Get Updates
Get notified of breaking news, exclusive insights, and must-see stories!

'ಸಿಡಿ' ಪ್ರಕರಣ: ವಿಪಕ್ಷ ನಾಯಕ ಸಿದ್ದರಾಮಯ್ಯ ಬಾಯಿ ಮುಚ್ಚಿಸಿದ ಬಸವರಾಜ್ ಬೊಮ್ಮಾಯಿ!

ಬೆಂಗಳೂರು, ಮಾ. 22: ರಮೇಶ್ ಜಾರಕಿಹೊಳಿ ಅವರ 'ಸಿಡಿ' ಪ್ರಕರಣ ಕುರಿತು ವಿಧಾನಸಭೆಯಲ್ಲಿ ನಡೆದ ಗಂಭೀರ ಚರ್ಚೆಗೆ ಸರ್ಕಾರದ ಪರವಾಗಿ ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಅವರು ಉತ್ತರ ಕೊಟ್ಟಿದ್ದಾರೆ. ಆದರೆ ಸರ್ಕಾರದ ಉತ್ತರ ನಮಗೆ ತೃಪ್ತಿ ತಂದಿಲ್ಲ ಎಂದು ಆರೋಪಿಸಿ ಸನದನ ಬಾವಿಗೆ ಇಳಿದು ಧರಣಿ ನಡೆಸಿದರು.

ರಮೇಶ್ ಜಾರಕಿಹೊಳಿ ಅವರ 'ಸಿಡಿ' ಪ್ರಕರಣ, ನಂತರ ಆರು ಸಚಿವರು ಕೋರ್ಟ್ ಮೊರೆ ಹೋದ ವಿಚಾರಗಳ ಕುರಿತು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಸುಧೀರ್ಘವಾಗಿ ಚರ್ಚೆ ನಡೆಸಿದರು. ಪ್ರಕರಣದ ತನಿಖೆ ನಡೆಸುವಲ್ಲಿ ಪೊಲೀಸ್ ವ್ಯವಸ್ಥೆ ಸಂಪೂರ್ಣ ವಿಫಲವಾಗಿದ್ದು, ತನಿಖೆಯಲ್ಲಿ ಹೈಕೋರ್ಟ್‌ ಹಾಲಿ ನ್ಯಾಯಾಧೀಶರ ನೇತೃತ್ವದಲ್ಲಿ ನಡೆಸಬೇಕು ಎಂದು ಸಿದ್ದರಾಮಯ್ಯ ಅವರು ಆಗ್ರಹಿಸಿದರು.

ಜೊತೆಗೆ ನಿರ್ಭಯಾ ಪ್ರಕರಣಕ್ಕೆ ಸಂಬಂಧಿಸಿದಂತೆ ಕೋರ್ಟ್‌ ತೀರ್ಪಿನಂತೆ ಐಪಿಸಿ ಸೆಕ್ಷನ್ 376 ಅಡಿಯಲ್ಲಿ ಅತ್ಯಾಚಾರವ ಪ್ರಕರಣ ದಾಖಲಿಸಿಕೊಂಡು ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರ ವಿರುದ್ಧ ಎಫ್‌ಐಆರ್ ದಾಖಲಿಸಬೇಕಿತ್ತು ಎಂದು ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.

ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಎತ್ತಿದ್ದ ಪ್ರಶ್ನೆಗಳಿಗೆ ಉತ್ತರ ಕೊಟ್ಟ ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಅವರು ಒಂದು ಹಂತದಲ್ಲಿ ಸಿದ್ದರಾಮಯ್ಯ ಅವರೊಂದಿಗೆ ವಾಕ್ಸಮರ ನಡೆಸಿದರು. ಮಾಜಿ ಸಚಿವ ಎಚ್‌.ವೈ. ಮೇಟಿ ಅವರ ಪ್ರಕರಣವನ್ನು ಪ್ರಸ್ತಾಪಿಸುತ್ತಿದ್ದಂತೆಯೆ ಸಿದ್ದರಾಮಯ್ಯ ಅವರಿಗೆ ಸ್ವಲ್ಪ ಇರುಸು ಮುರುಸಾದಂತೆ ಕಂಡುಬಂತು. ಆದರೂ ಪಟ್ಟು ಬಿಡದ ಸಿದ್ದರಾಮಯ್ಯ ಅವರು ಸದನದ ಬಾವಿಗಿಳಿಯುವ ಮೂಲಕ ರಾಜ್ಯದ ಜನರಿಗೆ ತಲುಪಿಸಬೇಕಾಗಿದ್ದ ವಿಷಯಗಳನ್ನು ಹೇಳಿದರು.

ನೈತಿಕ ಹೊಣೆ ಹೊತ್ತು ರಾಜೀನಾಮೆ

ನೈತಿಕ ಹೊಣೆ ಹೊತ್ತು ರಾಜೀನಾಮೆ

ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಪ್ರಸ್ತಾಪಿಸಿದ 'ಸಿಡಿ' ಪ್ರಕರಣದ ಚರ್ಚೆಗೆ ಸರ್ಕಾರದ ಪರವ ಆಗಿ ಉತ್ತರ ಕೊಟ್ಟ ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರು, ನಮ್ಮ ನೈತಿಕತೆ ನಾವು ಕಾಪಾಡಿಕೊಳ್ಳಬೇಕು. ಹೀಗಾಗಿ ರಮೇಶ್ ನೈತಿಕ ಹೊಣೆ ಹೊತ್ತು ಸಚಿವಸ್ಥಾನಕ್ಕೆ ರಾಜೀನಾಮೆ ಕೊಟ್ಟಿದ್ದಾರೆ. ದಿನೇಶ್ ಕಲ್ಲಹಳ್ಳಿ ಕಬ್ಬನ್ ಪಾರ್ಕ್ ಪೊಲೀಸರಿಗೆ ದೂರು ನೀಡಿದ್ದರು. ದೂರು ದಾಖಲಿಸುವ ಮೊದಲೇ ಸಿಡಿ ರಿಲೀಸ್ ಆಗಿತ್ತು. ಅವರು ಸಂಜೆ 5 ಗಂಟೆಗೆ ದೂರು ಕೊಡಲು ಬಂದಿದ್ದರು, ಆದರೆ ಸಂಜೆ 4 ಕ್ಕೆ ಸಿಡಿ ಅಪ್ಲೋಡ್ ಆಗಿತ್ತು ಎಂದು ಸಿದ್ದರಾಮಯ್ಯ ಅವರು ಕೇಳಿದ್ದ ಎಫ್‌ಐಆರ್ ಯಾಕೆ ಉಲ್ಲೇಖಿಸಿರಲಿಲ್ಲ ಎಂಬ ಪ್ರಶ್ನೆ ಬೊಮ್ಮಾಯಿ ಉತ್ತರಿಸಿದರು.

