇ ದಿನದಲ್ಲಿ ನೇರವಾಗಿ ರಾಯಚೂರಿಗೆ ಬಂದಿಳಿದಿದ್ದರು. ಅದಕ್ಕೂ ಮೊದಲು ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಕೂಡ ಬಳ್ಳಾರಿ ಭಾಗದಲ್ಲಿ ವೈಮಾನಿಕ ಸಮೀಕ್ಷೆಯಲ್ಲಿ ಭಾಗವಹಿಸಿದ್ದರು. ಮನಮೋಹನ್ ಸಿಂಗ್ ನೆರೆಯ ಆಂಧ್ರಪ್ರದೇಶದಲ್ಲಿ ಕೂಡ ಸಮೀಕ್ಷೆ ನಡೆಸಿದ್ದರು. ಈ ಎರಡೂ ಸಂದರ್ಭದಲ್ಲಿ ಯಡಿಯೂರಪ್ಪ ಅವರು ಕಾಂಗ್ರೆಸ್ ನಾಯಕರೊಂದಿಗೆ ವೈಮಾನಿಕ ಸಮೀಕ್ಷೆಯಲ್ಲಿ ತೆರಳಿ ಹಾನಿಯ ಬಗ್ಗೆ ವಿವರಿಸಿದ್ದರು.

ರಾಜ್ಯಕ್ಕೆ 1,500 ಕೋಟಿ ಸಹಾಯ
ಮನಮೋಹನ್ ಸಿಂಗ್ ಅವರು ಸಮೀಕ್ಷೆ ಪೂರ್ಣಗೊಳಿಸಿ ಕೂಡಲೇ ರಾಜ್ಯದ ಪ್ರವಾಹ ಪರಿಸ್ಥಿತಿಗೆ ನೆರವಾಗಲು 1,500 ಕೋಟಿ ರೂಪಾಯಿ ಪರಿಹಾರ ಘೋಷಿಸಿದ್ದರು. ಅಲ್ಲದೆ, ಯಡಿಯೂರಪ್ಪ, ಕೇಂದ್ರ ಸಚಿವರಾಗಿದ್ದ ಎಸ್ ಎಂ ಕೃಷ್ಣ, ಎಂ ವೀರಪ್ಪ ಮೊಯ್ಲಿ, ಮಲ್ಲಿಕಾರ್ಜುನ ಖರ್ಗೆ ಮತ್ತು ರಾಜ್ಯ ಗ್ರಾಮೀಣಾಭಿವೃದ್ಧಿ ಸಚಿವೆ ಶೋಭಾ ಕರಂದ್ಲಾಜೆ ಅವರೊಂದಿಗೆ ಸಭೆ ನಡೆಸಿದ್ದರು.

ಆಕ್ರೋಶದ ಬಳಿಕ ಭೇಟಿ
ಈ ವರ್ಷ ಉತ್ತರ ಕರ್ನಾಟಕ ಮತ್ತು ಉತ್ತರ ಕನ್ನಡದಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿ ವಾರಗಳು ಕಳೆದರೂ ಕೇಂದ್ರದಿಂದ ಯಾವ ನಾಯಕರೂ ಕರ್ನಾಟಕದತ್ತ ಮುಖಮಾಡಿರಲಿಲ್ಲ. ಈ ಬಗ್ಗೆ ವ್ಯಾಪಕ ಟೀಕೆ, ಆಕ್ರೋಶ ವ್ಯಕ್ತವಾದ ಬಳಿಕ ಗೃಹ ಸಚಿವ ಅಮಿತ್ ಶಾ ಮತ್ತು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಪರಿಶೀಲನೆ ನಡೆಸಿ ಹೋಗಿದ್ದರು. ಆದರೆ ಪ್ರವಾಹದ ಪರಿಸ್ಥಿತಿಗೆ ನೆರವು ನೀಡುವ ಬಗ್ಗೆ ಅವರು ಯಾವುದೇ ಖಚಿತ ಭರವಸೆ ನೀಡಿರಲಿಲ್ಲ. ಬಳಿಕ ಕೇಂದ್ರದ ತಂಡವೊಂದು ಬಂದು ಪರಿಶೀಲನೆ ನಡೆಸಿತ್ತು. ಆದರೆ ಯಾವ ತಂಡವೂ ಸಂಪೂರ್ಣ ಅಧ್ಯಯನ ನಡೆಸಿಲ್ಲ. ಕರಾವಳಿ ಮತ್ತು ಉತ್ತರ ಕನ್ನಡ ಭಾಗಗಳತ್ತ ತಲೆಯೇಹಾಕಿರಲಿಲ್ಲ. ಆ ವರದಿ ಪರಿಸ್ಥಿತಿ ಏನಾಗಿದೆ ಎಂಬ ಮಾಹಿತಿ ಕೂಡ ಇಲ್ಲ.

ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ
ಮನಮೋಹನ್ ಸಿಂಗ್ ಅವರು ಆಗ ಪಕ್ಷಾತೀತವಾಗಿ ತೋರಿಸಿದ ಕಾಳಜಿಯನ್ನು ಈಗ ಅವರದೇ ಸರ್ಕಾರವಿದ್ದರೂ ಮೋದಿ ಅವರು ತೋರಿಸುತ್ತಿಲ್ಲ ಎಂದು ಕಾಂಗ್ರೆಸ್ ನಾಯಕರು ಕಳೆದ ಎರಡು ತಿಂಗಳಿನಿಂದ ಹೋಲಿಕೆಯೊಂದಿಗೆ ಆರೋಪಿಸುತ್ತಿದ್ದಾರೆ. ರಾಜ್ಯ ಮತ್ತು ಕೇಂದ್ರದ ವಿರುದ್ಧ ಬೇಸತ್ತಿರುವ ಜನರು ಮನಮೋಹನ್ ಸಿಂಗ್ ಅವರು ತೋರಿಸಿದ್ದ ಸ್ಪಂದನೆಯ ಫೋಟೊ ಮತ್ತು ಸುದ್ದಿಗಳನ್ನು ಹಂಚಿಕೊಂಡು ಬಿಜೆಪಿ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.
-
Viral: ಬೆಂಗಳೂರಿಗೆ ಕಾಲಿಟ್ಟಿತೇ ಡೇಂಜರಸ್ 'ಜಾಂಬಿ ಡ್ರಗ್'?: ಯುವಕನ ವಿಡಿಯೋ ನೋಡಿ ಬೆಚ್ಚಿಬಿದ್ದ ಸಿಲಿಕಾನ್ ಸಿಟಿ ಜನ -
Darshan: ನಟ ದರ್ಶನ್ ಕಾನೂನು ಹೋರಾಟಕ್ಕೆ ಗೆಲುವು: 'ಬಾಸ್' ಸಿನಿಮಾ ಬಿಡುಗಡೆಗೆ ಕೋರ್ಟ್ ತಡೆ -
Copra Price: ಇದೇ ಮೊಟ್ಟ ಮೊದಲ ಬಾರಿ ತಿಪಟೂರು ಮಾರುಕಟ್ಟೆಯಲ್ಲಿ ದಾಖಲೆ ಬೆಲೆಗೆ ಮಾರಾಟವಾದ ಕೊಬ್ಬರಿ -
KSRTC ನೌಕರರ ಹಿಂಬಾಕಿ 1271 ರೂ ಬಿಡುಗಡೆ; ವೇತನ ಹೆಚ್ಚಳಕ್ಕೆ ಮುಹೂರ್ತ ಫಿಕ್ಸ್: ಏ.17ಕ್ಕೆ ನಿರ್ಣಾಯಕ ಸಭೆ -
ಕರ್ನಾಟಕ ದ್ವಿತೀಯ PUC ಫಲಿತಾಂಶಕ್ಕೆ ತಟ್ಟಿದ ಚುನಾವಣಾ ನೀತಿ ಸಂಹಿತೆ ಬಿಸಿ: ಏಪ್ರಿಲ್ 8ಕ್ಕೂ ರಿಸಲ್ಟ್ ಬರೋದು ಡೌಟ್? -
Viral: ಕಚೇರಿಗೆ ಬಂದ ಪೋಷಕರು, ಮ್ಯಾನೇಜರ್ ಬಳಿ ಮಗಳ ವರ್ತನೆ ಬಗ್ಗೆ ವಿಚಾರಣೆ: ಶಾಲಾ ದಿನಗಳನ್ನು ನೆನಪಿಸಿದ ವಿಡಿಯೋ -
Divorce Celebration: ಡಿವೋರ್ಸ್ ಪಡೆದ ಮಗಳಿಗೆ ಸಿಹಿ ತಿನ್ನಿಸಿ ಅದ್ದೂರಿ ಸ್ವಾಗತ: ತಂದೆಯ ಸಂಭ್ರಮಾಚರಣೆ ವಿಡಿಯೋ ವೈರಲ್ -
Gold Rate April 7: ಚಿನ್ನ - ಬೆಳ್ಳಿ ಬೆಲೆ ಸತತ 3ನೇ ದಿನವೂ ಇಳಿಕೆ; ಚಿನ್ನ ಪ್ರಿಯರಿಗೆ ಗುಡ್ನ್ಯೂಸ್ -
Viral Video: ಆರ್ಸಿಬಿ Vs ಸಿಎಸ್ಕೆ ಪಂದ್ಯ; ಕರ್ನಾಟಕ Vs ತಮಿಳುನಾಡು ಮಾಡಬೇಡಿ ಎಂದ ಸಿಎಸ್ಕೆ ಫ್ಯಾನ್ -
Viral Video: ನಾಳೆಯೇ ನಿಮ್ಮ ಕೆಲಸ ಹೋದರೆ ಏನು ಮಾಡುವಿರಿ? ಮಾಜಿ ಗೂಗಲ್ ಉದ್ಯೋಗಿಯ ಪ್ರಶ್ನೆಗೆ ದಂಗಾದ ನೆಟ್ಟಿಗರು -
Karnataka Rain Updates: ಚಂಡಮಾರುತ ಪ್ರಸರಣ ಪ್ರಭಾವ: ಬೆಂಗಳೂರು ಸೇರಿ ಕರ್ನಾಟಕದ 8 ಜಿಲ್ಲೆಗಳಲ್ಲಿ 3ದಿನ ಮಳೆ -
Horoscope April 8: ಕೆಲವರಿಗೆ ಯಶಸ್ಸು, ಕೆಲವರಿಗೆ ಜಾಗ್ರತೆ ಸೂಚಿಸುವ ದಿನ ಭವಿಷ್ಯ












Click it and Unblock the Notifications