ಕಲ್ಕುಂಟೆ ರಂಗನಾಥಸ್ವಾಮಿ ಚಿನ್ನ ಅಕ್ರಮ ಬಯಲು
ಬೆಂಗಳೂರು, ಫೆ. 11: ಹೊಸಕೋಟೆ ತಾಲೂಕು ಕಲ್ಕುಂಟೆ ಅಗ್ರಹಾರದ ಶ್ರೀ ರಂಗನಾಥ ಸ್ವಾಮಿಯ ದೇವಸ್ಥಾನಕ್ಕೆ ಸೇರಿದ ಲಕ್ಷಾಂತರ ರೂ ಮೌಲ್ಯದ ವಜ್ರ ಮತ್ತು ಚಿನ್ನಾಭರಣಗಳನ್ನು ಅಕ್ರಮವಾಗಿ ಮನೆಯಲ್ಲಿ ಸಂಗ್ರಹಿಸಿಟ್ಟುಕೊಂಡ ಆರೋಪದ ಮೇರೆಗೆ ದೇವಸ್ಥಾನದ ಕಾರ್ಯದರ್ಶಿ ಶ್ರೀನಾಥ ಪಾಟೀಲ್ (70) ಅವರ ಮಲ್ಲೇಶ್ವರ ಮನೆ ಮೇಲೆ ದಾಳಿ ನಡೆಸಿದ ಮುಜರಾಯಿ ಇಲಾಖೆ ಸಿಬ್ಬಂದಿ ಹಾಗೂ ಪೊಲೀಸರು ಚಿನ್ನಾಭರಣವನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.
ಹೊಸಕೋಟೆಯಿಂದ ಮಾಲೂರು ಮಾರ್ಗವಾಗಿ ಸಾಗುವಾಗ ಕಲ್ಕುಂಟೆ ಅಗ್ರಹಾರದ ಶ್ರೀ ರಂಗನಾಥ ಸ್ವಾಮಿಯ ದೇವಸ್ಥಾನ ದರ್ಶನವಾಗುತ್ತದೆ.

ಹಲವು ವರ್ಷಗಳಿಂದ ಶ್ರೀ ರಂಗನಾಥ ಸ್ವಾಮಿ ದೇವಸ್ಥಾನದ ಕಾರ್ಯದರ್ಶಿಯಾಗಿದ್ದ ಶ್ರೀನಾಥ ಅವರು ದೇವಸ್ಥಾನಕ್ಕೆ ಸೇರಿದ ಬೆಲೆಬಾಳುವ ಆಭರಣಗಳನ್ನು ಅನಧಿಕೃತವಾಗಿ ಮನೆಯಲ್ಲಿಟ್ಟುಕೊಂಡಿದ್ದರು.
ದೇವಸ್ಥಾನದ ಆಡಳಿತ ಮಂಡಳಿ ಸದಸ್ಯರು ಹಾಗೂ ಮುಜರಾಯಿ ಇಲಾಖೆ ಅಧಿಕಾರಿಗಳು ಕೇಳಿದಾಗ ಬ್ಯಾಂಕ್ ಲಾಕರಿನಲ್ಲಿಟ್ಟಿರುವುದಾಗಿ ಸಬೂಬು ಹೇಳುತ್ತಿದ್ದರು ಎಂದು ಅಧಿಕಾರಿಗಳು ಹೇಳಿದ್ದಾರೆ.

ಹಾಗಾಗಿ, ಸೋಮವಾರ ರಾತ್ರಿ 10 ಗಂಟೆಯಲ್ಲಿ ಮಲ್ಲೇಶ್ವರದ ಪೊಲೀಸರ ಭದ್ರತೆಯೊಂದಿಗೆ ಬೆಂಗಳೂರು ಗ್ರಾಮಾಂತರ ತಹಸೀಲ್ದಾರ್ ಪದ್ಮಾ ಮತ್ತು ಇತರೆ ಅಧಿಕಾರಿಗಳು, ಮಲ್ಲೇಶ್ವರ 12 ನೇ ಕ್ರಾಸಿನಲ್ಲಿರುವ ಓಂಕಾರ್ ಅಪಾರ್ಟ್ ಮೆಂಟಿನಲ್ಲಿದ್ದ ಶ್ರೀನಾಥರ ಮನೆಗೆ ದಿಢೀರನೆ ದಾಳಿ ನಡೆಸಿ, ಚಿನ್ನಾಭರಣ ವಶಕ್ಕೆ ಪಡೆದಿದ್ದಾರೆ.
ಅಂದಹಾಗೆ, ಕಲ್ಕುಂಟೆ ಅಗ್ರಹಾರದ ಶ್ರೀ ರಂಗನಾಥ ಸ್ವಾಮಿಯ ವಾರ್ಷಿಕ ಬ್ರಹ್ಮರಥೋತ್ಸವ ಇನ್ನೇನು ಮಾರ್ಚ್ ಮೊದಲ ವಾರದಲ್ಲಿ ಆರಂಭವಾಗಲಿದೆ. ( ಚಿತ್ರ ಕೃಪೆ )












Click it and Unblock the Notifications