ದೂರು ಕೊಟ್ಟಾಗ ಸಂತ್ರಸ್ತೆ ಇದ್ದಿದ್ದರೆ ದೂರು ದಾಖಲಾಗುತ್ತಿತ್ತು. ಜೊತೆಗೆ ಪ್ರಕರಣಕ್ಕೆ ಸಂಬಂಧಿಸಿದವರು ದೂರು ಕೊಡಬೇಕಿತ್ತು. ಅಥವಾ ಅವರ ಸಂಬಂಧಿಕರಾದರೂ ದೂರು ನೀಡಬೇಕಿತ್ತು. ಅವರು ದೂರು ಕೊಡಲಿಲ್ಲ. ದಿನೇಶ್ ಕಲ್ಲಹಳ್ಳಿ ಕೂಡ ಸರಿಯಾಗಿ ಹೇಳಲಿಲ್ಲ. ಸುಪ್ರೀಂಕೋರ್ಟ್ ಕೊಟ್ಟಿರುವ ಲಲಿತಾ ಕುಮಾರಿ ಪ್ರಕರಣದಲ್ಲಿ ಸ್ಪಷ್ಟವಾಗಿ ಇದೆ. ಅದರಂತೆ ಮೂರನೇ ವ್ಯಕ್ತಿ ದೂರು ಕೊಟ್ಟಲ್ಲಿ, ಮೊದಲು ತನಿಖೆಯಾಗಬೇಕು. ಅಥವಾ ಸಂತ್ರಸ್ತೆಗೆ ದೂರು ಸಲ್ಲಿಸಲು ಇರುವ 15 ದಿನಗಳ ಕಾಲಾವಧಿಯಲ್ಲಿ ದೂರು ದಾಖಲಿಸಬಹುದು. ಆದರೆ ಅದೂ ಆಗಲಿಲ್ಲ ಎಂದು ಬೊಮ್ಮಾಯಿ ವಿವರಿಸಿದರು.

ಒಂದು ಕಡೆ ನಿಲ್ಲುತ್ತಿಲ್ಲ ಸಂತ್ರಸ್ತ ಯುವತಿ!

ಒಂದು ಕಡೆ ನಿಲ್ಲುತ್ತಿಲ್ಲ ಸಂತ್ರಸ್ತ ಯುವತಿ!

ನಂತರ ಕೊಟ್ಟಿದ್ದ ದೂರನ್ನು ವಾಪಾಸ್ ಪಡೆಯಲು ದಿನೇಶ್ ಕಲ್ಲಹಳ್ಳಿ ತಮ್ಮ ವಕೀಲರನ್ನು ಕಳುಹಿಸಿದ್ದರು. ಆದರೆ ಮೂರನೇ ವ್ಯಕ್ತಿ ನ್ಯಾಯವಾದಿಗಳನ್ನು ಕಳುಹಿಸಿದ್ದಕ್ಕೆ ನಾವು ಒಪ್ಪಲಿಲ್ಲ. ನಂತರ ಮಾಜಿ ಸಚಿವ ರಮೇಶ್ ನನಗೆ ಪತ್ರ ಬರೆದರು. ಆಗ ನಾನು ಪೊಲೀಸ್ ಆಯುಕ್ತರಿಗೆ ಪತ್ರ ಬರೆದು, ಷಡ್ಯಂತ್ರದ ಬಗ್ಗೆ ತನಿಖೆ ನಡೆಸುವಂತೆ ಹೇಳಿದ್ದೆ ಎಂದು ಬೊಮ್ಮಾಯಿ ವಿವರಿಸುತ್ತಿದ್ದರು. ಆಗ ಮಧ್ಯೆ ಪ್ರವೇಶ ಮಾಡಿದ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು, ಬೊಮ್ಮಾಯಿ ಉತ್ತರಕ್ಕೆ ಸಿದ್ದರಾಮಯ್ಯ ಆಕ್ಷೇಪ ವ್ಯಕ್ತಪಡಿಸಿದರು.

