ಗಡಿ ವಿಚಾರದಲ್ಲಿ ಕೇಂದ್ರದ ಮಧ್ಯಪ್ರವೇಶಕ್ಕೆ ಎಚ್. ಕೆ ಪಾಟೀಲ್ ಆಕ್ರೋಶ
ಬೆಳಗಾವಿ,ಡಿಸೆಂಬರ್ 21: ಕರ್ನಾಟಕ ಹಾಗೂ ಮಹಾರಾಷ್ಟ್ರ ಗಡಿ ವಿವಾದಕ್ಕೆ ಸಂಬಂಧಿಸಿದಂತೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಆ ಸಭೆಯನ್ನು ಕರೆಯಲೇಬಾರದಿತ್ತು. ಆ ಸಭೆಗೆ ನಾವು ಹೋಗಲೇಬಾರದಿತ್ತು. ಒಕ್ಕೂಟ ವ್ಯವಸ್ಥೆಯಲ್ಲಿ ರಾಜ್ಯಕ್ಕೆ ಸಂಬಂಧಪಟ್ಟ ವಿಷಯಗಳಲ್ಲಿ ಕೇಂದ್ರ ಸರ್ಕಾರ ಮಧ್ಯಪ್ರವೇಶ ಮಾಡುವಂತಿಲ್ಲ. ಮತ್ತೆ ಮಧ್ಯಪ್ರವೇಶ ಮಾಡಿದರೆ ಸರಿಯಾಗಿ ಮಂಗಳಾರತಿ ಮಾಡಬೇಕಾಗುತ್ತದೆ ಎಂದು ಕಾಂಗ್ರೆಸ್ ಶಾಸಕ ಎಚ್.ಕೆ. ಪಾಟೀಲ್ ಕೇಂದ್ರ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.
ಗಡಿವಿವಾದಕ್ಕೆ ಸಂಬಂಧಿಸಿದಂತೆ ವಿಧಾನಸಭೆಯಲ್ಲಿ ನಿಯಮ 69ರ ಅಡಿಯಲ್ಲಿ ನಡೆದ ಚರ್ಚೆ ವೇಳೆಯಲ್ಲಿ ಮಾತನಾಡಿದ ಅವರು, ಕರ್ನಾಟಕ ಅತ್ಯಂತ ಶಾಂತಪ್ರಿಯವಾದ ರಾಜ್ಯ. ಗಡಿ ಸೇರಿ ಯಾವುದೇ ವಿವಾದ ಆಗಲಿ ಅನವಶ್ಯಕವಾಗಿ ರಾಜಕೀಯ ಒತ್ತಡವನ್ನು ಹೇರಬಾರದಿತ್ತು. ಅಮಿತ್ ಶಾ ಅವರು ಆ ಸಭೆಯನ್ನು ಕರೆಯಲೇಬಾರದಿತ್ತು. ನಾವು ಆ ಸಭೆಗೆ ಹೋಗಲೇಬಾರದಿತ್ತು. ಆದರೂ ನಮ್ಮ ಸಿಎಂ ಹೋಗಿದ್ದಾರೆ. ಆ ಸಭೆಯಲ್ಲಿ ಏನಾಯ್ತು ಎಂಬುದನ್ನು ಇದುವರೆಗೂ ಹೇಳಿರಲಿಲ್ಲ. ಇದು ಕರ್ನಾಟಕ ಜನತೆಗೆ ವಂಚನೆ ಮಾಡಿದಂತಾಗಿದೆ ಎಂದು ಹೇಳಿದರು.
