ಸದ್ಯದಲ್ಲೇ ಇವರ ಡಿವೋರ್ಸ್ ಆಗುತ್ತದೆ- ಪರಮೇಶ್ವರ್ ಹೀಗೆ ಹೇಳಿದ್ದು ಯಾರಿಗೆ..?
ಬೆಂಗಳೂರು, ಆಗಸ್ಟ್ 03: ಮೈಸೂರು ಅಭಿವೃದ್ಧಿ ಪ್ರಾಧಿಕಾರ ನಿವೇಶನ ಹಂಚಿಕೆಯಲ್ಲಿ ಭಾರೀ ಅಕ್ರಮ ನಡೆದಿದೆ. ಈ ಹಿನ್ನೆಲೆಯಲ್ಲಿ ಸಿಎಂ ಸಿದ್ದರಾಮಯ್ಯ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿ ಬಿಜೆಪಿ ಮತ್ತು ಜೆಡಿಎಸ್ ಪಾದಯಾತ್ರೆ ಮೂಲಕ ಹೋರಾಟವನ್ನು ತೀವ್ರಗೊಳಿಸಿದೆ. ಈ ಬಗ್ಗೆ ಗೃಹ ಸಚಿವ ಜಿ. ಪರಮೇಶ್ವರ್ ಮಾತನಾಡಿದ್ದು, ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ವಿರುದ್ಧ ವ್ಯಂಗ್ಯವಾಡಿದ್ದಾರೆ.
ಮಾಗಡಿ ವಿಧಾನಸಭಾ ಕ್ಷೇತ್ರದಲ್ಲಿ ಕರ್ನಾಟಕ ಬಿಜೆಪಿಯ ಭ್ರಷ್ಟಾಚಾರದ ವಿರುದ್ಧ ಜನಾಂದೋಲನ ಕಾರ್ಯಕ್ರಮದಲ್ಲಿಮಾತನಾಡಿದ ಜಿ. ಪರಮೇಶ್ವರ್, ರಾಜ್ಯದಲ್ಲಿ ನಮಗೆ ಇನ್ನು ಮೇಲೆ ಸ್ಥಾನ ಇಲ್ಲ ಎಂದು ಭಾರತೀಯ ಜನತಾ ಪಾರ್ಟಿ ಮತ್ತು ಜನತಾ ದಳಕ್ಕೆ ಗೊತ್ತಾಗಿದೆ. ಇಲ್ಲ ಸಲ್ಲದ ಆಪಾದನೆಗಳನ್ನು ಕೂಡಿ ಹಾಕಿಕೊಂಡು ಜೆಡಿಎಸ್ ಹಾಗೂ ಬಿಜೆಪಿ ನಮ್ಮ ಮೇಲೆ ಆಪಾದನೆ ಮಾಡಲು ಹೊರಟಿದ್ದಾರೆ ಎಂದರು.

ಜನತಾದಳದವರಿಗೆ ಲಾಟರಿ ಹೊಡೆಯಿತು. ಮಾನ್ಯ ಕುಮಾರಸ್ವಾಮಿ ಅವರಿಗೆ ಕೇಂದ್ರ ಸಂಪುಟದಲ್ಲಿ ಸಚಿವ ಸ್ಥಾನ ಸಿಕ್ಕಿ ಬಿಟ್ಟಿತು. ಅವರು ಬಿಜೆಪಿಯವರ ಜೊತೆ ಸೇರಿಕೊಂಡಿದ್ದಾರೆ. ಮೊದಲು ನಮ್ಮ ಜೊತೆಗೂ ಸೇರಿಕೊಂಡಿದ್ದರು. ನಮ್ಮ ಜೊತೆ ಸೇರಿಕೊಂಡ ಕೇವಲ ಹದಿನಾಲ್ಕು ತಿಂಗಳಲ್ಲಿ ಅವರೇ ಮಾಡಿಕೊಂಡ ತಪ್ಪಿಗೆ ಅಧಿಕಾರ ಬಿಟ್ಟು ಹೋದರು ಎಂದು ಹೇಳಿದರು.
ಭಾರತೀಯ ಜನತಾ ಪಾರ್ಟಿಗೆ ಬಹಳ ಶೀಘ್ರವಾಗಿ ಗೊತ್ತಾಗುತ್ತದೆ ಕುಮಾರಸ್ವಾಮಿ ಹಾಗೂ ಜನತಾದಳ ಏನು ಎಂದು. ಈಗಾಗಲೇ ಗೊತ್ತಾಗಿದೆ. ನಿನ್ನೆ ದಿವಸ ನಡೆದ ಬೆಳವಣಿಗೆಯೇ ಸಾಕು ಅದಕ್ಕೆ ಉದಾಹರಣೆ ಎಂದು ಕುಮಾರಸ್ವಾಮಿ ಬಿಜೆಪಿಯ ಕೆಲ ನಾಯಕರ ವಿರುದ್ಧ ಅಸಮಾಧಾನ ಹೊರಹಾಕಿರುವುದನ್ನು ನೆನಪಿಸಿಕೊಂಡರು.

ಮಾತು ಮುಂದುವರಿಸಿದ ಗೃಹ ಸಚಿವರು, ಈಗ ನಾನು ದಾರಿಯಲ್ಲಿ ಬರುವಾಗ ನೋಡಿದೆ. ಒಂದೇ ಒಂದು ಜನತಾದಳದ ಬಾವುಟ ಇಲ್ಲ. ಎಲ್ಲಾ ಬರೀ ಬಿಜೆಪಿ ಬಾವುಟ ಇದೆ. ಅಂದರೆ ಅರ್ಥ ನೀವೇನು ಮದುವೆ ಮಾಡಿಕೊಂಡಿದ್ದರಲ್ಲಾ. ಅದು ಹೆಚ್ಚು ದಿನ ನಡೆಯಲ್ಲಾ..ಡಿವೋರ್ಸ್ ಬಹಳ ಬೇಗ ಆಗುತ್ತದೆ. ಬಹಳ ಅಂದರೆ ಬಹಳ ಬೇಗ ಆಗುತ್ತದೆ. ಇಂತಹ ಸಂದರ್ಭದಲ್ಲಿ ಕರ್ನಾಟಕದಲ್ಲಿ ಮುಖ್ಯಮಂತ್ರಿಗಳ ಮೇಲೆ ಆರೋಪ ಮಾಡುತ್ತಿದ್ದಾರೆ ಎಂದು ಬಿಜೆಪಿ-ಜೆಡಿಎಸ್ ಮೈತ್ರಿ ವಿರುದ್ಧ ವ್ಯಂಗ್ಯವಾಡಿದರು.












Click it and Unblock the Notifications