ನೀವು ಸರಿಯಾಗಿ ಉತ್ತರ ಕೊಡುತ್ತಿಲ್ಲ. ಐಪಿಸಿ ಸೆಕ್ಷನ್ 376 ಯಾಕೆ ಹಾಕಿಲ್ಲ? ನನ್ನನ್ನ ಬಳಸಿಕೊಂಡಿದ್ದಾರೆ ಅಂತ ಆ ಸಂತ್ರಸ್ತೆ ಹೇಳಿಲ್ವಾ? ಯಾರೋ ನಾಗರಾಜ್ ಕೊಟ್ಟ ದೂರನ್ನು ದಾಖಲಿಸಿಕೊಳ್ಳುತ್ತೀರಿ. ಆದರೆ ಆ ಹೆಣ್ಣು ಮಗಳ ಪ್ರಕರಣವನ್ನು ಯಾಕೆ ದಾಖಲಿಸಲಿಲ್ಲ? ಸುಮೋಟೋ ಆಗಿ ನೀವು ಪ್ರಕರಣ ದಾಖಲಿಸಬೇಕಿತ್ತು, ಯಾಕೆ ದಾಖಲಿಸಲಿಲ್ಲ? ಪ್ರಕರಣ ನಡೆದು 20 ದಿನಗಳಾದರೂ ಸಂತ್ರಸ್ಥೆಯನ್ನು ಯಾಕೆ ಹುಡುಕಿಲ್ಲ? ಪೊಲೀಸರು ಏನು ಮಾಡುತ್ತಿದ್ದಾರೆ? ಎಂದು ಸಿದ್ದರಾಮಯ್ಯ ಮರು ಪ್ರಶ್ನೆ ಹಾಕಿದರು. ಅದಕ್ಕೆ ಉತ್ತರಿಸಿದ ಬಸವರಾಜ್ ಬೊಮ್ಮಾಯಿ ಅವರು, 22 ಅಧಿಕಾರಿಗಳು ಎಸ್‌ಐಟಿ ಟೀಂನಲ್ಲಿದ್ದಾರೆ. ಮಹಿಳಾ ಪೊಲೀಸ್ ಅಧಿಕಾರಿಗಳನ್ನು ಯುವತಿ ಇದ್ದಾರೆ ಎಂಬ ಕಡೆಗೆಲ್ಲ ಕಳುಹಿಸಿದ್ದೇವೆ. ಆದರೆ ಅವರು ಒಂದೇ ಸ್ಥಳದಲ್ಲಿ ನಿಲ್ಲುತ್ತಿಲ್ಲ. ಹೀಗಾಗಿ ಸಿಕ್ಕಿಲ್ಲ ಎಂದು ಸ್ಪಷ್ಟನೆ ನೀಡಿದರು.

ಮೇಟಿ ವಿಚಾರ ಪ್ರಸ್ತಾಪಿಸಿ ಇಕ್ಕಟ್ಟಿಗೆ ಸಿಲುಕಿಸಿದ ಬೊಮ್ಮಾಯಿ!

ಮೇಟಿ ವಿಚಾರ ಪ್ರಸ್ತಾಪಿಸಿ ಇಕ್ಕಟ್ಟಿಗೆ ಸಿಲುಕಿಸಿದ ಬೊಮ್ಮಾಯಿ!

ಅವರ ಬ್ಯಾಂಕ್ ಖಾತೆಯನ್ನು ಚೆಕ್ ಮಾಡುತ್ತಿದ್ದೇವೆ. ಗೋವಾ, ಭೋಪಾಲ್, ದೆಹಲಿ, ಬೆಳಗಾವಿ ಎಲ್ಲ ಕಡೆ ಹುಡುಕುತ್ತಿದ್ದೇವೆ. ಸುರಕ್ಷಿತವಾಗಿ ಕರೆತರಲು ಪ್ರಯತ್ನ ನಡೆಸಿದ್ದೇವೆ ಎಂದು ವಿವರಿಸಿದರು. ಮತ್ತೆ ಮಧ್ಯೆ ಪ್ರವೇಶ ಮಾಡಿದ ಸಿದ್ದರಾಮಯ್ಯ ಅವರು, ಸಂತ್ರಸ್ತೆಯನ್ನು ಕರೆತರಲು ಯಾವ ಟೀಂ ಮಾಡಿದ್ದೀರಿ? ನಿಮಗೆ 20 ದಿನ ಬೇಕಾ ಹುಡುಗಿ ಹುಡುಕೋಕೆ ಎಂದು ಗೃಹ ಸಚಿವರ ಉತ್ತರಕ್ಕೆ ಸಿದ್ದರಾಮಯ್ಯ ಆಕ್ಷೇಪ ವ್ಯಕ್ತಪಡಿಸಿದರು.