ಯಡಿಯೂರಪ್ಪರನ್ನು ಸ್ಮರಿಸಿದ ಎಚ್‌ಕೆ ಪಾಟೀಲ್
ಕಳೆದ ಕೆಲವು ದಿನಗಳ ಹಿಂದೆ ಗಡಿ ವಿವಾದದಲ್ಲಿ ಕರ್ನಾಟಕ ಸರ್ಕಾರ ಎಡವಿತು. ಬಿಎಸ್ ಯಡಿಯೂರಪ್ಪ ಅವರನ್ನು ಈ ಸಂದರ್ಭದಲ್ಲಿ ಸ್ಮರಿಸುತ್ತೇನೆ. ಕೃಷ್ಣಾ ವಿಚಾರದಲ್ಲಿ ಅತ್ಯಂತ ಕ್ಲಿಷ್ಟಕರವಾದ ಕಾನೂನಾತ್ಮಕ ಸನ್ನಿವೇಶ ಸೃಷ್ಟಿಯಾಗಿತ್ತು. ಆ ವೇಳೆ ನಮ್ಮ ಸುಪ್ರೀಂ ಕೋರ್ಟ್ ವಕೀಲ ನಾರಿಮನ್ ಅವರಿಗೆ ವಿಷಯವನ್ನು ತಿಳಿಸಲು ನನ್ನನ್ನು ಕರೆದುಕೊಂಡು ಹೋಗಿದ್ದರು. ಅಷ್ಟೊತ್ತಿಗೆ ನಾನು ನೀರಾವರಿ ಸಚಿವ, ಕಾನೂನು ಸಚಿವನಾಗಿ ಕೆಲಸ ಮಾಡಿದ್ದೆ. ನಾನು ವಿರೋಧ ಪಕ್ಷದಲ್ಲಿದ್ದರೂ ನನ್ನನ್ನು ಕರೆದುಕೊಂಡು ಹೋಗಿ ವಕೀಲರ ಜೊತೆ ಮಾತುಕತೆ ನಡೆಸಿದ್ದರು ಎಂದು ಹೇಳಿದರು.

ಜಲ ವಿವಾದ ವಿಚಾರದಲ್ಲಿ ಕೋರ್ಟ್ ತಯಾರಿ ಮಾಡುವಾಗ ಅಷ್ಟರ ಮಟ್ಟಿಗೆ ವಿರೋಧ ಪಕ್ಷಗಳನ್ನು ಸಹಿತ ಕರ್ನಾಟಕದಲ್ಲಿ ವಿಶ್ವಾಸಕ್ಕೆ ತೆಗೆದುಕೊಳ್ಳುತ್ತೇವೆ ಎಂಬುದು ಬಿಎಸ್ ಯಡಿಯೂರಪ್ಪ ಅವರ ನಡೆಯಿಂದ ಗೊತ್ತಾಗುತ್ತದೆ.. ಆದರೆ, ಗಡಿ ವಿಚಾರವಾಗಿ ಕೇಂದ್ರ ಸಚಿವರು ಅನವಶ್ಯಕವಾಗಿ ಹಾಗೂ ಬೇಜವಾಬ್ದಾರಿಯಿಂದ ಸಭೆ ನಡೆಸುವಾಗ ನೀವು ವಿರೋಧ ಪಕ್ಷಗಳ ಅಭಿಪ್ರಾಯವನ್ನು ಕೇಳಲಿಲ್ಲ. ನೀವು ಸರಿಯಾದ ಹೆಜ್ಜೆ ಇಡಲಿಲ್ಲ. ಆದ್ದರಿಂದ ಅದು ಕರ್ನಾಟಕಕ್ಕೆ ಮಾರಕವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಗಡಿ ವಿವಾದವನ್ನು ಮೂರು ಜನ ಮೇಲ್ವಿಚಾರಣೆ ಮಾಡುವ ಅವಶ್ಯಕತೆ ಇದೆಯಾ? ರಾಜ್ಯದಲ್ಲಿ ಅಷ್ಟೊಂದು ಕಾನೂನು ಸಡಿಲವಾಗಿದೆಯಾ? ಗಡಿ ಪ್ರದೇಶದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ಗೃಹ ಇಲಾಖೆಗೆ ಆಗಲ್ವಾ? ನಿಮ್ಮ ಸಾಮರ್ಥ್ಯವನ್ನು ಕಳೆದುಕೊಂಡಿದ್ದೀರಾ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಅವರನ್ನು ಎಚ್‌ಕೆ ಪಾಟೀಲ್ ಪ್ರಶ್ನಿಸಿದರು.