ಇದೇ ಸಂದರ್ಭದಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಪ್ರಕರಣವನ್ನು ಮುಚ್ಚಿಹಾಕಲು ಎಸ್‌ಐಟಿ ರಚನೆ ಮಾಡಿದ್ದೀರಿ. ಸಂತ್ರಸ್ತ ಯುವತಿಯ ಪರವಾಗಿ ಎಫ್‌ಐಆರ್ ದಾಖಲಿಸಿ ರಮೇಶ್ ಜಾರಕಿಹೊಳಿ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಿಸಬೇಕಿತ್ತು ಎಂದರು. ಆಗ, ಮಾಜಿ ಸಚಿವ ಎಚ್.ವೈ. ಮೇಟಿ ಪ್ರಕರಣವನ್ನು ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಅವರು ಪ್ರಸ್ತಾಪಿಸಿ, ಸಂತ್ರಸ್ತೆಯೆ ದೂರು ಕೊಟ್ಟಾಗ ನೀವು ಏನು ಮಾಡಿದ್ರಿ? ಆಗ ಎಫ್‌ಐಆರ್ ದಾಖಲು ಮಾಡಿದ್ರಾ? ಅತ್ಯಾಚಾರ ಪ್ರಕರಣವನ್ನು ದಾಖಲಿಸಲಾಗಿತ್ತಾ? ನಿಮಗೆ ಇದನ್ನು ಪ್ರಶ್ನೆ ಮಾಡುವ ನೈತಿಕತೆಯೆ ಇಲ್ಲ ಎಂದು ಸಿದ್ದರಾಮಯ್ಯರಿಗೆ ತಿರುಗೇಟು ನೀಡಿದರು. ಮಾಜಿ ಸಚಿವ ಮೇಟಿ ವಿಚಾರ ಪ್ರಸ್ತಾಪವಾಗುತ್ತಿದ್ದಂತೆಯೆ ಸಿದ್ದರಾಮಯ್ಯ ಅವರಿಗೆ ಸ್ವಲ್ಪ ಇರುಸು ಮುರುಸಾದಂತೆ ಕಂಡುಬಂತು. ಮಾಜಿ ಸಚಿವ ಎಚ್‌ವೈ ಮೇಟಿ ಅವರ ವಿಚಾರವನ್ನು ಪ್ರಸ್ತಾಪಿಸಿ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರನ್ನು ಬೊಮ್ಮಾಯಿ ಇಕ್ಕಟ್ಟಿಗೆ ಸಿಲುಕಿಸಿದರು.

Recommended Video

    ಇಂದು ಕೂಡ ಸದನದಲ್ಲಿ ಸಿಡಿ ವಿಚಾರ ಚರ್ಚೆ ಆರಂಭಿಸಿದ ಕಾಂಗ್ರೆಸ್ | Oneindia Kannada
    ಕಾಂಗ್ರೆಸ್ ಧರಣಿ ಹಿನ್ನೆಲೆ ಸದನ ಮುಂದೂಡಿಕೆ!

    ಕಾಂಗ್ರೆಸ್ ಧರಣಿ ಹಿನ್ನೆಲೆ ಸದನ ಮುಂದೂಡಿಕೆ!

    ಉತ್ತರ ಮುಂದುವರೆಸಿದ ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಅವರು, ಈ ಪ್ರಕರಣದಲ್ಲಿ ಯಾರ ಕೈವಾಡವಿರಲಿ, ಎಷ್ಟೇ ದೊಡ್ಡವರಿರಲಿ ತಪ್ಪು ಸಾಬೀತಾಗಲಿ. ನಾವು ಕ್ರಮ ತೆಗೆದುಕೊಳ್ಳದೆ ಬಿಡುವುದಿಲ್ಲ ಎಂದು ಭರವಸೆ ನೀಡಿದರು. ಸಂತ್ರಸ್ತೆ ಲೈಂಗಿಕ ಕಿರುಕುಳ ಆಗಿದೆ ಎಂದಿದ್ದರು. ಆ ಬಗ್ಗೆಯೂ ತನಿಖೆ ನಡೆಯುತ್ತಿದೆ. ತನಿಖೆ ನಡೆಸಲು ಪೊಲೀಸರಿಗೆ ಸ್ವಾತಂತ್ರ್ಯ ಕೊಟ್ಟಿದ್ದೇವೆ. ಜೊತೆಗೆ ರಕ್ಷಣೆ ಕೊಡಿ ಎಂದು ಹೆಣ್ಣುಮಗಳ ವಿಡಿಯೋ ಬಂತು. ನೇರವಾಗಿ ನನ್ನನ್ನೇ ಅಡ್ರೆಸ್ ಮಾಡಿದ್ದರು. ಹೀಗಾಗಿ ಅವರಿರುವಲ್ಲೇ ಹೋಗಿ ವಿಚಾರಿಸುವಂತೆ ಸೂಚಿಸಿದ್ದೇನೆ. ಹೆಣ್ಣುನಗಳಿಗೆ ವಾಟ್ಸಾಪ್ ಸಂದೇಶವನ್ನೂ ಕಳುಹಿಸಿದ್ದೇವೆ. ಆದರೆ ನೀವು 376 ಅಡಿ ಪ್ರಕರಣ ದಾಖಲಿಸುವಂತೆ ಕೇಳುತ್ತಿದ್ದೀರಿ. ಆದರೆ ನೇರವಾಗಿ ಅವರು ದೂರು ಕೊಟ್ಟಿಲ್ಲ, ಮೌಖಿಕವಾಗಿಯೂ ದೂರು ಕೊಟ್ಟಿಲ್ಲ. ಆ ಹುಡುಗಿಯನ್ನು ಪತ್ತೆ ಮಾಡುವ ಕೆಲಸವೂ ನಡೆದಿದೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಉತ್ತರದಲ್ಲಿ ತಿಳಿಸಿದರು.

    ನೀವು ರಮೇಶ್ ಕೊಟ್ಟಿರುವ ಪತ್ರ ಉಲ್ಲೇಖಿಸಿದ್ದೀರಿ. ನನ್ನನ್ನು ಬಳಸಿಕೊಂಡಿದ್ದಾರೆ ಎಂದು ಆ ಹೆಣ್ಣುಮಗಳು ಹೇಳಿದ್ದಾರೆ. ಆದರೂ ಯಾಕೆ ಎಫ್ ಐ ಆರ್ ಮಾಡಲಿಲ್ಲ? ಇವರಿಗೆ ಬೇಕಾದಂತೆ ತನಿಖೆ ನಡೆಸಬಹುದಾ? ಈ ಸರ್ಕಾರ ಕೊಟ್ಟ ಉತ್ತರ ನಮಗೆ ಸಮರ್ಪಕವಾಗಿಲ್ಲ. ಹಾಗಾಗಿ ನಾವು ಧರಣಿ ಮಾಡುತ್ತೇವೆ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಧರಣಿ ಮಾಡಲು ಆರಂಭಿಸಿದರು. ಕಾಂಗ್ರೆಸ್ ಸದಸ್ಯರು ಧರಣಿ ಮುಂದುವರೆಸಿದ್ದರಿಂದ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಸದನವನ್ನು ನಾಳೆ ಬೆಳಗ್ಗೆ 11ಗಂಟೆಗೆ ಮುಂದೂಡಿದರು.

    More From
    Prev
    Next
    Notifications
    Settings
    Clear Notifications
    Notifications
    Use the toggle to switch on notifications
    • Block for 8 hours
    • Block for 12 hours
    • Block for 24 hours
    • Don't block
    Gender
    Select your Gender
    • Male
    • Female
    • Others
    Age
    Select your Age Range
    • Under 18
    • 18 to 25
    • 26 to 35
    • 36 to 45
    • 45 to 55
    • 55+