ಕೇಂದ್ರ ಸರ್ಕಾರಕ್ಕೆ ಎಚ್ಚರಿಕೆ
ಈ ಸದನದ ಮೂಲಕ ಕೇಂದ್ರ ಸರ್ಕಾರಕ್ಕೆ ಎಚ್ಚರಿಕೆ ನೀಡಬೇಕಾಗಿದೆ. ಒಕ್ಕೂಟ ವ್ಯವಸ್ಥೆಯಲ್ಲಿ ರಾಜ್ಯಕ್ಕೆ ಸಂಬಂಧಪಟ್ಟ ವಿಷಯಗಳಲ್ಲಿ ನೀವು ಮಧ್ಯಪ್ರವೇಶ ಮಾಡುವಂತಿಲ್ಲ. ಮತ್ತೆ ಮಧ್ಯಪ್ರವೇಶ ಮಾಡಿದರೆ ಮಂಗಳಾರತಿ ಮಾಡುತ್ತೇವೆ ಎಂದು ಎಚ್ಚರಿಕೆ ನೀಡುತ್ತೇವೆ. ದಯವಿಟ್ಟು ಈ ಬಗ್ಗೆ ಒಂದು ನಿರ್ಣಯವನ್ನು ಮಂಡಿಸಿ, ಕೇಂದ್ರ ಸರ್ಕಾರ ರಾಜ್ಯಕ್ಕೆ ಸಂಬಂಧಿಸಿದ ವಿಚಾರದಲ್ಲಿ ಯಾವುದೇ ಸಂದರ್ಭದಲ್ಲಿ ಮಧ್ಯಪ್ರವೇಶ ಮಾಡಬಾರದು ಎಂದು ನಮ್ಮ ನಿಲುವನ್ನು ಸ್ಪಷ್ಟಪಡಿಸಬೇಕು ಎಂದು ಹೇಳಿದರು.
ಯಾವ ಊರು ಎಲ್ಲಿ ಕೊಡಬೇಕು ಎಂಬುದು ಲೆಕ್ಕಕ್ಕೆ ಬಂದಿಲ್ಲ. ಸುಪ್ರೀಂ ಕೋರ್ಟ್‌ನಲ್ಲಿ ಈ ಗಡಿ ವಿವಾದವನ್ನು ವಿಚಾರಣೆ ನಡೆಸಬೇಕಾ? ನ್ಯಾಯಾಲಯಕ್ಕೆ ಆ ವ್ಯಾಪ್ತಿ ಇದೆಯಾ ಎಂಬುದನ್ನು ವಿಚಾರ ಮಾಡಬೇಕಾಗಿದೆ. ಇದೇ ಇನ್ನು ನಿರ್ಧಾರವಾಗಿಲ್ಲ. ತಾಂತ್ರಿಕ ಕಾರಣಗಳಿಂದ ಇದು ನ್ಯಾಯಪೀಠದ ಮುಂದೆ ಬರುತ್ತದೆಯೇ ಎಂಬುದನ್ನು ನೋಡಬೇಕಿದೆ. ಆದರೆ, ಮುಂದೆ ಕಾನೂನಾತ್ಮಕವಾಗಿ ಮಾಡಬೇಕಾದ ಹೋರಾಟಕ್ಕೆ ಸಿದ್ಧತೆ ಮಾಡಬೇಕಾಗಿದೆ ಎಂದು ಕಾನೂನು ಸಚಿವರಿಗೆ ಮನವಿ ಮಾಡಿದರು.












Click it and Unblock the Notifications